ಸುಪ್ರೀಂ ತೀರ್ಪು: ಬಾಯಿ ಬಡಿದುಕೊಂಡ ರೈತರು

7

ಸುಪ್ರೀಂ ತೀರ್ಪು: ಬಾಯಿ ಬಡಿದುಕೊಂಡ ರೈತರು

Published:
Updated:

ಶ್ರೀರಂಗಪಟ್ಟಣ: ತಮಿಳುನಾಡಿಗೆ ಬುಧವಾರದಿಂದ ಡಿ.9ರ ವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್‌ನಷ್ಟು ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ರೈತಸಂಘ ಹಾಗೂ ಇನ್ನಿತರ ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.  ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾವೇರಿ ನ್ಯಾಯ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಅರ್ಧ ಗಂಟೆಗೂ ಹೆಚ್ಚುಕಾಲ ಬಾಯಿ ಬಡಿದುಕೊಂಡು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದರು.ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇರುವ ಬೆಳೆ ಉಳಿಸಿಕೊಳ್ಳಲೂ ಆಗುವುದಿಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಬಾರದು. ತಕ್ಷಣ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಕರ್ನಾಟಕದ ಪಾಲಿಗೆ ಕಂಟಕವಾಗಿರುವ ಕಾವೇರಿ ನ್ಯಾಯ ಮಂಡಳಿಯನ್ನು ರದ್ದುಪಡಿಸಬೇಕು ಎಂದು ತಾಲ್ಲೂಕು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರೂ ಆದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.  ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ, ಪಾಂಡು, ನಾಗೇಂದ್ರಸ್ವಾಮಿ, ನಂಜುಂಡಪ್ಪ, ಯುವ ಅಧ್ಯಕ್ಷ ಕಡತನಾಳು ಬಾಬು, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕೆ.ಬಿ.ಬಸವರಾಜು, ಕನ್ನಡ ಸೇನೆಯ ಶಿವರಾಂ, ಗಂಜಾಂ ಪುಟ್ಟರಾಮು, ಜಯಕರ್ನಾಟಕ ಸಂಘಟನೆ ಕುಮಾರಸ್ವಾಮಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಕಾಶ್, ದಸಂಸ ಮುಖಂಡ ಹೊನ್ನಯ್ಯ, ಪುರಸಭೆ ಸದಸ್ಯರಾದ ಎಂ.ಎಲ್.ದಿನೇಶ್, ಎಲ್.ನಾಗರಾಜು, ರಾಮೇಗೌಡ ಇದ್ದರು.ಸಚಿವ, ಸಂಸದರ ರಾಜೀನಾಮೆಗೆ ಒತ್ತಾಯ

ಮದ್ದೂರು: ತಮಿಳುನಾಡಿಗೆ 5 ದಿನಗಳ ಕಾಲ ಪ್ರತಿನಿತ್ಯ 10ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಸಮೀಪದ ಗೆಜ್ಜಲಗೆರೆ ಬಳಿ ರೈತ ಸಂಘದ ಕಾರ್ಯಕರ್ತರು ಬುಧವಾರ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.ಕೋರ್ಟ್ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ, ಹೆದ್ದಾರಿಗಿಳಿದ ರೈತ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವುದನ್ನು ಖಂಡಿಸಿ ಬಾಯಿ ಬಡಿದುಕೊಳ್ಳುವ ಮೂಲಕ ವಿನೂತನ ಪ್ರತಿಭಟನೆ ಆರಂಭಿಸಿದರು. ಸಂಜೆ 6 ಗಂಟೆಯವರೆಗೆ ರೈತರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದ ಪರಿಣಾಮ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಜಿ.ಎ.ಶಂಕರ್ ಮಾತನಾಡಿ, ರಾಜ್ಯದ ಹಿತವನ್ನು ಬಲಿ ಕೊಡುತ್ತಿರುವ ಎಲ್ಲ ಸಚಿವರು ಹಾಗೂ ಸಂಸದರು ಈ ಕೂಡಲೇ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.

ರೈತನಾಯಕಿ ಸುನಂದಾ ಜಯರಾಂ ಮಾತನಾಡಿದರು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ರೈತಸಂಘದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಲಿಂಗಪ್ಪ, ರಾಕೇಶ್, ಶಿವರಾಮು, ಮೋಹನ್ ಸೇರಿದಂತೆ ಗೆಜ್ಜಲಗೆರೆ, ಕುದುರಗುಂಡಿ, ಸಾದೊಳಲು ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.ಸರ್ವಾನುಮತ ನಿರ್ಣಯಕ್ಕೆ ಆಗ್ರಹ

ಮಂಡ್ಯ: ಯಾವುದೇ ಪರಿಸ್ಥಿತಿಯಲ್ಲಿಯೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದಿಲ್ಲ ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಬೇಕು ಎಂದು ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಮಂಡದಲ್ಲಿ ತೆಗೆದುಕೊಳ್ಳುವ ನಿರ್ಣಯದ ಪ್ರತಿಯನ್ನು ಕಾವೇರಿ ನದಿ ಪ್ರಾಧಿಕಾರಕ್ಕೆ ತಲುಪಿಸಬೇಕು. ಕರ್ನಾಟಕದಲ್ಲಿ ಮಳೆಗಾಲ ಜೂನ್, ಜುಲೈನಲ್ಲಿಯೇ ಮುಗಿದು ಹೋಗಿದೆ.ಆದರೆ, ತಮಿಳುನಾಡಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿಯೂ ಮಳೆ ಬರುತ್ತದೆ. ಅದನ್ನು ನ್ಯಾಯಾಲಯ, ಕಾವೇರಿ ನದಿ ಪ್ರಾಧಿಕಾರ ಹಾಗೂ ಕಾವೇರಿ ಉಸ್ತುವಾರಿ ಸಮಿತಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.ಮುಖಂಡರಾದ ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿ ನಾಗರಾಜು, ಬಿ.ಟಿ. ಮಂಜುನಾಥ್, ಚಂದ್ರಶೇಖರ್, ಉಮೇಶ್ ಇದ್ದಾರೆ.

ಕಾಂಗ್ರೆಸ್ ವಿರೋಧ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ನೀರಿದೆ. ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 97 ಅಡಿಗಳಷ್ಟು ಮಾತ್ರ ನೀರಿದ್ದು, ಬೆಳೆದು ನಿಂತಿರುವ ಬೆಳೆಗೆ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪುಟ್ಟೇಗೌಡ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ನೀರು ಬಿಟ್ಟರೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ, ಎಂ.ಭಾಸ್ಕರ್ (ಅಂಬರೀಶ್‌ಗೌಡ), ಎನ್.ಗಂಗಾಧರ್, ಟಿ.ಎಂ.ಹೊಸೂರು ಮಹೇಶ್ ಇತರರು ಹೇಳಿದ್ದಾರೆ.ಉಗ್ರ ಪ್ರತಿಭಟನೆ: ತಮ್ಮಣ್ಣ ಎಚ್ಚರಿಕೆ

ಮದ್ದೂರು: ಸುಪ್ರೀಂ ಕೋರ್ಟ್ ತೀರ್ಪು ಅವೈಜ್ಞಾನಿಕ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ  ಸರ್ಕಾರವು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ಪಕ್ಷ ಸರ್ಕಾರ ರೈತರ ಹಿತ ಕಡೆಗಣಿಸಿ ನೀರು ಬಿಡುಗಡೆಗೆ ಮುಂದಾದರೆ ನಾಳೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ಮುಖಂಡರಾದ ಎನ್.ಆರ್.ಪ್ರಕಾಶ್, ಶಂಕರ್, ಚಿಕ್ಕಮರಿಯಪ್ಪ, ಮನು, ಮಲ್ಲರಾಜು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry