ಸುಪ್ರೀಂ ಹಸಿರು ನಿಶಾನೆ: ಹುಲಿ ಸಫಾರಿ ಮತ್ತೆ ಆರಂಭ

7

ಸುಪ್ರೀಂ ಹಸಿರು ನಿಶಾನೆ: ಹುಲಿ ಸಫಾರಿ ಮತ್ತೆ ಆರಂಭ

Published:
Updated:

ಮೈಸೂರು: ಸುಪ್ರೀಂಕೋರ್ಟ್‌ನ ಹಸಿರು ನಿಶಾನೆಯಿಂದಾಗಿ ಚಾಮ ರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗುರುವಾರದಿಂದ ಮತ್ತೆ ಹುಲಿ ಸಫಾರಿ ಆರಂಭಗೊಂದಿದೆ.ಆದರೆ, ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಿಳಿಗಿರಿ ಹುಲಿ ರಕ್ಷಿತಾರಣ್ಯದಲ್ಲಿ ಇನ್ನೂ ಹುಲಿ ಸಫಾರಿ ಆರಂಭವಾಗಿಲ್ಲ. ನಾಗರಹೊಳೆಯಲ್ಲಿ ಒಂದು ವಾರದ ನಂತರ ಪ್ರವಾಸಿಗರಿಗೆ ಪ್ರವೇಶವನ್ನು ನೀಡಲಾಗುತ್ತದೆ. ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಂಡಿತ್ತು.ಇದರಿಂದಾಗಿ ಸಫಾರಿ ವಾಹನ ಸಾಗುವ ರಸ್ತೆಯಲ್ಲಿ ಕಳೆ, ಗಿಡಗಳು ಬೆಳೆದು ನಿಂತಿವೆ. ಇದನ್ನು ಸ್ವಚ್ಛಗೊಳಿಸದೆ ಸಫಾರಿ ಅಸಾಧ್ಯ. ಆದ್ದರಿಂದ ಅರಣ್ಯ ಇಲಾಖೆಯು 50 ಮಂದಿ ಗಿರಿಜನರನ್ನು ಗುರುವಾರದಿಂದ ರಸ್ತೆ ಸ್ವಚ್ಛತೆಗೆ ನಿಯೋಜಿಸಿದೆ. ರಸ್ತೆ ಸ್ವಚ್ಛಗೊಳ್ಳದೆ ಸಫಾರಿ ಸಾಧ್ಯವಿಲ್ಲ.ಆದ್ದರಿಂದ ಸ್ವಚ್ಛತೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಸಫಾರಿಯನ್ನು ನಿಲ್ಲಿಸಲು ಅನುಮತಿ ಪಡೆದುಕೊಂಡಿದ್ದೇವೆ. ಇನ್ನೊಂದು ವಾರದಲ್ಲಿ ಸಫಾರಿ ಆರಂಭಗೊಳ್ಳುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಂದಪ್ಪ ಪ್ರಜಾವಾಣಿಗೆ ತಿಳಿಸಿದರು. ಗುರುವಾರ ಪ್ರವಾಸಿಗರು ಬರಲಿಲ್ಲ.ಗುಂಡ್ಲುಪೇಟೆ ವರದಿ:
ಬಂಡೀಪುರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎಂದಿನಂತೆ ಈ ಸಫಾರಿ ನಡೆಯಲಿದ್ದು, 5 ಮಿನಿ ಬಸ್ ಹಾಗೂ 2 ಜೀಪ್‌ಗಳನ್ನು ಒದಗಿಸಲಾಗುವುದು ಎಂದು ಹುಲಿಯೋಜನೆ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.ಗುರುವಾರವಷ್ಟೇ ಸಫಾರಿ ಪ್ರಾರಂಭವಾಗಿರುವುದರಿಂದ ಪ್ರವಾಸಿಗರಿಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇದರಿಂದಾಗಿ ಮೊದಲ ದಿನ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು.ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ವಾಹನ ಬಳಕೆಗೆ ನಿರ್ಬಂಧ ಹಾಕಿದ್ದು, ಅರಣ್ಯ ಇಲಾಖೆ ವಾಹನಗಳಿಗೆ ಅನುಮತಿ ನೀಡಲಾಗಿದೆ. ಅತಿ ಹೆಚ್ಚು ಹುಲಿಗಳಿರುವ ಬಂಡೀಪುರ ಕಾಡಿನಲ್ಲಿ ಶೇಕಡ 10 ರಷ್ಟು ಪ್ರದೇಶದಲ್ಲಿ ಮಾತ್ರ ಸಫಾರಿ ನಡೆಸಲಾಗುವುದು ಎಂದು ತಿಳಿಸಿದರು.ಕೆ. ಗುಡಿ: ಸಫಾರಿ ವಿಳಂಬ


ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಕೆ. ಗುಡಿಯಲ್ಲಿ ಪ್ರವಾಸಿಗರ ಕೊರತೆಯಿಂದ ಸಫಾರಿ ಆರಂಭಗೊಂಡಿಲ್ಲ.ವನ್ಯಜೀವಿಗಳಿಗೆ ಧಕ್ಕೆಯಾಗದಂತೆ ಹುಲಿ ರಕ್ಷಿತಾರಣ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುರುವಾರದಿಂದ ಸಫಾರಿ ಆರಂಭಗೊಂಡಿದೆ.ಆದರೆ, ಪ್ರವಾಸಿಗರ ಕೊರತೆ ಹಿನ್ನೆಲೆಯಲ್ಲಿ ಕೆ. ಗುಡಿಯಲ್ಲಿ ಇನ್ನೂ ಸಫಾರಿ ಪ್ರಾರಂಭಿಸಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ನಂತರ ಸಫಾರಿ ಆರಂಭಗೊಳ್ಳಲಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry