ಸುರಕ್ಷತೆಗೆ ಗಮನ ಮುಖ್ಯ

7

ಸುರಕ್ಷತೆಗೆ ಗಮನ ಮುಖ್ಯ

Published:
Updated:

ಒಳ ಚರಂಡಿಗಳನ್ನು ಶುಚಿಗೊಳಿಸುವ ಕೆಲಸವನ್ನು ಜನರಿಂದ ಮಾಡಿಸದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಯಂತ್ರಗಳನ್ನು ಬಳಸಿಕೊಂಡು ಒಳಚರಂಡಿಗಳನ್ನು ಶುಚಿಗೊಳಿಸಬೇಕು ಎಂಬುದು ಹೈಕೋರ್ಟಿನ ಆಶಯ.ಒಳ ಚರಂಡಿ ವ್ಯವಸ್ಥೆ ಇರುವ ಬಹುತೇಕ ನಗರಗಳಲ್ಲಿ ಯಂತ್ರಗಳನ್ನು ಬಳಸಿ ಶುಚಿಗೊಳಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದರೆ ಯಂತ್ರಗಳಿಂದಲೇ ಎಲ್ಲವನ್ನೂ ಮಾಡಲಾಗದು.

 

ಸಣ್ಣ ಪುಟ್ಟ ದುರಸ್ತಿಗಳು ಮತ್ತು ಯಂತ್ರದಿಂದ ಮಾಡಲಾಗದ ಕೆಲಸಗಳನ್ನು ನಿರ್ವಹಿಸಲು ಪೌರ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳು ನೇಮಕ ಮಾಡಿಕೊಂಡಿವೆ. ಈ ಸಿಬ್ಬಂದಿ ವರ್ಷವಿಡೀ ಚರಂಡಿ ದುರಸ್ತಿ ಕಾರ್ಯವನ್ನು  ನಿಭಾಯಿಸುತ್ತಾರೆ. ಆದರೆ ಈ ಸಿಬ್ಬಂದಿಗೆ ಅಗತ್ಯವಾದ ಕೃತಕ ಉಸಿರಾಟದ ಪರಿಕರಗಳು, ಕೈಗವಸುಗಳು ಇತ್ಯಾದಿಗಳನ್ನು ಸ್ಥಳೀಯ ಸಂಸ್ಥೆಗಳು ಪೂರೈಸುತ್ತಿಲ್ಲ.

 

ಹೀಗಾಗಿ ಪೌರಕಾರ್ಮಿಕರು ಒಳಚರಂಡಿಯ ಗುಂಡಿಗಳಿಗೆ ಇಳಿದು ಶುಚಿಗೊಳಿಸುವ ಕೆಲಸ ಮಾಡುತ್ತಿರುವಾಗ ಆಮ್ಲಜನಕದ ಕೊರತೆಯಿಂದ ಉಸಿರುಕಟ್ಟಿ ಮೃತಪಟ್ಟ ಪ್ರಕರಣಗಳೂ ಇವೆ. ಹೀಗೆ ಸತ್ತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳು ವಿಳಂಬ ಧೋರಣೆ ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿಯೇ ಹೈಕೋರ್ಟ್ ಚರಂಡಿ ಶುಚಿಗೊಳಿಸುವ ಕೆಲಸಕ್ಕೆ ಜನರನ್ನು ಬಳಸುವುದು ಬೇಡವೆಂದು ಹೇಳಿದೆ.ಅದೇನೇ ಇರಲಿ, ಒಳಚರಂಡಿ ಶುಚಿಗೊಳಿಸುವ ಕೆಲಸ ಮಾಡುವ ಸಿಬ್ಬಂದಿಯ ಜೀವವೂ ಅಮೂಲ್ಯ. ಅವರಿಗೆ ಅಗತ್ಯವಾದ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸಬೇಕು. ಕಾರ್ಯನಿರತ ಪೌರ ಕಾರ್ಮಿಕರ ಜೀವಕ್ಕೆ ರಕ್ಷಣೆ ಒದಗಿಸುವುದು ಸ್ಥಳೀಯ ಸಂಸ್ಥೆಗಳ ಹೊಣೆ.ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಲವನ್ನು  ಹೊತ್ತು ಹೊರ ಸಾಗಿಸುವ ಹೀನಾಯ ಪದ್ಧತಿ ಇಂದಿಗೂ ಜಾರಿಯಲ್ಲಿದೆ.ಶತಮಾನಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಒಂದು ವರ್ಗವೇ ಇದೆ.  ತಲೆಯ ಮೇಲೆ ಮಲ ಹೊತ್ತು ಸಾಗಿಸುವ ಪದ್ಧತಿಯನ್ನು ರಾಜ್ಯ ಸರ್ಕಾರ 1970ರ ದಶಕದಲ್ಲೇ ನಿಷೇಧಿಸಿದ್ದರೂ ಅದನ್ನೇ ಅವಲಂಬಿಸಿಯೇ ಬದುಕು ರೂಪಿಸಿಕೊಂಡಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ಒದಗಿಸಲು ಇದುವರೆಗಿನ ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗಿಲ್ಲ.

 

ತಲೆಯ ಮೇಲೆ ಮಲ ಹೊರುವ ವ್ಯವಸ್ಥೆಯೇ ಅಮಾನವೀಯವಾದುದು. ಈ ಕೆಲಸ ಮಾಡುತ್ತಿುವ ಕುಟುಂಬಗಳ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಾಜ್ಯದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಉತ್ತೇಜನ ನೀಡುವ ಮೂಲಕ ಈ ಪದ್ಧತಿಯನ್ನು ಕೊನೆಗಾಣಿಸಲು ಸಾಧ್ಯವಿದೆ. ಒಂದು ವರ್ಗದ ಜನರೇ ನೈರ್ಮಲ್ಯದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬ ಭಾವನೆ ಸರ್ಕಾರ ಹಾಗೂ ಜನರಲ್ಲಿದೆ.

 ನೈರ್ಮಲ್ಯದ ಕೆಲಸಗಳನ್ನು ಮಾಡುವ ಸಿಬ್ಬಂದಿಗೆ ಆಕರ್ಷಕ ವೇತನ, ಸುರಕ್ಷಿತ ವ್ಯವಸ್ಥೆ ಹಾಗೂ ಇತರ ಸೌಲಭ್ಯಗಳನ್ನು ನೀಡುವ ಮೂಲಕ ಈ ಕೆಲಸಕ್ಕೆ ಇತರ ವರ್ಗಗಳ ಜನರನ್ನು ಆಕರ್ಷಿಸಬೇಕು. ನೈರ್ಮಲ್ಯದ ಕೆಲಸಗಳನ್ನು ಮಾಡುವವರನ್ನು ಹೀನಾಯ ದೃಷ್ಟಿಯಿಂದ ನೋಡುವ ಧೋರಣೆಯೂ ಬದಲಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry