ಬುಧವಾರ, ನವೆಂಬರ್ 20, 2019
21 °C

ಸುಪ್ರೀಂ ಕೋರ್ಟ್ ಮೊರೆಗೆ ಅಫ್ಜಲ್ ಕುಟುಂಬದ ಚಿಂತನೆ

Published:
Updated:

ಸೊಪೊರ್ (ಕಾಶ್ಮೀರ): ಮರಣದಂಡನೆಗೆ ಗುರಿಯಾಗಿರುವ ಅಪರಾಧಿಯ ಕುಟುಂಬಕ್ಕೆ ಶಿಕ್ಷೆ ಜಾರಿಯ ಬಗ್ಗೆ ಮೊದಲೇ ಮಾಹಿತಿ ನೀಡಬೇಕು ಮತ್ತು ಗಲ್ಲಿಗೇರಿಸುವುದಕ್ಕೂ ಮುನ್ನ ಕುಟುಂಬದ ಸದಸ್ಯರ ಭೇಟಿಗೆ ಅವಕಾಶ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅಫ್ಜಲ್ ಗುರು ಕುಟುಂಬ ಆಲೋಚಿಸುತ್ತಿದೆ.ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಅಫ್ಜಲ್ ಗುರುವನ್ನು ಫೆಬ್ರುವರಿಯಲ್ಲಿ ಹಠಾತ್ ಆಗಿ  ಗಲ್ಲಿಗೇರಿಸಲಾಗಿತ್ತು. ಕೊನೆಯ ಬಾರಿ ಕುಟುಂಬದವರ ಭೇಟಿಗೆ ಆತನಿಗೆ ಅವಕಾಶ ನೀಡಲಾಗಿರಲಿಲ್ಲ. ಅಲ್ಲದೇ ಶಿಕ್ಷೆ ಜಾರಿ ಮಾಹಿತಿಯೂ ವಿಳಂಬವಾಗಿ ಕುಟುಂಬಕ್ಕೆ ತಲುಪಿತ್ತು.`ಕ್ರೂರ ವಿಧಿಗೆ ಬಲಿಯಾದ ಅಫ್ಜಲ್ ಗುರುವನ್ನು ಮತ್ತೆ ತರಲು ಸಾಧ್ಯವಿಲ್ಲ. ಸಂವೇದನೆಯನ್ನು ಕಳೆದುಕೊಂಡಿದ್ದ ಸರ್ಕಾರ, ಕೊನೆಯ ಬಾರಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಗುರುವಿಗೆ ಅವಕಾಶ ನೀಡಲಿಲ್ಲ. ಆದರೆ, ಕನಿಷ್ಠ ಪಕ್ಷ ಭವಿಷ್ಯದಲ್ಲಿ  ಯಾವುದೇ ಕುಟುಂಬಕ್ಕೆ ಹೀಗಾಗದಂತೆ ಮಾಡಬಹುದು' ಎಂದು ಅಫ್ಜಲ್‌ನ ಅಣ್ಣ ಐಜಾಜ್ ಗುರು ಹೇಳಿದ್ದಾರೆ.ಈ ವಿಚಾರವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಣೆಯಿಂದ ವಿಚಾರಣೆಗೆ ಕೈಗೆತ್ತಿಕೊಂಡು, ಶಿಕ್ಷೆ ಜಾರಿಗೂ ಮುನ್ನ ಕುಟುಂಬಕ್ಕೆ ಮಾಹಿತಿ ನೀಡಬೇಕು ಮತ್ತು ಆಪ್ತರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ತೀರ್ಪು ನೀಡಬೇಕು ಎಂಬುದು ಅಫ್ಜಲ್ ಗುರು ಕುಟುಂಬದ ಆಶಯ.ಒಂದು ವೇಳೆ, ಇದು ನಡೆಯದೇ ಹೋದರೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಐಜಾಜ್ ಗುರು ಹೇಳಿದ್ದಾರೆ.ಈ ಬೆಳವಣಿಗೆಗಳಿಗೆ ಪೂರಕವಾಗಿ, ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳ ಕುಟುಂಬಗಳಿಗೆ ಶಿಕ್ಷೆ ಜಾರಿ ಬಗ್ಗೆ ಮೊದಲೇ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ಕಳೆದವಾರ ಹೇಳಿದ್ದರು.ಅಫ್ಜಲ್ ಗುರು ಕುಟುಂಬ ಈಗ ಇದೇ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದೆ.

ಪ್ರತಿಕ್ರಿಯಿಸಿ (+)