ಸುರಕ್ಷಾ ಕ್ರಮ: ವರದಿ ಸಲ್ಲಿಸಲು ದೇವೇಗೌಡ ಸೂಚನೆ

7

ಸುರಕ್ಷಾ ಕ್ರಮ: ವರದಿ ಸಲ್ಲಿಸಲು ದೇವೇಗೌಡ ಸೂಚನೆ

Published:
Updated:

ಹಾಸನ: ಹಿರೀಸಾವೆಯಿಂದ ಹಾಸನವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ (75) ಕೈಗೊಳ್ಳಬೇಕಾಗಿರುವ ಸುರಕ್ಷಾ ಕ್ರಮಗಳ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸುವಂತೆ ಮಾಜಿ ಪ್ರಧಾನಿ, ಸಂಸದ ಎಚ್‌.ಡಿ. ದೇವೇಗೌಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸುರೇಂದ್ರ ಕುಮಾರ್‌ ಅವರಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ -75ರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.‘ಹೆದ್ದಾರಿಯಲ್ಲಿ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು. ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ನೀವು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ ಸಮಗ್ರ ವರದಿಯೊಂದನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೆ ಸಚಿವರನ್ನು ಭೇಟಿಮಾಡಿ ಅದಕ್ಕೆ ಬೇಕಾದ ಹಣ ಮಂಜೂರು ಮಾಡಲು ನಾನು ಒತ್ತಾಯ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.ಹಾಸನ ಬಿ.ಸಿ. ರೋಡ್‌ ರಸ್ತೆ ಚತುಷ್ಪಥ ಯೋಜನೆ ಬಗ್ಗೆ ಸಭೆಗೆ ಮಾಹಿತಿ ನೀಡಿದ ಸುರೇಂದ್ರ ಕುಮಾರ್‌, ‘ಇಲ್ಲಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ದ್ವಿಪಥ ಸುರಂಗ ಮಾರ್ಗ ಮಾಡಬೇಕಾದರೆ 2,200 ಕೋಟಿ ಮತ್ತು ಚತುಷ್ಪಥ ಮಾಡಬೇಕಿದ್ದರೆ 3,200 ಕೋಟಿ ರೂಪಾಯಿ ವೆಚ್ಚ ಬರಬಹುದು ಎಂದು ಅಂದಾಜಿಸಲಾಗಿದೆ.ಇದರ ಹೊರತಾಗಿ ಇರುವ ರಸ್ತೆಯನ್ನೇ ಅಗಲಗೊಳಿಸಿ ಚತುಷ್ಪಥವಾಗಿ ಪರಿವರ್ತಿಸುವ ವಿಸ್ತೃತ ವದಿಯೊಂದನ್ನು ನಾವು ತಯಾರಿಸುತ್ತಿದ್ದೇವೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಬೇಕಾಗುತ್ತದೆ. ಇರುವ ರಸ್ತೆಯನ್ನು ಅಗಲಗೊಳಿಸಿ ಕೆಲವು ಅಪಾಯಕಾರಿ ತಿರುವುಗಳಿರುವಲ್ಲಿ ಬೇರೆ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಒಟ್ಟು ಸುಮಾರು 13 ಎಕರೆ ಭೂಮಿಯನ್ನು ಕೊಡಬೇಕಾಗುತ್ತದೆ. ಇಲಾಖೆ ಇಡೀ ಯೋಜನೆಗೆ ಅನುಮತಿ ನೀಡದ ಹೊರತು ಕೆಲಸ ಆರಂಭಿಸಲು ಸಾಧ್ಯವಿಲ್ಲ ಎಂದರು.‘ಈ ಬಗ್ಗೆ ಒಂದು ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹಾಗೂ ಕೇಂದ್ರದ ಭೂಸಾರಿಗೆ ಸಚಿವರಿಗೆ ಕಳುಹಿಸಿಕೊಡಿ, ಅಲ್ಲಿ ಸಚಿವರನ್ನು ಭೇಟಿಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ’ ಎಂದು ದೇವೇಗೌಡರು ಸೂಚಿಸಿದರು.ಶಾಸಕ ಹೆಚ್.ಡಿ. ರೇವಣ್ಣ, ‘ಹಿರಿಸಾವೆ, ಶಾಂತಿಗ್ರಾಮ, ಶೆಟ್ಟಿಹಳ್ಳಿ, ಬರಗೂರು ಹ್ಯಾಂಡ್‌ಪೋಸ್ಟ್‌ಗಳಲ್ಲಿ ಹೆದ್ದಾರಿ ಅಪಾಯಕಾರಿಯಾಗಿದೆ. ತಾತ್ಕಾಲಿಕವಾಗಿ ಇಲ್ಲಿ ಸಂಚಾರ ಫಲಕಗಳನ್ನು ಹಾಕುವುದು, ರಸ್ತೆ ಉಬ್ಬು ನಿರ್ಮಿಸುವುದೇ ಮುಂತಾದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಸನ ವ್ಯಾಪ್ತಿಯಲ್ಲಿ ಇನ್ನೂ ಒಂದೆರಡು ಕಡೆ ಟ್ರಕ್‌ ನಿಲುಗಡೆ ಪ್ರದೇಶ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.ಈ ಹೆದ್ದಾರಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ  ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ‘2013ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಹೆದ್ದಾರಿಯಲ್ಲಿ ಒಟ್ಟು 309 ಅಪಘಾತಗಳು ಸಂಭವಿಸಿದ್ದು, 101 ಜನರು ಸಾವನ್ನಪ್ಪಿದ್ದಾರೆ. 482 ಮಂದಿ ಗಾಯಗೊಂಡಿದ್ದಾರೆ. ಈಚೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕರೆದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಕೆಲವು ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆವು. ಡಿಸೆಂಬರ್‌ ಅಂತ್ಯದೊಳಗೆ ಅದನ್ನು ಮಾಡುವುದಾಗಿ ಒಪ್ಪಿದ್ದರು. ಆದರೆ ಆನಿಟ್ಟಿನಲ್ಲಿ ಕೆಲಸಗಳು ಆಗಿಲ್ಲ. ಅವರು ನಮ್ಮಿಂದ ಸಹಕಾರ ನಿರೀಕ್ಷಿಸಿದರೆ ಕೊಡಲು ನಾವು ಸಿದ್ಧರಿದ್ದೇವೆ. ಆದರೆ ಜನರ ಪ್ರಾಣದ ಜೊತೆಗೆ ಚೆಲ್ಲಾಟ ನಡೆಸುವುದು ಸರಿಯಲ್ಲ’ ಎಂದರು.ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ‘ದುಡ್ಡು ಕೊಟ್ಟು ಪ್ರಯಾಣಿಸುವ ಜನರಿಗೆ ಸುರಕ್ಷಿತ ರಸ್ತೆ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ, ಆ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಜೊತೆಗೆ ಟೋಲ್‌ ಸಂಗ್ರಹ ಕೇಂದ್ರಗಳನ್ನೂ ಸರಿಯಾಗಿ ನಡೆಸದೆ ಜನರು 10–15 ನಿಮಿಷ ಕಾಯಬೇಕಾಗಿ ಬರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಎಲ್ ಅಂಡ್ ಟಿ. ಸಂಸ್ಥೆಯ ಯೋಜನಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.ಶಾಸಕ ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಮ್‌, ಜಿಲ್ಲಾ ಪಂಚಾಯಿತಿ ಸಿಇಒ ಯು.ಪಿ. ಸಿಂಗ್‌ ಹಾಗೂ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry