ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ ಬಾಲಕ

7

ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ ಬಾಲಕ

Published:
Updated:

ಕುಷ್ಟಗಿ (ಕೊಪ್ಪಳ ಜಿ.): ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹತ್ತಿರದ ಸಂಬಂಧಿಕರು ಎನ್ನಲಾದ ವೈದ್ಯ ದಂಪತಿಗೆ ಸೇರಿದ ಬಾಗಲಕೋಟೆ ಮೂಲದ 9 ವರ್ಷದ ಶಾಲಾ ಬಾಲಕನನ್ನು ಅಪಹರಿಸಿ ರೂ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಬಾಲಕನನ್ನು ರಕ್ಷಿಸಿ ಕೃತ್ಯಕ್ಕೆ ಬಳಸಿದ ಬಾಡಿಗೆ ಕಾರು ಸಹಿತ ಆರೋಪಿಗಳನ್ನು ಬಂಧಿಸಲಾಯಿತು.ಅಪಹೃತ ಬಾಲಕನನ್ನು ಪಾಲಕರಾದ ಬಾಗಲಕೋಟೆ ದಂಡಿನ ಆಸ್ಪತ್ರೆಯ ವೈದ್ಯ ಮತ್ತು ಮುಖ್ಯಮಂತ್ರಿ ಶೆಟ್ಟರ್  ಸೋದರತ್ತೆಯ ಮಗ ಡಾ. ಶಿವಕುಮಾರ ದಂಡಿನ, ಡಾ.ಅರ್ಚನಾ ದಂಡಿನ ಅವರ ಮಡಿಲಿಗೆ ಸುರಕ್ಷಿತವಾಗಿ ಸೇರಿಸಲಾಯಿತು.ಆರೋಪಿಗಳನ್ನು ಬಾದಾಮಿ ತಾಲ್ಲೂಕು ನಂದಿಕೇಶ್ವರ ಗ್ರಾಮದ ಬಸವರಾಜ ಅಳಗುಂಡಿ, ಬಸವರಾಜ ಹುಲ್ಲೂರು ಮತ್ತು ಕಾರಿನ ಚಾಲಕ ಚನ್ನಬಸಪ್ಪ ಅಲಿಯಾಸ ಚನ್ನಬಸಯ್ಯ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೋಟೆ ನಗರ ಠಾಣೆ ಪೊಲೀಸರ ವಶಕ್ಕೆ ನೀಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿ ಮಾಹಿತಿ ನೀಡಿದ ಬಾಗಲಕೋಟೆ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ ಭೂಮರೆಡ್ಡಿ, ಪಂಚನಾಮೆ ನಡೆಸಿದ್ದು ಅವರನ್ನೆಲ್ಲ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದರು. ಬಾಲಕನನ್ನು ರಕ್ಷಿಸಿ ಆರೋಪಿಗಳನ್ನು ಕೆಲ ಗಂಟೆಗಳಲ್ಲೇ ಬಂಧಿಸಿದ ಕುಷ್ಟಗಿ ಸರ್ಕಲ್ ಇನ್‌ಸ್ಪೆಕ್ಟರ್ ನೀಲಪ್ಪ ಓಲೇಕಾರ, ಪೇದೆ ಸಣ್ಣಈರಣ್ಣ, ಚಂದಪ್ಪ ಅವರನ್ನು ಶ್ಲಾಘಿಸಿದರು.ಬಾಲಕನ ಸುರಕ್ಷತೆ ಕಾರಣಕ್ಕೆ ಪೊಲೀಸರು ಎಲ್ಲೂ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಮಗುವಿನ ಪಾಲಕರು ಮುಖ್ಯಮಂತ್ರಿ ಸಂಬಂಧಿಕರು ಎಂಬ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ರವಾನಿಸಿದ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಆದೇಶಿಸಿತ್ತು. ಕಾರಿನ ಖಚಿತ ಮಾಹಿತಿ ಪಡೆದ ಇಲ್ಲಿಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಆರೋಪಿಗಳು ಪತ್ತೆಯಾಗಿದ್ದಾರೆ ಎಂದರು.ಪ್ರಮುಖ ಆರೋಪಿ ಬಸವರಾಜ ಅಳಗುಂಡಿ, ಅಪಹೃತ ಬಾಲಕನ ತಂದೆ ಡಾ.ಶಿವಕುಮಾರ ದಂಡಿನ ಅವರ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸಹಾಯಕನಾಗಿದ್ದ. ಬಾಲಕನನ್ನು ನಿತ್ಯ ಶಾಲೆಗೆ ಕೊರೆದೊಯ್ಯುತ್ತಿದ್ದ, ಆಪ್ತ ಒಡನಾಡಿಯಾಗಿದ್ದರಿಂದ ಬಾಲಕ ಸಹಜವಾಗಿಯೇ ಆತನ ಅಣತಿಯಂತೆ ನಡೆದುಕೊಂಡಿದ್ದಾನೆ. ಬಾಲಕನಲ್ಲಿ ಅಳುಕು ಆತಂಕ ಇರಲಿಲ್ಲ, ಅಪಹರಣಕಾರರು ನೀಡಿದ ಬಿಸ್ಕತ್ ತಿಂದು ಕಾರಿನಲ್ಲೇ ಆರಾಮವಾಗಿ ನಿದ್ರಿಸುತ್ತಿದ್ದ. ಆರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ ಈತ ಬಾಲಕ ತನ್ನ ಮೇಲೆ ಇಟ್ಟಿದ್ದ ನಂಬುಗೆಯನ್ನೇ ದುರುಪಯೋಗ ಪಡಿಸಿಕೊಂಡಿದ್ದಾನೆ  ಎಂದು ಪೊಲೀಸರು ವಿವರಿಸಿದರು.ಬಾಗಲಕೋಟೆ ವರದಿ: ಅಪಹರಣಕಾರರು ಬಾಲಕನನ್ನು ವಾಹನದಲ್ಲಿ ಹಾಕಿಕೊಂಡು ಹುನಗುಂದ ತಾಲ್ಲೂಕಿನ ಗುಡೂರು ಎಂಬಲ್ಲಿಂದ  ಪಾಲಕರಿಗೆ ದೂರವಾಣಿ ಕರೆ ಮಾಡಿ `ನಿಮ್ಮ ಮಗುವನ್ನು ಅಪಹರಿಸಲಾಗಿದೆ, ರೂ 25 ಲಕ್ಷ ಕೊಟ್ಟು ಕರೆದುಕೊಂಡು ಹೋಗಿ, ಇಲ್ಲವೆ ಬಾಲಕನ ಜೀವಕ್ಕೆ ತೊಂದರೆಯಾಗುತ್ತದೆ' ಎಂದು ಬೆದರಿಕೆ ಹಾಕ್ದ್ದಿದರು.ಗಾಬರಿಗೊಂಡ ಪಾಲಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್ ಕರೆಯ ಜಾಡು ಹಿಡಿದು ಘಟನೆ ನಡೆದ 4ಗಂಟೆಯೊಳಗೆ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry