ಭಾನುವಾರ, ಜೂನ್ 13, 2021
24 °C

ಸುಧಾರಿಸದ ದಲಿತರ ಪರಿಸ್ಥಿತಿ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದಲಿತ ರಾಜಕಾರಣ ಆರಂಭವಾಗಿ ಎಪ್ಪತ್ತೈದು ವರ್ಷ ಕಳೆದರೂ ದಲಿತರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ~ ಎಂದು ಅಹಿಂದ ಮುಖಂಡ ಕೆ.ಮುಕುಡಪ್ಪ ಹೇಳಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಗರದಲ್ಲಿ ಶನಿವಾರ ಏರ್ಪಡಿಸಿದ್ದ ದಲಿತ ರಾಜಕಾರಣದ 75ನೇ ವರ್ಷಾಚರಣೆ ಮತ್ತು ಜ್ಯೋತಿಬಾ ಫುಲೆ ಅವರ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು.`ಅಂಬೇಡ್ಕರ್ ಹೋರಾಟ ಮಾಡಿದ ಸಂದರ್ಭದಲ್ಲಿ ದಲಿತರ ಪರಿಸ್ಥಿತಿ ಸುಧಾರಿಸಿತ್ತು. ಈಗ ಹಳ್ಳಿ ಹಳ್ಳಿಗಳಲ್ಲಿ ದಲಿತ ಹೋರಾಟಗಾರರು ಇದ್ದಾರೆ. ಆದರೆ ಕೆಲವರಿಗೆ ರಾಜಕೀಯದಲ್ಲಿ ಅವಕಾಶ ಮತ್ತು ಸರ್ಕಾರಿ ನೌಕರಿ ಸಿಕ್ಕಿದ್ದು ಬಿಟ್ಟರೆ ಪರಿಸ್ಥಿತಿ ಹೇಳಿಕೊಳ್ಳುವ ರೀತಿ ಸುಧಾರಣೆಯಾಗಿಲ್ಲ~ ಎಂದರು.`ದಲಿತ ರಾಜಕಾರಣಿಗಳು ಪಕ್ಷಗಳ ಚಕ್ರಗಳ ಅಡಿಯಲ್ಲಿ ಸಿಲುಕಿದ್ದಾರೆ. ಅಂಬೇಡ್ಕರ್ ಮರಣದ ನಂತರ ದಲಿತ ರಾಜಕಾರಣ ಗುಲಾಮಗಿರಿ ರಾಜಕಾರಣ ಆಗಿದೆ. ಗುಲಾಮಗಿರಿ ಮಾಡುವ ರಾಜಕಾರಣಿಗಳಿಂದ ದಲಿತರಿಗೆ ಏನೂ ಉಪಯೋಗ ಆಗುವುದಿಲ್ಲ. ದಲಿತ ಸಮುದಾಯಕ್ಕೆ ಏನಾದರೂ ಕೆಲಸ ಮಾಡುವ ಇಚ್ಛೆ ಇದ್ದರೆ ಗುಲಾಮಗಿರಿ ಬಿಟ್ಟು ಎಲ್ಲರೂ ದಲಿತ ಚಿಂತನೆಗಳನ್ನು ಮೈಗೊಡಿಸಿಕೊಂಡು ಕೆಲಸ ಮಾಡಬೇಕು~ ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.`ಅಂಕಿ ಅಂಶಗಳನ್ನು ತೆಗೆದುಕೊಂಡರೆ ದಲಿತ ಮತ್ತು ಹಿಂದುಳಿದ ಸಮುದಾಯದವರಿಗೆ ನ್ಯಾಯಯುತವಾಗಿ ಅಧಿಕಾರ ಸಿಕ್ಕಿಲ್ಲ.ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ~ ಎಂದು ತಿಳಿಸಿದರು.`ಸಾಮಾಜಿಕ ಪರಿವರ್ತನಾಕಾರರು ಮತ್ತು ಡಾ.ಅಂಬೇಡ್ಕರ್~ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಬೀದರ್ ಜಿಲ್ಲೆಯ ಅಣದೂರಿನ ವರದೀಕ್ಷಾಭೂಮಿಯ ವರಜ್ಯೋತಿ ಭಂತೇಜಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್, ಚಿಂತಕ ಲೋಲಾಕ್ಷ, ಗಾಯಕ ಡಾ.ಬಾನಂದೂರು ಕೆಂಪಯ್ಯ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.