ಸುಧಾರಿತ ಕೃಷಿ ಕೈಗೊಳ್ಳಲು ಸಲಹೆ

7

ಸುಧಾರಿತ ಕೃಷಿ ಕೈಗೊಳ್ಳಲು ಸಲಹೆ

Published:
Updated:

ಗದಗ: ಕೃಷಿಕರು ಬೇಸಾಯ ಕ್ರಮಗಳನ್ನು ಸುಧಾರಿಸಿಕೊಂಡು ಅಧಿಕ ಇಳುವರಿ ಪಡೆಯುವಂತಾಗಬೇಕಾದರೆ ಕೃಷಿ ಸಂಶೋಧನ ಕೇಂದ್ರ ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ಭೇಟಿ ನೀಡಿ ತಜ್ಞರಿಂದ ಸಲಹೆ ಪಡೆಯಬೇಕು ಎಂದು ನರಗುಂದ ಶಾಸಕ ಸಿ. ಸಿ. ಪಾಟೀಲ ಕರೆ ನೀಡಿದರು.ತಾಲ್ಲೂಕಿನ ಹುಯಿಲಗೋಳ ಗ್ರಾಮದಲ್ಲಿ ಸೋಮವಾರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ಖುಷ್ಕಿ ಬೇಸಾಯ ಹಾಗೂ ಬಯಲುಸೀಮೆಯಲ್ಲಿ ಹೈನುಗಾರಿಕೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕೃಷಿಕರು ಮುಖ್ಯ ಕಸಬಾದ ಬೇಸಾಯದ ಜತೆಗೆ ಹೈನುಗಾರಿಕೆ ಸೇರಿದಂತೆ ಹಲವು ಉಪಕಸಬುಗಳನ್ನು ಅನುಸರಿಸಲು ಅವಕಾಶವಿದೆ.  ಈ ಬಗ್ಗೆ ಕೃಷಿ ತಜ್ಞರೊಂದಿಗೆ ಚರ್ಚಿಸಿ, ಉಪ ಕಸಬುಗಳನ್ನು ಕೈಕೊಳ್ಳಲು ಮುಂದಾದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿ ಸಾಲ ಸೌಲಭ್ಯ ಮತ್ತು ನೆರವು ಲಭ್ಯವಾಗುವುದು ಎಂದರು. 

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ. ಬಿ.ಬಿ. ವಾಡಪ್ಪಿ, ರೈತರು ಹೈನುಗಾರಿಕೆಯನ್ನು ಕೃಷಿಕರ ಬದುಕಿನ ಒಂದು ಭಾಗವಾಗಿ ಪರಿಗಣಿಸಿ ಎಂದರು.ಖುಷ್ಕಿ ಬೇಸಾಯದಲ್ಲಿ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳ ಅವಕಾಶಗಳು ಮತ್ತು ಸವಾಲುಗಳ ವಿಚಾರವಾಗಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾ. ಎಸ್.ಪಿ. ಹಲಗಲಿಮಠ  ಮಾತನಾಡಿದರು.  ಒಣ ಬೇಸಾಯ ಮಾಡುವ ರೈತರು ತಮ್ಮ ಮೂಲ ಬೆಳೆಗೆ ಪರ‌್ಯಾಯವಾಗಿ ಮಾವು , ಬಾರೆ, ಸೀತಾಫಲ, ಪೇರಲ, ಚಿಕ್ಕು, ಕರಿಬೇವು ನೆಡಬೇಕು.  ನೀರಿನ ಕೊರತೆ ಸಂದರ್ಭದಲ್ಲಿ 2 ಲೀಟರ್ ಬಾಟಲಿಗಳಲ್ಲಿ ನೀರು ತುಂಬಿ, ರಂಧ್ರ ಮಾಡಿ ನೆಟ್ಟ ಗಿಡದ ಬೇರಿನ ಬಳಿ ಇರಿಸಬೇಕು.  ಇದರಿಂದಾಗಿ ಗಿಡದ ಬೇರಿಗೆ ಅಗತ್ಯವಾದ ನೀರು ಸಿಕ್ಕು, ಅಭಾವಕಾಲದಲ್ಲಿ ಸಸಿಗಳು ಬದುಕುಳಿಯುತ್ತವೆ ಎಂದರು. ತೋಟಗಾರಿಕಾ ಬೆಳೆಗಳ ಬಗ್ಗೆ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಯತಿರಾಜ್ ಮಾತನಾಡಿದರು.  ತೋಟಗಾರಿಕಾ ಅಧಿಕಾರಿ ಪ್ರಕಾಶ್ ಅವರು ರೈತರಿಗೆ ತೋಟಗಾರಿಕಾ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸಂಜೀವ ನಾಯ್ಕ  ಸ್ವಾಗತಿಸಿದರು.  ಜಿಲ್ಲಾ ವಾರ್ತಾಧಿಕಾರಿ   ಡಿ.ಎಂ . ಜಾವೂರ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry