ಸುರಕ್ಷತೆಗೆ ಮಕ್ಕಳು, ಬಾಣಂತಿಯರ ಪರದಾಟ

7

ಸುರಕ್ಷತೆಗೆ ಮಕ್ಕಳು, ಬಾಣಂತಿಯರ ಪರದಾಟ

Published:
Updated:

 ತಿ.ನರಸೀಪುರ: ಪಟ್ಟಣದ ಸುತ್ತಮುತ್ತ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ, ಇಲ್ಲಿನ ದಾವಣಗೆರೆ ಕಾಲೊನಿಯ ಗುಡಿಸಲುಗಳಿಗೆ ನೀರು ನುಗ್ಗಿ, ಜನಜೀವನ ತೀವ್ರ ಅಸ್ತವ್ಯಸ್ತವಾಯಿತು.ಏಕಾಏಕಿ ಗುಡಿಸಲಿನೊಳಗೇ ನೀರು ನುಗ್ಗಿದ್ದರಿಂದ ಗುಡಿಸಲು ನಿವಾಸಿಗಳು ತಮ್ಮ ದಿನಬಳಕೆ ವಸ್ತುಗಳು, ಆಹಾರ ಧಾನ್ಯಗಳು, ಬಟ್ಟೆ-ಬರೆಗಳನ್ನು ಹೊರಗೆ ತಂದಿಟ್ಟುಕೊಂಡರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಅಕ್ಕಪಕ್ಕದ ಸುರಕ್ಷಿತ ಸ್ಥಳಗಳಿಗೆ ಹೋಗಿ ಆಶ್ರಯ ಪಡೆಯಬೇಕಾಯಿತು.ಗುಡುಗು, ಮಿಂಚು ಮಿಶ್ರಿತ ಮಳೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು. ಪಟ್ಟಣದ ಎಲ್ಲ ಚರಂಡಿಗಳೂ ಭರ್ತಿಯಾಗಿ ರಸ್ತೆಯಲ್ಲೆಲ್ಲ ಕೊಳಚೆ ನೀರು ಹರಿಯಿತು. ಪಟ್ಟಣ ಎಲ್ಲ ಚರಂಡಿಗಳ ನೀರೂ ದಾವಣಗೆರೆ ಕಾಲೊನಿಯ ಸಮೀಪದಲ್ಲಿನ ಮುಖ್ಯ ಚರಂಡಿಗೆ ಸೇರುತ್ತದೆ.ಇದರಿಂದ ದೊಡ್ಡ ಚರಂಡಿ ಸಂಪೂರ್ಣ ಬಂದ್ ಆಗಿ ನೀರು ಹೊರಚಿಮ್ಮಿತು. ರಸ್ತೆ ತುದಿಯಲ್ಲಿನ ಕುಂಚಿ ಕೊರಚರ (ದಾವಣಗೆರೆ) ಕಾಲೊನಿಯ ಸಣ್ಣಸಣ್ಣ ಗುಡಿಸಲುಗಳಿಗೆ ನುಗ್ಗಿತು. ಇದರಿಂದ ಕಂಗಲಾದ ನಿವಾಸಿಗಳು ದಾರಿ ಕಾಣದೇ ಸುರಿಯುವ ಮಳೆಯಲ್ಲೇ ಮಕ್ಕಳನ್ನು ಎತ್ತಿಕೊಂಡು ರಸ್ತೆಯ ಮತ್ತೊಂದು ಬದಿಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಆಶ್ರಯ ಪಡೆದರು. ಇಡೀ ರಾತ್ರಿ ತಮ್ಮ ಮಕ್ಕಳು, ವಸ್ತುಗಳನ್ನು ರಕ್ಷಣೆ ಮಾಡುವುದರಲ್ಲೇ ಕಳೆದರು.`20 ವರ್ಷಗಳಿಂದಲೂ ಇಲ್ಲಿ ವಾಸವಿದ್ದರೂ ನಮ್ಮ ಬದುಕು ಸರಿಯಾಗಲಿಲ್ಲ. ಮಳೆ ಬಂದರೆ ಕೊಳಚೆ ನೀರು ನಮ್ಮ ಮನೆಗಳಿಗೆ ಬರುತ್ತದೆ. ನಮಗೆ ಸೂಕ್ತ ವಸತಿ ಸೌಕರ್ಯ ಇಲ್ಲ. ಈಗ ಗುಡಿಸಲಿನೊಳಗೆ ಕೊಳಚೆ ನೀರು ತುಂಬಿಕೊಂಡರೆ ಎಲ್ಲಿಗೆ ಹೋಗುವುದು? ಮಕ್ಕಳನ್ನು ಹೇಗೆ ರಕ್ಷಿಸುವುದು? ಸೋಮವಾರ ರಾತ್ರಿ ಮಳೆ ಆರಂಭವಾದಾಗ ಕಾಲೊನಿಯ ಬಾಣಂತಿಯರು ಹಾಗೂ ಹಸುಗೂಸುಗಳನ್ನು ಸುರಕ್ಷಿತವಾಗಿ ಇಡಲು ಪರದಾಡಬೇಕಾಯಿತು. ಒಂದು ಸಣ್ಣ ಸೂರು ನೀಡಿದರೂ ನಮ್ಮ ಬದುಕು ಹಸನಾಗುತ್ತದೆ. ಆದರೆ, ಪಟ್ಟಣ ಪಂಚಾಯಿತಿ ಈವರೆಗೂ ಮನಸು ಮಾಡಿಲ್ಲ~ ಎಂಬುದು ಇಲ್ಲಿನ ನಿವಾಸಿಗಳ ಅಳಲು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry