ಸುಧಾರಣೆಯತ್ತ ಬಾಗಲಕೋಟೆ ಸಂಚಾರ ವ್ಯವಸ್ಥೆ

7

ಸುಧಾರಣೆಯತ್ತ ಬಾಗಲಕೋಟೆ ಸಂಚಾರ ವ್ಯವಸ್ಥೆ

Published:
Updated:

ಬಾಗಲಕೋಟೆ: ಅಕ್ಷರಶಃ ಬಾಗಲಕೋಟೆ ನಗರ ಸಂಚಾರ ವ್ಯವಸ್ಥೆ `ಹದಗೆಟ್ಟ ಹೈದರಾಬಾದ್~ ಇದ್ದಂತೆ. ಅವರವರ ಮನಸ್ಸಿಗೆ ತಕ್ಕಂತೆ ವಾಹನ ಓಡಿಸುವುದು ರೂಢಿ. ಸುವ್ಯವಸ್ಥಿತ ಸಂಚಾರ ಎಂಬುದಕ್ಕೆ ಅರ್ಥವೇ ಇಲ್ಲ. ಹೀಗಾಗಿ ದಿನಕ್ಕೆ ಹತ್ತಾರು ಸಣ್ಣಪುಟ್ಟ ಅಪಘಾತಗಳು ಮಾಮೂಲಿಯಾಗಿತ್ತು.ಇದೀಗ ಈ ಎಲ್ಲ ಅವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಸಂಚಾರಿ ಪೊಲೀಸರು ಮುಂದಾಗಿರುವುದು ನಗರದ ಪ್ರಯಾಣಿಕರ ಮತ್ತು ಸಾರ್ವಜನಿಕರ ಹಿತಕ್ಕೆ ಪೂರಕವಾಗಿದೆ.ನಗರದ ಸಂಚಾರ ಸುಗಮವಾಗಲು ಸಂಚಾರಿ ಪೊಲೀಸ್ ಠಾಣೆಯ ಹೊಸ ಅಧಿಕಾರಿಗಳು ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಿದ್ದಾರೆ.ನಗರದ ಸಾಸನೂರ ಪೆಟ್ರೋಲ್ ಬಂಕ್ ಕ್ರಾಸ್‌ದಿಂದ ಬಸ್ ನಿಲ್ದಾಣ ರಸ್ತೆಯ ಆಟೋ ನಿಲ್ದಾಣವರೆಗೆ ಪರ್ಯಾಯ ಪಾರ್ಕಿಂಗ್ (ಒಂದು ದಿನ ಒಂದು ಕಡೆ ಮಾತ್ರ ವಾಹನ ನಿಲುಗಡೆ) ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮೆಳ್ಳಿಗೇರಿ ಪೆಟ್ರೋಲ್ ಬಂಕ್‌ನಿಂದ ಶಿರೂರ ಗೇಟ್‌ವರೆಗೆ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಎಂ.ಜಿ.ರಸ್ತೆಯಿಂದ  ವಲ್ಲಭಭಾಯಿ ಚೌಕದವರೆಗೆ ಮತ್ತು ಬಸವೇಶ್ವರ ಎಂಜನಿಯರಿಂಗ್ ಕಾಲೇಜು ರಸ್ತೆಯಿಂದ ವಿದ್ಯಾಗಿರಿಯ ರಸ್ತೆಯವರೆಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ಸಂಚಾರ ಸುಗಮವಾಗಿದೆ.ಇತ್ತೀಚಿಗೆ ನಗರದ ಸಂಚಾರಿ ಪೊಲೀಸ್ ಠಾಣೆಗೆ ಆಗಮಿಸಿರುವ ಪಿಎಸ್‌ಐ ಪ್ರಭು ಗಂಗನಹಳ್ಳಿ, ಮೊಟ್ಟ ಮೊದಲ ಬಾರಿಗೆ ಬಾಗಲಕೋಟೆ ನಗರಕ್ಕೆ ಸಂಚಾರ ಸುಗಮಕ್ಕೆ ಕ್ರಮ ಕೈಗೊಂಡಿದ್ದಾರೆ.ಬಸ್ ನಿಲ್ದಾಣದ ಎರಡು ಬದಿಯಲ್ಲಿ ಬೈಕ್‌ಗಳು ಹಾಗೂ ಕಾರುಗಳು ಎಲ್ಲೆಂದರೆಲ್ಲಿ ನಿಲ್ಲುತ್ತಿದ್ದವು. ಈಗ ರಸ್ತೆಯ ಪಕ್ಕದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಬಿಳಿ ಫಲಕಗಳು ರಾರಾಜಿಸುತ್ತಿವೆ.ನಿಯಮ ಪಾಲಿಸದಿದ್ದರೆ ಕ್ರಮ


ಈ ಕುರಿತು  `ಪ್ರಜಾವಾಣಿ~ಯೊಂದಿಗೆ ಮಾತನಾಡಿ ಪಿಎಸ್‌ಐ ಪ್ರಭು ಗಂಗನಹಳ್ಳಿ, ನಗರ, ವಿದ್ಯಾಗಿರಿ, ಕಾಲೇಜು ಸೇರಿದಂತೆ ವಿವಿಧ ಕಡೆ ವಾಹನ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು   ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಈಗಾಗಲೇ  ಇಲಾಖೆಯ ಸಿಬ್ಬಂದಿ ಬಸ್‌ನಿಲ್ದಾಣದ ರಸ್ತೆಯಲ್ಲಿ ಪ್ರತಿದಿನ ಬೆಳೆಗ್ಗೆಯಿಂದ ರಾತ್ರಿಯವರೆಗೆ ಸ್ಥಳದಲ್ಲೇ ಇದ್ದು ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕುರಿತು ತಿಳಿ ಹೇಳಿದ್ದಾರೆ. ಸಾರ್ವಜನಿಕರು ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದರು. ನೋ ಪಾರ್ಕಿಂಗ್ ಫಲಕವಿರುವ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯಿಂದ ಪಾದಚಾರಿಗಳಿಗೆ  ಹಾಗೂ ವಾಹನಗಳ ಸಂಚಾರ ಸುಗಮವಾಗಲಿದೆ. ಇನ್ನೂ ಹಂತ ಹಂತವಾಗಿ ಸಂಚಾರ ಸುಗಮಕ್ಕೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry