ಮಂಗಳವಾರ, ಮೇ 18, 2021
24 °C

ಸುಧಾರಿತ ಯಂತ್ರ ಮಾನವ

ಕೆ.ಎಸ್. ಗಿರೀಶ Updated:

ಅಕ್ಷರ ಗಾತ್ರ : | |

ಸುಧಾರಿತ ಯಂತ್ರ ಮಾನವ

ಬ್ರಹ್ಮನ ಸೃಷ್ಟಿಗೆ ಪ್ರತಿಯಾಗಿ ವಿಶ್ವಾಮಿತ್ರ ತ್ರಿಶಂಕು ಸ್ವರ್ಗ ಸೃಷ್ಟಿಸಿ ಬದನೆಕಾಯಿ, ಈರುಳ್ಳಿ, ಎಮ್ಮೆ ಮೊದಲಾದವನ್ನು ಅಲ್ಲಿ ಅವತರಿಸುವಂತೆ ಮಾಡಿದ ಎಂಬುದು ಪುರಾಣದ ಕಥೆ.`ರೋಬೊಟ್' ಮನುಷ್ಯನ ಪ್ರತಿಸೃಷ್ಟಿ. ಆಧುನಿಕ ಮಾನವ ಪ್ರತಿಸೃಷ್ಟಿಯಲ್ಲಿ ಒಂದೊಂದೇ ಯಶಸ್ಸು ಗಳಿಸುತ್ತಿದ್ದಾನೆ!`ಕ್ಲೋನಿಂಗ್' ಮೂಲಕ 1996ರಲ್ಲಿ ಸ್ಕಾಟ್ಲೆಂಡಿನ ರೋಸ್ಕಿನ್ ಸಂಸ್ಥೆಯ ಇಯಾನ್ ವಿಲ್ಮಟ್ ಮತ್ತು ಅವನ ಸ್ನೇಹಿತರು `ಡಾಲಿ' ಎಂಬ ತದ್ರೂಪಿ ಕುರಿಯನ್ನು ಸೃಷ್ಟಿಸಿದರು. ನಮ್ಮ ದೇಶದಲ್ಲೂ ಹರಿಯಾಣದ ರಾಷ್ಟ್ರೀಯ ಡೇರಿ ಅಭಿವೃದ್ಧಿ ಸಂಸ್ಥೆ 2009ರಲ್ಲಿ ಕ್ಲೋನಿಂಗ್‌ನಿಂದ ಸೃಷ್ಟಿ ಮಾಡಿದ `ಗರಿಮಾ' ಎಂಬ ಎಮ್ಮೆ ಕಳೆದೆರಡು ತಿಂಗಳ ಹಿಂದೆ ಕರು ಹಾಕಿದೆ. ಅದಕ್ಕೆ `ಮಹಿಮಾ' ಎಂದು ನಾಮಕರಣವನ್ನೂ ಮಾಡಲಾಗಿದೆ.ಇದೆಲ್ಲ ಸರಿ, ಆದರೆ ಮಾನವ ಕ್ಲೋನಿಂಗ್ ಮಾತ್ರ ಬೇಡ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಆದರೆ ಚೀನಾ ಮತ್ತು ಕೊರಿಯಾದಲ್ಲಿ ರಹಸ್ಯವಾಗಿ ಮಾನವನನ್ನೇ ಕ್ಲೋನಿಂಗ್ ಮೂಲಕ ಪ್ರತಿಸೃಷ್ಟಿಸುವ ಪ್ರಯತ್ನ ನಡೆಯುತ್ತಿವೆ ಎಂಬ ಗುಸುಗುಸು ಕೇಳಿಬರುತ್ತಿದೆ.ಜೈವಿಕವಾಗಿ ಮಾನವನ ಮರುಸೃಷ್ಟಿಗೆ  ವಾದ-ವಿವಾದಗಳಿದ್ದರೂ ಯಂತ್ರ ಮಾನವನ ಸೃಷ್ಟಿಗೆ ಮಾತ್ರ ಯಾವುದೇ ಅಡೆ- ತಡೆ ಇಲ್ಲ. ಈಗಾಗಲೇ ಯಂತ್ರಮಾನವ(ರೋಬೋಟ್) ಕರಾರುವಕ್ಕಾಗಿ ಆಪರೇಷನ್ ಮಾಡಬಲ್ಲ, ವಾಹನ ಓಡಿಸಬಲ್ಲ, ಧಾರಿಣಿಯ ಗರ್ಭಕ್ಕಿಳಿದು ಖನಿಜಗಳಿಗಾಗಿ ಹುಡುಕಬಲ್ಲ, ಶತ್ರು ಸೈನಿಕರನ್ನು ನುಂಗಿ ನೊಣೆಯಬಲ್ಲ, ಅಪಾಯಕಾರಿ ಕೆಲಸಗಳನ್ನು ಕ್ಷಣಮಾತ್ರದಲ್ಲಿ ನಿರ್ವಹಿಸಬಲ್ಲ. ಅಷ್ಟೇ ಏಕೆ ದಣಿದ ಮನಕ್ಕೆ ನಗೆಯ ಬುಗ್ಗೆ ಉಕ್ಕಿಸುವ ವಿದೂಷಕನೂ ಆಗಬಲ್ಲ!ರೋಬೋಟ್ ಕೂಡ ವಿವಿಧ ಮಜಲುಗಳಲ್ಲಿ ಬೆಳವಣಿಗೆ ಕಂಡಿದ್ದಾನೆ. ಸದ್ಯದ ಸುದ್ದಿ ಎಂದರೆ ಅಮೆರಿಕದ ಡಿಸ್ನಿಯ ಸಂಶೋಧಕರು ಅತ್ಯಂತ ಸಹಜ ರೀತಿಯಲ್ಲಿ ವಸ್ತುಗಳನ್ನು ಸ್ವೀಕರಿಸುವ ರೋಬೊಟ್‌ಗಳನ್ನು ಅಭಿವೃದ್ಧಿಪಡಿಸಿರುವುದು.ಈವರೆಗೂ ಮನುಷ್ಯರು ನೀಡುತ್ತಿದ್ದ ವಸ್ತುಗಳನ್ನು ಇಷ್ಟೊಂದು ಸಹಜವಾಗಿ ರೋಬೋಟ್‌ಗಳು ಸ್ವೀಕರಿಸುತ್ತಿರಲಿಲ್ಲ.ವ್ಯಕ್ತಿ ಕೈಯಲ್ಲಿ ಹಿಡಿದಿರುವ ವಸ್ತುಗಳನ್ನು ಈ ರೋಬೊಟ್‌ಗಳು ಸ್ಪಷ್ಟವಾಗಿ ಗುರುತಿಸುತ್ತವೆ. ಅಲ್ಲದೆ, ಸ್ವೀಕರಿಸಲು ಯಾವಾಗ ಕೈ ಚಾಚಬೇಕು, ಯಾವಾಗ ಕೈ ಮಡಿಚಬೇಕು ಎಂಬುದನ್ನೂ ಸ್ವತಃ ನಿರ್ಧರಿಸಲು ಶಕ್ತವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಲ್ಲಿನ ಪೀಟ್ಸ್‌ಬರ್ಗ್ ಮತ್ತು ಕಾರ್ಲ್‌ಶ್ರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Pittsburgh and Karlsruhe Institute of Technology (KIT) ಇಬ್ಬರು ತಂತ್ರಜ್ಞರು ಮೋಷನ್ ಕ್ಯಾಪ್ಚರ್ ಡಾಟಾವನ್ನು ಯಶಸ್ವಿಯಾಗಿ ರೋಬೊಟ್‌ಗಳಿಗೆ ಅಳವಡಿಸುವುದರ ಮೂಲಕ ಈ ಕಾರ್ಯ ಸಾಧನೆ ಮಾಡಿದ್ದಾರೆ. ಇದರಿಂದ ಮಾನವ ಅಂಗಚಲನೆಯ ಅನುಕರಣೆ ರೋಬೊಟ್‌ಗಳಿಗೂ ದಕ್ಕುವಂತಾಗಿದೆ.ಎದುರಿಗಿರುವ ವ್ಯಕ್ತಿಗಳು ಕೈಯಲ್ಲಿ ಕೋಟ್ ಆಗಬಹುದು, ಸಲಕರಣೆಗಳಾಗಬಹುದು ಅಥವಾ ಇನ್ನಾವುದೇ ವಸ್ತುಗಳನ್ನು ಹಿಡಿದಿದ್ದರೂ ಸಹ ಈಗಿನ ರೋಬೋಟ್‌ಗಳು ಕರಾರುವಕ್ಕಾಗಿ ಗುರುತಿಸಿ ಸ್ವೀಕರಿಸುತ್ತವೆಯಂತೆ. ಎದುರಿನ ವ್ಯಕ್ತಿಗಳು ವಸ್ತುಗಳನ್ನು ನೀಡುವ ಗತಿಗೆ ತಕ್ಕಂತೆ ರೋಬೊಟ್‌ಗಳೂ ಕೈ ಚಾಚುತ್ತವೆ ಹಾಗೂ ಕೈಯನ್ನು ಹಿಂದಕ್ಕೆಳೆದುಕೊಳ್ಳಬಲ್ಲವು.

ನಾವು  ಹೆಚ್ಚು ಮಾನವ ಸ್ನೇಹಿ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇವುಗಳ ಚಲನವಲನ ಅತ್ಯಂತ ಸಹಜವಾಗಿವೆ ಎಂದು ಹಿರಿಯ ಸಂಶೋಧಕ ವಿಜ್ಞಾನಿ ಕಟ್ಸು ಯಾಮಾನೆ  ಹೇಳುತ್ತಾರೆ.ಹಾಗೆಂದು ಇದೇನೂ ಹೊಸ ಬಗೆ ತಂತ್ರಜ್ಞಾನದ ಆವಿಷ್ಕಾರವಲ್ಲ. ಈ ಹಿಂದೆಯೂ ಅನೇಕ ಬಾರಿ ವಿಜ್ಞಾನಿಗಳು ಮೋಷನ್ ಕ್ಯಾಪ್ಚರ್ ಡಾಟಾವನ್ನು ರೋಬೋಟ್‌ಗಳ ಚಲನೆಯ ಗತಿಗೆ ಹೊಂದಿಸಿದ್ದರು. ಆದರೆ ಇವು ಬರೇ ಏಕ ವ್ಯಕ್ತಿಗೆ ಮಾತ್ರ ಸ್ಪಂದಿಸುತ್ತಿದ್ದವು. ಆದರೆ ಈಗ ಅಭಿವೃದ್ಧಿಪಡಿಸಿರುವ ರೋಬೋಟ್‌ಗಳು ಹಲವು ವ್ಯಕ್ತಿಗಳೊಂದಿಗೆ ಚಲನೆಯ ಮೂಲಕ ಸ್ಪಂದಿಸಬಲ್ಲವಾಗಿವೆ.ಇತ್ತೀಚಿನ ಬೆಳವಣಿಗೆ

ರೋಬೋಟ್‌ಗಳ ಕಲ್ಪನೆ ಪ್ರಾಚೀನ ಕಾಲದ ಅನೇಕ ಸಂಸ್ಕೃತಿಗಳಲ್ಲಿದೆ. ಆನಂತರ ಆಧುನಿಕ ಕಾಲದಲ್ಲಿ ಇದು ಹಂತ ಹಂತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ತೀರಾ ಇತ್ತೀಚಿನ ಬೆಳವಣಿಗೆಗಳ ಒಂದು ಸ್ಥೂಲ ನೋಟ ಹೀಗಿದೆ.2012ರ ಮಾರ್ಚ್‌ನಲ್ಲಿ ಅಮೆರಿಕ ಮೂಲದ ಲಿಕ್ವಿಡ್ ರೋಬೊಟಿಕ್ಸ್ ಕಂಪೆನಿ 4 ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಿ ಫೆಸಿಫಿಕ್ ಸಾಗರದಲ್ಲಿ ಈಜಲು ಬಿಟ್ಟರು. ಮಾನವನ ನಿಯಂತ್ರಣವಿಲ್ಲದೆ ಅವು 3200 ನಾಟಿಕಲ್ ಮೈಲಿ ಈಜಿ ಗಿನ್ನೆಸ್ ದಾಖಲೆ ಬರೆದವು. ಅಲ್ಲದೆ ಸಾಗರದ ಮಾಲಿನ್ಯ ಹಾಗೂ ಅಲೆಗಳ ಕುರಿತಾದ ದತ್ತಾಂಶಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದವು.ಮನುಷ್ಯರ ಭಾವನೆಗಳನ್ನು ಗ್ರಹಿಸಬಲ್ಲಂತಹ ಹಾಗೂ ಮಾತು, ಭಾವಾಭಿನಯವನ್ನು ಅರ್ಥಮಾಡಿಕೊಳ್ಳುವಂತಹ ರೋಬೋಟ್‌ಗಳು ಫಿನ್‌ಲ್ಯಾಂಡ್‌ನ ಒವಲ್ ವಿಶ್ವವಿದ್ಯಾನಿಲಯದಲ್ಲಿ 2012ರ ಆಗಸ್ಟ್‌ನ ಸಿದ್ಧವಾದವು. ಟೇಬಲ್ ಟೆನಿಸ್ ಆಟವನ್ನು ಮಾನವರಿಂದಲೇ ಕಲಿತು ನಂತರ ಆಟದಲ್ಲಿ ಅವರಿಗೆ ತೀವ್ರ ಪೈಪೋಟಿ ನೀಡಬಲ್ಲ ರೋಬೋಟ್‌ಗಳನ್ನು ಜರ್ಮನಿಯ ಡರ್ಮ್‌ಸ್ಟಡ್ ತಾಂತ್ರಿಕ ವಿಶ್ವವಿದ್ಯಾನಿಲಯದ ಕ್ಯಾಥರೀನ್ ಮ್ಯುಲಿಂಗ್ ಮತ್ತು ಸಹೋದ್ಯೋಗಿಗಳು 2012ರ ಅಕ್ಟೋಬರ್‌ನಲ್ಲಿ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು.ತೀರಾ ಇತ್ತೀಚೆಗೆ ಅಂದರೆ ಕಳೆದ ತಿಂಗಳು ರೋಬೋಟ್‌ಗಳ ಸಂವೇದನಾಶೀಲತೆ ಹೆಚ್ಚಿಸುವ ಸಲುವಾಗಿ ಅವುಗಳಿಗೆ ಕೃತಕ ಚರ್ಮ ಜೋಡಿಸುವ ಕಾರ್ಯಕ್ಕೆ ಇಟಲಿಯಲ್ಲಿ ಯಶಸ್ವಿ ಪ್ರಯತ್ನ ನಡೆಯುತ್ತಿವೆ.ನೊಣ ಗಾತ್ರದ ರೋಬೋಟ್‌ಗಳು ಹಾಗೂ ನ್ಯಾನೊ ರೋಬೋಟ್‌ಗಳನ್ನು ಜಪಾನ್ ಮೊದಲಾದ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬ್ರಿಟನ್‌ನ ಹಾವರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ಡಾ. ಕೇವಿನ್ ಹಾಗೂ ಡಾ. ರಾಬರ್ಟ್ ವುಡ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಅತ್ಯಂತ ವೇಗವಾಗಿ ಹಾರಬಲ್ಲ ನೊಣ ಗಾತ್ರದ ರೋಬೋಟ್‌ಗಳನ್ನು ಕಳೆದ ತಿಂಗಳಷ್ಟೆ ರೂಪಿಸಿದೆ. ಇವು ಬೇಹುಗಾರರಾಗಿ, ಕುಸಿದ ಕಟ್ಟಡದ ಅವಶೇಷಗಳಡಿ ಅಪಾಯಕ್ಕೆ ಸಿಲುಕಿದವರ ಪತ್ತೆಗಾಗಿ, ಬಾಂಬ್ ಪತ್ತೆ ಹಚ್ಚುವುದಕ್ಕೆ, ಅಷ್ಟೇ ಏಕೆ ಸಸ್ಯಗಳಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಸಲೂ ಇವನ್ನು ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ರೋಬೋಟ್ ವಿರುದ್ಧ ಆರೋಪ

ಒಳಿತು-ಕೆಡುಕು ಒಂದೇ ನಾಣ್ಯದ ಎರಡು ಮುಖಗಳು. ಒಂದೆಡೆ ಒಳ್ಳೆಯದು, ಮತ್ತೊಂದು ಮುಖದಲ್ಲಿ ಕೆಟ್ಟದ್ದು. ಹಾಗೆಯೇ ರೋಬೋಟ್‌ಗಳು ಮಾನವರಿಗೆ ಎಲ್ಲ ರೀತಿಯ ಪ್ರಯೋಜನಕ್ಕೂ ಬರುತ್ತವೆ ಎಂದೇನಲ್ಲ. ಇವುಗಳ ವಿರುದ್ಧವೂ ಆರೋಪಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ;1. ರೋಬೋಟ್‌ಗಳನ್ನು ಈಗಾಗಲೇ ಜಪಾನಿನಲ್ಲಿ ಕೈಗಾರಿಕಾ ಕೆಲಸಗಳಿಗೆ ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ಸಮೀಕ್ಷೆಯಂತೆ ಜಗತ್ತಿನ ಶೇ 40ರಷ್ಟು ರೋಬೋಟ್ ಜಪಾನ್‌ನ ಕೈಗಾರಿಕೆಗಳಲ್ಲಿ ದುಡಿಯುತ್ತಿವೆ. ಇದೇ ಪರಿಸ್ಥಿತಿ ಜನಸಂಖ್ಯಾ ಬಾಹುಳ್ಯದ ಭಾರತ, ಚೀನಾದಂತಹ ದೇಶಗಳಿಗೆ ಬಂದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. 2011ರಲ್ಲಿ ತೈವಾನಿನ  ತಾಂತ್ರಿಕ ಕಂಪೆನಿ ಫಾಕ್ಸ್‌ಕಾನ್ ಮುಂದಿನ ಮೂರು ವರ್ಷಗಳಲ್ಲಿ ಕಾರ್ಖಾನೆಯಲ್ಲಿ ಕಾರ್ಮಿಕರ ಬದಲು ರೋಬೋಟ್‌ಗಳನ್ನು ಹಂತಹಂತವಾಗಿ ಹೆಚ್ಚಿಸುವ ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಲಕ್ಷಾಂತರ ರೋಬೋಟ್‌ಗಳು ಕಾರ್ಮಿಕರ ಬದಲು ಕಾರ್ಖಾನೆಯಲ್ಲಿವೆ.2. ಎಲ್ಲಾ ಕೆಲಸಕ್ಕೂ ರೋಬೋಟ್‌ಗಳನ್ನೇ ಅವಲಂಬಿಸುವುದು ಹೆಚ್ಚಿದರೆ ಮಾನವರ ನಡುವಿನ ಸಹಜ ಬಾಂಧವ್ಯ ನಿಧಾನಗತಿಯಲ್ಲಿ ಕಣ್ಮರೆಯಾಗುವ ಅಪಾಯವಿದೆ.3. ಯುದ್ಧಗಳಲ್ಲಿ ರೋಬೋಟ್‌ಗಳು ಶತ್ರು ಸೈನಿಕರನ್ನು ನುಂಗಿ ನೊಣೆದು ಬಿಡಬಲ್ಲವು. ಇದರಿಂದ ಮೊದಲ ಪಾಣಿಪತ್ ಕದನದಲ್ಲಾದಂತೆ ವಿಸ್ತಾರವಾದ ಸೈನ್ಯವಿದ್ದರೂ ಇಬ್ರಾಹಿಂ ಲೂದಿಯು ಬಾಬರ್‌ನ ಫಿರಂಗಿ ದಳದ ಮುಂದೆ ಸೋತಂತೆ ಮುಂದೊಂದು ದಿನ ಯುದ್ದದಲ್ಲಿ ಮನುಷ್ಯರ ಶ್ರಮ ನಿರರ್ಥಕವಾಗಬಲ್ಲದು.ವಾದ-ವಿವಾದ ಏನೇ ಇರಲಿ. ಟಿವಿ, ಕಂಪ್ಯೂಟರ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವಂತೆ ರೋಬೋಟ್‌ಗಳೂ ನಮಗೆ ತೀರಾ ಅನಿವಾರ್ಯವಾಗುವಂತಹ ಕಾಲ ದೂರವೇನೂ ಇಲ್ಲ. ಆರೋಗ್ಯ, ಸಾರಿಗೆ, ಬಾಹ್ಯಾಕಾಶ, ಗಣಿ ಉದ್ಯಮಗಳಲ್ಲಿ  ರೋಬೊಟ್‌ಗಳ ಬಳಕೆ ಯತ್ನವೂ ನಡೆದಿದೆ. ಸದ್ಯ ಇವು ದುರುಪಯೋಗವಾಗದಂತೆ ತಡೆಗಟ್ಟಿದರೆ ಸಾಕಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.