ಸುಬ್ರಹ್ಮಣ್ಯ: ಮಡೆ ಮಡೆಸ್ನಾನ ನಿರಾತಂಕ

7

ಸುಬ್ರಹ್ಮಣ್ಯ: ಮಡೆ ಮಡೆಸ್ನಾನ ನಿರಾತಂಕ

Published:
Updated:
ಸುಬ್ರಹ್ಮಣ್ಯ: ಮಡೆ ಮಡೆಸ್ನಾನ ನಿರಾತಂಕ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರೋತ್ಸವ ಸಂದರ್ಭ ಮೂರು ದಿನಗಳ ಕಾಲ ಚೌತಿ, ಪಂಚಮಿ, ಷಷ್ಠಿ ದಿನ ದೇವಳದ ಹೊರಾಂಗಣದಲ್ಲಿ ನಡೆಯುವ ಮಡೆ ಮಡೆಸ್ನಾನ ಸೇವೆಗೊಂದಲಗಳ ನಡುವೆ ಸೋಮವಾರ ನಿರಾತಂಕವಾಗಿ ನಡೆಯಿತು. ಸುಮಾರು 600 ಮಂದಿ ಮಡೆ ಮಡೆಸ್ನಾನ ಸೇವೆ ಸಲ್ಲಿಸಿದರು.ಮಡೆ ಮಡೆಸ್ನಾನದಂತಹ ಪದ್ಧತಿ ವಿರುದ್ಧ ಸರ್ಕಾರಕ್ಕೆ ಕೆಲವು ವಲಯಗಳಿಂದ ದೂರು ಹಾಗೂ ಆಕ್ಷೇಪಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ದೇವಳದ ಆಡಳಿತ ಮಂಡಳಿ ಸರ್ಕಾರದ ಮಾರ್ಗದರ್ಶನ ಹಿನ್ನೆಲೆಯಲ್ಲಿ ಆ ಸೇವೆ ನಿಲ್ಲಿಸುವಂತೆ ಭಕ್ತರಿಗೆ ಸೂಚಿಸಿತ್ತು. ಈ ಬಗ್ಗೆ ದೇವಳದ ಆಡಳಿತಾಧಿಕಾರಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದರು.ಮಡೆ ಮಡೆಸ್ನಾನ ನಿಷೇಧವನ್ನು ಮಾಧ್ಯಮಗಳ ಮೂಲಕ ತಿಳಿದ ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವವರು ಸರ್ಕಾರದ ಆದೇಶ ಪ್ರತಿಭಟಿಸಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಸೇವೆ ನಡೆಯದಿದ್ದಲ್ಲಿ ರಥಕಟ್ಟುವ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.ದೇವಳದ ಆಡಳಿತಾಧಿಕಾರಿಯಾಗಿರುವ ಪುತ್ತೂರಿನ ಸಹಾಯಕ ಆಯುಕ್ತ ಸುಂದರ ಭಟ್ ಸುಬ್ರಹ್ಮಣ್ಯಕ್ಕೆ ಧಾವಿಸಿ ಭಕ್ತರು ಹಾಗೂ ಮಲೆಕುಡಿಯ ಜನಾಂಗದ ಪ್ರಮುಖರ ಜತೆ ಮಾತುಕತೆ ನಡೆಸಿದರು. ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿದಾಗ ಯಥಾಸ್ಥಿತಿ ಮುಂದುವರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಈ ಘಟನೆ ನಡೆಯುತ್ತಿದ್ದಂತೆ ಸುಬ್ರಹ್ಮಣ್ಯ ಸ್ವಾಮಿಗೆ ಭಕ್ತರು ಜಯಕಾರ ಹಾಕಿದರು.ಈ ನಡುವೆ ದೇವಳದ ಹೊರಾಂಗಣದಲ್ಲಿ ಬ್ರಾಹ್ಮಣರಿಗೆ ಊಟ ಹಾಕುವುದಿಲ್ಲ ಎಂಬ ಸುದ್ದಿಹರಡಿತು. ಹೊರಾಂಗಣದಲ್ಲಿ ಊಟ ನೀಡಿದರೆ ಮಾತ್ರ ಮಡೆಸ್ನಾನ ಮಾಡಲು ಅವಕಾಶ.ಇದನ್ನು ತಿಳಿದು ಭಕ್ತರು ಆಡಳಿತಾಧಿಕಾರಿ ಕಚೇರಿಗೆ ಬಂದು, ಹೊರಾಂಗಣದಲ್ಲಿ ಬ್ರಾಹ್ಮಣರಿಗೆ ಸಂತರ್ಪಣೆ ಮಾಡಲೇ ಬೇಕು. ಮಡೆ ಮಡೆಸ್ನಾನ  ಸೇವೆ ಯಥಾಪ್ರಕಾರ ನಡೆಯಬೇಕೆಂದು ಆಗ್ರಹಿಸಿದರು. ನಂತರ ಧಾರ್ಮಿಕ ದತ್ತಿ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಭಕ್ತರು ದೂರವಾಣಿ ಕರೆ ಮಾಡಿ ಮಡೆಮಡೆಸ್ನಾನ ಏಕಾಏಕಿ ನಿಲ್ಲಿಸುವುದು ಬೇಡ. ಅದಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು. ಬಳಿಕ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿ ಯಥಾಸ್ಥಿತಿ ನಿರ್ಧಾರಕ್ಕೆ ಬರಲಾಯಿತು.`ಏಕಾಏಕಿ ಭಕ್ತರ ಮನಸ್ಸಿಗೆ ಬೇಸರವಾಗುವಂತೆ  ಮಡೆಮಡೆಸ್ನಾನ ನಿಲ್ಲಿಸುವುದಿಲ್ಲ. ಎಂದಿನಂತೆ ಜಾತ್ರೆ ವೇಳೆ ಇದು ಮುಂದುವರಿಯುತ್ತದೆ. ಮುಂದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನೆಯಲ್ಲಿ ಪರಿಹಾರ ಕಂಡುಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು~ ಎಂದು ಆಡಳಿತಾಧಿಕಾರಿ ತಿಳಿಸಿದರು. ಬಳಿಕ ಮಡೆಮಡೆಸ್ನಾನ ಸೇವೆ ನಡೆಯಿತು.

ಜನರ ಭಾವನೆಗೆ ಸ್ಪಂದನೆ: ಡಿಸಿ

ಮಂಗಳೂರು: ಮಡೆ ಮಡೆಸ್ನಾನ ಹರಕೆ ತೀರಿಸಲೆಂದು ದೂರದ ಮುಂಬೈಯಿಂದಲೇ ಭಕ್ತರು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಮೇಲಾಗಿ ಹೀಗೆ ಮಡೆಸ್ನಾನ ಮಾಡುವವರು ಮಲೆಕುಡಿಯರು ಅಲ್ಲ ಎಂಬುದೂ ಮನವರಿಕೆಯಾಯಿತು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ಮಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ಗೆ ತಿಳಿಸಿದರು.`2002ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ನೀಡಿದ ಆದೇಶದಂತೆ ಜನರ ಧಾರ್ಮಿಕ ಹಕ್ಕಿನಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ. ಈ ತೀರ್ಪಿನಂತೆ ಜನರು ಸ್ವಇಚ್ಛೆಯಿಂದ ಮಡೆಸ್ನಾನ ಮಾಡುವುದಾದರೆ ಜಿಲ್ಲಾಡಳಿತ ತಡೆಯುವಂತಿಲ್ಲ. ಕುಕ್ಕೆಯಲ್ಲಿ ಬಲಾತ್ಕಾರದಿಂದ ಮಡೆಸ್ನಾನ ನಡೆಯುತ್ತಿಲ್ಲ, ಮೇಲಾಗಿ ಸಮಾಜದ ಕೆಳವರ್ಗದ ಜನರು ಮಾತ್ರ ಇಂತಹ ಹರಕೆ ತೀರಿಸುತ್ತಿಲ್ಲ ಎಂಬುದನ್ನೆಲ್ಲ ಗಮನಿಸಿ ಈ ನಿರ್ಧಾರಕ್ಕೆ ಬರಲಾಯಿತು. ಇದರ ಹೊರತಾಗಿ ರಥ ಕಟ್ಟುವುದಿಲ್ಲ ಎಂಬ ಮಲೆಕುಡಿಯರ ಬೆದರಿಕೆಗೆ ಬಾಗಿ ಮಡೆಸ್ನಾನಕ್ಕೆ ಅವಕಾಶ ಕಲ್ಪಿಸಿಲ್ಲ~ ಎಂದು ಸ್ಪಷ್ಟಪಡಿಸಿದರು.`ಜನರಿಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಹಳ ನಂಬಿಕೆ ಇದೆ. ಕುಕ್ಕೆಯಲ್ಲಿ ಮಡೆಸ್ನಾನ ಪದ್ಧತಿ ನಿಲ್ಲಿಸಬಹುದೇ ಎಂದು ತಿಳಿಯಲು ಮುಂದಿನ ವಾರ ಜಿಲ್ಲಾಡಳಿತದ ವತಿಯಿಂದ ಅಷ್ಟಮಂಗಲ ಪ್ರಶ್ನೆ ನಡೆಸುವ ವಿಚಾರ ಇದೆ. ಪ್ರಶ್ನೆಯಲ್ಲಿ ಮಡೆಸ್ನಾನ ಅಗತ್ಯ ಇಲ್ಲ ಎಂಬುದು ಕಂಡುಬಂದರೆ ಮಡೆಸ್ನಾನ ಸ್ಥಗಿತಗೊಳಿಸಿರುವ ಬಗ್ಗೆ ಜನತೆಗೆ ಮನವರಿಕೆ ಮಾಡಲಾಗುವುದು. ಅದರಿಂದ ಮುಂದಿನ ವರ್ಷ ಈ ಹರಕೆ ಹೊತ್ತು ಜನರು ಇಲ್ಲಿಗೆ ಬರುವುದು ತಪ್ಪಬಹುದು~ ಎಂದು ಅವರು ತಿಳಿಸಿದರು.ಪಂಚಮಿ ರಥೋತ್ಸವ ಇಂದು

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಇದೇ 29ರಂದು ರಾತ್ರಿ ಬಂಡಿ ಉತ್ಸವ, ವಿಶೇಷ ಪಾಲಕಿ ಉತ್ಸವ ಬಳಿಕ ದೇವರ ಪಂಚಮಿ ರಥೋತ್ಸವ ನಡೆಯಲಿದೆ. ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ, ಕುಕ್ಕೆ ಬೆಡಿ ಪ್ರದರ್ಶನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry