ಸುರಕ್ಷೆ ಭಾವಕ್ಕೆ ಭದ್ರಗೊಳ್ಳಬೇಕು `ಬೇಲಿ'

ಭಾನುವಾರ, ಜೂಲೈ 21, 2019
27 °C
ಬೆಂಗಳೂರು ಅಭಿವೃದ್ಧಿ

ಸುರಕ್ಷೆ ಭಾವಕ್ಕೆ ಭದ್ರಗೊಳ್ಳಬೇಕು `ಬೇಲಿ'

Published:
Updated:

ಬೆಂಗಳೂರು ನಾನು ತುಂಬಾ ಪ್ರೀತಿಸುವ ನಗರ. ಭೌಗೋಳಿಕವಾಗಿ ಇಷ್ಟೊಂದು ಅನುಕೂಲವುಳ್ಳ ನಗರ ಪ್ರಾಯಶಃ ದೇಶದಲ್ಲಿ ಮತ್ತೊಂದಿಲ್ಲ. ಹತ್ತಿರದಲ್ಲಿ ನದಿ ಇಲ್ಲದಿರುವುದೊಂದೇ ಈ ನಗರದ ಕೊರತೆ. ಆರಾಮವಾಗಿ ಜೀವನ ಸಾಗಿಸಲು ಎಲ್ಲರೂ ಇಷ್ಟಪಡುವ ನೆಲೆ ಇದು. ಆದ್ದರಿಂದಲೇ ಹಿಂದೆ `ನಿವೃತ್ತರ ಸ್ವರ್ಗ' ಎಂಬ ಹಣೆಪಟ್ಟಿಯನ್ನು ಈ ನಗರ ಅಂಟಿಸಿಕೊಂಡಿತ್ತು. ಐ.ಟಿ ಕ್ಷೇತ್ರ ದಾಂಗುಡಿ ಇಟ್ಟ ಮೇಲೆ ಇದು ಯುವ ನಗರವಾಗಿದೆ. ಇಲ್ಲಿಯ ಎಲ್ಲ ರಸ್ತೆಗಳಲ್ಲೂ ಹುಡುಗ-ಹುಡುಗಿಯರೇ ಹೆಚ್ಚಾಗಿ ಓಡಾಡುತ್ತಿದ್ದಾರೆ.ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನ ಭದ್ರತೆ ಎಲ್ಲ ರೀತಿಯಿಂದಲೂ ಮುಖ್ಯವಾಗಿದೆ. ರಾಜ್ಯದ ಆರನೇ ಒಂದು ಭಾಗದಷ್ಟು ಜನ ಇದೇ ಊರಿನಲ್ಲಿ ಇದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿವೆ. ಸಿಲಿಕಾನ್ ವ್ಯಾಲಿಗೆ ಪೈಪೋಟಿ ನೀಡುವಂತೆ ಇಲ್ಲಿಯ ಐ.ಟಿ ಉದ್ಯಮ ಬೆಳೆದಿದೆ. ಹೀಗಾಗಿ ಈ ನಗರ ದೇಶದ ಅಸ್ಮಿತೆ ಎನಿಸಿದೆ. ಉಗ್ರರು ಈ ಊರಿನ ಮೇಲೆ ಕಣ್ಣಿಡಲು ಇದೇ ಪ್ರಮುಖ ಕಾರಣ.ನಗರದ ಭದ್ರತೆಯನ್ನು ನಾವು ಎರಡು ಆಯಾಮಗಳಲ್ಲಿ ನೋಡಬೇಕಿದೆ. ಮೊದಲನೆಯದು, ಪ್ರತಿ ಪೊಲೀಸ್ ಠಾಣೆ ಮಟ್ಟದ ಸ್ಥಳೀಯ ಸುರಕ್ಷತೆ. ಎರಡನೆಯದು ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆಯದಂತೆ ವಹಿಸಬೇಕಾದ ಜಾಗೃತಿ. ಮೊದಲನೆಯದು ದೈನಂದಿನ ಕರ್ತವ್ಯ; ಎರಡನೆಯದು ವಿಶೇಷ ಸಂದರ್ಭ. ಕಮಿಷನರೇಟ್ ಹೊಂದಿರುವ ಬೆಂಗಳೂರಿನಲ್ಲಿ 103 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳು, 41 ಸಂಚಾರ ಪೊಲೀಸ್ ಠಾಣೆಗಳು ಹಾಗೂ ಒಂಬತ್ತು ಉಪ ಠಾಣೆಗಳು (ಔಟ್ ಪೋಸ್ಟ್) ಇವೆ. ಸುಮಾರು 18 ಸಾವಿರ ಪೊಲೀಸರು ದೈನಂದಿನ ಸುರಕ್ಷತೆ ಜವಾಬ್ದಾರಿ ಹೊತ್ತಿದ್ದಾರೆ.`ಬೆಂಗಳೂರು ಸುರಕ್ಷಿತವಾಗಿದೆ' ಎಂಬ ಅಧಿಕಾರಿಗಳ ಹೇಳಿಕೆಯಿಂದ ಏನೇನೂ ಪ್ರಯೋಜನ ಇಲ್ಲ. ನಗರದ ನಿವಾಸಿಗಳಲ್ಲಿ ಅಂತಹ ಭಾವ ಸ್ಫುರಿಸುವಂತೆ ಮಾಡಬೇಕು. ಜನರಲ್ಲಿ ಸುರಕ್ಷತೆ ಭಾವ ಮೂಡಲು, ಕಳ್ಳತನ ಪ್ರಕರಣಗಳು ನಡೆಯದಂತೆ ಆದಷ್ಟು ಎಚ್ಚರ ವಹಿಸಬೇಕು. ಘಟಿಸಿದ ಪ್ರಕರಣಗಳಿಗೆ ಕಾರಣವಾದ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಬೇಕು. ಅವರಿಂದ ಮಾಲು ವಶಕ್ಕೆ ಪಡೆದು ಕಾಲಮಿತಿಯಲ್ಲಿ ದೂರುದಾರರಿಗೆ ವಾಪಸು ಕೊಡಬೇಕು ಮತ್ತು ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು. ಇದಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಸುಧಾರಣೆ ತರುವುದು ಅಗತ್ಯವಾಗಿದೆ.ಕುಡಿದು ಗಲಾಟೆ ಮಾಡುವುದು, ಹುಡುಗಿಯರನ್ನು ಚುಡಾಯಿಸುವುದು, ಬೀದಿಯಲ್ಲಿ ಜೂಜಾಟ ಆಡುವುದು ಮೊದಲಾದ ಘಟನೆಗಳೂ ಜನರಲ್ಲಿ ಅಭದ್ರ ಭಾವವನ್ನು ಉಂಟು ಮಾಡುತ್ತವೆ. ಗಸ್ತು ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಆದ್ದರಿಂದ ಹೊಯ್ಸಳದಂತಹ ಗಸ್ತು ವಾಹನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ.ಭದ್ರತೆ ವಿಷಯದಲ್ಲಿ ತೂತು ಬಿದ್ದ ಕಿಟಕಿ (ಬ್ರೋಕನ್ ವಿಂಡೊ) ಸಿದ್ಧಾಂತವೊಂದಿದೆ. ವ್ಯಕ್ತಿಯೊಬ್ಬ ಕಿಟಕಿಗೆ ಕಲ್ಲು ಎಸೆಯುತ್ತಾನೆ. ಗಾಜಿನಲ್ಲಿ ಒಂದು ತೂತು ಬೀಳುತ್ತದೆ. ತಕ್ಷಣ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗದಿದ್ದರೆ ಮಾರನೇ ದಿನ ಮತ್ತೊಂದು ಕಲ್ಲು ಬೀಳುತ್ತದೆ. ಮುಂದೊಂದು ದಿನ ಆ ಕಿಟಕಿಯನ್ನೇ ಕಿತ್ತು ಒಳನುಗ್ಗಲು ಕಲ್ಲೆಸೆದ ವ್ಯಕ್ತಿಗೆ ಧೈರ್ಯ ಬರುತ್ತದೆ. ಎಲ್ಲ ಭದ್ರತಾ ಕಾರ್ಯಕ್ಕೂ ಈ ಸಿದ್ಧಾಂತ ಎಚ್ಚರಿಕೆ ಗಂಟೆ ಮೊಳಗಿಸಬೇಕು. ಕಿಟಕಿಗೆ ಕಲ್ಲು ಬಿದ್ದ ತಕ್ಷಣವೇ ಅದಕ್ಕೆ ಪ್ರತಿಕ್ರಿಯೆ ಸಿಗಬೇಕು. ಮನೆಗಳನ್ನು ಬಾಡಿಗೆಗೆ ಕೊಡುವಾಗ ಮಾಲೀಕರು ಬಾಡಿಗೆದಾರರ ಮಾಹಿತಿ ಮತ್ತು ವೈಯಕ್ತಿಕ ವಿವರ ಸಂಗ್ರಹಿಸಿ ಸ್ಥಳೀಯ ಠಾಣೆಗೆ ಕೊಡಬೇಕು ಎಂಬ ಆದೇಶ ಹೊರಡಿಸಲಾಗಿದೆ. ಆದರೆ, ಈ ಆದೇಶಕ್ಕೆ ಶಾಶ್ವತ ನೆಲೆ ಸಿಕ್ಕಿಲ್ಲ. ಯಾವ ಮಾಲೀಕರು ನಿಯಮ ಪಾಲನೆ ಮಾಡುವುದಿಲ್ಲವೊ ಅವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಬೇಕು. ಇಲ್ಲದಿದ್ದರೆ ಈ ನಿಯಮ ವ್ಯವಸ್ಥಿತವಾಗಿ ಜಾರಿಗೆ ಬರುವುದಿಲ್ಲ. ತಮ್ಮ ಭದ್ರತೆ ದೃಷ್ಟಿಯಿಂದಲೇ ಈ ಮಾಹಿತಿ ಕೇಳಲಾಗುತ್ತಿದೆ ಎನ್ನುವುದನ್ನು ನಾಗರಿಕರಿಗೆ ಮನವರಿಕೆ ಮಾಡಿಕೊಡಬೇಕು.ಒಂಟಿ ಮಹಿಳೆಯರು ಮತ್ತು ವೃದ್ಧರ ರಕ್ಷಣೆ ಬಹುದೊಡ್ಡ ಸವಾಲು. ನಾನು ಈ ಹಿಂದೆ ಪೊಲೀಸ್ ಮಹಾನಿರ್ದೇಶಕ ಆಗಿದ್ದಾಗ ಭಾರತ ಸಂಚಾರ ನಿಗಮವು ನಮಗೆ ಸಹಾಯ ಒದಗಿಸಲು ಮುಂದೆ ಬಂದಿತ್ತು. ಒಂಟಿ ಮಹಿಳೆಯರು ಮತ್ತು ವೃದ್ಧರು ಇರುವ ಮನೆಗಳ ದೂರವಾಣಿ ಸಂಖ್ಯೆ ಕೊಟ್ಟರೆ, ಅಂತಹ ಮನೆಯಲ್ಲಿ ಏನಾದರೂ ಅಪಾಯ ಸಂಭವಿಸಿದರೆ, ದೂರವಾಣಿ ಸಂಪರ್ಕ ಕಡಿತಗೊಂಡರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಆ ಇಲಾಖೆ ಸಿದ್ಧವಿತ್ತು. ಆಗ ಸಾಕಷ್ಟು ಪ್ರಚಾರ ನೀಡಿದರೂ ಯಾರೊಬ್ಬರೂ ದೂರವಾಣಿ ಸಂಖ್ಯೆ ನೀಡಲು ಮುಂದೆ ಬರಲಿಲ್ಲ. ದೂರವಾಣಿ ಸಂಖ್ಯೆ ನೀಡಿದರೆ ತಮ್ಮ ಸುರಕ್ಷತೆಗೆ ಅನುಕೂಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಈ ವ್ಯವಸ್ಥೆಗೆ ಮರು ಚಾಲನೆ ನೀಡುವುದು ಅಗತ್ಯವಾಗಿದೆ.ದೇಶದ ರಾಜಧಾನಿ ನವದೆಹಲಿ ಉದಾಹರಣೆ ಹೇಳುವುದಾದರೆ ಸುತ್ತಲಿನ ಮೂರು ರಾಜ್ಯಗಳ ಜತೆ ಅಲ್ಲಿಯ ನಿಯಂತ್ರಣ ಕೊಠಡಿ ಸಂಪರ್ಕ ಹೊಂದಿದೆ. ಏನೇ ಒಂದು ಸಣ್ಣ ಪ್ರಕರಣ ನಡೆದರೂ ಎಲ್ಲ ನಿಯಂತ್ರಣ ಕೊಠಡಿಗಳಿಗೆ ಸಂದೇಶ ರವಾನೆಯಾಗುತ್ತದೆ. ಆರೋಪಿ ದಶದಿಕ್ಕುಗಳಲ್ಲಿ ಎತ್ತ ಹೋದರೂ ಹಿಡಿಯಲು ಸಾಧ್ಯವಾಗುತ್ತದೆ. ವಾಹನಗಳು ಕಳವಾದರೆ, ಮೃತದೇಹಗಳು ಪತ್ತೆಯಾದರೆ ಅರೆಕ್ಷಣದಲ್ಲಿ ದೆಹಲಿ ಸರಹದ್ದಿನ ಎಲ್ಲ ನಿಯಂತ್ರಣ ಕೊಠಡಿಗಳು, ಚೆಕ್‌ಪೋಸ್ಟ್‌ಗಳು, ಗಸ್ತು ಪಡೆಗಳಿಗೆ ಮಾಹಿತಿ ರವಾನೆ ಆಗುತ್ತದೆ.ಬೆಂಗಳೂರು ಸುತ್ತಲಿನ ಎಲ್ಲ ಜಿಲ್ಲೆಗಳ ಜತೆ ಅಂತಹ ಸಮರ್ಪಕ ಸಂಪರ್ಕ ವ್ಯವಸ್ಥೆಯನ್ನು ನಾವು ಹೊಂದಬೇಕಿದೆ. ಇದರಿಂದ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಅಪರಾಧಿಗಳನ್ನು ಪತ್ತೆ ಹಚ್ಚಿ, ಶಿಕ್ಷಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ.ಬೆಂಗಳೂರಿನಲ್ಲಿ ಮಾಲ್‌ಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳ ಭದ್ರತೆಗೆ ಪೊಲೀಸರು ಸಲಹೆ ನೀಡಬಹುದೇ ಹೊರತು ಇಂತಹ ವಾಣಿಜ್ಯ ಕಟ್ಟಡಗಳ ರಕ್ಷಣೆ ಹೊಣೆಯನ್ನು ಸಂಪೂರ್ಣವಾಗಿ ಹೊರುವುದು ಆಗದ ಕೆಲಸ. ಬಹುತೇಕ ಮಾಲ್‌ಗಳಲ್ಲಿ ಅಗ್ನಿಶಾಮಕ ಕಿಟ್ ಮತ್ತು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಬ್ಯಾಗುಗಳನ್ನು ತಪಾಸಣೆ ಮಾಡುವ ಯಂತ್ರಗಳನ್ನು ಅಳವಡಿಸಿಕೊಳ್ಳಲು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಈ ಹಿಂದೆಯೇ ಸಲಹೆ ನೀಡಲಾಗಿದೆ. ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುತ್ತಾರೆ. ಪ್ರತಿಯೊಬ್ಬರ ಮೇಲೆ ನಿಗಾ ಇಡುವುದು ಕಷ್ಟದ ಕೆಲಸ. ಆದರೆ, ಎಲ್ಲ ಪ್ರಯಾಣಿಕರ ಬ್ಯಾಗುಗಳನ್ನು ತಪಾಸಣೆ ನಡೆಸಬೇಕು. ನವದೆಹಲಿ ರೈಲು ನಿಲ್ದಾಣದಲ್ಲಿ ಈ ವ್ಯವಸ್ಥೆ ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮಲ್ಲಿ ಏಕೆ ಸಾಧ್ಯವಿಲ್ಲ?ನಗರದಲ್ಲಿ ಆಗಾಗ್ಗೆ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳು, ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾದನಾ ನಿಗ್ರಹ ಘಟಕದ ಅಗತ್ಯವಿದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟಿವೆ. ಆದರೆ, ಅಂತಹ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ. ನಗರದಲ್ಲಿ ಪ್ರತ್ಯೇಕ ಗುಪ್ತಚರ ವಿಭಾಗವಿದ್ದು, ಡಿಸಿಪಿ ದರ್ಜೆ ಅಧಿಕಾರಿ ಅದರ ಮುಖ್ಯಸ್ಥರಾಗಿದ್ದಾರೆ. ಈ ವಿಭಾಗವನ್ನು ಇನ್ನಷ್ಟು ಬಲಪಡಿಸಬೇಕಿದೆ.ಭಯೋತ್ಪಾದನೆ ಚಟುವಟಿಕೆಗಳು ನಡೆದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯದ ಅಗತ್ಯವಿದೆ. ವಿವಿಧ ರಾಜ್ಯಗಳ ಪೊಲೀಸರು ಹಾಗೂ ಇತರ ಸರ್ಕಾರಿ ಏಜೆನ್ಸಿಗಳ ಜತೆ ವ್ಯವಹರಿಸುವ ಸಂದರ್ಭವೂ ಬರುತ್ತದೆ. ಅದಕ್ಕಾಗಿ ಪ್ರತ್ಯೇಕ ಸಂಪರ್ಕ ವಿಭಾಗ ರಚನೆಯಾಗಬೇಕಿದೆ.  ಸಾರ್ವಜನಿಕರ ಕಣ್ಣು ತಪ್ಪಿಸಿ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನಾ ಕೃತ್ಯಗಳನ್ನು ತಡೆಗಟ್ಟಲು ಅವರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡಬೇಕು. ಸ್ಥಳೀಯ ಪೊಲೀಸರು ಅಲ್ಲಿನ ಜನರ ವಿಶ್ವಾಸ ಗಳಿಸುವಂತಹ ವಾತಾವರಣ ನಿರ್ಮಿಸಬೇಕು.ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಠಾಣೆಗಳನ್ನು ಸಜ್ಜುಗೊಳಿಸಬೇಕು. ಏಕೆಂದರೆ, ಪ್ರತಿಯೊಂದು ಘಟನೆಗೆ ಮೊದಲು ಪ್ರತಿಕ್ರಿಯೆ ನೀಡಬೇಕಾದವರು ಸ್ಥಳೀಯ ಪೊಲೀಸರಾಗಿದ್ದಾರೆ. ಅದಕ್ಕೆ ಗುಣಮಟ್ಟ ಕಾರ್ಯಾಚರಣೆ ಅಭ್ಯಾಸವನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರ್ಯಾಕ್ಟೀಸ್-ಎಸ್‌ಒಪಿ) ನಿಯಮಿತವಾಗಿ ನಡೆಸಬೇಕು. ಭಯೋತ್ಪಾದನಾ ಘಟನೆಗಳಿಗೆ ಸಂಬಂಧಿಸಿದಂತೆ ಎಲ್ಲ ದತ್ತಾಂಶಗಳನ್ನು ಕಾಲಾನುಕ್ರಮದಲ್ಲಿ ಸಂಗ್ರಹಿಸಿಡಬೇಕು. ಬೆಂಗಳೂರಿನಲ್ಲಿ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಬೇಕು.ಭದ್ರತೆ ಜವಾಬ್ದಾರಿ ಹೆಚ್ಚಾಗಿದ್ದು, ಸಿಬ್ಬಂದಿ ಕೊರತೆ ಮಾತ್ರ ತೀವ್ರವಾಗಿದೆ. ಪ್ರತಿವರ್ಷ ಇಂತಿಷ್ಟು ಸಂಖ್ಯೆಯಲ್ಲಿ ಕಾನ್‌ಸ್ಟೆಬಲ್ ಮತ್ತು ಪಿಎಸ್‌ಐಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೊರತೆಯನ್ನು ನೀಗಿಸಬೇಕು. ಬಜೆಟ್‌ನಲ್ಲಿ ಈ ಉದ್ದೇಶಕ್ಕೆ ಹಣ ಮೀಸಲಿಟ್ಟರೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುವುದಿಲ್ಲ. ಹೈಗ್ರೌಂಡ್ಸ್ ಠಾಣೆಯ ಉದಾಹರಣೆಯನ್ನೇ ಹೇಳುವುದಾದರೆ ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರ ಇರುವ ಪ್ರದೇಶದ ರಕ್ಷಣೆ ಹೊಣೆ ಹೊತ್ತಿದೆ. ಅದಕ್ಕೆ ಸ್ವಂತದ್ದೊಂದು ಕಟ್ಟಡ ಇಲ್ಲ. ಅಗತ್ಯ ಸಂಖ್ಯೆಯಷ್ಟು ಸಿಬ್ಬಂದಿ ಇಲ್ಲ. ತಪ್ಪುಗಳು ನಡೆದಾಗ ಪೊಲೀಸರನ್ನು ದೂಷಿಸುವ ಮುನ್ನ ಅವರಿಗೆ ಅಗತ್ಯ ಸೌಲಭ್ಯ ನೀಡಬೇಕು.ನಮ್ಮ ಸಿಬ್ಬಂದಿಗೆ ತರಬೇತಿಯೂ ಅಗತ್ಯವಾಗಿದೆ. ಯಾವ ಘಟನೆ ನಡೆದಾಗ, ಯಾವ ರೀತಿ ಪ್ರತಿಕ್ರಿಯಿಸಬೇಕು, ಜನರೊಂದಿಗೆ ಹೇಗೆ ಬೆರೆಯಬೇಕು ಎಂಬುದು ಪರಿಪೂರ್ಣವಾಗಿ ಅವರಿಗೆ ತಿಳಿದಿಲ್ಲ. ಅಂತಹ ಕೌಶಲಗಳನ್ನು ಹೇಳಿಕೊಡಬೇಕು. ಸಿಬ್ಬಂದಿ ನೆಮ್ಮದಿಯಿಂದ ಇದ್ದರೆ ಅವರ ಕರ್ತವ್ಯ ನಿರ್ವಹಣೆ ಸಮರ್ಪಕವಾಗಿ ಇರುತ್ತದೆ. ನಗರದಲ್ಲಿ ಅವರ ವಾಸಕ್ಕೆ ಅಗತ್ಯ ಸಂಖ್ಯೆಯಲ್ಲಿ ವಸತಿ ಸಂಕೀರ್ಣ ನಿರ್ಮಿಸಬೇಕು. ಎರಡು ವರ್ಷಗಳಿಂದ ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರ ಸಿಕ್ಕಿಲ್ಲ ಎನ್ನುವ ದೂರುಗಳಿವೆ. ಈ ಸಂಗತಿ ನಿಜವೇ ಆಗಿದ್ದರೆ ಅದಕ್ಕಿಂತ ಶೋಚನೀಯ ಸ್ಥಿತಿ ಬೇರಿಲ್ಲ. ಭದ್ರತೆಗೂ ಸಮವಸ್ತ್ರಕ್ಕೂ ಎತ್ತಣ ಸಂಬಂಧ ಎನ್ನುವ ಪ್ರಶ್ನೆ ಎತ್ತಬಹುದು. ಅದಕ್ಕೆ ಮತ್ತೆ ಅದೇ ಉತ್ತರ `ಬೇಲಿ ಚೆನ್ನಾಗಿದ್ದರೆ ಒಳಗಿನ ವಸ್ತುಗಳು ಸುರಕ್ಷಿತವಾಗಿರುತ್ತವೆ'. ಬೇಲಿ ಚೆನ್ನಾಗಿರಲು ಪೊಲೀಸರ ಬೇಡಿಕೆಗಳು ಈಡೇರಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry