ಸೋಮವಾರ, ಜೂನ್ 21, 2021
30 °C
ಸಚಿವ ಡಿ.ಕೆ.ಶಿವಕುಮಾರ್‌ಗೆ ಲಂಚದ ಆಮಿಷ

ಸುದ್ದಿ ವಾಹಿನಿಯ ವರದಿಗಾರರಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಲಂಚದ ಆಮಿಷವೊಡ್ಡಿದ್ದ ಆರೋಪದ ಮೇಲೆ ಟಿವಿ9 ಕನ್ನಡ ಸುದ್ದಿವಾಹಿನಿಯ ಸೋದರ ಸಂಸ್ಥೆ ನ್ಯೂಸ್‌9 ಆಂಗ್ಲವಾಹಿನಿಯ ವರದಿಗಾರರಾದ ಶ್ರೇಯಸ್‌ (28) ಮತ್ತು ಶ್ವೇತಾ (24) ಎಂಬುವರನ್ನು ಸದಾಶಿವನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಬಂಧಿತರಿಂದ ಕುಟುಕು ಕಾರ್ಯಾಚರಣೆಗೆ ಬಳಸುವ ಕ್ಯಾಮೆರಾ, ₨ 6 ಲಕ್ಷ ಹಾಗೂ ನ್ಯೂಸ್‌9 ಸಂಸ್ಥೆಯ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನರ್ಗೊ ಪವರ್‌ ಕಂಪೆನಿಯ ಯೋಜನೆಗಳ ಬಗ್ಗೆ ಮಾತನಾಡಬೇಕೆಂದು ಹೇಳಿಕೊಂಡು ಬಂದಿದ್ದ ಆರೋಪಿಗಳು ಸಚಿವರಿಗೆ ₨ 6 ಲಕ್ಷ ಲಂಚ ಕೊಡಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಮೂರ್ನಾಲ್ಕು ದಿನಗಳಿಂದ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಬರುತ್ತಿದ್ದರು. ಆದರೆ, ಸಚಿವರ ಭೇಟಿ ಸಾಧ್ಯವಾಗಿರಲಿಲ್ಲ. ಸೋಮವಾರ ಸಂಜೆ ಮನೆಗೆ ಬಂದಿರುವ ಆರೋಪಿಗಳು ಸಚಿವರನ್ನು ಭೇಟಿಯಾಗಿ, ಎನರ್ಗೊ  ಪವರ್‌ ಕಂಪೆನಿಯ ಪರವಾಗಿ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಲಂಚದ ಆಮಿಷವೊಡ್ಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ವೇಳೆ ಸ್ಥಳದಲ್ಲಿ ಮಫ್ತಿಯಲ್ಲಿದ್ದ ಸಿಬ್ಬಂದಿ ಸಚಿವರ ಸೂಚನೆಯಂತೆ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಹಾಗೂ ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಡತ ವಿಚಾರಣೆಯಿಂದ ಹೊರಬಂದ ಸತ್ಯ

ಪ್ರಕರಣ ಕುರಿತು ಸದಾಶಿವನಗರದ  ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ಖಾಸಗಿ ಸುದ್ದಿವಾಹಿನಿಯೊಂದು ನನ್ನ ವಿರುದ್ಧ ಸಂಚು ನಡೆಸುತ್ತಿದೆ.ಈ ಹಿಂದೆ ಸುದ್ದಿವಾಹಿನಿಯ ಪ್ರತಿನಿಧಿಗಳು ಎನರ್ಗೊ ಪವರ್‌ ಕಂಪೆನಿ ನೌಕರರ ಸೋಗಿನಲ್ಲಿ ಬಂದು ಕಡತವೊಂದಕ್ಕೆ ಒಪ್ಪಿಗೆ ನೀಡುವಂತೆ ಕೋರಿದ್ದರು. ಆ ಕಂಪೆನಿ ಹಾಗೂ ಕಡತದ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿ, ಮಾಹಿತಿ ಪಡೆದೆ. ನಂತರ ಆ ಹೆಸರಿನ ಕಂಪೆನಿಯ ಯಾವುದೇ ಕಡತ ಇಲಾಖೆಗೆ ಬಂದಿಲ್ಲ ಎಂಬುದು ಗೊತ್ತಾಯಿತು. ಇದರಿಂದ ಅವರ ಮೇಲೆ ಅನುಮಾನ ಮೂಡಿತು’ ಎಂದು ತಿಳಿಸಿದರು.

‘ಬೆಳಿಗ್ಗೆ 9 ಗಂಟೆಗೆ ಮನೆಗೆ ಬಂದಿದ್ದ ಆ ಇಬ್ಬರು, ಮತ್ತೆ ಮಧ್ಯಾಹ್ನ 3.30ಕ್ಕೆ ನನ್ನ ಭೇಟಿಗೆ ಬಂದರು. ಮೊದಲೇ ಅವರ ಬಗ್ಗೆ ಅನುಮಾನವಿದ್ದುದರಿಂದ ಮಫ್ತಿಯಲ್ಲಿ ಹಾಜರಿರುವಂತೆ ಪೊಲೀಸರಿಗೆ ತಿಳಿಸಿದ್ದೆ. ಅವರು ಹಣ ನೀಡಲು ಮುಂದಾದಾಗ ಪೊಲೀಸರನ್ನು ಕರೆಸಿ, ಅವರ ವಶಕ್ಕೆ ಒಪ್ಪಿಸಿದೆ. ಅದಕ್ಕೂ ಮುನ್ನ ಸುದ್ದಿವಾಹಿನಿಯ ವರದಿಗಾರನಿಂದ ನನಗೆ ಬೆದರಿಕೆ ಕರೆಯೂ ಬಂದಿತ್ತು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.