ಸುಪ್ರೀಂ ತೀರ್ಪಿಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ

7

ಸುಪ್ರೀಂ ತೀರ್ಪಿಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆ, ಬೇಡವೇ ಎಂಬ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೂ ರಾಜ್ಯ ಸಚಿವ ಸಂಪುಟದ ವಿಸ್ತರಣೆಗೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.ಗೃಹ ಕಚೇರಿ `ಕೃಷ್ಣಾ~ದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಮತ್ತು ಸಚಿವ ಸಂಪುಟ ವಿಸ್ತರಣೆಯ ನಡುವೆ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂಬುದನ್ನು ಪಕ್ಷದ ವರಿಷ್ಠರಿಗೆ ಸ್ಪಷ್ಟಪಡಿಸಲಾಗಿದೆ~ ಎಂದು ತಿಳಿಸಿದರು.ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವ ಕಾರಣ, ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮತಿ ಬೇಕು. ವರಿಷ್ಠರು ಶೀಘ್ರದಲ್ಲೇ ಅನುಮತಿ ನೀಡುವ ವಿಶ್ವಾಸವಿದೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ ಪಕ್ಷದ ಹಿರಿಯ ಮುಖಂಡರ ಜೊತೆ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ದೆಹಲಿಗೆ ತೆರಳಿ, ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮತಿ ಪಡೆಯಲಾಗುವುದು ಎಂದರು.`ಅನಿವಾರ್ಯ ಕಾರಣಗಳಿಂದ ಹೆಚ್ಚು ಖಾತೆಗಳನ್ನು ನಿಭಾಯಿಸುತ್ತಿದ್ದೇನೆ. ಹಾಗಂತ ಯಾವುದೇ ಖಾತೆಯನ್ನು ನಿರ್ಲಕ್ಷಿಸಿಲ್ಲ. ನನ್ನ ಸಾಮರ್ಥ್ಯ ಏನೆಂಬುದು ನನಗೆ ತಿಳಿದಿದೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಕುಟುಂಬದವರ ಜೊತೆ ತೆರಳಿದ್ದಾರೆ. ಈ ವಿಚಾರಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry