ಸೋಮವಾರ, ಸೆಪ್ಟೆಂಬರ್ 28, 2020
25 °C

ಸುರಂಗ ಪತ್ತೆ: ಭಾರತ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಂಗ ಪತ್ತೆ: ಭಾರತ ಪ್ರತಿಭಟನೆ

ಜಮ್ಮು  (ಪಿಟಿಐ): ಇಲ್ಲಿನ ಸಾಂಬಾ ವಲಯದ ಭಾರತ ಮತ್ತು ಪಾಕಿಸ್ತಾನ ಗಡಿಪ್ರದೇಶದಲ್ಲಿ ಸುರಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಳವಳಗೊಂಡಿರುವ ಭಾರತ, ಮಂಗಳವಾರ ಪಾಕಿಸ್ತಾನಕ್ಕೆ ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.ಸುರಂಗ ಮಾರ್ಗ ಪತ್ತೆಯಾಗಿರುವುದಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಹಿರಿಯ ಅಧಿಕಾರಿಗಳು `ಪಾಕಿಸ್ತಾನ್ ರೇಂಜರ್ಸ್‌~ನ ಅಧಿಕಾರಿಗಳಿಗೆ ಮಂಗಳವಾರ ಮಧ್ಯಾಹ್ನ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ. ಜಮ್ಮು ಜಿಲ್ಲೆಯ ಆರ್.ಎಸ್.ಪುರ ವಲಯದಲ್ಲಿ ನಡೆದ ಉಭಯ ದೇಶಗಳ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಸಾಕ್ಷ್ಯಾಧಾರಗಳ ಸಹಿತ  ಪ್ರತಿಭಟನಾ ಪತ್ರವನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಿಎಸ್‌ಎಫ್ ಹಿರಿಯ ಅಧಿಕಾರಿಗಳು ಮತ್ತು `ಪಾಕಿಸ್ತಾನ್ ರೇಂಜರ್ಸ್‌~ ಅಧಿಕಾರಿಗಳ ನಡುವೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಡೆದ ಸಭೆಯಲ್ಲಿ ಪಾಕಿಸ್ತಾನದ ಗಡಿಯಿಂದ ನೇರವಾಗಿ ಸಾಂಬಾ ವಲಯದ ಚಿಚ್ವಾಲಾ ಗಡಿ ಗ್ರಾಮಕ್ಕೆ ಸುರಂಗ ತೋಡಿದ್ದರ ಚಿತ್ರವನ್ನೂ ಸಾಕ್ಷ್ಯವಾಗಿ ನೀಡಲಾಯಿತು ಎಂದೂ ಹೇಳಿದರು.ಭಾರತ- ಪಾಕಿಸ್ತಾನ ಗಡಿಯಲ್ಲಿ 25 ಅಡಿ ಆಳದಲ್ಲಿ ತೋಡಿದ ಸುಮಾರು 400 ಮೀ. ಉದ್ದದ ಸುರಂಗವನ್ನು ಬಿಎಸ್‌ಎಫ್ ಸಿಬ್ಬಂದಿಗಳು ಜುಲೈ 28ರಂದು ಪತ್ತೆ ಹಚ್ಚಿದ್ದರು.ಚಿಲ್ಯಾರಿ ಪಹರೆ ಕೇಂದ್ರದ ಬಳಿಯ ಎರಡು ಮೂರು ಸ್ಥಳಗಳಲ್ಲಿ ಭೂಮಿಯನ್ನು ಅಗೆದ ವೇಳೆ ಈ ಸುರಂಗ ಪತ್ತೆಯಾಗಿತ್ತು. 3್ಡ3 ವ್ಯಾಸದ  ಈ ಸುರಂಗದಲ್ಲಿ 2 ಇಂಚಿನ ಕೊಳವೆಗಳ ಮೂಲಕ ಗಾಳಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು.ಸೇನಾ ನೆರವು ಕೋರಿಕೆ: ಗಡಿಯಲ್ಲಿ ಪತ್ತೆಯಾದ ಸುರಂಗದ ರಹಸ್ಯವನ್ನು ಭೇದಿಸುವಲ್ಲಿ ಬಿಎಸ್‌ಎಫ್ , ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ಹಾಗೂ ಇತರ ಸಂಸ್ಥೆಗಳ ನೆರವನ್ನು ಕೋರಿದೆ.  ಜೊತೆಗೆ ಇಸ್ರೊದ ನೆರವನ್ನೂ ಕೋರಲಾಗುವುದು ಎಂದು ನವದೆಹಲಿಯಲ್ಲಿರುವ ಬಿಎಸ್‌ಎಫ್ ಕೇಂದ್ರ ಕಚೇರಿಯ ಐಜಿಪಿಯವರಾದ ಜಿ.ಎಸ್.ಕೆ. ಮಿಶ್ರಾ ವರದಿಗಾರರಿಗೆ ತಿಳಿಸಿದರು.`ಸುರಂಗವನ್ನು ಇನ್ನಷ್ಟು ದೂರಕ್ಕೆ  ಅಗೆಯುತ್ತಿದ್ದು ಅದು ಎಲ್ಲಿಗೆ ತಲುಪುತ್ತದೆ ಹಾಗೂ ಅದರ ಆರಂಭ ಎಲ್ಲಿ ಎಂಬುದು ನಮಗೆ ತಿಳಿದಿಲ್ಲ. ಅದು ಗಡಿಗೆ ನೇರವಾಗಿ ಸಾಗಿದ್ದು ಇದುವರೆಗೆ ನಾವು ಸುರಂಗದ ಮಧ್ಯಭಾಗಕ್ಕೆ ಮಾತ್ರ ಬಂದ್ದ್ದಿದೇವೆ. ಭಾರತದೊಳಕ್ಕೆ ನುಸುಳಲು ಮತ್ತು ಕಳ್ಳಸಾಗಣೆ ನಡೆಸಲು ಇದನ್ನು ತೋಡಿರಬಹುದು~ ಎಂದು ಅವರು ಸಂಶಯ ವ್ಯಕ್ತಪಡಿಸಿದರು.ಸುರಂಗದ ಪತ್ತೆಯ ಹಿನ್ನೆಲೆಯಲ್ಲಿ ಸುಮಾರು 2000ದಷ್ಟು ಜನಸಂಖ್ಯೆ ಹೊಂದಿರುವ ಚಚ್ವಾಲಾ ಗ್ರಾಮದ ಜನರು ಭೀತಿಗೊಳಗಾಗಿದ್ದಾರೆ. ಚಚ್ವಾಲಾ ಜಮ್ಮು ನಗರದಿಂದ 65 ಕಿ. ಮೀ. ದೂರ ಹಾಗೂ ಪಾಕಿಸ್ತಾನ ಗಡಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ.ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದ್ದ ವೇಳೆಯಲ್ಲಾಗಲಿ ಅಥವಾ ಗಡಿ ಕಾದಾಟ ತೀವ್ರ ಸ್ವರೂಪ ಪಡೆದಾಗಲೂ ಇಂತಹ ಸುರಂಗವನ್ನು ಕಂಡಿರಲಿಲ್ಲ ಎಂದು ಗ್ರಾಮಸ್ಥರಾದ ಪರ್ವೀನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.ಕಳವಳ: ಭಾರತದ ಗಡಿಯಲ್ಲಿ ಸುರಂಗ ಪತ್ತೆಯಾಗಿರುವುದು ಕಳವಳಕಾರಿ ಸಂಗತಿ ಎಂದು ತಿಳಿಸಿದ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಸಮಸ್ಯೆಯನ್ನು ಶೀಘ್ರದಲ್ಲಿಯೇ ಪಾಕಿಸ್ತಾನದ ಗಮನಕ್ಕೆ ತರಲಾಗುವುದು ಎಂದರು.`ಇದೊಂದು ಕಳವಳಕಾರಿ ಸಂಗತಿಯಾಗಿದ್ದು ಗೃಹ, ರಕ್ಷಣೆ ಹಾಗೂ ವಿದೇಶ ವ್ಯವಹಾರ ಸಚಿವಾಲಯಗಳ ಉನ್ನತಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದಲ್ಲದೆ ಸೂಕ್ತ ಉತ್ತರದೊಂದಿಗೆ ಸೂಕ್ತವಾದ ಮಾರ್ಗದಲ್ಲಿ ಪಾಕಿಸ್ತಾನದ ಗಮನಕ್ಕೆ ತರಲಾಗುವುದು ಎಂದರು.ಸುರಂಗ ಪತ್ತೆಹಚ್ಚಿದ ಗಡಿ ಭದ್ರತಾ ಪಡೆಗಳ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಇಂಥದ್ದೇ ಒಂದು ಸುರಂಗ ಹಿಂದೆ ಗಡಿಯಲ್ಲಿ ಪತ್ತೆಯಾಗಿತ್ತು ಎಂದರು.ಪ್ಯಾಂಥರ್ಸ್‌ ಪಕ್ಷ ಒತ್ತಾಯ:  ಸಾಂಬಾ ವಲಯದಲ್ಲಿ ಸುರಂಗ ಪತ್ತೆಯಾದ ಹಿನ್ನೆಲೆಯಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಹಾಗೂ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅಧಿಕಾರವನ್ನು ವಾಪಸ್ ಪಡೆಯಬೇಕೆನ್ನುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬೇಡಿಕೆಗೆ  ಕೇಂದ್ರ ಸರ್ಕಾರ ಮಣಿಯಬಾರದು ಎಂದು ಜಮ್ಮ ಮತ್ತು ಕಾಶ್ಮೀರ ಪ್ಯಾಂಥರ್ಸ್‌ ಪಕ್ಷ ಒತ್ತಾಯಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.