ಶುಕ್ರವಾರ, ಜೂನ್ 18, 2021
24 °C

ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್

~You might just as well say~, added the March Hare, that "I like what I get" is the same thing as "I get what I like"

                                                              - Alice in Wonderlandಹದಿನೆಂಟು ವರ್ಷಗಳ ಹಿಂದೆ ಅಂದರೆ 1994ರ ಅಕ್ಟೋಬರ್‌ನಲ್ಲಿ ದೂರದರ್ಶನದ ಮೂರನೇ ವಾಹಿನಿ ಅಥವಾ ಡಿಡಿ-3ಯ ಉದ್ಘಾಟನೆಯಾಯಿತು. ಇದಾಗುವ ಹೊತ್ತಿಗೆ ಭಾರತದ ಆರ್ಥಿಕತೆ ವಿಶ್ವದ ಮಾರುಕಟ್ಟೆಗೆ ತೆರೆದುಕೊಂಡಿತ್ತು.

 

ಡಿಶ್ ಆಂಟೆನಾಗಳ ಮೂಲಕ ಭಾರತೀಯ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗ ಬಿಬಿಸಿ, ಸಿಎನ್‌ಎನ್‌ಗಳಂಥ ಟಿ.ವಿ. ವಾಹಿನಿಗಳಲ್ಲಿ ನಡೆಯುವ ಸುದ್ದಿಯ ನೇರ ಪ್ರಸಾರ ರುಚಿಯನ್ನು ಕಂಡಿದ್ದವು.
ಅಷ್ಟೇಕೆ ಸಿಎನ್‌ಎನ್ ಮತ್ತು ದೂರದರ್ಶನದ ಜೊತೆಗಿನ ಸಹಯೋಗದ ಪರಿಣಾಮವಾಗಿ ಮೊದಲನೇ ಕೊಲ್ಲಿ ಯುದ್ಧವನ್ನು ನೇರ ಪ್ರಸಾರದಲ್ಲಿ ಭಾರತದ ಟಿ.ವಿ. ವೀಕ್ಷಕರೆಲ್ಲಾ ಕಂಡಿದ್ದರು.ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿದ್ದ ಅಂದಿನ ದೂರದರ್ಶನದ ಮಹಾ ನಿರ್ದೇಶಕರಾದ ಭಾಸ್ಕರ್ ಘೋಷ್ ದೂರದರ್ಶನದ ವೀಕ್ಷಕರ ಸುದ್ದಿಯ ನೇರ ಪ್ರಸಾರದ ಆಸೆಯನ್ನು ತಣಿಸಲು ಹೊರಟಿದ್ದರು. ಆ ಹೊತ್ತಿಗೆ ಘಟನೆಗಳನ್ನು ನೇರ ಪ್ರಸಾರ ಮಾಡುವ ಉ್ದ್ದದೇಶವೇನೂ ಅವರಿಗಿರಲಿಲ್ಲ. ಸುದ್ದಿಯ ವಿಶ್ಲೇಷಣೆಯ ನೇರ ಪ್ರಸಾರವಷ್ಟೇ ಅವರ ಉದ್ದೇಶವಾಗಿತ್ತು.ಇದು ಇನ್ನೇನು ಆರಂಭವಾಗಬೇಕು ಎನ್ನುವ ಹೊತ್ತಿಗೆ ಭಾಸ್ಕರ ಘೋಷ್ ಅವರಿಗೆ ಪ್ರಧಾನಿ ಕಚೇರಿಯಿಂದ ಕರೆ ಬಂತು. ಕೇಳಿದ್ದು ಒಂದೇ ಪ್ರಶ್ನೆ `ದೂರದರ್ಶನ ಸುದ್ದಿ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲು ಹೊರಟಿದೆಯೆಂದು ಕೇಳಿದೆವು.

 

ಇದು ನಿಜವೇ?~ ಇದಕ್ಕೆ `ಹೌದು~ ಎಂದು ಘೋಷ್ ಉತ್ತರಿಸಿದ್ದೇ ತಡ, ಪ್ರಧಾನಿ ಕಚೇರಿ ಅದಕ್ಕೆ ತಡೆಯೊಡ್ಡುವಂತೆ ಆದೇಶಿಸಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಾಧ್ಯಮ ಸಲಹೆಗಾರ ಪಿ.ವಿ.ಆರ್.ಕೆ. ಪ್ರಸಾದ್ ಅವರ ಮಟ್ಟಿಗೆ ಸುದ್ದಿಯ ನೇರ ಪ್ರಸಾರ ಎಂಬುದು ಭಾರತದ ಮಟ್ಟಿಗೆ ಬಹಳ ಅಪಾಯಕಾರಿ ಎಂಬಂತೆ ಕಾಣಿಸುತ್ತಿತ್ತು.ಈ ನಿಲುವಿಗೆ ಪಿ.ವಿ. ನರಸಿಂಹರಾಯರ ಬೆಂಬಲವೂ ಇತ್ತು. ಅಂದು ಅವರಿಗಿದ್ದ ಭಯವೆಂದರೆ ಆಡಳಿತಾರೂಢ ಸರ್ಕಾರದ ವಿರುದ್ಧ ನೇರ ಪ್ರಸಾರದ ವೇಳೆ ಯಾರಾದರೂ ಮಾತನಾಡಿದರೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದು.ಇದಾಗಿ 17 ವರ್ಷಗಳು ಕಳೆಯುವ ಹೊತ್ತಿಗೆ ಕನ್ನಡದ ಖಾಸಗಿ ಸುದ್ದಿ ವಾಹಿನಿಗಳ ಸಂಖ್ಯೆ ಶೂನ್ಯದಿಂದ ಏಳಕ್ಕೆ ಏರಿತು. 2011ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಯೊಂದು ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಯಿತು. 
ಇದೇನು ಆ ವಾಹಿನಿಯವರೇ ಕಷ್ಟಪಟ್ಟು ಹುಡುಕಿ ಪ್ರಸಾರ ಮಾಡಿದ ಸುದ್ದಿಯಾಗಿರಲಿಲ್ಲ. ರಾಜಕಾರಣಿಗಳ ಕೆಸರೆರಚಾಟದ ಮಧ್ಯೆ ಬಯಲಾಗಿದ್ದ ಸುದ್ದಿ. ಇದು ಪ್ರಸಾರವಾದುದರ ಹಿಂದೆಯೇ ಚಾನೆಲ್‌ನ ನಿರ್ದೇಶಕರು ಸಂಪಾದಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು.

 

`ಮುಖ್ಯಮಂತ್ರಿಗಳ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಯೊಂದು ನಮ್ಮ ಚಾನೆಲ್‌ನಲ್ಲಿ ಬಂತೇ...?~. ಸಂಪಾದಕರು ಸ್ವಲ್ಪ ಖುಷಿಯಿಂದಲೇ `ನಾವು ಎಲ್ಲರಿಗಿಂತಲೂ ಮೊದಲೇ ಹಾಕಿದ್ದೇವೆ~ ಎಂದು ಉತ್ತರಿಸಿದರು. ತಕ್ಷಣ ನಿರ್ದೇಶಕರ ಸಲಹೆ ಹೊರಬಿತ್ತು `ಮುಖ್ಯಮಂತ್ರಿಗಳ ಮಗನಿಗೊಂದು ಫೋನ್ ಮಾಡಿ ಕ್ಷಮಿಸಿ ಎಂದು ಬಿಡುತ್ತೀರಾ...? ಅವರು ಬಹಳ ಬೇಜಾರು ಮಾಡಿಕೊಂಡಿದ್ದಾರಂತೆ~. ಆ ಸಂಪಾದಕರಿಗೆ ರಾಜೀನಾಮೆ ಹೊರತು ಪಡಿಸಿದ ಮತ್ತೊಂದು ಮಾರ್ಗ ಇರಲಿಲ್ಲ.ಪಿ.ವಿ. ನರಸಿಂಹರಾವ್ ಅವರ ಮಾಧ್ಯಮ ಸಲಹೆಗಾರರಿಗೆ ಇದ್ದದ್ದು ಸರ್ಕಾರಿ ಸ್ವಾಮ್ಯದ ಚಾನೆಲ್‌ನಲ್ಲಿ ಸರ್ಕಾರದ ವಿರುದ್ಧದ ಮಾತುಗಳು ಬಂದುಬಿಟ್ಟರೆ ಎಂಬ ಭಯ. ಅವರದನ್ನು ಹೇಳಿದ 17 ವರ್ಷಗಳ ಖಾಸಗಿ ವಾಹಿನಿಯೊಂದರ ಮಾಲೀಕ ವರ್ಗ ವ್ಯಕ್ತಪಡಿಸಿದ್ದೂ ಅದೇ ಭಯವನ್ನು.

ಬಹುಶಃ ಈ ಎರಡು ಘಟನೆಗಳು  ಒಂದೂವರೆ ದಶಕದ ಅವಧಿಯಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಫೋಟಗೊಂಡ ವಾರ್ತಾವಾಹಿನಿಗಳ ಸಂಖ್ಯೆಯ ಮತ್ತೊಂದು ಮುಖವನ್ನು ಹೇಳುತ್ತಿವೆ.***

ಕನ್ನಡದಲ್ಲಿ ಖಾಸಗಿ ವಾರ್ತಾವಾಹಿನಿಗಳ ಯುಗ ವಾಸ್ತವದಲ್ಲಿ ಆರಂಭಗೊಂಡದ್ದು ಹೊಸ ಸಹಸ್ರಮಾನದ ಉದಯದ ನಂತರ. ಅಲ್ಲಿಯ ತನಕ ಕನ್ನಡದ ಮಟ್ಟಿಗೆ ದೂರದರ್ಶನವನ್ನು ಹೊರತು ಪಡಿಸಿದರೆ ಇದ್ದದ್ದು ತೊಂಬತ್ತರ ದಶಕದಲ್ಲಿ ಆರಂಭಗೊಂಡ ಉದಯ ಟಿ.ವಿ. ಮಾತ್ರ.ಅಂದಿನ ಸರ್ಕಾರಿ ಕಾನೂನುಗಳ ಮಿತಿಯಲ್ಲಿ ಬಹಳ ಕಷ್ಟಪಟ್ಟು ವಾರ್ತಾ ಬುಲೆಟಿನ್ ಒಂದನ್ನು ಅದು ನೀಡುತ್ತಿತ್ತು. 2000ದಲ್ಲಿ ತೆಲುಗಿನ ಈಟಿವಿ ಕನ್ನಡದಲ್ಲೂ ಒಂದು ವಾಹಿನಿಯನ್ನು ಆರಂಭಿಸುವುದರೊಂದಿಗೆ ಟಿ.ವಿ. ವಾರ್ತೆಗಳಿಗೆ ಮತ್ತೊಂದು ಆಯಾಮ ದೊರೆಯಿತು.ಪ್ರತಿ ಗಂಟೆಗೊಮ್ಮೆ ಐದು ನಿಮಿಷಗಳ ಅವಧಿಯ ಸುದ್ದಿ ಬುಲೆಟಿನ್ ಇದರ ಜೊತೆಗೆ ರಾತ್ರಿಯ ಅಗ್ರ ರಾಷ್ಟ್ರೀಯ ವಾರ್ತೆ, ಕನ್ನಡ ನಾಡಿ ಇತ್ಯಾದಿಗಳ ಜೊತೆಗೆ ದೃಶ್ಯಾತ್ಮಕ ಸುದ್ದಿಗಳಿಗೆ ಒಂದು ಹೊಸ ಆಯಾಮ ದೊರೆಯಿತು. ಕೇವಲ ಚುನಾವಣೆಗಳ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಚರ್ಚೆಗಳ ನೇರ ಪ್ರಸಾರ ಇತ್ಯಾದಿಗಳನ್ನು ಈಟಿವಿ ಆರಂಭಿಸಿತು.ಈ ಪ್ರಯತ್ನಗಳೆಲ್ಲವೂ ಮನರಂಜನಾ ಚಾನೆಲ್ ಒಂದರಲ್ಲಿ ಸುದ್ದಿಯನ್ನು ನೀಡುವ ಪ್ರಯತ್ನಗಳಷ್ಟೇ ಆಗಿದ್ದವು. ಉದಯ ಟಿ.ವಿ. ಸುದ್ದಿಗಾಗಿ ಮೀಸಲಿರುವ ಒಂದು ಚಾನೆಲ್ ಆರಂಭಿಸಿತಾದರೂ ಅದು ಸುದ್ದಿಯನ್ನು ನೀಡುವುದಕ್ಕೆ ಅಗತ್ಯವಿರುವ ಕನ್ನಡದ್ದೇ ಆದ ದೃಶ್ಯಾತ್ಮಕ ನುಡಿಗಟ್ಟೊಂದನ್ನು ಶೋಧಿಸಲಿಲ್ಲ.

 

ಈ ನಡುವೆ ಏಷ್ಯಾ ನೆಟ್ ಮತ್ತು ಜೀ ಟಿ.ವಿ.ಗಳೆರಡೂ ಜಂಟಿಯಾಗಿ ಆರಂಭಿಸಿದ ಕಾವೇರಿ ಎಂಬ ಮನರಂಜನೆ ಮತ್ತು ಸುದ್ದಿಯನ್ನು ಒಟ್ಟೊಟ್ಟಿಗೇ ನೀಡುವ ಪ್ರಯತ್ನ ಆಡಳಿತಾತ್ಮಕ ಕಾರಣಗಳಿಂದ ವಿಫಲವಾಗಿ ಕಾವೇರಿ ವಾಹಿನಿಯೇ ಮುಚ್ಚಿ ಹೋಯಿತು. ನಡುವೆ ಆರಂಭಗೊಂಡ ಸುಪ್ರಭಾತ ಎಂಬ ಚಾನೆಲ್ ಕೂಡಾ ಹಣಕಾಸಿನ ಕೊರತೆಯಿಂದಾಗಿ ಕೊನೆಯುಸಿರೆಳೆಯಿತು.ಈ ಎರಡೂ ವಾಹಿನಿಗಳ ಕಾಲ ಘಟ್ಟದಲ್ಲಿ ದೃಶ್ಯ ಮಾಧ್ಯಮದ ಮಾರುಕಟ್ಟೆ ಕೂಡಾ ಈಗಿನಷ್ಟು ವಿಕಾಸವಾಗಿರಲಿಲ್ಲ. ಬಹುಶಃ ಅವರೆಡೂ ತಲೆಯೆತ್ತಿ ನಿಲ್ಲುವ ಮೊದಲೇ ಕೊನೆಗೊಂಡವು ಎಂಬಂತೆ ಕಾಣಿಸುತ್ತದೆ.ಟಿ.ವಿ.9 ರಂಗಪ್ರವೇಶ ಮಾಡುವುದರೊಂದಿಗೆ ಕನ್ನಡದಲ್ಲಿ ಸುದ್ದಿ ವಾಹಿನಿಗಳ ಯುಗವೊಂದು ಆರಂಭವಾಯಿತು. ಹಿಂದಿಯ ಆಜ್‌ತಕ್ ಯಶಸ್ಸಿಗೆ ಅನುಸರಿಸಿದ್ದ ಎಲ್ಲಾ ಸೂತ್ರಗಳನ್ನೂ ತೆಲುಗಿನಲ್ಲಿ ಪ್ರಯೋಗಿಸಿ ಯಶಸ್ವಿಯಾಗಿದ್ದ ಟಿ.ವಿ. 9 ಈಗ ಕನ್ನಡದ ಅತ್ಯಂತ ಜನಪ್ರಿಯ ಚಾನೆಲ್.

 

ಕನ್ನಡದ ಸುದ್ದಿ ಮಾರುಕಟ್ಟೆಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಟಿ.ವಿ. 9 ವರ್ಷದಿಂದ ವರ್ಷಕ್ಕೆ ಒಟ್ಟು ಜಿಆರ್‌ಪಿಗಳ ವಿಷಯದಲ್ಲಿ ಕುಸಿಯುತ್ತಾ ಬಂದಿದ್ದರೂ ಈಗಲೂ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. ಮನರಂಜನಾ ಚಾನೆಲ್‌ಗಳ ವಿಷಯದಲ್ಲಿ ಇದೇ ಬಗೆಯ ಹಿಡಿತ ಉದಯ ಟಿ.ವಿ.ಗೆ ಇದೆ.ಕಾವೇರಿ ಮತ್ತು ಸುಪ್ರಭಾತಗಳ ಅಕಾಲ ಮರಣದ ನಂತರ ಮನರಂಜನಾ ಚಾನೆಲ್‌ಗಳಾಗಿ ಉಳಿದುಕೊಂಡದ್ದು ಉದಯ ಮತ್ತು ಈಟಿವಿಗಳೆರಡು ಮಾತ್ರ. ಹಿಂದಿಯ ಮನರಂಜನಾ ಮಾರುಕಟ್ಟೆಯಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ ಜೀ ಬಳಗ ಕನ್ನಡದಲ್ಲೊಂದು ವಾಹಿನಿಯನ್ನು ಆರಂಭಿಸಿತಾದರೂ ಅದು ನಿಜವಾದ ಸ್ಪರ್ಧಿಯಾಗಿ ಬೆಳೆದದ್ದು ಕಳೆದ ಮೂರು ವರ್ಷಗಳಲ್ಲಿ.ಇದೇ ಅವಧಿಯಲ್ಲಿ ಏಷ್ಯಾನೆಟ್ ಆರಂಭಿಸಿದ ಮನರಂಜನಾ ವಾಹಿನಿ ಸುವರ್ಣ ಕೂಡಾ ಪ್ರಬಲವಾಗಿ ಬೆಳೆದಿದೆ. ಏಷ್ಯಾ ನೆಟ್‌ನ ಮನರಂಜನಾ ವಾಹಿನಿಗಳಲ್ಲಿ ಸ್ಟಾರ್ ಬಳಗದ ಪಾಲು ಹೆಚ್ಚಿದ ನಂತರ ತಾಂತ್ರಿಕ ಕಾರಣಗಳಿಂದಾಗಿ ವಾರ್ತಾವಾಹಿನಿಯೊಂದನ್ನು ಪ್ರತ್ಯೇಕವಾಗಿ ಕಟ್ಟಲೇ ಬೇಕಾದ ಅನಿವಾರ್ಯತೆ ಏಷ್ಯಾನೆಟ್‌ಗೆ ಎದುರಾಯಿತು.ಅದರ ಪರಿಣಾಮವಾಗಿ ರೂಪುಗೊಂಡದ್ದು ಸುವರ್ಣ 24/7. ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ರಾಜಕಾರಣಿ ಎಚ್.ಡಿ. ಕುಮಾರಸ್ವಾಮಿ ಮನರಂಜನೆ ಮತ್ತು ಸುದ್ದಿಗಳೆರಡನ್ನೂ ಗಮನದಲ್ಲಿಟ್ಟುಕೊಂಡು ಕಸ್ತೂರಿ ವಾಹಿನಿಯನ್ನು ಆರಂಭಿಸಿದ್ದರು.

 

ಈಗ ಅವರೂ ಒಂದು ಪ್ರತ್ಯೇಕ ಸುದ್ದಿ ಚಾನೆಲ್ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರಭಾವಶಾಲಿ ರಾಜಕಾರಣಿ-ಉದ್ಯಮಿಗಳ ಕುಟುಂಬವೊಂದು ಸಮಯ ಎಂಬ ಸುದ್ದಿ ಚಾನೆಲ್ ಆರಂಭಿಸಿತಾದರೂ ಅದರ ಮಾಲೀಕತ್ವ ಈಗ ಮತ್ತೊಬ್ಬ ರಾಜಕಾರಣಿಯ ಕೈಯಲ್ಲಿದೆ. ಹಾಗೆಯೇ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಎಚ್.ಆರ್.ರಂಗನಾಥ್ ಅವರ ಪಬ್ಲಿಕ್ ಟಿ.ವಿ. ಎಂಬ ಸುದ್ದಿವಾಹಿನಿ ಈ ವರ್ಷ ತನ್ನ ಪ್ರಸಾರ ಆರಂಭಿಸಿತು. 2011ರಲ್ಲಿ ಗಣಿ ದೊರೆಗಳಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಹೂಡಿಕೆಯ ಮೂಲಕ ಜನಶ್ರೀ ಎಂಬ ಸುದ್ದಿ ವಾಹಿನಿ ಆರಂಭಗೊಂಡಿತು.ಸದ್ಯದ ಕನ್ನಡದ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಮನರಂಜನೆಗಿಂತ ಸುದ್ದಿ ವಾಹಿನಿಗಳ ಭರಾಟೆಯೇ ಹೆಚ್ಚು. ಕನ್ನಡದ ದೃಶ್ಯ ಮಾಧ್ಯಮದ ಕಳೆದ ಎರಡು ದಶಕಗಳ ಇತಿಹಾಸವನ್ನು ಗಮನಿಸುವುದಾದರೆ ಇಲ್ಲಿ ರಿಮೇಕ್ ಚಿತ್ರಗಳೇ ಹೆಚ್ಚು ಯಶಸ್ಸುಗಳಿಸಿವೆ. ಕಳೆದ ಐದು ವರ್ಷಗಳ ಮನರಂಜನಾ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಧಾರಾವಾಹಿಯ ವಿಷಯದಲ್ಲೂ ನಿಜ.ಕನ್ನಡದಲ್ಲಿ ಯಶಸ್ವೀ ಧಾರಾವಾಹಿಗಳ ಮೊದಲ ಐದು ಸ್ಥಾನ ತಮಿಳು, ಹಿಂದಿ ಮತ್ತು ತೆಲುಗಿನಿಂದ ರಿಮೇಕ್ ಆದ ಧಾರವಾಹಿಗಳಿಗೇ ಸಲ್ಲುತ್ತದೆ. ತಮಾಷೆಯೆಂದರೆ ಸುದ್ದಿ ಚಾನೆಲ್‌ಗಳ ಸಂಖ್ಯೆ ಮೊದಲು ಸ್ಫೋಟಗೊಂಡದ್ದು ನೆರೆಯ ಆಂಧ್ರಪ್ರದೇಶದಲ್ಲಿ. ಈಗ ಅದೇ ಕರ್ನಾಟಕದಲ್ಲಿ ಮರುಕಳಿಸುತ್ತದೆ.ಆಂಧ್ರಪ್ರದೇಶದಲ್ಲಿ ಹೇಗೆ ರಿಯಲ್ ಎಸ್ಟೇಟ್ ಮತ್ತು ರಾಜಕಾರಣಿಗಳ ಹಣ ಟಿ.ವಿ. ಚಾನೆಲ್‌ಗಳಿಗೆ ಹರಿದು ಬಂತೋ ಅದೇ ಬಗೆಯಲ್ಲಿ ಕರ್ನಾಟಕದಲ್ಲೂ ಟಿ.ವಿ. ಸುದ್ದಿ ವಾಹಿನಿಗಳಿಗೆ ಮುಖ್ಯವಾಗಿ ರಾಜಕಾರಣಿಗಳ ಹಣ ಇದಕ್ಕೆ ಪೂರಕವಾಗಿ ರಿಯಲ್ ಎಸ್ಟೇಟ್ ಹಣ ಹರಿದು ಬಂದಿದೆ.ಕನ್ನಡದಲ್ಲಿರುವ ಏಳು ಸುದ್ದಿವಾಹಿನಿಗಳಲ್ಲಿ ಐದರಲ್ಲಿ ರಾಜಕಾರಣಿಗಳು ಹಣ ಹೂಡಿರುವುದು ಸುಸ್ಪಷ್ಟ. ಉಳಿದೆರಡರಲ್ಲಿ ರಾಜಕಾರಣಿಗಳ ಹೂಡಿಕೆ ಸ್ವಲ್ಪ ಮಟ್ಟಿಗೆ ಪರೋಕ್ಷವಾಗಿದೆ. ಆದರೆ ಇವೆರಡರಲ್ಲಿಯೂ ರಿಯಲ್ ಎಸ್ಟೇಟ್ ಉದ್ಯಮಿಗಳ ಹೂಡಿಕೆಯಿರುವುದು ಬಹಿರಂಗ ರಹಸ್ಯ.***

ಕನ್ನಡದಲ್ಲಿ ಸಂಭವಿಸುತ್ತಿರುವ ಈ ಸುದ್ದಿ ವಾಹಿನಿಗಳ ಸ್ಫೋಟದ ಪ್ರಕ್ರಿಯೆ ಕೆಲ ಮಟ್ಟಿಗೆ ಒಟ್ಟು ದೃಶ್ಯ ಮಾಧ್ಯಮದ ಕ್ಷೇತ್ರದಲ್ಲಿಯೂ ಕೆಲ ಮಟ್ಟಿಗಿನ ಬದಲಾವಣೆಗಳಿಗೆ ಕಾರಣವಾಗಿದೆ. ಬಹಳ ಮುಖ್ಯವಾದುದು ಒಟ್ಟು ಜಿಆರ್‌ಪಿಯಲ್ಲಿ ಸುದ್ದಿ ಚಾನೆಲ್‌ಗಳು ಪಡೆಯುತ್ತಿರುವ ಪಾಲಿನಲ್ಲಿ ಕಂಡು ಬಂದಿರುವ ಹೆಚ್ಚಳ. ಐದು ವರ್ಷಗಳ ಹಿಂದೆ ಇದ್ದುದರ ಎರಡು ಪಟ್ಟು ಇದು ಹೆಚ್ಚಾಗಿದೆ.

 

ಆದರೆ ಇದೇ ವೇಳೆ ವಾಹಿನಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಂದರೆ ಅಂಕಿ-ಅಂಶಗಳಲ್ಲಿ ಕಂಡುಬಂದಿರುವ ಒಟ್ಟಾರೆ ಹೆಚ್ಚಳ ವಾಸ್ತವವನ್ನು ಹೆಚ್ಚಿನ ಮಟ್ಟಿಗೆ ಬದಲಾಯಿಸಿಲ್ಲ. ಏಳು ವಾರ್ತಾವಾಹಿನಿಗಳಿದ್ದರೂ ಒಟ್ಟು ವೀಕ್ಷಕರ ಅರ್ಧಕ್ಕಿಂತ ಹೆಚ್ಚು ಪಾಲು ಜನರಿನ್ನೂ ಟಿ.ವಿ-9 ವಾಹಿನಿಯನ್ನೇ ಅವಲಂಬಿಸಿದ್ದಾರೆ ಎಂಬುದಿಲ್ಲಿ ಮುಖ್ಯವಾಗುತ್ತದೆ.ಟಿ.ವಿ 9 ಅನುಸರಿಸಿದ ಆಜ್‌ತಕ್ ಮಾದರಿ ಅದರ ಯಶಸ್ಸಿನ ಬಹುಮುಖ್ಯ ಕಾರಣ. ಇದು ಬಹಳ ಸರಳವಾದ ಮಾದರಿ. ಇದನ್ನು ಕನ್ನಡದ ಮುದ್ರಣ ಮಾಧ್ಯಮದಲ್ಲಿ ಬಹಳ ಹಿಂದೆಯೇ ಟ್ಯಾಬ್ಲಾಯ್ಡಗಳು ಅನುಸರಿಸಿದ್ದವು. ಸುದ್ದಿಯನ್ನು ರಂಜಿಸುವಂತೆಯೂ ಪ್ರಚೋದಿಸುವಂತೆಯೂ ಪ್ರಸ್ತುತ ಪಡಿಸುವುದು. ಈಗ ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳೂ ಇದನ್ನೇ ಅನುಸರಿಸುತ್ತವೆ.

 

ಟಿ.ವಿ. 9 ತನ್ನ ಆರಂಭದ ದಿನಗಳಲ್ಲಿ ಬಹುಪಾಲು ವೀಕ್ಷಕರ ಮೇಲೆ ಹಿಡಿತ ಹೊಂದಿರುವ ಮನರಂಜನಾ ಚಾನೆಲ್‌ಗಳಿಗೇ ಸವಾಲೊಡ್ಡುತ್ತಿತ್ತು. ಎರಡು ವರ್ಷಗಳ ಹಿಂದಷ್ಟೇ ಅದು ಕನ್ನಡದ ಮೊದಲ ಮೂರು ಚಾನೆಲ್‌ಗಳಲ್ಲಿ ಒಂದಾಗಿತ್ತು. ಆದರೆ ನಿಧಾನವಾಗಿ ಆ ಸ್ಥಾನವನ್ನು ಕಳೆದುಕೊಂಡ ಅದೀಗ ಸುದ್ದಿ ವಾಹಿನಿಗಳಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.ಸುದ್ದಿ ರಂಜನೆ ಮತ್ತು ಪ್ರಚೋದನೆಯಾದರಷ್ಟೇ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯ ಎಂದಾದಾಗ ಏನೇನು ಸಂಭವಿಸಬಹುದೋ ಅದು ಕನ್ನಡದ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಸಂಭವಿಸುತ್ತಿದೆ.ಅದರ ಜೊತೆಗೆ ರಾಜಕೀಯ ಕ್ಷೇತ್ರದಿಂದಲೂ ಗಮನಾರ್ಹ ಪ್ರಮಾಣದ ಬಂಡವಾಳ ಹರಿದು ಬಂದಾಗ ಮಾಧ್ಯಮ `ಸುದ್ದಿ ಸಂವಹನ~ದ ಕೆಲಸ ಪಡೆದುಕೊಳ್ಳಬಹುದಾದ ಆಯಾಮ ಯಾವುದು ಎಂಬುದಕ್ಕೆ ಲೇಖನದ ಆರಂಭದಲ್ಲಿ ನೀಡಿದ ಎರಡನೇ ಘಟನೆ ಸಾಕ್ಷಿಯಾಗುತ್ತದೆ.***

ಸುದ್ದಿ ವಾಹಿನಿಗಳ ಸಂಖ್ಯಾ ಸ್ಫೋಟದ ವಿಷಯದಲ್ಲಿ ತೆಲುಗಿನ ಸಂದರ್ಭದಲ್ಲಿ ನಡೆದ ಘಟನಾವಳಿಗಳ ರಿಮೇಕ್ ಕನ್ನಡದ ಸಂದರ್ಭದಲ್ಲಿಯೂ ನಡೆಯುತ್ತಿದೆ. ಬಹುತೇಕ ಎಲ್ಲಾ ಪ್ರಭಾವಶಾಲಿ ರಾಜಕಾರಣಿಗಳೂ ಒಂದೊಂದು ಚಾನೆಲ್ ಹೊಂದಿರುವ ಆಂಧ್ರಪ್ರದೇಶದಂಥ ಸ್ಥಿತಿ ಸಂಪೂರ್ಣವಾಗಿ ಇಲ್ಲಿ ಕಾಣಿಸಿಕೊಂಡಿಲ್ಲ.

 

ಆದರೆ ಎರಡು ಪ್ರಮುಖ ರಾಜಕೀಯ ಪಕ್ಷಗಳ ರಾಜಕಾರಣಿಗಳು ಸುದ್ದಿ ವಾಹಿನಿಗಳನ್ನು ಹೊಂದಿರುವುದಂತೂ ಸ್ಪಷ್ಟ. ಮತ್ತೊಂದು ವಾಹಿನಿಯಲ್ಲಿ ನೆರೆಯ ರಾಜ್ಯದ ರಾಜಕಾರಣಿಗಳ ಹೂಡಿಕೆಯಿದೆ.ಈ ಬಗೆಯ ಹೂಡಿಕೆಗಳ ಪರಿಣಾಮವನ್ನು ಆಂಧ್ರಪ್ರದೇಶದ ಸಂದರ್ಭದಲ್ಲಿ ಅಧ್ಯಯನ ನಡೆಸಿರುವ ಪದ್ಮಜಾ ಶಾ ಅವರು ಕಂಡುಕೊಂಡಿರುವಂತೆ ಸ್ಪರ್ಧೆಯ ಹೆಸರಿನಲ್ಲಿ ನಡೆಯುವ ಅತಿ ರಂಜಿತ ಸುದ್ದಿ ಸಂವಹನ ಪ್ರಕ್ರಿಯೆ ಒಂದು ಬಗೆಯ ಹುಸಿ ಪ್ರಜ್ಞಾವಂತಿಕೆಗೆ ಕಾರಣವಾಗುತ್ತದೆಯೇ ಹೊರತು ನಿಜವಾದ ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಪ್ರಜ್ಞಾವಂತಿಕೆಗಲ್ಲ.

 

ಒಂದು ಪ್ರದೇಶಕ್ಕೆ ಸೀಮಿತವಾದ ಮಟ್ಟದಲ್ಲಿರುವ ಜಾನಪದೀಯ ನಂಬಿಕೆಗಳನ್ನು `ಪವಾಡ~ವಾಗಿ ಪ್ರತಿಬಿಂಬಿಸುವ ಕ್ರಿಯೆ ಅಥವಾ ಸಾಮಾನ್ಯ ಕೌಟುಂಬಿಕ ಜಗಳವೊಂದನ್ನು `ಗುಂಪು ನ್ಯಾಯ~ದ ಪ್ರಕ್ರಿಯೆಗೆ ಒಳಪಡಿಸುವ ಕನ್ನಡದ ವಾಹಿನಿಗಳ ಹಾದಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನಿಸುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.