ಸುದ್ದಿಯ ಹಿನ್ನಲೆ :ದೇವ ಕಣಗಳು ಮತ್ತು ಅವುಗಳ ಪಾತ್ರ

ಭಾನುವಾರ, ಜೂಲೈ 21, 2019
22 °C

ಸುದ್ದಿಯ ಹಿನ್ನಲೆ :ದೇವ ಕಣಗಳು ಮತ್ತು ಅವುಗಳ ಪಾತ್ರ

Published:
Updated:

ಕಳೆದ ವಾರ ಜಿನಿವಾ ಬಳಿಯ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆಯ (ಸಿಇಆರ್‌ಎನ್) ಪ್ರಯೋಗಾಲಯದಲ್ಲಿ ವಿಶ್ವದ ಹುಟ್ಟಿಗೆ ಕಾರಣವಾಗಿವೆ ಎಂದು ಭಾವಿಸಲಾದ `ಹಿಗ್ಸ್ ಬೋಸನ್~ (ದೇವ ಕಣ) ಹೋಲುವ ಕಣಗಳು ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು.

 

`ಹಿಗ್ಸ್ ಬೋಸನ್~ ಅಂದರೇನು ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಈ ಪ್ರಯೋಗದ ಮಹತ್ವ ಏನು ಎಂಬುದರ ಕುರಿತು ವಿವರ.

* 1370 ಕೋಟಿ ವರ್ಷಗಳ ಹಿಂದೆ ಮಹಾಸ್ಫೋಟ (ಬಿಗ್ ಬ್ಯಾಂಗ್) ನಡೆದಾಗ ನಕ್ಷತ್ರ, ಗ್ರಹ ಹುಟ್ಟಿಗೆ ಪರಮಾಣುವಿನ ಉಪಕಣವಾದ ಈ `ಹಿಗ್ಸ್ ಬೋಸನ್~ ಕಣಗಳು ಕಾರಣ ಎನ್ನಲಾಗಿದೆ.* ಈ ಪ್ರಯೋಗದ ಮಹತ್ವ ಏನು?


ವಿಶ್ವದ ಉಗಮಕ್ಕೆ ಕಾರಣವಾದ ಅಂಶವನ್ನು ಭೌತವಿಜ್ಞಾನಿಗಳು ಒಂದು ಸಾಮಾನ್ಯ ಮಾದರಿಯ (ಸಿದ್ಧಾಂತ) ಮೂಲಕ ವಿವರಿಸಿದ್ದಾರೆ. ಈ ಮಾದರಿಯ ಮೂಲಕ ಊಹಿಸಲಾದ 11 ಕಣಗಳು ಈಗಾಗಲೇ ಪತ್ತೆಯಾಗಿದ್ದವು. `ಹಿಗ್ಸ್ ಬೋಸನ್~ ಪತ್ತೆಯಾಗದಿದ್ದಲ್ಲಿ ಈ ಸಿದ್ಧಾಂತವೇ ಅಪ್ರಸ್ತುತ ಎನಿಸಿಕೊಳ್ಳುತ್ತಿತ್ತು.ಮಹಾಸ್ಫೋಟದ ನಂತರದ ಕ್ಷಣದಲ್ಲಿ (ಸೆಕೆಂಡ್‌ನ 1000ನೇ ಒಂದು ಭಾಗ) ವಿಶ್ವ ಎಂಬುದು ಬೆಳಕಿನ ವೇಗದಲ್ಲಿ ಪರಸ್ಪರ ಡಿಕ್ಕಿ ಹೊಡೆಯುತ್ತ ತಿರುಗುತ್ತಿದ್ದ ಕಣಗಳ ಬೃಹತ್ ಬಟ್ಟಲಾಗಿತ್ತು. ಆದರೆ, ಅವಕ್ಕೆ ದ್ರವ್ಯರಾಶಿ (ತೂಕ) ಇರಲಿಲ್ಲ. ಹಿಗ್ಸ್ ಕ್ಷೇತ್ರದಲ್ಲಿ `ಹಿಗ್ಸ್ ಬೋಸನ್~ ಕಣಗಳೊಂದಿಗೆ ಡಿಕ್ಕಿ ಹೊಡೆದ ನಂತರ ಈ ಕಣಗಳೆಲ್ಲ ದ್ರವ್ಯರಾಶಿ ಗಳಿಸಿಕೊಂಡವು.

 

ಹೆಚ್ಚೆಚ್ಚು ಸಲ ಡಿಕ್ಕಿ ಹೊಡೆದಂತೆ ಹೆಚ್ಚು ದ್ರವ್ಯರಾಶಿ ಆಕರಿಸಿಕೊಂಡವು.ಈ `ಹಿಗ್ಸ್ ಕ್ಷೇತ್ರ~ ಎಂಬುದು ಇಡೀ ಬ್ರಹಾಂಡ  ಆವರಿಸಿರುವ  ಅಗೋಚರವಾದ ಶಕ್ತಿ ಕ್ಷೇತ್ರ. ಬೆಳಕಿನ ಕಿರಣಗಳಲ್ಲಿರುವ `ಫೋಟಾನ್~ಗಳ ಮೇಲೆ ಮಾತ್ರ ಇದರ ಪರಿಣಾಮವಾಗುವುದಿಲ್ಲ. ಹಾಗಾಗಿ ಅವುಗಳಿಗೆ ದ್ರವ್ಯರಾಶಿ ಇಲ್ಲ.ಈ `ಹಿಗ್ಸ್ ಬೋಸನ್~ ಕಣದ ಅಸ್ತಿತ್ವವನ್ನು ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಸೇರಿದಂತೆ ಇತರ ಆರು ಭೌತವಿಜ್ಞಾನಿಗಳು 1964ರಲ್ಲಿ ಮೊದಲ ಬಾರಿ ಸೈದ್ಧಾಂತಿಕವಾಗಿ ನಿರೂಪಿಸಿದ್ದರು. ಕಣಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್‌ಸ್ಟೀನ್ ಅವರು ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆಯಾಗಿತ್ತು.1980ರಲ್ಲಿ ಮೊದಲ ಬಾರಿ ಪ್ರಾಯೋಗಿಕವಾಗಿ ಈ ಕಣದ ಇರುವಿಕೆಯನ್ನು ಸಾಬೀತುಪಡಿಸುವ ಯತ್ನ ಷಿಕಾಗೊದಲ್ಲಿ ನಡೆದಿತ್ತು. 2008ರ ನಂತರ `ಸಿಇಆರ್‌ಎನ್~ ಪ್ರಯೋಗಾಲಯದಲ್ಲಿ ಈ ಪ್ರಯತ್ನ ಮುಂದುವರಿಯಿತು.* ಲಾರ್ಜ್ ಹಾಡ್ರನ್ ಕೊಲೈಡರ್ ಎಂದರೇನು?

ಇದು ಜಗತ್ತಿನ ದೊಡ್ಡದಾದ ಹಾಗೂ ಶಕ್ತಿಶಾಲಿಯಾದ ಪರಮಾಣು ಡಿಕ್ಕಿಕಾರಕ ಯಂತ್ರ. ಸ್ವಿಟ್ಜರ್‌ಲೆಂಡ್, ಫ್ರಾನ್ಸ್ ಗಡಿಯಲ್ಲಿ 100 ಮೀಟರ್ ಆಳದಲ್ಲಿ ವೃತ್ತಾಕಾರದ  27 ಕಿ.ಮೀ. ಸುರಂಗದಲ್ಲಿ ಈ ಯಂತ್ರ ಕೆಲಸ ನಿರ್ವಹಿಸುತ್ತಿದೆ. 300 ಕೋಟಿ ಯುರೊ  ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಪರಸ್ಪರ ವಿರುದ್ಧ ದಿಕ್ಕಿನಿಂದ ಪ್ರೋಟಾನ್‌ಗಳ (ಪರಮಾಣುವಿನ ಉಪಕಣ) ಪುಂಜವನ್ನು ಬೆಳಕಿನ ವೇಗದಲ್ಲಿ ಬಲವಾಗಿ ಡಿಕ್ಕಿ ಹೊಡೆಯುವಂತೆ ಹಾಯಿಸಲಾಗುತ್ತದೆ. ಈ ಡಿಕ್ಕಿಯಿಂದ ಮಹಾಸ್ಫೋಟದ ನಂತರದ ಕೃತಕ ಸನ್ನಿವೇಶ ಸೃಷ್ಟಿಯಾಗಿದ್ದು, ಆಗ ಹುಟ್ಟಿದ ಉಪಕಣಗಳನ್ನು ಅಭ್ಯಸಿಸಿ `ಹಿಗ್ಸ್ ಬೋಸನ್~ ಇರುವಿಕೆಯನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.* ಸಾಮಾನ್ಯ ಮಾದರಿ (ಸ್ಟ್ಯಾಂಡರ್ಡ್ ಮಾಡೆಲ್) ಅಂದರೇನು?

ಜೀವ ಸಂಕುಲದ ಹುಟ್ಟು ಮತ್ತು ವೈವಿಧ್ಯಕ್ಕೆ ಜೀವವಿಜ್ಞಾನದಲ್ಲಿ ವಿಕಾಸವಾದದ ಸಿದ್ಧಾಂತ ಇದ್ದಂತೆ. ಭೌತಶಾಸ್ತ್ರಜ್ಞರು ವಿಶ್ವದ ಹುಟ್ಟಿಗೆ ಕಾರಣವಾದ ಅಂಶವನ್ನು ಸಾಮಾನ್ಯ ಮಾದರಿ ಮೂಲಕ ವಿವರಿಸಿದ್ದಾರೆ. 12 ಮೂಲಭೂತ ಕಣಗಳು ಹಾಗೂ ಅವುಗಳನ್ನು ನಿಯಂತ್ರಿಸುವ ನಾಲ್ಕು ಮೂಲಭೂತ ಬಲಗಳನ್ನು ಇದು ನಿರೂಪಿಸುತ್ತದೆ.ಆದರೆ, ವಿಶ್ವ ಅಂದರೆ ಊಹೆಗೆ ನಿಲುಕದಷ್ಟು ದೊಡ್ಡದಾಗಿದೆ. ದೈತ್ಯವಾಗಿದೆ.  ಸಾಮಾನ್ಯ ಮಾದರಿ ಅದರಲ್ಲಿನ ಕೆಲ ಭಾಗಕಷ್ಟೇ ವಿವರಣೆ ನೀಡುತ್ತದೆ. ನಮ್ಮ ಕಣ್ಣಿಗೆ ಕಾಣುತ್ತಿರುವ ವಿಶ್ವ ಹಾಗೂ ಕಾಣದಿರುವ ವಿಶ್ವದ ನಡುವೆ ಅಂತರ ಇದೆ. ಅದು ಪೂರ್ತಿಯಾಗಿ ಇನ್ನೂ ಅರ್ಥವಾಗಿಲ್ಲ. ಹಾಗಾಗಿ ಅದನ್ನು `ಕಪ್ಪು ದ್ರವ್ಯ~ ಎಂದು ಕರೆಯಲಾಗುತ್ತಿದೆ.ನಕ್ಷತ್ರಪುಂಜಗಳು (ಗ್ಯಾಲಕ್ಸಿ) ಸಹ ನಾವು ಅರಿಯದ ಬಲಕ್ಕಿಂತ ವೇಗವಾಗಿ ಪರಸ್ಪರ ದೂರ ಸರಿಯುತ್ತಿವೆ. ಈ ಬಲವನ್ನು `ಕಪ್ಪು ಶಕ್ತಿ~ ಎಂದು ವಿಜ್ಞಾನಿಗಳು ಕರೆಯುತ್ತಿದ್ದಾರೆ. ಈ ಇನ್ನೂ ಅರ್ಥವಾಗದ `ಕಪ್ಪು ದ್ರವ್ಯ~ ಹಾಗೂ `ಕಪ್ಪು ಶಕ್ತಿ~ ವಿಶ್ವದ ಶೇ 96ರಷ್ಟು ದ್ರವ್ಯರಾಶಿ ಹಾಗೂ ಶಕ್ತಿಗೆ ಕಾರಣ ಎನ್ನಲಾಗುತ್ತಿದೆ.ಕಪ್ಪು ದ್ರವ್ಯ, ಕಪ್ಪು ಶಕ್ತಿ, ಗುರುತ್ವಾಕರ್ಷಣ ಶಕ್ತಿಯನ್ನೂ ಒಳಗೊಳ್ಳುವಂತೆ ಸಾಮಾನ್ಯ ಮಾದರಿಯನ್ನು ಮಾರ್ಪಡಿಸಿದಾಗ ಬ್ರಹ್ಮಾಂಡದ ಪೂರ್ಣ ಅರಿವು ಉಂಟಾಗಬಹುದು. ಈ ವಿಶ್ವಕ್ಕೆ ಸಾಮಾನಾಂತರವಾಗಿ ಇರುವ ಮತ್ತೊಂದು ವಿಶ್ವದ ಸಾಧ್ಯತೆಯ ಕುರಿತೂ ಬೆಳಕು ಚೆಲ್ಲಬಲ್ಲದು.ಐಸಾಕ್ ನ್ಯೂಟನ್ ಮಂಡಿಸಿದ ಸಿದ್ಧಾಂತಗಳ ಆಧಾರದಲ್ಲಿ ಐನ್‌ಸ್ಟೀನ್ ಕೆಲಸ ಮಾಡಿದರು.     `ಸಿಇಆರ್‌ಎನ್~ ವಿಜ್ಞಾನಿಗಳು ಐನ್‌ಸ್ಟೀನ್ ಕೆಲಸ ಮುಂದುವರಿಸುವ ಯತ್ನ ಮಾಡುತ್ತಿದ್ದಾರೆ.

ಹಿಗ್ಸ್‌ಗೆ ನೊಬೆಲ್?

ಬ್ರಿಟಿಷ್ ವಿಜ್ಞಾನಿ ಪೀಟರ್ ಹಿಗ್ಸ್ (83) ಮಂಡಿಸಿದ ಸಿದ್ಧಾಂತ ಈಗ ದೃಢಪಟ್ಟಿರುವುದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ಬರಬಹುದೇ ಎಂಬ ಊಹಾಪೋಹ ಈಗ ಗರಿಗೆದರಿದೆ.ಸ್ಟಿಫನ್ ಹಾಕಿಂಗ್ ಸೇರಿದಂತೆ ಹಿರಿಯ ವಿಜ್ಞಾನಿಗಳೆಲ್ಲ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವುದು ಸೂಕ್ತ  ಎಂದಿದ್ದಾರೆ.  ಆದರೆ,  ಹಿಗ್ಸ್ ತಮ್ಮ ಸಿದ್ಧಾಂತ ಮಂಡಿಸುವಾಗ ಐವರು ಸಹೋದ್ಯೋಗಿಗಳ ಜತೆ ಕೆಲಸ ಮಾಡಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೂರು ಜನರಿಗಿಂತ ಹೆಚ್ಚಿನವರು ಹಂಚಿಕೊಳ್ಳುವಂತಿಲ್ಲ ಎಂಬ ನಿಯಮ ಇಲ್ಲಿ ತೊಡಕಾಗುವ ಸಾಧ್ಯತೆಯಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry