ಭಾನುವಾರ, ಮೇ 9, 2021
19 °C

ಸುರಕ್ಷಾ ವಿಭಾಗ ಸುರಕ್ಷಿತ ಉದ್ಯೋಗ

ವಿನೋದ್ Updated:

ಅಕ್ಷರ ಗಾತ್ರ : | |

ಲ್ಲರೂ ವೈಟ್ ಕಾಲರ್ ಹುದ್ದೆಗಳನ್ನೇ ಬಯಸುತ್ತಾರೆ. ಆದರೆ ಅಂತಹ ಕೆಲವು ಹುದ್ದೆಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ, ವಿಪುಲ ಅವಕಾಶಗಳು ಇದ್ದರೂ ಯಾರೂ ಆ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಉದ್ಯೋಗ ಅವಕಾಶ ಇದೆ ಬನ್ನಿ ಎಂದೂ ಕರೆದರೂ ಜನ ಪ್ರಶ್ನಾರ್ಥಕವಾಗಿ ನೋಡುತ್ತಾರೆ.

ಎಲ್ಲೋ ಮೋಸ ಮಾಡಿ ಉದ್ಯೋಗಕ್ಕೆ ಸೇರಿಸಿಕೊಂಡು, ಬಳಿಕ ನಮಗೆ ಕಾಯುವ ಕೆಲಸ ಕೊಡುತ್ತಾರೆ ಎಂಬ ಅಪನಂಬಿಕೆ ಇದಕ್ಕೆ ಕಾರಣ. ಇಂತಹ ಸ್ಥಿತಿಗೆ ಕಾರಣವೂ ಇದೆ. ವೈಟ್ ಕಾಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ ಎಷ್ಟೋ ಮಂದಿಯನ್ನು ಹಲವರು ಮೋಸ ಮಾಡಿದ್ದಾರೆ. ಇದರಿಂದಾಗಿ ಅವಕಾಶ ಇದ್ದರೂ ಇಂತಹ ಕ್ಷೇತ್ರದೆಡೆಗೆ ಜನ ಹೋಗಲು ಇಚ್ಛಿಸುವುದಿಲ್ಲ. ಇದಕ್ಕೆ ಸುರಕ್ಷಾ ವಿಭಾಗ ಪ್ರಮುಖ ಉದಾಹರಣೆ.ಆರಂಭಿಕ ದಿನಗಳಲ್ಲಿ ಭಾರತೀಯ ಉದ್ಯೋಗ ಕ್ಷೇತ್ರದಲ್ಲಿ ಸುರಕ್ಷಾ ವಿಭಾಗ ಎಂಬುದೇ ಇರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ದೇಶಕ್ಕೆ ಕಾಲಿಡುತ್ತಿದ್ದಂತೆ ಇಂತಹದ್ದೊಂದು ವಿಭಾಗ ಹುಟ್ಟಿಕೊಂಡಿತು. ಕಳೆದ ಎರಡು ದಶಕಗಳಿಂದ ನಿಧಾನವಾಗಿ ಈ ವಿಭಾಗ ಬೆಳಕಿಗೆ ಬರುತ್ತಿದೆ. ಆದರೆ ಕೈಗಾರಿಕೆ, ಉದ್ಯಮಗಳಲ್ಲಿ ಸುರಕ್ಷಾ ವಿಭಾಗದ ಬಗ್ಗೆ ಜನಸಾಮಾನ್ಯರಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ. ಸುರಕ್ಷಾ ವಿಭಾಗ ಎಂದರೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ಒಳಗೊಂಡಿರುವ ವಿಭಾಗ ಎಂಬ ತಪ್ಪು ಭಾವನೆ ಇದೆ.ಸುರಕ್ಷಾ ವಿಭಾಗ ಎಂಬುದು ವೈಟ್ ಕಾಲರ್ ಉದ್ಯೋಗ. ಇಡೀ ಕೈಗಾರಿಕೆ, ಉದ್ಯಮದಲ್ಲಿ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ, ಸಂಶೋಧನೆ ನಡೆಸಿ ಕಾಲಕಾಲಕ್ಕೆ ಆಡಳಿತ ಮಂಡಳಿಗೆ ಸಲಹೆ, ಸೂಚನೆ ನೀಡುತ್ತಾ ಅವುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಈ ವಿಭಾಗದ ಉದ್ಯೋಗಿಗಳ ಮೇಲಿರುತ್ತದೆ. ಈ ಉದ್ಯೋಗಿಗಳು ನೇರವಾಗಿ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.ಕೈಗಾರಿಕೆ, ಉದ್ಯಮಗಳಲ್ಲಿ ಸುರಕ್ಷಾ ವಿಭಾಗದ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲದಿರುವುದು ಸಹ ಇಂತಹದ್ದೊಂದು ಅಪನಂಬಿಕೆಗೆ ಕಾರಣ. ಸುರಕ್ಷೆ ಎಂಬುದು ಅಪಘಾತವನ್ನು ತಡೆಯುವ ಜವಾಬ್ದಾರಿ. ವೈದ್ಯರು ನಮ್ಮ ದೇಹಾರೋಗ್ಯವನ್ನು ಹೇಗೆ ಕಾಪಾಡುತ್ತಾರೋ ಅದೇ ರೀತಿ ಉದ್ಯಮ, ಕೈಗಾರಿಕೆಗಳಲ್ಲಿ ಸುರಕ್ಷಾ ವಿಭಾಗ ಇಡೀ ಸಂಸ್ಥೆಯಲ್ಲಿ ಯಾವುದೇ ಅವಘಡ ನಡೆಯದಂತೆ ತಡೆಯುತ್ತದೆ.ಸುರಕ್ಷಾ ಅಧಿಕಾರಿ ಪ್ರಮುಖವಾಗಿ ಸಂಸ್ಥೆಯ ಎಲ್ಲ ಸ್ತರಗಳನ್ನೂ ಕೂಲಂಕಷವಾಗಿ ತಪಾಸಣೆ ನಡೆಸಬೇಕು. ಯಾವುದೇ ವಿಭಾಗದಲ್ಲಿ ಅಪಘಾತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆಯ ಮೇಲೆ ನಿಗಾ ಇಡಬೇಕು. ಉದ್ಯೋಗಿಗಳು ತಾಂತ್ರಿಕವಾಗಿ ಪರಿಣತರಾಗಿರಬೇಕು. ಸಿವಿಲ್, ಎಲೆಕ್ಟ್ರಿಕಲ್, ಅಗ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಅವರಿಗೆ ಇರಬೇಕು. ಒಂದು ವೇಳೆ ಕಂಪೆನಿಯ ಕೆಲಸ ರಾಸಾಯನಿಕ ನಿರ್ವಹಣೆ ಮಾಡುವುದಾಗಿದ್ದರೆ ಆ ರಾಸಾಯನಿಕದ ಬಗ್ಗೆ ಅರಿತಿರಬೇಕು.ಹೀಗೆ ಕಂಪೆನಿಯು ನಿರ್ವಹಿಸುತ್ತಿರುವ ಕ್ಷೇತ್ರದ ಎಲ್ಲ ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ, ಜ್ಞಾನ ಇರಬೇಕಾಗುತ್ತದೆ. ಪ್ರಸ್ತುತ ಔದ್ಯೋಗಿಕ ಕ್ಷೇತ್ರದ ಸುರಕ್ಷಾ ವಿಭಾಗದಲ್ಲಿ ಪ್ರಬಂಧಕ, ಉಪ ಮಹಾಪ್ರಬಂಧಕ, ಹಿರಿಯ ಪ್ರಬಂಧಕ, ಸಹಾಯಕ ಮೇಲ್ವಿಚಾರಕ, ಸುರಕ್ಷಾ ಸಹಾಯಕ ಎಂಬ ನಾನಾ ಹಂತದ ಉದ್ಯೋಗಗಳು ಇವೆ. ಸುರಕ್ಷಾ ಅಧಿಕಾರಿಯು ಸಂಸ್ಥೆಯ ಇತರ ವಿಭಾಗಗಳೊಂದಿಗೆ ಸಮನ್ವಯ ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ.ವಿಮಾನ ಯಾನ, ರೈಲ್ವೆ, ಜಲಸಾರಿಗೆ ಕ್ಷೇತ್ರದಲ್ಲಿ ಆರಂಭದಿಂದಲೇ ಸುರಕ್ಷಾ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಈ ಮೂರೂ ಕ್ಷೇತ್ರಗಳಲ್ಲಿ ಸುರಕ್ಷಾ ವಿಭಾಗ ಅನುಮತಿ ನೀಡದಿದ್ದರೆ ವಿಮಾನ ಹಾರುವಂತಿಲ್ಲ, ರೈಲು ಓಡುವಂತಿಲ್ಲ, ಹಡಗು ಸಮುದ್ರ ಪ್ರವೇಶಿಸುವಂತಿಲ್ಲ. ಆದರೆ ಕೈಗಾರಿಕೆ, ಉದ್ಯಮ, ಸೇವಾ ಕ್ಷೇತ್ರದಲ್ಲಿ ಮಾತ್ರ ನಿಧಾನ ಗತಿಯಲ್ಲಿ ಸುರಕ್ಷಾ ವಿಭಾಗ ಆರಂಭವಾಗುತ್ತಿದೆ.ಎರಡು ದಶಕಗಳ ಹಿಂದೆ ನಮ್ಮಲ್ಲಿ ಸುರಕ್ಷಾ ವಿಭಾಗ ಸೀಮಿತ ಕಂಪೆನಿಗಳಲ್ಲಿ ಮಾತ್ರ ಇರುತ್ತಿತ್ತು. ಆದರೆ ಈ ವ್ಯವಸ್ಥೆ ಮುಂದುವರಿದ ರಾಷ್ಟ್ರಗಳಲ್ಲಿನ ಬಹುತೇಕ ಕಂಪೆನಿಗಳಲ್ಲಿ ಇತ್ತು. ಬಹುರಾಷ್ಟ್ರೀಯ ಕಂಪೆನಿಗಳು ದೇಶಕ್ಕೆ ಕಾಲಿಡುತ್ತಿದ್ದಂತೆ ಈ ವಿಭಾಗವನ್ನು ದೇಶೀಯ ಕಂಪೆನಿಗಳೂ ಅಳವಡಿಸಿಕೊಳ್ಳಲಾರಂಭಿಸಿದವು. ಇದೀಗ ಬಹುತೇಕ ಎಲ್ಲ ಕಂಪೆನಿಗಳಲ್ಲೂ ಇಂತಹ ಹುದ್ದೆ ಸೃಷ್ಟಿಯಾಗುತ್ತಿದೆ.ಜ್ಞಾನವುಳ್ಳ, ಆಸಕ್ತಿ ಇರುವ ಕಂಪೆನಿಯು ಇತರ ಉದ್ಯೋಗಿಗಳನ್ನು ಇಂತಹ ವಿಭಾಗಕ್ಕೆ ನಿಯೋಜನೆ ಮಾಡುವ ಸಂಪ್ರದಾಯ ಬಹುತೇಕ ಕಂಪೆನಿಗಳಲ್ಲಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುರಕ್ಷಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ತಾಂತ್ರಿಕ ಶಿಕ್ಷಣ ದೊರೆಯುತ್ತಿದೆ. ಫೈರ್ ಅಂಡ್ ಸೇಫ್ಟಿ ಎಂಜಿನಿಯರಿಂಗ್‌ನಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೊಮಾ, ಮೂರು ವರ್ಷದ ಟೆಕ್ನಿಕಲ್ ಡಿಪ್ಲೊಮಾ ಶಿಕ್ಷಣ ಲಭ್ಯವಿದೆ. ಈ ಕೋರ್ಸ್‌ಗಳು ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದಿಂದ ಅಂಗೀಕೃತಗೊಂಡಿವೆ.ಮಂಗಳೂರು ವಿಶ್ವವಿದ್ಯಾಲಯವು ಪ್ರಥಮವಾಗಿ ಫೈರ್ ಅಂಡ್ ಸೇಫ್ಟಿ ಟೆಕ್ನಾಲಜಿ ವಿಷಯದಲ್ಲಿ ಶಿಕ್ಷಣ ನೀಡಲು ಮಾನ್ಯತೆ ನೀಡಿದೆ. ಇಲ್ಲಿನ ಎಂಐಎಫ್‌ಎಸ್‌ಇ ಸಂಸ್ಥೆಯು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದು, ಡಿಪ್ಲೊಮಾ ಮತ್ತು ಪದವಿ ಶಿಕ್ಷಣವನ್ನು ನೀಡುತ್ತಿದೆ.

ಈ ಹಿಂದೆ ಇಂತಹ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಇರಲಿಲ್ಲ. ಒಂದು ವೇಳೆ ಮಾನ್ಯತೆ ಪಡೆಯದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದರೆ ಅವರ ಪ್ರಮಾಣಪತ್ರವನ್ನು ಜಾಗತಿಕವಾಗಿ ಉದ್ಯೋಗ ಕ್ಷೇತ್ರ ಅಂಗೀಕರಿಸುವುದಿಲ್ಲ.

ತರಬೇತಿಯಲ್ಲಿ ಏನೇನಿದೆ?

ಸುರಕ್ಷೆಗೆ ಸಂಬಂಧಿಸಿದ ಶಿಕ್ಷಣದಲ್ಲಿ ಫೈರ್ ಟೆಕ್ನಾಲಜಿ, ಇಂಡಸ್ಟ್ರಿಯಲ್ ಸೇಫ್ಟಿ, ಡಿಸೈನ್ ಇನ್‌ಸ್ಟಲೇಶನ್, ಏರೊನಾಟಿಕಲ್ ಸೇಫ್ಟಿ, ಮರೈನ್ ಸೇಫ್ಟಿ, ಪ್ರಥಮ ಚಿಕಿತ್ಸೆ, ಸಿವಿಲ್, ಮ್ಯಾಥಮ್ಯಾಟಿಕ್ಸ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಸೇಫ್ಟಿ ವಿಚಾರದಲ್ಲಿ ಕಾನೂನು, ಸೇಫ್ಟಿ ಮತ್ತು ಪೆಟ್ರೋ ಕೆಮಿಕಲ್ ಕೈಗಾರಿಕೆ, ನಿರ್ಮಾಣ ಕ್ಷೇತ್ರ, ಹೆಲ್ತ್ ಕೇರ್ ಮತ್ತು ವೇಸ್ಟ್ ಮ್ಯಾನೇಜ್‌ಮೆಂಟ್ ಮುಂತಾದ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.ಇದರಿಂದ ಪ್ರಸ್ತುತ ನಿಧಾನವಾಗಿ ಸುರಕ್ಷಾ ಕ್ಷೇತ್ರದ ಉದ್ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ದೇಶ ವಿದೇಶಗಳಲ್ಲಿ ಇರುವ ವಿಪುಲ ಉದ್ಯೋಗಾವಕಾಶದ ಬಗ್ಗೆ ನಿಧಾನವಾಗಿ ಅರಿವು ಮೂಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸುರಕ್ಷಾ ಕ್ಷೇತ್ರದಲ್ಲಿನ ಶಿಕ್ಷಣ ಮತ್ತು ಉದ್ಯೋಗಕ್ಕೆ ಬೇಡಿಕೆ ಸೃಷ್ಟಿಯಾಗಲಿದೆ.

-ಕೆ ವಿನೋದ್, ಮಂಗಳೂರಿನ ಎಂಐಎಫ್‌ಎಸ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ .

ನಾನು ಮೊದಲು ಅಂಜಿಕೆಯಿಂದಲೇ ಸುರಕ್ಷಾ ಡಿಪ್ಲೊಮಾ ಮಾಡಿದೆ. ಕ್ಯಾಂಪಸ್ ಸಂದರ್ಶನದಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು. ಕೇವಲ ಒಂದು ವರ್ಷದ ಅವಧಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಅರಸಿಬಂತು. ಇದೀಗ ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದೇನೆ.

-ಅಜಿತ್ ಕುಮಾರ್, ಫೈರ್ ಅಂಡ್ ಸೇಫ್ಟಿ ಡಿಪ್ಲೊಮಾ ಪದವೀಧರ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.