ಸುರಪುರ ಆಸ್ಪತ್ರೆಯಲ್ಲಿ ಮಾಣಿಕಪ್ಪ ಸಾವು

7
ವಾಜಪೇಯಿ ಆರೋಗ್ಯಶ್ರೀ ಫಲಾನುಭವಿ

ಸುರಪುರ ಆಸ್ಪತ್ರೆಯಲ್ಲಿ ಮಾಣಿಕಪ್ಪ ಸಾವು

Published:
Updated:

ಸುರಪುರ: ವಾಜಪೇಯಿ ಉಚಿತ ಆರೋಗ್ಯಶ್ರೀ ಯೋಜನೆಯಡಿ ಹೃದಯ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದ ಗುರುಮಠಕಲ್‌ನ ಯುವಕ ಮಾಣಿಕಪ್ಪ ಭೀಮಶಪ್ಪ ಹರಿಜನ (22) ಎಂಬ ಯುವಕ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಹೃದಯ ಬೇನೆಯಿಂದ ಅಸುನೀಗಿದ ದಾರುಣ ಘಟನೆ ಮಂಗಳವಾರ ಸಂಭವಿಸಿದೆ.ಘಟನೆ ವಿವರ:ಕಳೆದ ತಿಂಗಳು 25 ರಂದು ಯಾದಗಿರಿಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಶಿಬಿರ ನಡೆದಿತ್ತು. ಶಿಬಿರದಲ್ಲಿ ತಪಾಸಣೆಗೆ ಒಳಗಾಗಿದ್ದ ಮಾಣಿಕಪ್ಪ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದ. ಉಚಿತ ಚಿಕಿತ್ಸೆಗೆ ಬೇಕಾದ ಬಿ.ಪಿ.ಎಲ್. ಕಾರ್ಡ್ ಇತರ ದಾಖಲಾತಿಗಳನ್ನು ಸಿದ್ಧತೆ ಮಾಡಿಕೊಂಡು ಮಂಗಳವಾರ ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು 20 ಜನ ರೋಗಿಗಳೊಂದಿಗೆ ತಾನೂ ನಿಗದಿತ ಸಾರಿಗೆ ಬಸ್ ಹತ್ತಿದ.ಬಸ್ ಸುರಪುರಕ್ಕೆ ಬರುವಷ್ಟರಲ್ಲಿ ಮಾಣಿಕಪ್ಪನಿಗೆ ಹೃದಯ ಬೇನೆ ಉಲ್ಬಣಿಸಿತು. ತೀವ್ರ ನೋವಿನಿಂದ ಬಳುತ್ತಿದ್ದ ಆತನಿಗೆ ತಕ್ಷಣ ಚಿಕಿತ್ಸೆಯ ಅವಶ್ಯಕತೆ ಇತ್ತು. ಆತನನ್ನು ಮತ್ತು ಜೊತೆಗೆ ಬಂದಿದ್ದ ಆತನ ವೃದ್ಧ ತಾಯಿಯನ್ನು ಬಸ್ಸಿನಿಂದ ಕೆಳಗೆ ಇಳಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿ ಬಸ್ ಉಳಿದ 19 ರೋಗಿಗಳೊಂದಿಗೆ ಬೆಂಗಳೂರಿಗೆ ಹೊರಟಿತು.ಮಾಣಿಕಪ್ಪ ನಿರ್ಗತಿಕ. ಅನಕ್ಷರಸ್ಥಳಾದ ಆತನ ತಾಯಿಗೆ ಏನೂ ಗೊತ್ತಿಲ್ಲ. ನನ್ನ ಹತ್ತಿರ ಒಂದು ನಯಾ ಪೈಸೆಯೂ ಇಲ್ಲ. ನಾವು ಬಡವರು. ನನ್ನ ಮಗನನ್ನು ಉಳಿಸಿರಿ ಎಂದು ಬಸ್‌ನಿಲ್ದಾಣದಲ್ಲಿದ್ದ ಜನರಿಗೆ ಅಂಗಲಾಚತೊಡಗಿದಳು.

ಜನರು ತಕ್ಷಣ 108 ವಾಹನ ಕರೆಸಿ ರೋಗಿಯನ್ನು ಇಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.ಚಿಕಿತ್ಸೆ ಫಲಕಾರಿಯಾಗದೆ ಮಾಣಿಕಪ್ಪ ಅಸುನೀಗಿದ. ದಿಗ್ಭ್ರಾಂತಳಾದ ತಾಯಿ ಹುಸನಮ್ಮಳ ಅರಣ್ಯರೋದನ ಕರುಣಾಜನಕವಾಗಿತ್ತು. ಕೆಲ ಸಂಘಟನೆಗಳ ಕಾರ್ಯಕರ್ತರು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಅಂಬ್ಯೂಲೆನ್ಸ್ ಮೂಲಕ ಕಳೇಬರವನ್ನು ಗುರುಮಠಕಲ್‌ಗೆ ಕಳಿಸುವ ವ್ಯವಸ್ಥೆ ಮಾಡಿದರು.ಆಕ್ರೋಶ:ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅಯ್ಯಣ್ಣ ಹಾಲಬಾವಿ, ತೀವ್ರ ಬೇನೆಯಿಂದ ಬಳಲುತ್ತಿದ್ದ ರೋಗಿಯನ್ನು ಬಸ್‌ನಿಲ್ದಾಣದಲ್ಲಿ ಇಳಿಸಿ ನಿರ್ಲಕ್ಷ್ಯ ವಹಿಸಿದ್ದು ಅಕ್ಷಮ್ಯ ಅಪರಾಧ. ಬಡವರಿಗೆ ಆಶಾಕಿರಣವಾಗಬೇಕಿದ್ದ ವಾಜಪೇಯಿ ಆರೋಗ್ಯ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕನ ಸಾವಿಗೆ ಕಾರಣವಾಗಿದ್ದು ವಿಪರ್ಯಾಸ. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಮೃತನ ಕುಟುಂಬಕ್ಕೆ ರೂ. 5 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಅಯ್ಯಣ್ಣ ಆಗ್ರಹಿಸಿದ್ದಾರೆ.ಪ್ರತಿಕ್ರಿಯೆ:ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಗಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೈದೇಹಿ ಆಸ್ಪತ್ರೆಯ ಮಾರುಕಟ್ಟೆ ಅಧಿಕಾರಿ ಅನಿಲ, ಮಾಣಿಕಪ್ಪ ತೀವ್ರ ಬೇನೆಯಿಂದ ಬಳಲುತ್ತಿದ್ದರಿಂದ ಅನಿವಾರ್ಯವಾಗಿ ಆತನಿಗೆ ಚಿಕಿತ್ಸೆ ಕೊಡಿಸಲು ಸುರಪುರದಲ್ಲಿ ಇಳಿಸಬೇಕಾಯಿತು.ನಾನೇ 108 ವಾಹನದ ಮೂಲಕ ಸುರಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕಳಿಸಿದ್ದೇನೆ. ಉಳಿದ ರೋಗಿಗಳ ಯೋಗಕ್ಷೇಮದಿಂದ ಅವರೊಂದಿಗೆ ಬಸ್ಸಿನಲ್ಲಿ ನಾನು ತೆರಳಿದ್ದೇನೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry