ಬುಧವಾರ, ಜೂಲೈ 8, 2020
26 °C

ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕ ಸುರಕ್ಷಿತವಾಗಿ ಹೊರಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಯ್‌ಪುರ (ಪಿಟಿಐ): ಜಿಲ್ಲೆಯ ಝಡೋಲ್ ತಾಲ್ಲೂಕಿನ ದೋಡಾವಾಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕಳೆದ ಆರು ದಿನಗಳಿಂದ ಸಿಕ್ಕಿಬಿದ್ದಿದ್ದ ಕಾರ್ಮಿಕನನ್ನು ಬುಧವಾರ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.ಸುರಂಗದಲ್ಲಿ ಕಲ್ಲು, ಮಣ್ಣು ರಾಶಿಗಳ ಮಧ್ಯೆ ಸಿಲುಕಿದ್ದ 40 ವರ್ಷದ ನಾರಾಯಣ್ ಸಿಂಗ್ ಅವರನ್ನು ನಸುಕಿನ 3:15ರ ವೇಳೆಗೆ ಹೊರತರಲಾಯಿತು. ನಾರಾಯಣ್ ಅವರನ್ನು ರಕ್ಷಿಸುವ ಕಾರ್ಯ ಹಗಲಿರುಳು ನಡೆದಿದ್ದು, 30ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು 100ಕ್ಕೂ ಹೆಚ್ಚು ಕಾರ್ಮಿಕರು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದರು.ಆರು ದಿನಗಳಿಂದ ಸುರಂಗದಲ್ಲಿ ಸಿಲುಕಿಕೊಂಡು ದಿಗ್ಭ್ರಾಂತರಾಗಿದ್ದ ಸಿಂಗ್, ಅದರಿಂದ ಹೊರಗೆ ಕರೆತಂದ ಮೇಲೆ ಯಾರೊಂದಿಗೂ ಮಾತನಾಡಲಿಲ್ಲ. ವೈದ್ಯರ ತಂಡವೊಂದು ಅವರನ್ನು ಪರೀಕ್ಷಿಸಿತು. ನಂತರ ಸಿಂಗ್ ಅವರನ್ನು ಅವರ ಸಹೋದರ ಮಮ್‌ರಾಜ್ ಮತ್ತು ಕೆಲವು ಎಂಜಿನಿಯರ್‌ಗಳು ಸುರಂಗದ ಮುಖ್ಯ ಹಾದಿಯಿಂದ ಹೊರಗೆ ಕರೆತಂದರು. ಆಗ ಅವರನ್ನು ಗ್ರಾಮದ ಮುಖ್ಯಸ್ಥ ಮತ್ತು ಮಾಧ್ಯಮದವರು ಎದುರುಗೊಂಡರು.ಉದಯ್‌ಪುರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯಡಿಯಲ್ಲಿ ದೋಡಾವಾಲಿ ಮತ್ತು ರಾಯ್‌ತಾ ಗ್ರಾಮಗಳ ನಡುವೆ 3.3 ಕಿ.ಮೀ. ಉದ್ದದ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ನಾರಾಯಣ್ ಸಿಂಗ್ ಕೆಲಸ ಮಾಡುತ್ತಿದ್ದರು.ಕಳೆದ ಗುರುವಾರ ಸುರಂಗದಲ್ಲಿ ಕಲ್ಲು- ಮಣ್ಣು ಕುಸಿದಾಗ ಅವರು ಸುರಂಗದ ಒಂದು ಬದಿಯಲ್ಲಿ ಸಿಲುಕಿಕೊಂಡರು. ಅವರನ್ನು ರಕ್ಷಿಸುವ ಕಾರ್ಯ ಶುಕ್ರವಾರವೇ ಆರಂಭವಾಯಿತು.ದೆಹಲಿಯಿಂದ ತರಲಾದ ವಿಶೇಷವಾದ ಹೈಡ್ರಾಲಿಕ್ ಯಂತ್ರದ ಮೂಲಕ ಸುರಂಗದ ಮೇಲ್ಭಾಗದಲ್ಲಿ 22 ಮೀಟರ್ ಆಳಕ್ಕೆ ಕೊರೆದು ಅವರನ್ನು ರಕ್ಷಿಸಲಾಯಿತು.ಸುರಂಗದೊಳಗೆ ನಳಿಕೆಯೊಂದನ್ನು ಬಿಟ್ಟು ಅವರಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ಪೈಪ್ ಮೂಲಕ ಆಹಾರ ಮತ್ತು ನೀರನ್ನು ಅವರಿಗೆ ಒದಗಿಸಲಾಗುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.