ಸುದರ್ಶನ್‌ ಮನೆಯಲ್ಲಿ ಸೂತಕದ ಛಾಯೆ

7
ಕೀನ್ಯಾ ಮಾಲ್‌ ದಾಳಿ: ಹೆಜ್ಜಾಲದ ರಫ್ತು ಉದ್ಯಮಿ ಸಾವು

ಸುದರ್ಶನ್‌ ಮನೆಯಲ್ಲಿ ಸೂತಕದ ಛಾಯೆ

Published:
Updated:

ರಾಮನಗರ: ‘ಅವ ನಮ್ಮ ಮನೆಯ ಪಿಲ್ಲರ್‌ ಆಗಿದ್ದ. ನಮ್ಮ ಕುಟುಂಬ ಆರ್ಥಿಕವಾಗಿ ಸುಸ್ಥಿತಿಗೆ ಬರುವಲ್ಲಿ ಆತನ ಪಾತ್ರವೇ ಪ್ರಮುಖ. ಅವನಿಗಿಂತ ಹಿರಿಯರಾದ ನಾವು ಇನ್ನೂ ಜೀವಂತ ಇದ್ದೇವೆ. ಆದರೆ ನಮ್ಮೆಲ್ಲರ ಕಿರಿಯ ಸಹೋದರನನ್ನು ಆ ವಿಧಿ ಏಕೆ ಕರೆದುಕೊಂಡಿತೋ...’ಇದು ಕೀನ್ಯಾದ ನೈರೋಬಿಯಲ್ಲಿನ ವೆಸ್ಟ್‌ಗೇಟ್‌ ಶಾಪಿಂಗ್‌ ಮಾಲ್‌ ಮೇಲೆ ಸೊಮಾಲಿಯಾ ಮೂಲದ ಅಲ್‌ ಶಬಾಬ್‌ ಉಗ್ರರು ನಡೆಸಿರುವ ದಾಳಿಯಲ್ಲಿ ಮೃತಪಟ್ಟಿರುವ ರಾಮನಗರ ಜಿಲ್ಲೆಯ ಹೆಜ್ಜಾಲದ (ಬಿಡದಿ ಬಳಿ) ನಿವಾಸಿ ಬಿ.ಎನ್‌. ಸುದರ್ಶನ್‌ (50) ಅವರ ಸಹೋದರರಾದ ರಾಮಪ್ರಸಾದ್‌, ಶ್ರೀಧರ್‌ ಹಾಗೂ ಭಾವ ಗೋವಿಂದ ಪ್ರಸಾದ್ ಅವರ ದುಃಖದ ನುಡಿಗಳು.ಅವಿವಾಹಿತರಾಗಿದ್ದ ಸುದರ್ಶನ್‌ ಅವರು ದಿವಂಗತ ನಾಗರಾಜ್‌ ಮತ್ತು ಶಾರದಾ ಅವರ ಕೊನೆಯ ಪುತ್ರ. ಆಫ್ರಿಕಾ ಖಂಡದ ವಿವಿಧ ದೇಶಗಳ ವ್ಯಾಪಾರಿಗಳೊಂದಿಗೆ ರಫ್ತು ವಹಿವಾಟು ವ್ಯವಹಾರ ನಡೆಸುತ್ತಿದ್ದರು. ಸುದರ್ಶನ್‌ ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ. ಉಗ್ರರ ದಾಳಿಯಲ್ಲಿ ಸಹೋದರ ಸಾವನ್ನಪ್ಪಿರುವ ಸುದ್ದಿ ಇಡೀ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದ್ದು, ಮನೆಯಲ್ಲಿ ಶೋಕ ಆವರಿಸಿದೆ.ಶುಕ್ರವಾರ ತೆರಳಿದ್ದರು: ‘ಸುದರ್ಶನ್‌ ಶುಕ್ರವಾರ (ಸೆ. 20) ಬೆಂಗಳೂರಿನಿಂದ ರಾತ್ರಿ ಹೊರಟು ಕೀನ್ಯಾದ ನೈರೋಬಿ ತಲುಪಿದ್ದ. ಅಲ್ಲಿ ಹೋಟೆಲ್‌ವೊಂದರ ಕೊಠಡಿಯಲ್ಲಿ ವಿಶ್ರಾಂತಿ ಪಡೆದು, |ಶನಿವಾರ ಶಾಪಿಂಗ್‌ಗೆ ಹೋಗಿದ್ದ. ಅಂದು ಮಧ್ಯಾಹ್ನ 1.30 ಗಂಟೆಗೆ ಕರೆ ಮಾಡಿ ನಮ್ಮೊಂದಿಗೆ ಮಾತನಾಡಿದ್ದ. ಭಾನುವಾರ ಉಗಾಂಡಕ್ಕೆ ತೆರಳುವುದಾಗಿ ತಿಳಿಸಿದ್ದ’ ಎಂದು ಅವರ ಅಣ್ಣ ರಾಮ್‌ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಶನಿವಾರ ಕೀನ್ಯಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯ ಮೂಲದವರು ಸಾವನ್ನಪ್ಪಿರಬಹುದು ಎಂಬ ಸುದ್ದಿ ಭಾನುವಾರ ಗೊತ್ತಾಯಿತು. ಸುದರ್ಶನ್‌ ಭಾನುವಾರ ಉಗಾಂಡಕ್ಕೆ ಹೋಗಿರಬಹುದು ಎಂದು ದೂರವಾಣಿ ಕರೆ ಮಾಡಿದರೆ ಪ್ರತಿಕ್ರಿಯೆ ಬರಲಿಲ್ಲ. ಆಗ ನಮ್ಮಲ್ಲಿ ಆತಂಕ ಹೆಚ್ಚಾಯಿತು.ಬಳಿಕ ನೈರೋಬಿಯಲ್ಲಿ ಆತ ತಂಗಿದ್ದ ಹೋಟೆಲ್‌ ನಂಬರ್‌ಗೆ ಕರೆ ಮಾಡಿ ವಿಚಾರಿಸಿದೆವು. ಶನಿವಾರ ಕೊಠಡಿಯಲ್ಲಿ ಲಗೇಜ್‌  ಇಟ್ಟು ಹೋದವ ಹಿಂದಿರುಗಿಲ್ಲ ಎಂದು ಹೋಟೆಲ್‌ ಸಿಬ್ಬಂದಿ ತಿಳಿಸಿದರು. ಕೂಡಲೇ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸುದರ್ಶನ್‌ ಬಗ್ಗೆ ಮಾಹಿತಿ ನೀಡಿದೆವು. ಅವರು ಕೀನ್ಯಾ ಅಧಿಕಾರಿಗಳ ಸಂಪರ್ಕ ಬೆಳೆಸಿ ಪರಿಶೀಲಿಸಿದರು. ಉಗ್ರರು ಸುದರ್ಶನ್‌ ತಲೆಗೆ (ಹಣೆ) ಗುಂಡು ಹಾರಿಸಿ ಕೊಂದಿದ್ದಾರೆ. ಮೃತರ ಕಿಸೆಯಲ್ಲಿದ್ದ ಚಾಲನಾ ಪರವಾನಗಿಯಿಂದ ಅವರು ಸುದರ್ಶನ್‌ ಎಂಬುದು ಪತ್ತೆಯಾಗಿದೆ ಎಂದು ಭಾರತ ರಾಯಭಾರ ಕಚೇರಿಯಿಂದ ಮಾಹಿತಿ ಬಂದಾಗ ನಮಗೆ ಬರಸಿಡಿಲು ಬಡಿದಂತಾಯಿತು’ ಎಂದ ಅವರು ಕೆಲ ಕ್ಷಣ ಮೌನಿಯಾದರು.‘ನಂತರ ರಾಯಭಾರಿ ಕಚೇರಿಯಿಂದ ಮೃತ ದೇಹದ ಚಿತ್ರ ಇ–ಮೇಲ್‌ ಮೂಲಕ ರವಾನೆಯಾಯಿತು. ಅದನ್ನು ನೋಡಿದಾಗ ನಮ್ಮ ದುಃಖ ಇಮ್ಮಡಿಯಾಯಿತು. ಅದು ಸುದರ್ಶನ್‌ ಅವನದ್ದೇ ಎಂಬುದನ್ನು ಅಧಿಕಾರಿಗಳಿಗೆ ದೃಢಪಡಿಸಿದೆವು’ ಎಂದು ಅವರು ದುಃಖಿಸುತ್ತಲೇ ಹೇಳಿದರು.ಅವಿಭಕ್ತ ಕುಟುಂಬ: ‘ನಮ್ಮದು ಅವಿಭಕ್ತ ಕುಟುಂಬ. 60 ವರ್ಷದಿಂದ ಹೆಜ್ಜಾಲದಲ್ಲಿ ವಾಸವಿದ್ದೇವೆ. ಸುದರ್ಶನ್‌  ಅತ್ಯಂತ ಸ್ನೇಹ, ಸರಳ ಜೀವಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿ.ಎಸ್ಸಿ ಪೂರೈಸಿದ್ದ. ಹೆಜ್ಜಾಲದಲ್ಲಿ ನಮ್ಮ ಕುಟುಂಬದ್ದು ಓಂಶ್ರೀ ಎಂಜಿನಿಯರ್‌ ಅಂಡ್‌ ಕನ್ಸಲ್ಟೆಂಟ್ಸ್‌ ಕಂಪೆನಿ ಇದೆ. ಸುದರ್ಶನ್‌ 1998 ರಿಂದ ಆಫ್ರಿಕಾ, ಕೀನ್ಯಾ, ಉಗಾಂಡ ಮೊದಲಾ ದೇಶಗಳಲ್ಲಿ ಶಾಲಾ ಪಠ್ಯವನ್ನು ಸಿ.ಡಿ ರೂಪದಲ್ಲಿ ತಂದು, ಬೆಂಗಳೂರಿನ ಮುದ್ರಣಾಲಯದಲ್ಲಿ ಪುಸ್ತಕ ಮುದ್ರಿಸಿ, ಅದನ್ನು ರಫ್ತು ಮಾಡುತ್ತಿದ್ದ. ಈ ಸಲುವಾಗಿ ತಿಂಗಳಿಗೆ ಒಂದೆರಡು ಬಾರಿ ಆಫ್ರಿಕಾಕ್ಕೆ ಹೋಗಿ ಬರುತ್ತಿದ್ದ’ ಎಂದು ಅವರು ಮಾಹಿತಿ ನೀಡಿದರು.‘ಸುದರ್ಶನ್‌ ಸುಮಾರು 108 ಕೆ.ಜಿ ತೂಕ ಇದ್ದ. ನಿತ್ಯ 4ರಿಂದ 5 ಕಿ.ಮೀ. ನಡೆದಾಡುತ್ತಿದ್ದ. ಕಷ್ಟ ಎಂದು ಯಾರದರೂ ಬಂದರೆ ನೆರವಿನ ಹಸ್ತ ಚಾಚುತ್ತಿದ್ದ. ಅವನನ್ನು ಕಳೆದುಕೊಂಡ ನಾವು ನತದೃಷ್ಟರು’ ಎಂದು  ಭಾವ ಗೋವಿಂದ ಪ್ರಸಾದ್‌ ನುಡಿದರು.ಮೃತ ದೇಹ ಬುಧವಾರ ರಾತ್ರಿ ಅಥವಾ ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬರಲಿದ್ದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆ ಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.ಗುರುತು ಹಚ್ಚಿದ ‘ಮುಡಿ’

‘10 ದಿನದ ಹಿಂದೆ­ಯಷ್ಟೇ ಕುಟುಂಬ ಸದಸ್ಯ­ರೆಲ್ಲ ತಿರುಪತಿಗೆ ಹೋಗಿದ್ದೆವು. ಸುದರ್ಶನ್‌ ಮುಡಿ ಕೊಟ್ಟಿದ್ದ. ಈ ವಿಷಯವನ್ನು ಭಾರತ ರಾಯಭಾರಿ ಕಚೇರಿಗೆ ತಿಳಿ­ಸಿದ ಮೇಲೆ ಮೃತ ದೇಹ­ಗಳಲ್ಲಿ ಸುದರ್ಶನ್‌ ದೇಹ ಪತ್ತೆ ಹಚ್ಚುವುದು ಸುಲಭವಾಯಿತು’ ಎಂದು ಸಹೋದರ ರಾಮ್‌ ಪ್ರಸಾದ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry