ಸುಧಾರಣೆಯ ಹಾದಿಯಲ್ಲಿ ಅಗ್ನಿಶಾಮಕ ದಳ

7

ಸುಧಾರಣೆಯ ಹಾದಿಯಲ್ಲಿ ಅಗ್ನಿಶಾಮಕ ದಳ

Published:
Updated:
ಸುಧಾರಣೆಯ ಹಾದಿಯಲ್ಲಿ ಅಗ್ನಿಶಾಮಕ ದಳ

ರಾಜ್ಯದ ಜನರ ಆಸ್ತಿ ಮತ್ತು ಪ್ರಾಣ ರಕ್ಷಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಾಧನೆ ಏನೂ ಕಡಿಮೆ ಇಲ್ಲ. 2000ದಿಂದ 2010ರವರೆಗೆ ಸಿಬ್ಬಂದಿ 5,992 ಮಂದಿಯ ಪ್ರಾಣ ರಕ್ಷಿಸಿದ್ದಾರೆ. 3,128 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಅವರು ರಕ್ಷಿಸಿದ್ದಾರೆ. ಅಗ್ನಿ ಅನಾಹುತದ ಸಂಬಂಧ ರಕ್ಷಣೆ ಕೋರಿ ಇಲಾಖೆಗೆ 1,16,261 ದೂರವಾಣಿ  ಕರೆಗಳು ಬಂದಿವೆ.ರಾಜ್ಯದಲ್ಲಿ ಸದ್ಯ 172 ಅಗ್ನಿಶಾಮಕ ಠಾಣೆಗಳಿವೆ. ನಾಲ್ಕು ಅಗ್ನಿ ರಕ್ಷಣಾ ಪಡೆಗಳಿವೆ (ಫೈರ್ ಪ್ರೊಟೆಕ್ಷನ್ ಸ್ಕ್ವಾಡ್). ಹೊಸದಾಗಿ 37 ಅಗ್ನಿಶಾಮಕ ಠಾಣೆ ಆರಂಭಿಸುವ ಕಾರ್ಯ ಚಾಲ್ತಿಯಲ್ಲಿದೆ. 31 ತಾಲ್ಲೂಕುಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಆರು ಅಗ್ನಿಶಾಮಕ ಠಾಣೆಗಳು ಆರಂಭವಾಗಲಿವೆ.ಬಹುಮಹಡಿ ಕಟ್ಟಡಗಳಲ್ಲಿ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾಗುವಂತೆ 52 ಮೀಟರ್ ಎತ್ತರಕ್ಕೆ ಏರುವ ಹೈಡ್ರಾಲಿಕ್ ಫ್ಲಾಟ್ ಫಾರ್ಮ್ ಅನ್ನು ಬೆಂಗಳೂರಿಗಾಗಿ ಖರೀದಿಸಲಾಗಿದೆ. ಮಂಗಳೂರು ಮತ್ತು ಮೈಸೂರಿಗೆ ಒಂದೊಂದು ಹೈಡ್ರಾಲಿಕ್ ಫ್ಲಾಟ್‌ಫಾರ್ಮ್ ಸಲಕರಣೆ ಖರೀದಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.ಎಲ್ಲ ರೀತಿಯ ದುರಂತ ಸಂದರ್ಭಗಳಲ್ಲಿ ಬಳಸಬಹುದಾದ ಅತ್ಯಾಧುನಿಕ ಸಲಕರಣೆ ಒಳಗೊಂಡ ಆರು ರಕ್ಷಣಾ ವಾಹನಗಳಿವೆ (ರೆಸ್ಕ್ಯೂ ವ್ಯಾನ್). ಬೆಂಕಿ ಅನಾಹುತ, ಪ್ರವಾಹ, ಭೂಕಂಪ ಸೇರಿದಂತೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಅವು ಸನ್ನದ್ಧವಾಗಿವೆ. ಇನ್ನೂ ಆರು ವಾಹನಗಳನ್ನು ಖರೀದಿಸುವ ಪ್ರಸ್ತಾವ ಇದೆ.ಸುಮಾರು ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ 13 ಅಗ್ನಿಶಾಮಕ ಠಾಣೆಗಳಿವೆ. ಇನ್ನೂ ಏಳು ಠಾಣೆಗಳ ಅಗತ್ಯ ಇದೆ. ಈಗಿರುವ ಠಾಣೆಗಳಲ್ಲಿ ಸಿಬ್ಬಂದಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಉಳಿದ ಠಾಣೆಗಳಲ್ಲಿ ಸಿಬ್ಬಂದಿ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರವಿದೆ.

 

`ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆ ತರಬೇತಿ ಅಕಾಡೆಮಿ~ಯಲ್ಲಿ ಸಿಬ್ಬಂದಿಯನ್ನು ತರಬೇತುಗೊಳಿಸಲಾಗುತ್ತದೆ. ಕೈಗಾರಿಕೆಗಳ ಸಿಬ್ಬಂದಿ ಸೇರಿದಂತೆ ಖಾಸಗಿ ವ್ಯಕ್ತಿಗಳೂ ಇಲ್ಲಿ ತರಬೇತಿ ಪಡೆಯಬಹುದು. ಇನ್ನೂರು ಮಂದಿ ಒಟ್ಟಿಗೆ ತರಬೇತಿ ಪಡೆಯಬಹುದು.`ಯಾವುದೇ ಇಲಾಖೆಯೂ ಪರಿಪೂರ್ಣವಾಗಿರುವುದಿಲ್ಲ. ಇದಕ್ಕೆ ಅಗ್ನಿಶಾಮಕ ಇಲಾಖೆಯೂ ಹೊರತಲ್ಲ. ಆದರೆ ಪರಿಪೂರ್ಣತೆ ಸಾಧಿಸುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ~ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.ಸಾರ್ವಜನಿಕರ ಸಹಕಾರ ಇದ್ದರೆ ನೂರಕ್ಕೆ ನೂರರಷ್ಟು ರಕ್ಷಣೆ ಸಾಧ್ಯವಾಗುತ್ತದೆ. ಕಾರ್ಲ್‌ಟನ್ ಟವರ್ಸ್‌ ಅಗ್ನಿ ದುರಂತ ಸಂಭವಿಸಿದ್ದು ಮಧ್ಯಾಹ್ನ 2.30ರ ಸುಮಾರಿಗೆ, ಆದರೆ ಅಲ್ಲಿನ ಜನರು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದು 3.30ರ ಸುಮಾರಿಗೆ. ಜನರೇ ಮೊದಲು ಬೆಂಕಿ ನಂದಿಸಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳುವಷ್ಟರಲ್ಲಿ ಬಹಳಷ್ಟು ಸಮಯವಾಗಿತ್ತು.ಆದ್ದರಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ ಮೊದಲು ನಿಯಂತ್ರಣ ಕೊಠಡಿಗೆ ಸುದ್ದಿ ಮುಟ್ಟಿಸಿ. ದುರಂತ ಸಂಭವಿಸಿದ ಕಟ್ಟಡದ ವಿಳಾಸ ಮತ್ತು ಅದನ್ನು ಸುಲಭವಾಗಿ ಪತ್ತೆ ಹಚ್ಚುವ ಗುರುತು(ಲ್ಯಾಂಡ್‌ಮಾರ್ಕ್) ಬಗ್ಗೆಮಾಹಿತಿ ನೀಡಿ.ಬಳಿಕ ಅಲ್ಲಿರುವ ಅಗ್ನಿನಂದಕ ಸಲಕರಣೆಗಳಿಂದ ಬೆಂಕಿ ನಂದಿಸಲು ಯತ್ನಿಸಿ. ಕಟ್ಟಡದ ಒಳಗೆ ಯಾವ ಮಾದರಿಯ ವಸ್ತುಗಳಿವೆ ಎಂಬುದರ ಬಗ್ಗೆ ಖಚಿತ ವಿವರಣೆ ನೀಡಿ. ಯಾವ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬುದರ ಮೇಲೆ ಕಾರ್ಯಾಚರಣೆಯ ರೂಪುರೇಷೆ ತಯಾರಿಸಲಾಗುತ್ತದೆ ಎಂದು  ಅಧಿಕಾರಿಗಳು ಮನವಿ ಮಾಡುತ್ತಾರೆ.ಕಟ್ಟಡಗಳಲ್ಲಿರುವ ಅಗ್ನಿನಂದಕ ಸಲಕರಣೆಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಆಗಾಗ್ಗೆ ಖಚಿತಪಡಿಸಿಕೊಳ್ಳಿ. ಆರು ತಿಂಗಳಿಗೆ ಒಮ್ಮೆಯಾದರೂ ಅಣಕು ರಕ್ಷಣಾ ಕಾರ್ಯಾಚರಣೆ ನಡೆಸಿದರೆ ಒಳಿತು. ಇದಕ್ಕೆ ಇಲಾಖೆ ಬೆಂಬಲ ನೀಡಲಿದೆ ಎಂದು ಭರವಸೆ ನೀಡುತ್ತಾರೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry