ಶನಿವಾರ, ಅಕ್ಟೋಬರ್ 19, 2019
28 °C

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಶಿವಾನಿ ಕೊಲೆ ಪ್ರಕರಣ

Published:
Updated:

  ನವದೆಹಲಿ, (ಪಿಟಿಐ): ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಆಪಾದಿತರಾಗಿದ್ದ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಇತರರನ್ನು ಆರೋಪಮುಕ್ತರನ್ನಾಗಿ ಮಾಡಿದ ದೆಹಲಿ ಹೈಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿದ್ದಾರೆ.

ಹೋದ ವರ್ಷ ಅಕ್ಟೋಬರ್ 12ರಂದು  ಶಿವಾನಿ ಕೊಲೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಸಂಶಯದ ಲಾಭದ ಮೇಲೆ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಇತರ ಇಬ್ಬರನ್ನು ಆರೋಪದಿಂದ ಮುಕ್ತಗೊಳಿಸಿತ್ತು.

 ಹೈಕೋರ್ಟ್, ನಾಲ್ವರು ಆರೋಪಿಗಳಲ್ಲೊಬ್ಬನಾದ ಪ್ರದೀಪ್ ಶರ್ಮಾ ಅವರಿಗೆ, ಆರೋಪ ಸ್ಥಿರಪಟ್ಟ ಕಾರಣ  ಕೆಳನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಸಂಶಯದ ಆಧಾರದ ಮೇಲೆ ಆರೋಪಿತರಾಗಿದ್ದ ರವಿಕಾಂತ್ ಶರ್ಮಾ, ಶ್ರೀಭಗವಾನ್ ಮತ್ತು ಸತ್ಯಪ್ರಕಾಶ್ ಅವರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿತ್ತು.

ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆಯ ಉದ್ದೇಶ ಅಸ್ಪಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್ ಪ್ರದೀಪ್ ಶರ್ಮಾ ತಾನೊಬ್ಬನೇ ಕೃತ್ಯ ಎಸಗಿದನೋ? ಅಥವಾ ಆರ್.ಕೆ.ಶರ್ಮಾ ಮತ್ತು ಇತರರ ಚಿತಾವಣೆಯಿಂದ ಕೊಲೆ ಮಾಡಿದನೋ?  ಎಂಬುದೂ ಕೂಡ ಸ್ಪಷ್ಟವಾಗಿಲ್ಲ ಎಂದಿತ್ತು.

ಇದಲ್ಲದೇ,~ ನಮ್ಮ ಮುಂದಿನ ಯಾವ ಸಾಕ್ಷ್ಯವೂ ಆರ್.ಕೆ. ಶರ್ಮಾ ಮತ್ತು ಕೊಲೆಗಾರ ಪ್ರದೀಪ್ ಶರ್ಮಾ ನಡುವಿನ ಸಂಬಂಧವನ್ನು ಸಾಬೀತುಗೊಳಿಸುವಲ್ಲಿ ಸೋತಿವೆ~ ಎಂದು ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳಾದ ಬಿ.ಡಿ ಅಹ್ಮದ್ ಮತ್ತು ಮನಮೋಹನ್ ಸಿಂಗ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದರು.

ಶಿವಾನಿ ಭಟ್ನಾಗರ್ ಮತ್ತು ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಪ್ರೇಮಿಗಳಾಗಿದ್ದರು. ಶಿವಾನಿಗೆ ಮಗುವಾದ ನಂತರ ಅವರ ನಡುವೆ ವೈಮನಸ್ಸು ಮೂಡಿತ್ತು. ಆಗ ಆರ್.ಕೆ.ಶರ್ಮಾ ಬಾಡಿಗೆ ಬಂಟರನ್ನು ಕಳಿಸಿ ಅವಳನ್ನು ಕೊಲೆ ಮಾಡಿಸಿದ್ದರು ಎಂದು ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆಪಾದಿಸಿದ್ದರು.

Post Comments (+)