ಸುರಪುರ ಎಡಿಎ ಕಚೇರಿ ಮುಂದೆ ರೈತರ ಪ್ರತಿಭಟನೆ

7

ಸುರಪುರ ಎಡಿಎ ಕಚೇರಿ ಮುಂದೆ ರೈತರ ಪ್ರತಿಭಟನೆ

Published:
Updated:

ಸುರಪುರ: ರಸಗೊಬ್ಬರ ಮತ್ತು ಬಿತ್ತನೆ ಬೀಜವನ್ನು ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಮಂಗಳವಾರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ನೇತೃತ್ವ ವಹಿಸಿದ್ದ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾಕಾರ್ ಮಾತನಾಡಿ, ತಾಲ್ಲೂಕಿನಲ್ಲಿ ಮಳೆ ಸಮರ್ಪಕವಾಗಿ ಬಾರದೆ ಬರಗಾಲ ಎದುರಿಸುವಂತಾಗಿದೆ. ರೈತರು ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ಅಲ್ಪ, ಸ್ವಲ್ಪ ಮಳೆಯಾದ ಖುಷ್ಕಿ ಜಮೀನಿನಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕವಾಗಿ ಸಿಗದೆ ರೈತ ಹತಾಶನಾಗಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.ರಿಯಾಯತಿ ದರದಲ್ಲಿ ಬರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ವರ್ತಕರೊಂದಿಗೆ ಕೃಷಿ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದರು.ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಇರುವುದಿಲ್ಲ. ಯೋಜನೆಗಳ ಬಗ್ಗೆ ಪ್ರಕಟಣೆ ನೀಡಬೇಕು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಹಂಗಾಮಿಗಿಂತ ಮೊದಲೆ ಬಿತ್ತನೆ ಬೀಜ ಸಂಗ್ರಹಿಸಿ ಪೂರೈಸಬೇಕು. ಅವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷ ಬಸವರಾಜಪ್ಪಗೌಡ ಮಾಲಿಪಾಟೀಲ, ಗೌರವಾಧ್ಯಕ್ಷ ಧರ್ಮಣ್ಣ ದೊರೆ, ಬಸವರಾಜ ನಾಯಕ ಸುಗೂರ, ಜಿಲ್ಲಾ ಡಿ.ವೈ.ಎಫ್.ಐ. ಜಿಲ್ಲಾ ಮುಖಂಡ ಬುಚ್ಚಪ್ಪನಾಯಕ ಗುರಿಕಾರ ಮಾತನಾಡಿದರು.

ಸುವರ್ಣ ಗ್ರಾಮ ಯೋಜನೆಯ ಫಲಾನುಭವಿಗಳಿಗೆ ಬಾಕಿ ಹಣ ಮಂಜೂರು ಮಾಡಬೇಕು. ಅವಶ್ಯಕತೆ ಆಧಾರದ ಮೇಲೆ ರಸಗೊಬ್ಬರ, ಬಿತ್ತನೆ ಬೀಜ ಒದಗಿಸಬೇಕು.

 

ಶೇಂಗಾ ಬೀಜವನ್ನು ರಿಯಾಯತಿ ದರದಲ್ಲಿ ಪೂರೈಸಬೇಕು ಇತರ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ವೆಂಕೋಬ ಕುಪಗಲ್, ತಾಲ್ಲೂಕು ಡಿ.ವೈ.ಎಫ್.ಐ. ತಾಲ್ಲೂಕು ಅಧ್ಯಕ್ಷ ಮುದ್ದಣ್ಣ ಅಮ್ಮಾಪುರ, ನಂದಣ್ಣ ವಾರಿ, ಪರಮಣ್ಣ ಜಂಪಾ, ನಂದಪ್ಪ ದಳಪತಿ, ಹಣಮಂತ್ರಾಯ ಮಡಿವಾಳ, ಹಣಮಂತ್ರಾಯ ಚಂದಲಾಪುರ, ಷಣ್ಮುಖಪ್ಪ ದೇಸಾಯಿ, ಸಂಗಣ್ಣ ಸಾಹು ಹೆಮ್ಮಡಗಿ, ರಾಮುನಾಯಕ ಕುಪಗಲ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry