ಸುಧಾರಣೆ ಕಾಣದ ಸಂಚಾರ ವ್ಯವಸ್ಥೆ

7

ಸುಧಾರಣೆ ಕಾಣದ ಸಂಚಾರ ವ್ಯವಸ್ಥೆ

Published:
Updated:
ಸುಧಾರಣೆ ಕಾಣದ ಸಂಚಾರ ವ್ಯವಸ್ಥೆ

ಯಾದಗಿರಿ: ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ, ರಸ್ತೆಗಳೂ ವಿಸ್ತಾರವಾಗಿವೆ. ಇದರ ಬೆನ್ನಲ್ಲೇ ಸಂಚಾರ ವ್ಯವಸ್ಥೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳೆಲ್ಲವೂ ವ್ಯರ್ಥವಾಗುತ್ತಿವೆ. ರಸ್ತೆಗಳು ವಿಸ್ತಾರವಾದರೂ, ರಸ್ತೆಯಲ್ಲಿನ ನಿಲ್ಲುವ ವಾಹನಗಳಿಂದಾಗಿ ಸಂಚರಿಸುವುದೇ ದುಸ್ತರವಾಗುತ್ತಿದೆ.ನಗರದ ಬಸ್‌ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಆರಂಭದಲ್ಲಿಯೇ ಖಾಸಗಿ ವಾಹನಗಳು ನಿಲುಗಡೆ ಆಗುತ್ತಿರುವುದರಿಂದ ಈ ಮಾರ್ಗದಲ್ಲಿ ಹೋಗುವ ವಾಹನಗಳಿಗೆ ದಾರಿಯೇ ಇಲ್ಲದಂತಾಗಿದೆ. ಗ್ರಾಮೀಣ ಭಾಗಕ್ಕೆ ಬಸ್‌ಗಳ ಸೌಕರ್ಯ ಇಲ್ಲದಿರುವುದರಿಂದ ಟಂಟಂಗಳ ಓಡಾಟವೇ ಹೆಚ್ಚಾಗಿದ್ದು, ಬಸ್‌ನಿಲ್ದಾಣದ ಎದುರು ಟಂಟಂಗಳು ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿವೆ. ಇನ್ನೊಂದೆಡೆ ನಗರದಲ್ಲಿ ಸಂಚರಿಸುವ ಅಟೋಗಳ ನಿಲ್ದಾಣವಿದ್ದು, ಅಟೋ ರಿಕ್ಷಾಗಳನ್ನು ಬೇಕಾಬಿಟ್ಟಿ ನಿಲ್ಲಿಸುವುದರಿಂದ ರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ವಾಹನ ಚಾಲಕರದ್ದಾಗಿದೆ.ಕೇವಲ ನಿಲ್ದಾಣದ ಸುತ್ತಲು ಮಾತ್ರ ಈ ಸಮಸ್ಯೆ ಇದ್ದರೆ ಹೇಗೋ ನಿಭಾಯಿಸಬಹುದಿತ್ತು. ಆದರೆ ನಗರದ ಎಲ್ಲೆಡೆಯೂ ವಾಹನಗಳ ಓಡಾಟಕ್ಕೆ ಯಾವುದೇ ನಿರ್ಬಂಧಗಳು ಇಲ್ಲದಾಗಿದೆ. ನಗರದ ಬಸ್‌ನಿಲ್ದಾಣದಿಂದ ಗಾಂಧಿ ವೃತ್ತಕ್ಕೆ ತೆರಳುವ ಅಟೋಗಳ ವೇಗವಂತೂ ವಿಪರೀತವಾಗಿದೆ. ಇದೀಗ ಈ ರಸ್ತೆಯೂ ವಿಸ್ತಾರವಾಗಿರುವುದರಿಂದ ಅಟೋ ರಿಕ್ಷಾಗಳ ಆರ್ಭಟ ಇನ್ನಷ್ಟು ಹೆಚ್ಚಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ.ಒಂದೆಡೆ ವಾಹನಗಳ ಸಂಚಾರಕ್ಕೆ ಅಡಚಣೆಯಾದರೆ, ಮಿತಿಮೀರಿದ ವೇಗದಿಂದಾಗಿ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಹೆದರಿಕೆಯಿಂದಲೇ ಹೆಜ್ಜೆ ಹಾಕುವಂತಾಗಿದೆ. ಇದೀಗ ಶಾಸ್ತ್ರಿ ವೃತ್ತದಲ್ಲಿ ಸೌಂದರ್ಯಿಕರಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಲ್ಲಿ ರಸ್ತೆಯ ದುರಸ್ತಿ ಮಾಡಬೇಕಾಗಿದೆ. ಇಷ್ಟಾದರೂ ಅಟೋ ರಿಕ್ಷಾಗಳ ವೇಗಕ್ಕೆ ಮಾತ್ರ ಕಡಿವಾಣ ಬೀಳುತ್ತಿಲ್ಲ ಎಂಬ ನೋವು ಜನರದ್ದು.ನಾಲ್ಕು ಕಡೆ ನಿಲ್ದಾಣ: ಹಿಂದಿನ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ, ನಗರದಿಂದ ವಿವಿಧೆಡೆ ಸಂಚರಿಸುವ ಟಂಟಂಗಳಿಗೆ ನಗರದ ನಾಲ್ಕು ದಿಕ್ಕುಗಳಲ್ಲಿ ನಿಲ್ದಾಣ ಕಲ್ಪಿಸಿ ಆದೇಶ ಹೊರಡಿಸಿದ್ದರು. ಮೈಲಾಪುರ, ಬಳಿಚಕ್ರ, ರಾಮಸಮುದ್ರಗಳ ಕಡೆಗೆ ಸಂಚರಿಸುವ ಟಂಟಂಗಳಿಗೆ ಮೈಲಾಪುರ ಅಗಸಿಯ ಬಳಿ, ಯರಗೋಳ ರಸ್ತೆಯಲ್ಲಿ ಸಂಚರಿಸುವ ಟಂಟಂಗಳಿಗೆ ಪದವಿ ಕಾಲೇಜಿನ ಎದುರಿರುವ ಮೈದಾನಗಳಲ್ಲಿ ಟಂಟಂ ನಿಲುಗಡೆ ಮಾಡುವಂತೆ ಸೂಚನೆಯನ್ನೂ ನೀಡಿದ್ದರು.ಇದೀಗ ಟಂಟಂಗಳಿಗೆ ನಿಗದಿಪಡಿಸಿದ್ದ ನಿಲ್ದಾಣಗಳಲ್ಲಿ ಯಾವುದೇ ಟಂಟಂಗಳು ನಿಲುಗಡೆ ಆಗುತ್ತಿಲ್ಲ. ಮತ್ತೆ ಬಸ್‌ನಿಲ್ದಾಣದ ಸುತ್ತಲೋ, ಚಿತ್ತಾಪುರ ರಸ್ತೆಯಲ್ಲೋ ನಿಲುಗಡೆ ಆಗುತ್ತಿವೆ. ಇದರಿಂದಾಗಿ ಸಮಸ್ಯೆ ಕಗ್ಗಂಟಾಗಿಯೇ ಉಳಿಯುವಂತಾಗಿದೆ.ಬಾರದ ಸಂಚಾರ ಪೊಲೀಸ್ ಠಾಣೆ: ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಂಚಾರ ಪೊಲೀಸ್ ಠಾಣೆ ಅತ್ಯವಶ್ಯಕ ಎಂಬುದನ್ನು ಮನಗಂಡು, ಸಂಚಾರ ಪೊಲೀಸ್ ಠಾಣೆ ಆರಂಭಿಸುವಂತೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಎರಡು ವರ್ಷವಾದರೂ, ಗೃಹ ಸಚಿವಾಲಯ ಹಾಗೂ ಹಣಕಾಸು ಇಲಾಖೆಗಳಿಂದ ಈ ಪ್ರಸ್ತಾವನೆ ಹಸಿರು ನಿಶಾನೆ ಸಿಕ್ಕಿಲ್ಲ. ಹಾಗಾಗಿ ನಗರದಲ್ಲಿ ಸಂಚಾರ ಠಾಣೆ ಆರಂಭಿಸಲು ಇದುವರೆಗೂ ಕಾಲ ಕೂಡಿಬರುತ್ತಿಲ್ಲ. ಬೆಳೆಯುತ್ತಿರುವ ನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಸಾಕಷ್ಟು ಪ್ರಯಾಸ ಪಡುತ್ತಿರುವ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಅನಿವಾರ್ಯವಾಗಿ ಹೊತ್ತು ಕೊಳ್ಳಬೇಕಾಗಿದೆ.ಮೊದಲೇ ಸಿಬ್ಬಂದಿ ಕೊರತೆಯಿಂದ ನರಳುತ್ತಿರುವ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂಚಾರ ವ್ಯವಸ್ಥೆ ನಿಭಾಯಿಸುವುದು ದೊಡ್ಡ ಹೊರೆಯಾಗಿದೆ ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹಾಗಾಗಿ ಒಂದು ವೃತ್ತದಲ್ಲಿ ಪೊಲೀಸರಿದ್ದರೆ, ಇನ್ನೊಂದು ವೃತ್ತದಲ್ಲಿ ಪೊಲೀಸರನ್ನು ನಿಯೋಜಿಸುವುದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.ಪೊಲೀಸ್ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದ್ದರೆ, ಸರ್ಕಾರ ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿದೆ. ಇದೆಲ್ಲದರ ಪರಿಣಾಮ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry