`ಸುಪ್ರೀಂ' ತಿರಸ್ಕಾರ

7
ಹೆಚ್ಚು ನೀರು: ಸಿಎಂಸಿಗೆ ನಿರ್ದೇಶನ ನೀಡಲು ತಮಿಳುನಾಡು ಕೋರಿಕೆ

`ಸುಪ್ರೀಂ' ತಿರಸ್ಕಾರ

Published:
Updated:
`ಸುಪ್ರೀಂ' ತಿರಸ್ಕಾರ

ನವದೆಹಲಿ:  ಡಿಸೆಂಬರ್ ತಿಂಗಳಿನಲ್ಲಿ 12 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಕಾವೇರಿ ಉಸ್ತುವಾರಿ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.ಬೆಳೆದು ನಿಂತಿರುವ ಸಾಂಬಾ ಬೆಳೆಯನ್ನು 12 ಟಿಎಂಸಿ ಅಡಿ ನೀರಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕಾವೇರಿ ಉಸ್ತುವಾರಿ ಸಮಿತಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂಬ ತಮಿಳುನಾಡು ಕೋರಿಕೆಯನ್ನು ನ್ಯಾಯಮೂರ್ತಿ ಡಿ. ಕೆ. ಜೈನ್ ಮತ್ತು ಮದನ್ ಬಿ. ಲೋಕೂರ್ ಅವರನ್ನು ಒಳಗೊಂಡ ನ್ಯಾಯಪೀಠವು ತಳ್ಳಿಹಾಕಿದೆ.ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ಕಾವೇರಿ ಉಸ್ತುವಾರಿ ಸಮಿತಿಯು ಡಿಸೆಂಬರ್ 7ರಂದು ಹೊರಡಿಸಿರುವ ಆದೇಶವನ್ನು ಪಾಲಿಸುವ ಹೊಣೆ ಕರ್ನಾಟಕದ ಮೇಲಿದೆ ಎಂದು ನ್ಯಾಯಪೀಠ ತಿಳಿಸಿದೆ. ಉಸ್ತುವಾರಿ ಸಮಿತಿಯ ಆದೇಶವನ್ನು ಪ್ರಧಾನಿ ಅವರ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ ಮುಂದೆ ಪ್ರಶ್ನಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

ಉಸ್ತುವಾರಿ ಸಮಿತಿಯ ಆದೇಶವು ಎರಡೂ ರಾಜ್ಯಗಳಿಗೆ ತೃಪ್ತಿ ನೀಡಿದಂತೆ ಕಾಣಿಸುತ್ತಿಲ್ಲ. ಆದರೂ ಸಮಿತಿಯ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.ಆದೇಶ ಪಾಲನೆಗೆ ಸಂಬಂಧಿಸಿದಂತೆ ಎರಡೂ ರಾಜ್ಯಗಳು ಸೂಕ್ತ ಕಾನೂನು ಕ್ರಮಗಳನ್ನು ಅನುಸರಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತಮಿಳುನಾಡು ಪರ ವಕೀಲ ಸಿ. ಎಸ್. ವೈದ್ಯನಾಥನ್ ಅವರು ವಾದ ಮಂಡಿಸುತ್ತ, `ತಮಿಳುನಾಡಿನ ಸಾಂಬಾ ಬೆಳೆಯ ನೀರಿನ ನಿಜವಾದ ಅಗತ್ಯವನ್ನು ಅರಿಯದೆ ಉಸ್ತುವಾರಿ ಸಮಿತಿಯು ಆದೇಶ ಹೊರಡಿಸಿದೆ' ಎಂದು ಹೇಳಿದರು.

ಎರಡೂ ರಾಜ್ಯಗಳು ನೀರಿನ ಕೊರತೆಯನ್ನು ಎದುರಿಸುತ್ತಿರುವುದರಿಂದ ಲಭ್ಯವಿರುವ ನೀರನ್ನು ಸಮಾನವಾಗಿ ಹಂಚಿಕೊಳ್ಳುವುದು ಸೂಕ್ತ ಎಂದು ಹೇಳಿದರು.`ತಮಿಳುನಾಡಿನ ಕೋರಿಕೆಯನ್ನು ಮನ್ನಿಸಬಾರದು. ನಾವು ಉಸ್ತುವಾರಿ ಸಮಿತಿಯ ಆದೇಶವನ್ನು ಕಾವೇರಿ ನದಿ ಪ್ರಾಧಿಕಾರದ ಎದುರು ಪ್ರಶ್ನಿಸಲಿದ್ದೇವೆ' ಎಂದು ಕರ್ನಾಟಕ ಪರ ವಕೀಲ ಅನಿಲ್ ದಿವಾನ್ ಹೇಳಿದರು. ತಮಿಳುನಾಡಿನ ಅಗತ್ಯವನ್ನು ಉಸ್ತುವಾರಿ ಸಮಿತಿ ಅರ್ಥ ಮಾಡಿಕೊಂಡಿಲ್ಲ ಎಂದು ವೈದ್ಯನಾಥನ್ ಪದೇ ಪದೇ ಹೇಳಿದ್ದರಿಂದ ನ್ಯಾಯಪೀಠವು, `ಪ್ರಮಾಣ ಪತ್ರ ಸಲ್ಲಿಸಿ ಅಥವಾ ನಿಮಗೆ ತಿಳಿದಿದ್ದನ್ನು ಮಾಡಿ, ಆದರೆ ಸಮಿತಿಯ ಆದೇಶದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿತು.ನಂತರ ಅರ್ಜಿಯ ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಿತು. ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಚ್. ಪಿ. ರಾವಲ್ ಅವರು ಮಾತನಾಡಿ, `2007ರ ಫೆಬ್ರುವರಿ 5ದು ಕಾವೇರಿ ಜಲ ವಿವಾದ ನ್ಯಾಯಮಂಡಳಿ ನೀಡಿರುವ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಹಿಂದಿನ ವಿಚಾರಣೆ ಸಂದರ್ಭದಲ್ಲಿ ಗೆಜೆಟ್ ಅಧಿಸೂಚನೆಯನ್ನು ಇದುವರೆಗೆ ಏಕೆ ಹೊರಡಿಸಿಲ್ಲ ನ್ಯಾಯಪೀಠ ಪ್ರಶ್ನಿ ಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹೊರ ಹರಿವು ಇಳಿಕೆ

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶದಂತೆ ಕೆಆರ್‌ಎಸ್ ಜಲಾಶಯದಿಂದ 4.3 ಟಿಎಂಸಿ ಅಡಿ ನೀರು ಹರಿಸಿರುವ ರಾಜ್ಯ ಸರ್ಕಾರ, ಸೋಮವಾರ ಬೆಳಿಗ್ಗೆಯಿಂದ ನೀರಿನ ಹೊರ ಹರಿವನ್ನು 14,021 ಕ್ಯೂಸೆಕ್‌ನಿಂದ 7,171 ಕ್ಯೂಸೆಕ್‌ಗೆ ಇಳಿಸಿದೆ. ರೈತರ ತೀವ್ರ ವಿರೋಧದ ನಡುವೆಯೂ ಗುರುವಾರ ತಡರಾತ್ರಿಯಿಂದ ತಮಿಳುನಾಡಿಗೆ ನೀರು ಹರಿಸಲಾಗಿತ್ತು.

ಇದನ್ನು ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಕೋರ್ಟ್ ಆದೇಶದಂತೆ ನೀರು ಹರಿಸಿದ ನಂತರವಷ್ಟೇ ನೀರು ಹರಿವಿನ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿ. 6 ರಂದು ಸಂಜೆ 97.62 ಅಡಿಯಷ್ಟಿದ್ದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು ಡಿ.10 ರಂದು 92.40 ಅಡಿಗೆ ಇಳಿದಿದೆ.

ಕೆಆರ್‌ಎಸ್ ವೀಕ್ಷಣೆಗೆ ಮುಕ್ತ

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆ ಮುಂದುವರಿಸುವುದಿಲ್ಲ. ಜತೆಗೆ ಬೃಂದಾವನವನ್ನು  ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದ್ದಾರೆ.

ಕಾವೇರಿ ಗಲಾಟೆಯ ಹಿನ್ನೆಲೆಯಲ್ಲಿ ಕೆ.ಆರ್.ಎಸ್. ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry