5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಸುರಕ್ಷತೆಗೆ ಆದ್ಯತೆ ಸಿಗಲಿ

Published:
Updated:

ಗತಿಗೆಟ್ಟ ರಸ್ತೆಗಳು, ಹದಗೆಟ್ಟ ವಾಹನಗಳು, ಚಾಲಕರ ತಪ್ಪುಗಳು, ಸಾರಿಗೆ ಇಲಾಖೆಯ ಭ್ರಷ್ಟತೆ ಎಲ್ಲವೂ ಸೇರಿಕೊಂಡು ರಸ್ತೆ ಪ್ರಯಾಣ­ವೆನ್ನುವುದು ಹಲವರ ಪಾಲಿಗೆ ಅಂತಿಮ ಪಯಣ ಆಗುತ್ತಿದೆ. ಇವೆಲ್ಲವೂ ನಿವಾರಿಸಬಹುದಾದ ಕಾರಣಗಳು ಮತ್ತು ಅಪಘಾತಗಳು ಎಂದು ಪ್ರತೀಬಾರಿ ಅನ್ನಿಸುತ್ತದೆ. ಆದರೆ ಅವನ್ನು ಸರಿಪಡಿಸುವ ಪ್ರಯತ್ನ ಮಾತ್ರ ಎಲ್ಲೂ ಕಾಣುತ್ತಿಲ್ಲ.  ಹಿರಿಯೂರು ಬಳಿ ಖಾಸಗಿ ಬಸ್‌ಗೆ ಹೊತ್ತಿಕೊಂಡ ಬೆಂಕಿ, ಬೈಲಹೊಂಗಲ ಬಳಿ ಹಳ್ಳಕ್ಕೆ ಉರುಳಿದ ವಾಹನ ಮತ್ತು ಹುಬ್ಬಳ್ಳಿ ಬಳಿ ಜೀಪಿಗೆ ಡಿಕ್ಕಿಯಾದ ರೈಲು – ಹೀಗೆ ರಸ್ತೆಗಳಲ್ಲಿ ಅಮಾಯಕ ಪ್ರಯಾಣಿಕರ ಪ್ರಾಣಬಲಿ ಆಗಿದೆ. ಕಳೆದ ಐದಾರು ತಿಂಗಳ ಅವಧಿಯಲ್ಲಿ ನಡೆದ ಬಸ್ ಅಪಘಾತಗಳಂತೂ ಸಂಬಂಧಪಟ್ಟವರನ್ನು ಬಿಟ್ಟು ಎಲ್ಲರಲ್ಲೂ ದಿಗಿಲು ಹುಟ್ಟಿಸುತ್ತಿವೆ. ದೇಶದ ಅಭಿವೃದ್ಧಿ ಮಂತ್ರಗಳಲ್ಲಿ ಒಳ್ಳೆಯ ರಸ್ತೆ ನಿರ್ಮಾಣವೂ ಸೇರಿದ್ದು, ಸಾವಿರಾರು  ಕೋಟಿ ರೂಪಾಯಿ ಅದಕ್ಕೆ ಖರ್ಚಾಗುತ್ತಿದೆ, ಆದರೆ ಬಹುತೇಕ ರಸ್ತೆಗಳು ಅವ್ಯವಸ್ಥೆಗೆ ಮಾತ್ರ ಮಾದರಿಯಾಗಿವೆ.ಸರ್ಕಾರಿ ಸಾರಿಗೆ ಸಂಸ್ಥೆಗಳು ಮತ್ತು ಖಾಸಗಿ ಬಸ್‌ ಕಂಪೆನಿಗಳಿಗೆ ಅತ್ಯಾಧುನಿಕ ವಾಹನಗಳು ಸೇರ್ಪಡೆಯಾಗುತ್ತಿದ್ದರೂ ಅವು­ಗಳಲ್ಲಿ ಸುರಕ್ಷತೆಗೆ ಆದ್ಯತೆಯೇ ಇಲ್ಲ. ಚಾಲಕರಿಗೆ ಸರಿಯಾದ ತರಬೇತಿ ಮತ್ತು ಸಾಮರ್ಥ್ಯಕ್ಕೆ ಗಮನ ಇಲ್ಲದೆ ಅವರು ರಸ್ತೆ ದುರಂತಗಳಲ್ಲಿ ಖಳ­ನಾಯಕರ ಪಾತ್ರ ವಹಿಸುವುದು ಸಾಮಾನ್ಯ­ವಾಗುತ್ತಿದೆ. ಇನ್ನು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕೆಂಪು ದೀಪವೂ ಇಲ್ಲ, ಬ್ರೇಕೂ ಇಲ್ಲ ಎನ್ನುವುದು ಜನರಿಗೆ ಗೊತ್ತಿರುವ ಸತ್ಯ. ರಾಜ್ಯದಲ್ಲಿ ಒಟ್ಟು ‘ರಸ್ತೆ ಸಾರಿಗೆ’ ಎನ್ನುವುದೇ ನಿಯಂತ್ರಣ ಕಳೆದುಕೊಂಡ ಗಾಡಿಯಂತಾಗಿದೆ.ಪ್ರತಿಯೊಂದು ಅಪಘಾತವೂ ನಮ್ಮ ಆಡಳಿತ ವ್ಯವಸ್ಥೆಯನ್ನು ಅಲುಗಾಡಿಸ­ಬೇಕಿತ್ತು. ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಹೊತ್ತಿಕೊಂಡು ಹಲವರನ್ನು ಜೀವಂತ ಸುಡುತ್ತಿರುವ ಬೆಂಕಿ, ಸುರಕ್ಷತೆಯ ಕ್ರಮಗಳ ಬಗ್ಗೆ ಬೆಳಕು ಮೂಡಿಸಬೇಕಿತ್ತು. ವಾಹನಗಳನ್ನು ಎಳೆದುಕೊಳ್ಳುವ ಹಳ್ಳಗಳು ರಸ್ತೆ ನಿರ್ವಹಣೆ ಹಳ್ಳ ಹಿಡಿಯದಂತೆ ಎಚ್ಚರಿಸಬೇಕಿತ್ತು. ಆದರೆ ಸಂಬಂಧಿಸಿದ ಇಲಾಖೆಗಳಿಗೆ ಯಾವ ದುರಂತವೂ ಪಾಠ ಕಲಿಸುವುದಿಲ್ಲ. ಅಪಘಾತ ಸಂಭವಿಸಿದಾಗ ತಾಂತ್ರಿಕ ದೋಷಗಳ ಪತ್ತೆ ಸೇರಿ ಸಮಗ್ರ ತನಿಖೆ ಆಗುವುದು ಕಡ್ಡಾಯವಾಗಬೇಕು.  ‘ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಚಿವರು ಮತ್ತು ಉನ್ನತ ಅಧಿಕಾರಿಗಳು ನೀಡುವ ಹೇಳಿಕೆಗಳಿಗೆ ನಿಜಕ್ಕೂ ವಾಹನಗಳು ಬಿಡುವ ಹೊಗೆಗಿಂತ ಹೆಚ್ಚು ಬೆಲೆ ಇಲ್ಲ. ರಸ್ತೆಗಳ  ಅವ್ಯವಸ್ಥೆ ಸರಿಪಡಿಸುವುದು, ವಾಹನ­ಗಳ ಸುಸ್ಥಿತಿ ಖಾತರಿಪಡಿಸುವುದು, ಬಹಳ ಮುಖ್ಯವಾಗಿ ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳ ಭ್ರಷ್ಟಾಚಾರ ನಿಯಂತ್ರಿ­ಸುವುದು ಇವೆಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲೇಬೇಕು.ಇಲ್ಲದಿದ್ದರೆ, ‘ದಾರಿ ಯಾವುದಯ್ಯಾ ಸುರಕ್ಷತೆಗೆ?’ ಎಂದು ಪ್ರಯಾಣಿಕರು ಹಲುಬ­ಬೇಕಾಗುತ್ತದೆ.  ಜನ ತಮ್ಮ ಕೆಲಸಕಾರ್ಯಗಳಿಗಾಗಿ ಬೇಕಾದ ಸ್ಥಳ­ಗಳಿಗೆ ನೆಮ್ಮದಿಯಿಂದ ಪ್ರಯಾಣ ಮಾಡುವಂತಾಗಲಿ. ರಸ್ತೆ ಪ್ರಯಾಣ­ವೆನ್ನು­ವುದು ಅವರಿಗೆ ಪರಲೋಕಕ್ಕೆ ಕಾಯ್ದಿರಿಸಿದ ಮುಂಗಡ ಟಿಕೆಟ್ ಆಗಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry