ಸುಧಾರಣಾ ಸಮಿತಿ ರಚನೆಗೆ ಒಪ್ಪಿಗೆ

7

ಸುಧಾರಣಾ ಸಮಿತಿ ರಚನೆಗೆ ಒಪ್ಪಿಗೆ

Published:
Updated:

ಕೈರೊ (ಪಿಟಿಐ):  ಅಧಿಕಾರ ಸ್ಥಿತ್ಯಂತರದ ದಿಸೆಯಲ್ಲಿ ಸಂವಿಧಾನಾತ್ಮಕ ಸುಧಾರಣೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಸಮಿತಿ ರಚನೆಗೆ ಆಡಳಿತಾರೂಢ ಮತ್ತು ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸೇರಿದಂತೆ ವಿರೋಧಿ ಗುಂಪುಗಳು ಸಮಿತಿ  ಒಪ್ಪಿಕೊಂಡಿವೆ. ಹದಿಮೂರು ದಿನಗಳ ಪ್ರತಿಭಟನೆಯ ಬಳಿಕ ಈಜಿಪ್ಟ್‌ನ ಆಡಳಿತಾರೂಢ ಪಕ್ಷ ಮತ್ತು ವಿರೋಧಿ ಗುಂಪುಗಳು ಭಾನುವಾರ ಚರಿತ್ರಾರ್ಹ ಒಪ್ಪಂದ ಮಾಡಿಕೊಂಡಿವೆ.ಸಮಿತಿಯು ರಾಜಕೀಯ ಮತ್ತು ನ್ಯಾಯಾಂಗದ ಪರಿಣತರನ್ನು ಒಳಗೊಂಡಿದ್ದು ಅಧ್ಯಕ್ಷರ ಅಧಿಕಾರದ ಅವಧಿ ನಿಗದಿಪಡಿಸಲು ಸಂವಿಧಾನಾತ್ಮಕ ತಿದ್ದುಪಡಿ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಿದೆ. ಮಾರ್ಚ್ ಒಳಗೆ ಅಧ್ಯಯನ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಆದರೆ ಈವರೆಗೆ ವಿರೋಧಪಕ್ಷಗಳು ಈ ವಿಷಯವನ್ನು ದೃಢಪಡಿಸಿಲ್ಲ. ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷ (ಎನ್‌ಡಿಪಿ)ದ ಆಯಕಟ್ಟಿನ ಸ್ಥಾನದಲ್ಲಿದ್ದ ಮುಬಾರಕ್ ಪುತ್ರ ಗಮಾಲ್ ಹಾಗೂ ಕಟ್ಟಾ ಬೆಂಬಲಿಗರ ರಾಜೀನಾಮೆ ನಂತರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಪ್ರತಿಭಟನಾಕಾರರಲ್ಲಿ ಭಿನ್ನ ನಿಲುವು ವ್ಯಕ್ತವಾಗಿದೆ.ಮೃಧು ಧೋರಣೆ ತಾಳಿರುವ ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆ ಭಾನುವಾರ ಸರ್ಕಾರದದೊಂದಿಗೆ ಮಾತುಕತೆ ಆರಂಭಿಸಿದರೆ, ಇನ್ನೂ ಕೆಲವರು ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಸರ್ಕಾರದ ವಿರುದ್ಧ ನಡೆಸಿರುವ 13 ದಿನಗಳ ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಸಿದ್ಧವಿರುವುದಾಗಿ ಬ್ರದರ್‌ಹುಡ್ ಹೇಳಿದ ಬೆನ್ನ ಹಿಂದಲ್ಲೇ ಮಾತುಕತೆಗೆ ಚಾಲನೆ ದೊರೆತಿದೆ. ದೇಶದ ಮೇಲೆ ಹೇರಲಾಗಿರುವ ತುರ್ತು ಪರಿಸ್ಥಿತಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಮತ್ತು ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ‘ನ್ಯಾಯಸಮ್ಮತ ಬೇಡಿಕೆ’ಗಳನ್ನು ಸಂಘಟನೆಯ ನಾಯಕರು ಸರ್ಕಾರದ ಮುಂದಿಟ್ಟಿದ್ದಾರೆ.ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುವುದನ್ನು ಪರೀಕ್ಷಿಸಲು ಹಲವು ಸುತ್ತಿನ ಮಾತುಕತೆ ನಡೆಸುತ್ತಿರುವುದಾಗಿ ಸಂಘಟನೆ ವಕ್ತಾರ ಗಮಾಲ್ ಅಬ್ದುಲ್ ನಾಸೀರ್ ಅವರು ಸ್ಪಷ್ಟಪಡಿಸಿದ್ದಾರೆ. ವಿಭಿನ್ನ ನಿಲುವು: ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತೆಹ್ರೀರ್ ಚೌಕ್‌ನಲ್ಲಿ ಪ್ರತಿಭಟನೆ ಮುಂದುವರಿಸಿರುವ ಲಕ್ಷಾಂತರ ಪ್ರದರ್ಶನಕಾರರು ಗಲಭೆಯಲ್ಲಿ ಮೃತರಾದ ನಾಗರಿಕರ ಸ್ಮರಣಾರ್ಥ ಭಾನುವಾರ ಹುತಾತ್ಮರ ದಿನ ಆಚರಿಸಿದರು. ಮುಬಾರಕ್ ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ತಮ್ಮ ಈ ಮೊದಲಿನ ನಿಲುವಿಗೆ ಈಗಲೂ ತಾವು ಬದ್ಧ. ಅದರಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.ಮುಬಾರಕ್ ಪುತ್ರ ಹಾಗೂ ಬೆಂಬಲಿಗರು ಎನ್‌ಡಿಪಿ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಕೇವಲ ನಾಟಕ ಎಂದು ಜರದಿರುವ ಪ್ರತಿಭಟನಾಕಾರರು ಚಳವಳಿ ಮುಂದುವರಿಸುವ ಸೂಚನೆ ನೀಡಿದ್ದಾರೆ. ಅಪಾರ ಪ್ರಮಾಣದ ಸೇನೆಯ ಜಮಾವಣೆ ಮತ್ತು ಸರ್ಕಾರದ ಬೆಂಬಲಿಗರ ದಾಳಿಯ ಹೊರತಾಗಿಯೂ ತೆಹ್ರೀರ್ ಚೌಕ್‌ನಿಂದ ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಮತ್ತು ಶುಕ್ರವಾರ ಪಾದಯಾತ್ರೆ, ಮೆರವಣಿಗೆಗೆ ಕರೆ ನೀಡಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದನ್ನು ತಡೆಯಲು ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದ್ದು ಪ್ರತಿಭಟನಾಕಾರರಿಗೆ ಹೊರಗಿನಿಂದ ಪೂರೈಕೆಯಾಗುವ ಆಹಾರವನ್ನು ತಡೆಹಿಡಿಯಲಾಗಿದೆ. ಸುರಿಯುವ ಮಳೆ, ಮೈಕೊರೆಯುವ ಚಳಿಯನ್ನೂ ಲೆಕ್ಕಿಸದ ಪ್ರತಿಭಟನಾನಿರತರು ಸ್ಥಳದಿಂದ ಕದಲಿಲ್ಲ. ನಿತ್ಯವೂ ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದು ಸದ್ಯ ಪರಿಸ್ಥಿತಿ ಶಾಂತವಾಗಿದೆ. ಮುಬಾರಕ್ ಪದತ್ಯಾಗದ ಹೊರತಾಗಿ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಈ ಮೊದಲು ಮಾತುಕತೆ ಆಹ್ವಾನ ತಿರಸ್ಕರಿಸಿದ್ದ  ಬ್ರದರ್‌ಹುಡ್ ಸಂಘಟನೆ ಇದೀಗ ತನ್ನ ನಿಲುವು ಸಡಿಲಿಸಿ ಮಾತುಕತೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆ ಎಂದು ಅಲ್ ಜಝೀರಾ ಸುದ್ದಿವಾಹಿನಿ ಬಣ್ಣಿಸಿದೆ. ಈ ಮಧ್ಯೆ ಮುಬಾರಕ್ ಪುತ್ರ ಮತ್ತು ಬೆಂಬಲಿಗರ ರಾಜೀನಾಮೆಯಿಂದ ತೆರವಾಗಿದ್ದ ಆಡಳಿತಾರೂಢ ಎನ್‌ಡಿಪಿ ಪ್ರಮುಖ ಸ್ಥಾನಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೊಸಮ್ ಬದ್ರಾವಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ಅರಾಜಕತೆ: ತೆರೆ ಎಳೆಯಲು ತೀವ್ರಗೊಂಡ ಅಮೆರಿಕ ಯತ್ನ


ಕೈರೊ, (ಪಿಟಿಐ): ಹೋಸ್ನಿ ಮುಬಾರಕ್ ಸರ್ಕಾರದ ವಿರುದ್ಧ ನಡೆದಿರುವ ನಾಗರಿಕ ದಂಗೆಯಿಂದ ಈಜಿಪ್ಟ್‌ನಲ್ಲಿ ನಿರ್ಮಾಣವಾಗಿರುವ ರಾಜಕೀಯ ಅನಿಶ್ಚಿತತೆ ಮತ್ತು ಅರಾಜಕ ಪರಿಸ್ಥಿತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ತನ್ನ ಪ್ರಯತ್ನವನ್ನು ತೀವ್ರಗೊಳಿಸಿದೆ. ಹೆಚ್ಚುತ್ತಿರುವ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅಮೆರಿಕಾ ಆದಷ್ಟೂ ಶೀಘ್ರ ಅಧಿಕಾರಕ್ಕೆ ಹಸ್ತಾಂತರ ಪ್ರಕ್ರಿಯೆ ಮುಗಿಸುವ ಯತ್ನಗಳನ್ನು ಚುರುಕುಗೊಳಿಸಿದೆ.ಸದ್ಯದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಕೊನೆಗಾಣಿಸಲು ತಕ್ಷಣ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ನಡೆಯಬೇಕು ಎಂದು ಒಬಾಮ ಅವರು ಜಾಗತಿಕ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಕುರಿತಂತೆ ಅವರು ಅರಬ್ ಸಂಯುಕ್ತ ರಾಷ್ಟ್ರಗಳ ಅರಸ ಬಿನ್ ಜಾಯೆದ್, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಜರ್ಮನ್ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿರುವುದಾಗಿ ಶ್ವೇತಭವನ ಹೇಳಿದೆ. ಅಮಾಯಕ ಜನರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಮಾಧ್ಯಮದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಬಗ್ಗೆ ಒಬಾಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 

ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಇವರೆಲ್ಲರ ರಕ್ಷಣೆಯ ಹೊಣೆಯನ್ನು ಸರ್ಕಾರ ಹೊರಬೇಕು. ಈಜಿಪ್ಟ್ ನಾಗರಿಕರ ಬೇಡಿಕೆಯಂತೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ನಡೆಯಬೇಕು ಎಂದು ಸಲಹೆ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಈಜಿಪ್ಟ್ ಉಪಾಧ್ಯಕ್ಷ ಒಮರ್ ಸುಲೇಮಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೋ ಬಿಡೆನ್, ಪ್ರಜಾಸತ್ತಾತ್ಮಕ ಸರ್ಕಾರದ ರಚನೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry