ಶನಿವಾರ, ಮಾರ್ಚ್ 6, 2021
28 °C
ಲಾಲ್‌ಬಾಗ್‌ನಲ್ಲಿ ನಾಳೆಯಿಂದ ಫಲಪುಷ್ಪ ಪ್ರದರ್ಶನ

ಸುಮಗಳಲ್ಲಿ ಅರಳಲಿದೆ ಸಂಸತ್ ಭವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಗಳಲ್ಲಿ ಅರಳಲಿದೆ ಸಂಸತ್ ಭವನ

ಬೆಂಗಳೂರು: ನಗರದ ‘ಸಸ್ಯಕಾಶಿ’ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ಆಗಸ್ಟ್‌ 6 ರಿಂದ 15 ರವರೆಗೆ ಫಲಪುಷ್ಪ ಪ್ರದ­­­ರ್ಶನ ನಡೆಯಲಿದೆ.ದೇಶದ ‘ಶಕ್ತಿಕೇಂದ್ರ’ ಎನಿಸಿರುವ ನವದೆಹಲಿಯ ಸಂಸತ್‌ ಭವನ ಈ ಬಾರಿ ಪುಷ್ಪಗಳಲ್ಲಿ ಮೈತಳೆಯಲಿರುವುದು ಪ್ರದರ್ಶನದ ಪ್ರಮುಖ ಆಕರ್ಷಣೆ.

ಮೈಸೂರು ಉದ್ಯಾನಕಲಾ ಸಂಘದ ಅಧ್ಯಕ್ಷರೂ ಆಗಿರುವ ತೋಟಗಾರಿಕೆ ಇಲಾಖೆಯ ನಿರ್ದೇಶಕ (ಪ್ರಭಾರ) ಎಚ್.ಎಸ್‌. ಶಿವಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಪ್ರದರ್ಶನದ ಮಾಹಿತಿ ನೀಡಿದರು.‘ಇದು 204ನೇ ಪ್ರದರ್ಶನ. ಈ  ಬಾರಿಯ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್‌ 6ರಂದು ಗಾಜಿನ ಮನೆಯಲ್ಲಿ ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರು ಉದ್ಘಾಟಿಸಲಿದ್ದಾರೆ’ ಎಂದರು. ‘2016, ರಾಜ್ಯ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್. ಮರಿಗೌಡರ  ಅವರ ಜನ್ಮ ಶತಮಾನೋತ್ಸವದ ವರ್ಷ. ಹೀಗಾಗಿ ಅವರಿಗೆ ಹಲವು ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುವುದು’ ಎಂದು ತಿಳಿಸಿದರು.‘ಸಂಸತ್ ಭವನದ ಪ್ರತಿಕೃತಿ ಜತೆಗೆ ಸಿಕ್ಕಿಂ ರಾಜ್ಯದ ದೈತ್ಯ ಬಿದಿರಿನ ಮೋಡಿ, ಗಾಜಿನ ಮನೆಯ ನಾಲ್ಕು ಮೂಲೆಗಳಲ್ಲಿ ಮೇಡಿನೆಲ್ಲಾ ಹೂವಿನ ಪಿರಮಿಡ್‌ಗಳು– ಹೀಗೆ ಹಲವು ಬಗೆಯ ವಿಶೇಷತೆಗಳು ಇರಲಿವೆ’ ಎಂದು ತಿಳಿಸಿದರು. ‘ಪ್ರದರ್ಶನದ ಅವಧಿಯುದ್ದಕ್ಕೂ ಬಿಎಸ್‌ಎಫ್‌, ಎಂಇಜಿ ಹಾಗೂ ಎಸ್‌ಎಸ್‌ಆರ್‌ಪಿ ಬ್ಯಾಂಡ್‌ ತಂಡಗಳು ವಾದ್ಯಗೋಷ್ಠಿ ನಡೆಸಿ ಕೊಡಲಿವೆ’ ಎಂದು ಹೇಳಿದರು.ಖರ್ಚು–ವೆಚ್ಚ: ‘ಈ ಬಾರಿ ಒಟ್ಟು  ₹95 ಲಕ್ಷದಿಂದ ಒಂದು ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ.  ಒಟ್ಟು 4ರಿಂದ 4.50 ಲಕ್ಷ ವೀಕ್ಷಕರು ಭೇಟಿ ನೀಡುವ ಅಂದಾಜಿದೆ’ ಎಂದು ಅವರು ತಿಳಿಸಿದರು.ಬಿಗಿ ಭದ್ರತೆ: ಜಯನಗರ ಎಸಿಪಿ ಕಾಂತರಾಜ್‍ ಮಾತನಾಡಿ, ಎಂದಿನಂತೆ ಈ ಬಾರಿಯೂ ಭದ್ರತೆಗೆ ಆದ್ಯತೆ ನೀಡಲಾಗಿದೆ. ಹತ್ತು ದಿನಗಳ ಕಾಲವೂ 200ಕ್ಕೂ ಅಧಿಕ ಪೊಲೀಸ್‍ ಸಿಬ್ಬಂದಿಯು ವ್ಯವಸ್ಥೆಯ ಮೇಲೆ ನಿಗಾ ಇಡಲಿದ್ದಾರೆ ಎಂದರು. ‘ನಿತ್ಯ ಒಬ್ಬ ಎಸಿಪಿ, 9 ಇನ್‌ಸ್ಪೆಕ್ಟರ್‌, 20 ಎಎಸ್‌ಐ, 5 ಮಹಿಳಾ ಎಎಸ್‌ಐ, 18 ಮಹಿಳಾ ಕಾನ್‌ಸ್ಟೆಬಲ್‌, 13 ಎಸ್‌ಐ, 4 ಮಹಿಳಾ ಎಸ್‌ಐ 130 ಹೆಡ್‌ಕಾನ್‌ಸ್ಟೆಬಲ್‌, 18  ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಭದ್ರತೆ ಒದಗಿಸಲಿದ್ದಾರೆ’ ಎಂದು ತಿಳಿಸಿದರು. ‘ರಾತ್ರಿ ವೇಳೆ ಒಬ್ಬರು ಎಸ್‌ಐ, ಒಬ್ಬರು ಎಎಸ್‌ಐ, ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಆರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಲಾಲ್‌ಬಾಗ್‌ನಲ್ಲಿ ಭದ್ರತೆಗೆ ಒದಗಿಸಲಿದ್ದಾರೆ’ ಎಂದು ಹೇಳಿದರು.ಸಿ.ಸಿ.ಟಿವಿ ಕಣ್ಗಾವಲು: ಲಾಲ್‌ಬಾಗ್‌ನ ನಾಲ್ಕೂ ದ್ವಾರಗಳಲ್ಲಿ   ತಲಾ ಮೂರು ಸಿ.ಸಿ.ಟಿವಿ ಕ್ಯಾಮೆರಾ ಇರಲಿವೆ. ಗಾಜಿನ ಮನೆಯಲ್ಲಿ ನಾಲ್ಕು ಸ್ಪೀಡ್‌ ಡೋಮ್‌ ಕ್ಯಾಮೆರಾ ಸೇರಿದಂತೆ ಒಟ್ಟು 27 ಕ್ಯಾಮೆರಾ ವೀಕ್ಷಕರ ಮೇಲೆ ಹದ್ದಿನ ಕಣ್ಣಿಡಲಿವೆ.

ಮರಿಗೌಡರ ಸ್ಮರಣೆ: ಮರಿಗೌಡರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಲಾಲ್‌ಬಾಗ್‌ನ ಮಳಿಗೆಗಳ ಪ್ರದೇಶದಲ್ಲಿ ಮರಳಿನಲ್ಲಿ ಅವರ ಶಿಲ್ಪ ಅರಳಲಿದೆ. ಮಂಡ್ಯದ ಕಲಾವಿದ ಪ್ರಶಾಂತ್ ಇದನ್ನು ರೂಪಿಸಲಿದ್ದಾರೆ. ಮರಿಗೌಡರು ನಡೆದು ಬಂದ ದಾರಿ, ತೋಟಗಾರಿಕೆ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪು, ಸಾಧನೆಗಳ ಮೇಲೆ  ಬೆಳಕು ಚೆಲ್ಲಲು ವಿಶೇಷ ಕುಟಿರ ನಿರ್ಮಾಣ.ಪುಷ್ಪದಲ್ಲಿ ಸಂಸತ್ ಭವನ: ಗಾಜಿನ ಮನೆಯಲ್ಲಿ ಈ ಬಾರಿ ಗುಲಾಬಿ ಸೇರಿದಂತೆ ವಿವಿಧ ಬಗೆಯ ಕೆಂಪು, ಕಿತ್ತಳೆ, ಬಿಳಿ ಬಣ್ಣದ ನಾಲ್ಕು ಲಕ್ಷಕ್ಕೂ ಅಧಿಕ ಪುಷ್ಟಗಳಲ್ಲಿ  27 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯ ‘ಸಂಸತ್‌ ಭವನ’ ನಿರ್ಮಾಣ ಆಗಲಿದೆ. ಇದಕ್ಕಾಗಿ ರಾಜ್ಯ ಮಾತ್ರವಲ್ಲದೇ, ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದಲೂ ಹೂವುಗಳನ್ನು  ತರಿಸಲಾಗುತ್ತಿದೆ.

32 ನೌಕರರು ಹಾಗೂ 52 ಪುಷ್ಪ ಪರಿಣಿತರು ಇದನ್ನು ರೂಪಿಸಿ, ಅದರ ಸೊಬಗು ಬಾಡದಂತೆ ಕಾಳಜಿ ವಹಿಸಲಿದ್ದಾರೆ. ತಲಾ ಐದು ದಿನಗಳಿಗೆ ಒಮ್ಮೆಯಂತೆ ಸಂಸತ್‌ ಭವನಕ್ಕೆ ಅಳವಡಿಸಿದ ಹೂವುಗಳನ್ನು ಬದಲಾಯಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.ಪ್ಲಾಸ್ಟಿಕ್‌ ಮುಕ್ತಕ್ಕೆ ಯತ್ನ: ಹಸಿರು ದಳ, ಬ್ಯೂಟಿಫುಲ್‌ ಬೆಂಗಳೂರು ಹಾಗೂ ಸ್ವಚ್ಛ ಬೆಂಗಳೂರು ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಸಹಭಾಗಿತ್ವದಲ್ಲಿ  ಲಾಲ್‌ಬಾಗ್‌ ಅನ್ನು ಪ್ಲಾಸ್ಟಿಕ್‌ ಮುಕ್ತ ಆಗಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಪ್ಲಾಸ್ಟಿಕ್‌್ ಬಳಸುವ ಮಳಿಗೆಗಳು ಹಾಗೂ ವೀಕ್ಷಕರಿಗೆ ದಂಡ ವಿಧಿಸಲು ಚಿಂತನೆ ನಡೆದಿದೆ.ಶಾಲಾ ಮಕ್ಕಳಿಗೆ ಉಚಿತ: ಆಗಸ್ಟ್‌ 11 ಹಾಗೂ 15ರಂದು  ಎರಡು ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ 10ನೇ ತರಗತಿ ಮಟ್ಟದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಮಕ್ಕಳು ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಿರಬೇಕು ಹಾಗೂ ಸಂಬಂಧಿತ ಶಾಲೆಯ ಗುರುತಿನ ಪತ್ರ ಹೊಂದಿರಬೇಕು.ವಾಹನಗಳ ಪ್ರವೇಶ, ನಿಲುಗಡೆ: ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳ ಮೂಲಕ ಯಾವುದೇ ಸಾರ್ವಜನಿಕ ವಾಹನಗಳಿಗೆ ಪ್ರವೇಶ ಇಲ್ಲ.

ಆದರೆ, ಶಾಲಾ ವಾಹನಗಳು ಲಾಲ್‌ಬಾಗ್‌ನ ಜೋಡಿ ರಸ್ತೆಯಿಂದ (ಗೇಟ್‌ ನಂ. 2) ಪ್ರವೇಶಿಸಿ ಮರಿಗೌಡ ಸ್ಮಾರಕ ಭವನದ ಬಳಿ ನಿಲುಗಡೆ ಮಾಡಬಹುದು. ಬಳಿಕ ಇದೇ ಮಾರ್ಗದಿಂದ ಹೊರ ಹೋಗಬೇಕು.ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಇರುವ ಬಹುಮಹಡಿ ನಿಲ್ದಾಣದಲ್ಲಿ ನಿಲ್ಲಿಸಬಹುದು. ಜೆ.ಸಿ.ರಸ್ತೆ ಕಡೆಯಿಂದ ಬರುವ ಜನರು,  ಮಯೂರ್‌ ರೆಸ್ಟೋರೆಂಟ್‌ ಬಳಿಯ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಇನ್ನು, ದ್ವಿಚಕ್ರ ವಾಹನಗಳನ್ನು ಲಾಲ್‌ಬಾಗ್‌ ಮುಖ್ಯ ಪ್ರವೇಶದ್ವಾರ ಮತ್ತು ಜೋಡಿ ರಸ್ತೆಯ ಪ್ರವೇಶದ್ವಾರ ನಡುವಣ ‘ಅಲ್‌–ಅಮೀನ್‌’ ಕಾಲೇಜು ಮೈದಾನದಲ್ಲಿ ನಿಲ್ಲಿಸಬಹುದು.ಸಂಚಾರ, ಸುವ್ಯವಸ್ಥೆ: ಲಾಲ್‌ಬಾಗ್‌ ಸುತ್ತಲಿನ ಪ್ರದೇಶದಲ್ಲಿ ಸುಗಮ ಸಂಚಾರ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ 8 ಜನ ಪಿಎಸ್‌ಐ ಸೇರಿದಂತೆ ಸಂಚಾರ ವಿಭಾಗದ ಒಟ್ಟು  29 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಈ ಬಾರಿಯ ವಿಶೇಷಗಳು

ಪೊಟೊನಿಯಾ ಹೂವುಗಳ ಬೃಹತ್‌ ಹೂವಿನ ಜಲಪಾತ, ತರಕಾರಿ ಹಾಗೂ ಪುಷ್ಟಗಳಲ್ಲಿ ಮೂಡಿದ ನವಿಲು, ಗಾಜಿನ ಮನೆಯ ಒಳಾಂಗಣಕ್ಕೆ ತಂಪಿನ ಕಂಪು ನೀಡಲು ಇಸ್ರೇಲ್‌ ತಂತ್ರಜ್ಞಾನ ಬಳಸಿಕೊಂಡು ಮಿಸ್ಟಿಂಗ್‌ ವ್ಯವಸ್ಥೆ (ಇದರಿಂದ ಹೂವುಗಳು ಬೇಗ ಬಾಡುವುದಿಲ್ಲ. ಜನರಿಗೂ ಮಂಜಿನ ಅನುಭವ ಸಿಗಲಿದೆ), ಸಸ್ಯ ಪ್ರೇಮಿಗಳಿಗಾಗಿ ಸಸ್ಯ ಸಂತೆ, ರಂಗು–ರಂಗಿನ ಸೇವಂತಿ ಪುಷ್ಪಗಳ ಸೊಬಗು ಹಾಗೂ ವಿವಿಧ ಬಗೆಯ ಅಪರೂಪದ ಕೀಟ ಭಕ್ಷಕ ಗಿಡಗಳು ಈ ಬಾರಿಯ ಪ್ರದರ್ಶನ ಪ್ರಮುಖ ಆಕರ್ಷಣೆಗಳು.

ಪ್ರದರ್ಶನದ ಸಮಯ

ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಲಾಲ್‌ಬಾಗ್‌ ಪ್ರವೇಶಕ್ಕೆ ಅವಕಾಶ. ಗಾಜಿನ ಮನೆ ಪ್ರವೇಶಕ್ಕೆ ಸಂಜೆ 6.30ರ ತನಕ ಮಾತ್ರ.

ಪ್ರವೇಶ ಶುಲ್ಕ

                
ಸಾಮಾನ್ಯ ದಿನ   ರಜಾ ದಿನ

ವಯಸ್ಕರು    ₹50                   ₹60ಮಕ್ಕಳು       ₹20                     ₹20

(12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.