ಸುದೀರ್ಘ ಐತಿಹ್ಯ ಗ್ರಾಮ: ಅಭಿವೃದ್ಧಿ ತಾಣ

7

ಸುದೀರ್ಘ ಐತಿಹ್ಯ ಗ್ರಾಮ: ಅಭಿವೃದ್ಧಿ ತಾಣ

Published:
Updated:
ಸುದೀರ್ಘ ಐತಿಹ್ಯ ಗ್ರಾಮ: ಅಭಿವೃದ್ಧಿ ತಾಣ

ಕೃಷಿ ಚಟುವಟಿಕೆ ಭಾಗವಾಗಿ ನಿರ್ಮಾಣವಾದ `ಕೋಲ್‌ಮನ್‌ಪೇಟೆ~ ಕಾಲನಂತರ `ಭದ್ರಾ ಕಾಲೊನಿ~ ಹೆಸರಿನಲ್ಲಿ ಪ್ರಸಿದ್ಧಿ ಪಡೆದು 83 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಊರು ತನ್ನ ಒಡಲಲ್ಲಿ ಕಣಕಟ್ಟೆ ಗ್ರಾಮವನ್ನು ಬೆರೆಸಿಕೊಂಡು ಅಭಿವೃದ್ಧಿ ಕಂಡಿದೆ.ಮೈಸೂರು ರಾಜ್ಯದ ವ್ಯವಸಾಯ ಇಲಾಖೆ ನಿರ್ದೇಶಕರಾದ ಡಾ.ಲೆನ್ಲಿ ಚಾರ್‌ಲ್ಸ್ ಕೋಲ್‌ಮನ್ ಅವರ `ಕಾಲೊನೈಸೇಷನ್ ಸ್ಕೀಂ~ ಯೋಜನೆಯಲ್ಲಿ 1929ರಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಡಿ.ಜಿ. ರಾಮಚಂದ್ರರಾಯರ ನೇತೃತ್ವದಲ್ಲಿ ನೆಲೆಕಂಡದ್ದು ಭದ್ರಾಕಾಲೊನಿ.

 

ಹೆಸರಿಗೊಂದು ಮಹತ್ವ

ಭದ್ರಾ ಎಡದಂಡೆ ನಾಲಾ ಅಚ್ಚುಕಟ್ಟಿಗೆ ಹೊಂದಿಕೊಂಡಿದ್ದ ಕಾಡುಸ್ಥಳವನ್ನು ಅಂದಿನ ಮೈಸೂರು ಸಂಸ್ಥಾನ `ಕಾಲೊನೈಸೇಷನ್ ಸ್ಕೀಂ~ನಲ್ಲಿ ಸುಮಾರು 780 ಎಕರೆ ಜಮೀನನ್ನು 12 ಮಂದಿ ಹೆಬ್ಬಾಳ ಕೃಷಿ ವಿದ್ಯಾಲಯದಲ್ಲಿ ತೇರ್ಗಡೆ ಹೊಂದಿದ ಯುವಕರಿಗೆ ವಿತರಿಸುವ ಮೂಲಕ `ಕೊಲ್‌ಮನ್‌ಪೇಟೆ~ಗೆ ಚಾಲನೆ ನೀಡಿತು.

ತದನಂತರ ವರ್ಷದಲ್ಲಿ ಭದ್ರಾ ಅಗ್ರಿಕಲ್ಚರಲ್ ಕಾಲೊನಿ ಎಂಬ ಹೆಸರಿನಲ್ಲಿ ಮುಂದುವರಿದ ಈ ಸ್ಥಳ ಭದ್ರಾಕಾಲೊನಿ ಎಂದಾಯಿತು.ಕಾಡಿನಿಂದ ಕೂಡಿದ್ದ ಸ್ಥಳದಲ್ಲಿ ಹುಲಿ, ಚಿರತೆ, ನರಿ ಕಾಟದ ಜತೆಗೆ ಮಲೇರಿಯಾ, ಪ್ಲೇಗ್ ಸೇರಿದಂತೆ ಹಲವು ಕಾಯಿಲೆಗಳ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ನಮ್ಮ ಹಿರಿಕರು ಬಹಳ ಕಷ್ಟಪಟ್ಟು ಊರು ನಿರ್ಮಿಸಿದರು ಎಂದು ನೆನೆಯುತ್ತಾರೆ ಮೂಲ ನಿವಾಸಿಗಳಲ್ಲಿ ಒಬ್ಬರಾದ ಎಸ್. ಕಾಶಿನಾಥಶಾಸ್ತ್ರಿ.ಮೊದಲ ನಿವಾಸಿಗಳು

ಮೈಸೂರು ರಾಜ್ಯದ ಯೋಜನೆಗೆ ಪ್ರಥಮದಲ್ಲಿ ಭಾಜನರಾದ ಡಿ.ಜಿ. ರಾಮಚಂದ್ರರಾವ್, ಪಿ.ವಿ. ಸುಬ್ಬರಾಯಶಾಸ್ತ್ರಿ, ಎಲ್. ಕೃಷ್ಣಮೂರ್ತಿ ನಾಯ್ಡು, ಕೆ. ಚಂದ್ರಶೇಖರನ್, ಬಿ.ಎ. ರಾಮಸ್ವಾಮಿ ಅಯ್ಯಂಗಾರ್, ಡಿ.ಎನ್. ಸೀತಾರಾಮಯ್ಯ, ಎಚ್.ಎನ್. ಪರಮೇಶ್ವರಗೌಡ, ಎಚ್. ಪರಮಶಿವಯ್ಯ, ಎಂ.ಬಿ. ನಂಜುಂಡರಾವ್, ಮೀರ್ ರಜಾ ಅಲಿ, ಆರ್.ಎಸ್. ಅನಂತರಾಜ್, ಜಿ. ಲಿಂಗಣ್ಣ ಇಲ್ಲಿಯೇ ನೆಲೆಕಂಡು ಊರಿನ ಬೆಳವಣಿಗೆಗೆ ಕಾರಣರಾದರು.ಆರೋಗ್ಯ ಕೇಂದ್ರ 

ಗ್ರಾಮದ ಜನರ ಅನುಕೂಲತೆಗಾಗಿ 1936ರ ವೇಳೆಗೆ `ಪ್ರಾಥಮಿಕ ಆರೋಗ್ಯ ಕೇಂದ್ರ~ ಮಂಜೂರಾದ ಹೆಗ್ಗಳಿಕೆ ಈ ಗ್ರಾಮದ್ದು, ವೈದ್ಯರ ಮನೆ, ಸಿಬ್ಬಂದಿ ವರ್ಗದ ಗೃಹ, ಪ್ರಾರಂಭವಾದ ಸ್ಥಳದಲ್ಲಿ ಪ್ರಪ್ರಥಮ ವೈದ್ಯರಾಗಿ ಡಾ.ಲಿಂಗಯ್ಯ, ನರ್ಸ್ ಆಗಿ ಕಮಲಮ್ಮ, ಆರೋಗ್ಯ ವೀಕ್ಷಕರಾಗಿ ಬಾಪಟ್‌ರವರು ನೇಮಕವಾಗಿ ಅನೇಕ ವರ್ಷ ಸೇವೆ ಮಾಡಿರುವುದು ಇಲ್ಲಿನ ಇತಿಹಾಸ.ಇದರಿಂದಾಗಿ ಈ ಗ್ರಾಮಕ್ಕೆ ಹೊಂದಿಕೊಂಡ ಕಣಕಟ್ಟೆ, ಬಾಬಳ್ಳಿ, ವೀರಾಪುರ, ಮಜ್ಜಿಗೇನಹಳ್ಳಿ, ಸೀಗೆಬಾಗಿ ವ್ಯಾಪ್ತಿಯ ಜನರ ಪಾಲಿಗೆ ಈ ಆಸ್ಪತ್ರೆ  ತನ್ನ ಸೇವೆಯನ್ನು ಒದಗಿಸಿರುವುದು ಹೆಗ್ಗಳಿಕೆ ಸಂಗತಿ ಎನ್ನುತ್ತಾರೆ ಕೆ.ಸಿ. ವೀರಭದ್ರಪ್ಪ.ಶೈಕ್ಷಣಿಕ ಪ್ರಗತಿ

ಕಾಲೋನಿಷ್ಟ್‌ಗಳ ಸಂಸಾರ ಹೆಚ್ಚಾದಂತೆ ಅವರ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿತವಾದ ಶಾಲೆ ಮೊದಲು ಹಲವು ಹಿರಿಕರ ಮನೆ ಜಗುಲಿ ಮೇಲೆ ನಡೆಯಿತು. ತದ ನಂತರ ಸರ್ಕಾರದಿಂದ ಒಂದು ರೂಮಿನ ಕಟ್ಟಡ ಸಿದ್ಧವಾಯಿತು.

ಮೊಟ್ಟಮೊದಲ ಶಿಕ್ಷಕರಾಗಿ ವೈದ್ಯನಾಥ ಅಯ್ಯರ್ ನೇಮಕವಾದ ಸಂದರ್ಭದಲ್ಲಿ 6ರಿಂದ 7 ಮಂದಿ ವಿದ್ಯಾರ್ಥಿಗಳಿದ್ದ ಶಾಲೆ ಈಗ 7 ಕೊಠಡಿಗಳನ್ನು ಹೊಂದಿಕೊಂಡು 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.ಪ್ರೌಢಶಾಲೆ ಆರಂಭಿಸುವ ಇಚ್ಛಾಶಕ್ತಿ ಹೊಂದಿದ ಅಲ್ಲಿನ ನಿವಾಸಿಗಳು ಕಾಶೀನಾಥಶಾಸ್ತ್ರಿ, ಕೆ.ಸಿ. ವೀರಭದ್ರಪ್ಪ, ಮರಿಗೌಡ, ಭೈರಪ್ಪ, ರಮಾಕಾಂತ, ಹುಚ್ಚೇಗೌಡ ನೇತೃತ್ವದಲ್ಲಿ ಖಾಸಗಿ ಶಿಕ್ಷಣಸಂಸ್ಥೆ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ನೆರವು ನೀಡಿದರು.ಇತಿಹಾಸ ಸೃಷ್ಟಿಸಿದ ಗ್ರಾಮ

1930ರಲ್ಲೇ ಗ್ರಾಮಾಂತರ ಅಂಚೆ ಕಚೇರಿ ಮಂಜೂರು ಮಾಡಿಸಿಕೊಂಡ ಗ್ರಾಮ ಎಂಬ ಹೆಗ್ಗಳಿಕೆ ಇಲ್ಲಿಯದು. ಪ್ರಾರಂಭದ ವಾಸಿಗಳ ಮನೆಯ ಜಗುಲಿ ಮೇಲೆ ಪ್ರಾರಂಭವಾದ ಈ ಅಂಚೆ ಕಚೇರಿ ಸುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿ ಬೆಳೆದಿದ್ದು ಈಗ ಇತಿಹಾಸ.ಇಲ್ಲಿನ ಅಭ್ಯುದಯಕ್ಕೆ ತಕ್ಕಂತೆ ಗ್ರಾಮಸ್ಥರೇ ಕೂಡಿಕೊಂಡು ನಿರ್ಮಾಣ ಮಾಡಿರುವ ಶ್ರೀರಾಮಾಂಜನೇಯ ದೇವಾಲಯ ಎಲ್ಲಾ ವರ್ಗದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆದು ಸಾಕಷ್ಟು ಅಭಿವೃದ್ಧಿ ಕಂಡಿದೆ.ಇತಿಹಾಸ ಹೇಳುವ ಕಲ್ಲುಗಳು

ಕಣಕಟ್ಟೆ ಗ್ರಾಮದ ಬಂಡೆ ಮೇಲೆ ಮೂಡಿರುವ ನಾಗರ ಚಿತ್ರ, ಅದಕ್ಕೆ ಪ್ರತಿನಿತ್ಯ ಪೂಜೆ. ಇದರ ಪಕ್ಕದಲ್ಲಿ ಇರುವ ಮೂರು ಶಿಲೆಗಳು ಹಲವು ಕಥೆಗಳ ಸೃಷ್ಟಿಗೆ ಕಾರಣವಾಗಿದೆ. ಇದರ ಮಹತ್ವ ಹೇಳುವ ಮಂದಿಯ ಕೊರತೆ ಗ್ರಾಮದಲ್ಲಿ ಕಂಡುಬಂದರೂ ಸಹ ಇದಕ್ಕೆ ನಿತ್ಯ ಪೂಜೆಯ ಭಾಗ್ಯ ಮಾತ್ರ ಲಭಿಸಿರುವುದು. ಇಲ್ಲಿನ ಜನರ ಶ್ರದ್ಧೆಗೆ ಹಿಡಿದ ಕೈಗನ್ನಡಿಯಾಗಿದೆ.ಹಲವು ಗಣ್ಯರ ಕೊಡುಗೆ

ಇತಿಹಾಸದ ಬುತ್ತಿ ಹೊತ್ತಿರುವ ಈ ಗ್ರಾಮ ಹಲವು ಗಣ್ಯರ ನೆಲೆಬೀಡಾಗಿ ನಾಡಿಗೆ ಸೇವೆಯನ್ನು ಒದಗಿಸುವಲ್ಲಿ ತನ್ನದೆ ವಿಶಿಷ್ಟ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.ರಾಮಕೃಷ್ಣಾಶ್ರಮದ ಶ್ರೀ ಪ್ರಬುದ್ಧಾನಂದಜೀ, ಮೈಸೂರಿನ ಉದ್ಯಮಿ ನರೇಂದ್ರ, ಕಲ್ಯಾಣನಂದಜೀ, ಜರ್ಮನಿಯಲ್ಲಿ ನೆಲೆಸಿರುವ ಬಿ.ಎನ್. ಭಗವಾನ್, ವಿಐಎಸ್‌ಎಲ್ ಕಾರ್ಖಾನೆ ಅಧಿಕಾರಿಯಾಗಿ ನಿವೃತ್ತಿ ಪಡೆದ ಶ್ರೀಪಾದವಲ್ಲಭನ್, ಹಾಕಿಪಟು ಡಿ.ಎಸ್. ರಾಮಕುಮಾರ್, ಡಾ.ಬಿ.ಎಸ್. ಶ್ರೀನಾಥ್, ಡಾ.ಬಿ.ಎಸ್. ದ್ವಾರಕಾನಾಥ ಶಾಸ್ತ್ರಿ, ಆಟೋಮೊಬೈಲ್ ಎಂಜಿನಿಯರ್ ವಾಮದೇವ್, ರಾಜಕಾರಣಿ ಬಿ.ಪಿ. ಶಿವಕುಮಾರ್, ಫುಟ್‌ಬಾಲ್ ಆಟಗಾರ ಬಲರಾಂ... ಹೀಗೆ ಹಲವು ಮಂದಿ ಗಣ್ಯರ ಪಟ್ಟಿಯನ್ನೇ ಗ್ರಾಮ ಹೊಂದಿರುವುದು ಇದರ ಮಹತ್ವ ಹೆಚ್ಚಿಸಿದೆ.ವೇಗ ಕಳೆದುಕೊಂಡ ಗ್ರಾಮ


ಮೈಸೂರು ಸಂಸ್ಥಾನದ ಯೋಜನೆಯಲ್ಲಿ ಆರಂಭವಾದ ಗ್ರಾಮ ಪ್ರಾರಂಭದಲ್ಲಿ ಹೊಂದಿದ್ದ ವೇಗದ ಬೆಳವಣಿಗೆಯಲ್ಲಿ ಈಗ ಸ್ವಲ್ಪಮಟ್ಟಿನ ಹಿನ್ನಡೆ ಕಂಡಿದೆ. ನಗರೀಕರಣ ಪ್ರಭಾವ ಕಾರಣ ಇದರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎನ್ನುತ್ತಾರೆ ಹಿರಿಯರು.ವಿದೇಶಿ ವ್ಯಕ್ತಿಯ ಕನಸಿನ ಯೋಜನೆಯಲ್ಲಿ ಆರಂಭವಾದ ಗ್ರಾಮಕ್ಕೆ ಕೋಲ್‌ಮನ್ ಮಗಳು, ಆಳಿಯ ಆಗಮಿಸಿದ್ದು ಇತ್ತೀಚಿನ ದಿನದಲ್ಲಿ ನಡೆದಿದೆ. ಆಗ ಗ್ರಾಮದ ಮಂದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದ್ದು ಇಲ್ಲಿನ ಹಿರಿಯರ  ಸೌಜನ್ಯ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಮೂಲ ಸೌಕರ್ಯದ ಯಾವುದೇ ಕೊರತೆ ಇಲ್ಲದೆ ಬೆಳೆದಿರುವ ಗ್ರಾಮದಲ್ಲಿ ಖಾಸಗಿ ವಾಹನ ಸಂಚಾರ ದಟ್ಟವಾಗಿದೆ. ನಗರದಿಂದ ಕೇವಲ ನಾಲ್ಕು ಕಿ.ಮೀ ಅಂತರದಲ್ಲಿ ನಿರ್ಮಾಣಗೊಂಡ ಗ್ರಾಮ ಬಹು ದೂರದೃಷ್ಟಿ ಕಲ್ಪನೆಯಿಂದ ನಿರ್ಮಾಣವಾಗಿದೆ.ಗ್ರಾಮದಲ್ಲಿ ತೆಂಗು, ಅಡಿಕೆ, ಕಬ್ಬು, ಬತ್ತ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳನ್ನು ಕಾಣಬಹುದು. ಒಂದೂವರೆ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ವಲಸಿಗರ ಪ್ರಮಾಣ ಹೆಚ್ಚಾಗಿದೆ.  ಒಟ್ಟಿನಲ್ಲಿ ಯೋಜನೆ ಮೂಲಕ ಆರಂಭವಾದ ಗ್ರಾಮವೊಂದು ಹಿಂದಿನ ಇತಿಹಾಸದ ವೇಗವನ್ನು ಕಳೆದುಕೊಂಡು ಸಹಜ ಸ್ಥಿತಿಯಲ್ಲೇ ಸಾಗುತ್ತಿರುವುದರ ಜತೆಗೆ ನಾಡಿಗೆ ಹಲವು ಗಣ್ಯರನ್ನು ಕೊಡುಗೆ ನೀಡಿದ ಹೆಗ್ಗಳಿಕೆ ಹೊತ್ತಿರುವುದು ಹೆಮ್ಮೆಯ ಸಂಗತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry