ಶುಕ್ರವಾರ, ಜನವರಿ 24, 2020
28 °C
ವ್ಯಕ್ತಿಯೊಬ್ಬನ ಕೊಲೆಗೆ ₨ 1.75 ಲಕ್ಷ ಸುಪಾರಿ

ಸುಪಾರಿ ಹಂತಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸುಪಾರಿ ಪಡೆದು ವ್ಯಕ್ತಿಯೊಬ್ಬನ ಕೊಲೆ ಮಾಡಲು ಯತ್ನಿಸಿದ ಸುಪಾರಿ ಹಂತಕನೊಬ್ಬನನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಸುಪಾರಿ ಹಂತಕನನ್ನು ಹುಬ್ಬಳ್ಳಿಯ ಮೂಲ ನಿವಾಸಿ ಹಾಲಿ ಹಾವೇರಿಯಲ್ಲಿ ವಾಸಿಸುವ ಸಾಧಿಕ್ ಧಾರವಾಡ (ಪೈ) ಎಂದು ಗುರುತಿಸಲಾಗಿದೆ. ಈ ಆರೋಪಿಯು ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಹಂಸಬಾವಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಡ್ಡದಮಲ್ಲಾಪುರ ಗ್ರಾಮದ ಶಾಂತಪ್ಪ ಮಲ್ಲೇಶಪ್ಪ ದೊಡ್ಡಮನಿ ಎಂಬುವವರ ಕೊಲೆ ಮಾಡಲು ಸುಪಾರಿ ಪಡೆದಿದ್ದನು. ಅದೇ ಗ್ರಾಮದ ಚನ್ನಬಸಪ್ಪ ಪೂಜಾರ ಎಂಬಾತನಿಂದ ಶಾಂತಪ್ಪನ ಕೊಲೆ ಮಾಡಲು 1.75 ಲಕ್ಷ ಸುಪಾರಿ ಪಡೆದಿದ್ದ ಸಾಧಿಕ್‌, 2013 ರ ಸೆಪ್ಟಂಬರ್‌ 22 ರಂದು ಹಿರೇಕೆರೂರ ತಾಲ್ಲೂಕು ಚುಳಚಕೊಪ್ಪ ತಾಂಡ ಬಳಿ ಪೆಟ್ರೋಲ್‌ ಕೇಳುವ ನೆಪದಲ್ಲಿ ಬಂದು, ಶಾಂತಪ್ಪನನ್ನು ಬ್ಯಾಟ್‌ನಿಂದ ಹೊಡೆದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದನು.ಈ ಕುರಿತು ಶಾಂತಪ್ಪ ಪೊಲೀಸರಿಗೆ ನೀಡಿದ ದೂರಿನನ್ವಯ ಸಂಶಯದ ಮೇಲೆ ಚನ್ನಬಸಪ್ಪ ಪೂಜಾರನ ವಿಚಾರಣೆ ನಡೆಸಿದಾಗ ಸುಪಾರಿ ಹತ್ಯೆಯ ಸಂಚು ಬಯಲಿಗೆ ಬಂದಿದ್ದು, ಶಾಂತಪ್ಪನ ಜತೆಯಲ್ಲಿ ಕೆಲವು ವರ್ಷಗಳಿಂದ ಜಮೀನು ವಿವಾದ ಹಾಗೂ ರಾಜಕೀಯ ವೈಷಮ್ಯ ಇತ್ತು. ಆತ ಪದೇ ಪದೇ ತೊಂದರೆ ಕೊಡುತ್ತಿರುವುದಕ್ಕೆ ಬೇಸತ್ತು,  ಆತನ ಕೊಲೆಗೆ ಸುಪಾರಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಹತ್ಯೆಗೆ ಮೂಲತಃ ಹುಬ್ಬಳ್ಳಿಯ ನಿವಾಸಿ ಸದ್ಯ ಹಾವೇರಿಯಲ್ಲಿ ವಾಸವಾಗಿರುವ ಸಾಧಿಕ್ ಧಾರವಾಡ ಹಾಗೂ ವಿರೇಶ ಬೆಸ್ತರ ಎಂಬುವವರಿಗೆ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ಹೇಳಿದ್ದಾನೆ. ಅದರ ಆಧಾರದ ಮೇಲೆ ಆರೋಪಿ ಹುಬ್ಬಳ್ಳಿಯ ವಿರೇಶ ಬೆಸ್ತರ ಎಂಬಾತನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಸಾಧಿಕ್‌ನ ಬಂಧನಕ್ಕೆ ಬಲೆ ಬೀಸಿದ್ದರು. ಮಂಗಳವಾರ ಸಾಧಿಕ್‌ನನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್‌ಪಿ ಎಸ್.ಡಿ. ಜಗಮಯ್ಯನವರ ಮಾರ್ಗದರ್ಶನದಲ್ಲಿ ರಾಣೆಬೆನ್ನೂರ ಡಿವೈಎಸ್‌ಪಿ ಎಸ್.ಎಚ್. ಗಡಾದ, ಪಿಎಸ್‌ಐ ರೋಹಿಣಿ ಪಾಟೀಲ ಹಾಗೂ ಸಿಬ್ಬಂದಿ ಪಿ.ಬಿ. ಹಿರೇಮಠ ಸಿ.ಎಸ್. ಪಾಟೀಲ ಇವರ ತಂಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿತ್ತು.

ಪ್ರತಿಕ್ರಿಯಿಸಿ (+)