ಸುಧಾರಿತ ಬದನೆ ಅರ್ಕಾ ಆನಂದ್

7

ಸುಧಾರಿತ ಬದನೆ ಅರ್ಕಾ ಆನಂದ್

Published:
Updated:

ಹೆಚ್ಚಿನ ಆರೈಕೆ ಇಲ್ಲದೆ ಸರ್ವ ಋತುಗಳಲ್ಲಿ ಬೆಳೆಯುವ ಬೆಳೆ ಎಂದರೆ ಬದನೆ. ‘ಎ’ ಮತ್ತು ‘ಬಿ’ ಜೀವಸತ್ವಗಳಿಂದ ಸಮೃದ್ಧವಾದ ಬದನೆಕಾಯಿ ಉಷ್ಣ ವಲಯ ಮತ್ತು ಉಪ ಉಷ್ಣ ವಲಯದ ಬೆಳೆ.ಭಾರತದಲ್ಲಿ ಸುಮಾರು 6.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬದನೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಒಟ್ಟಾರೆ ದೇಶದ ಬದನೆ ಬೆಳೆಯ ಇಳುವರಿ ಪ್ರತಿ ಹೆಕ್ಟೇರಿಗೆ ಸರಾಸರಿ 17.5 ಟನ್ ಇದೆ.  ಕರ್ನಾಟಕದಲ್ಲಿ ಸುಮಾರು 14,200 ಹೆಕ್ಟೇರ್ ಪ್ರದೇಶದಲ್ಲಿ ಬದನೆ ಬೆಳೆಯಲಾಗುತ್ತಿದ್ದು, ಪ್ರತಿ ಹೆಕ್ಟೇರ್‌ಗೆ 25 ಟನ್ ಇಳುವರಿ ಪಡೆಯಲಾಗುತ್ತಿದೆ.ನಾಟಿ ಮತ್ತು ಹೈಬ್ರಿಡ್‌ನಲ್ಲಿ ನೂರಾರು ತಳಿಗಳಿವೆ. ಅವುಗಳಲ್ಲಿ ರಾಜ್ಯದಲ್ಲಿಯೇ ಅನೇಕ ತಳಿಗಳಿದ್ದು, ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಅವು ತಮ್ಮದೇ ಆದ ವಿಶಿಷ್ಟ ರುಚಿ ಹೊಂದಿವೆ. ಅದೇ ರೀತಿ, ಈರಂಗೆರೆ ಬದನೆಯು (ಮೈಸೂರು ಬದನೆ ಎಂತಲೂ ಕರೆಯುತ್ತಾರೆ) ವಿಶೇಷವಾಗಿ ಕೊಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು ಮತ್ತು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ  ಜನಪ್ರಿಯತೆ ಪಡೆದಿದೆ.ಕೀಟ ಬಾಧೆ

ಹಲವು ರೋಗಗಳಿಗೆ ತುತ್ತಾಗುವ ಬದನೆ ಬೆಳೆಗೆ ಕೀಟಗಳ ಬಾಧೆ ಹೆಚ್ಚು. ಅದರಲ್ಲೂ, ‘ರಾಲ್‌ಸ್ಟೊನಿಯಾ ಸೊಲಾನಸೆರಿಯಮ್’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ದುಂಡಾಣು ಸೊರಗು ರೋಗವು ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ರೋಗದ ರೋಗಕಾರಕಗಳು ಮಣ್ಣಿನಲ್ಲಿ

ಬೆರೆತಿರುವುದರಿಂದ ಅವುಗಳನ್ನು ರಾಸಾಯನಿಕದಿಂದ ನಿಯಂತ್ರಣ ಮಾಡುವುದು ಸಾಧ್ಯವಿಲ್ಲ. ಇದರಿಂದ ಇಳುವರಿಯು ಶೇ.60-ರಿಂದ 100ರವರೆಗೆ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ನಿಟ್ಟಿನಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ತರಕಾರಿ ಬೆಳೆ ವಿಭಾಗದ ವಿಜ್ಞಾನಿಗಳು ಈರಂಗೆರೆ ಬದನೆ ತಳಿಯನ್ನು ಬಳಸಿಕೊಂಡು ಅಧಿಕ ಇಳುವರಿ ನೀಡುವ ಮತ್ತು ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯುಳ್ಳ ‘ಅರ್ಕಾ ಆನಂದ್’ ಎಂಬ ಸುಧಾರಿತ ಹೈಬ್ರಿಡ್ ಬದನೆ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.ಸಾಮಾನ್ಯ ಬದನೆಗಿಂತ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಅರ್ಕಾ ಆನಂದ್ ತಳಿಯು ಸಾಮಾನ್ಯ ತಳಿಯ ಗಿಡಕ್ಕಿಂತ ಎತ್ತರ ಬೆಳೆಯಲಿದ್ದು, ಅಧಿಕ ಕವಲುಗಳನ್ನು ಬಿಡುತ್ತದೆ. ಅಲ್ಲದೇ, ಆಕರ್ಷಕ ಬಣ್ಣ, ದೊಡ್ಡ ಗಾತ್ರದ ಜತೆಗೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ ಎನ್ನುತ್ತಾರೆ ಈ ತಳಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಐಐಎಚ್‌ಆರ್‌ನ ತರಕಾರಿ ಬೆಳೆ ವಿಭಾಗದ ಹಿರಿಯ ವಿಜ್ಞಾನಿ ಡಾ.ಎ.ಟಿ.ಸದಾಶಿವ.ಸಾಮಾನ್ಯ ಬದನೆ ತಳಿಗಳು ಪ್ರತಿ ಹೆಕ್ಟೇರ್‌ಗೆ 25-–30 ಟನ್ ಇಳುವರಿ ನೀಡುತ್ತವೆ. ಆದರೆ ಈ ಸುಧಾರಿತ ತಳಿಯು ಪ್ರತಿ ಹೆಕ್ಟೇರ್‌ಗೆ 65-–70 ಟನ್ ಇಳುವರಿ ನೀಡುತ್ತದೆ. ಒಟ್ಟು 140–-150 ದಿನಗಳ ಬೆಳೆ ಅವಧಿ ಹೊಂದಿ­ರುವ ಈ ತಳಿಯು ನಾಟಿ ಮಾಡಿದ ನಂತರ 60–-65 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ ಎನ್ನುತ್ತಾರೆ ತಳಿ ಅಭಿವೃದ್ಧಿಪಡಿ­ಸು­ವಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿಜ್ಞಾನಿ ಎಚ್.ಟಿ.ಸಿಂಗ್.ಆಸಕ್ತರು ಬದನೆ ಬೀಜ ಮತ್ತು ಮಾರ್ಗದರ್ಶನಕ್ಕಾಗಿ ಸಂಪರ್ಕಿಸಬೇಕಾದ ವಿಳಾಸ: ನಿರ್ದೇಶಕರು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು - 560 089. ದೂರವಾಣಿ: 080- 28466420 ವಿಸ್ತರಣೆ ಸಂಖ್ಯೆಗಳು - 284/278.

-ಈರಪ್ಪ ಹಳಕಟ್ಟಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry