ಸುರಪುರ ಪುರಸಭೆ ಸಿಬ್ಬಂದಿ ವರ್ತನೆಗೆ ಆಕ್ರೋಶ

7

ಸುರಪುರ ಪುರಸಭೆ ಸಿಬ್ಬಂದಿ ವರ್ತನೆಗೆ ಆಕ್ರೋಶ

Published:
Updated:

ಯಾದಗಿರಿ: ಸುರಪುರ ಪುರಸಭೆ ಮುಖ್ಯಾಧಿಕಾರಿ ಹಾಗೂ ಕರವಸೂಲಿಗಾರರು ಎಲ್ಲ ಆದೇಶಗಳ ಉಲ್ಲಂಘನೆ ಮಾಡಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತಿನಲ್ಲಿ ಇಡುವಂತೆ ಒತ್ತಾಯಿಸಿ ಸುರಪುರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ದಲಿತ ವಿಮೋಚನಾ ಸೇನೆ ಸಂಘ, ಕರ್ನಾಟಕ ಮುಸ್ಲಿಂ ಕೌನ್ಸಿಲ್‌ಗಳ ಪದಾಧಿಕಾರಿಗಳು, ಈ ಅಧಿಕಾರಿಗಳನ್ನು ತಕ್ಷಣವೇ ಅಮಾನತಿನಲ್ಲಿ ಇಡದಿದ್ದರೆ, ಅ.14 ರಂದು ಸುರಪುರ ಪುರಸಭೆ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.ಸುರಪುರದ 24 ನೇ ವಾರ್ಡಿನಲ್ಲಿರುವ ದೀವಳಗುಡ್ಡದಲ್ಲಿ ಹಲವಾರು ಸಮಸ್ಯೆಗಳಿದ್ದು, ಇಲ್ಲಿಯವರೆಗೆ ಸೂಕ್ತ ಸ್ಪಂದನೆ ಮಾಡಿಲ್ಲ. ನಿತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮೇಲಾಧಿಕಾರಿಗಳು ಆದೇಶಿಸಿದರೂ, ಅದನ್ನು ಕಾರ್ಯಗತ ಮಾಡಿಲ್ಲ. ಹೀಗಾಗಿ ಮೇಲಾಧಿಕಾರಿಗಳ ಆದೇಶವನ್ನೂ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.ಕಟ್ಟಡ ಕಾಮಗಾರಿ ತಡೆಯುವಂತೆ ನ್ಯಾಯಾಲಯದ ತಡೆಯಾಜ್ಞೆ ತಂದು, ಅದರ ಪ್ರತಿಯನ್ನು ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರೂ, ಇದುವರೆಗೆ ಕಟ್ಟಡ ಕಾಮಗಾರಿಯನ್ನು ತಡೆದಿಲ್ಲ. ಹೀಗಾಗಿ ರಾತ್ರಿ ಹಗಲೆನ್ನದೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ನ್ಯಾಯಾಲಯ ಆದೇಶಕ್ಕೂ ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದರೂ, ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಈಗಾಗಲೇ ಮಾಹಿತಿ ಹಕ್ಕು ಆಯೋಗ ನಡೆಸಿದ ವಿಚಾರಣೆಗೂ ಹಾಜರಾಗಿಲ್ಲ ಎಂದು ತಿಳಿಸಿದರು.ಮುಖ್ಯಾಧಿಕಾರಿ ಹಾಗೂ ಕರವಸೂಲಿಗಾರರು, ಸಾರ್ವಜನಿಕರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ವಿಚಿತ್ರ ರೀತಿಯಲ್ಲಿ ತಪ್ಪು ಮಾಹಿತಿ ನೀಡುವುದರ ಜೊತೆಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ನೀರಿನ ಸಮಸ್ಯೆ, ಮಹಿಳೆಯರ ಶೌಚಾಲಯ, ಚರಂಡಿ, ರಸ್ತೆ ಸೇರಿದಂತೆ ಹಲವಾರು ಸೌಲಭ್ಯ ಕಲ್ಪಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಹೇಳಿದರು.ಕೂಡಲೇ ಇಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಗಜೇಂದ್ರ ಅಲ್ಲಿಪೂರ, ಮಹ್ಮದ್ ಮೌಲಾ ಸೌದಾಗರ, ಚಂದ್ರಶೇಖರ ಕವಡಿಮಟ್ಟಿ, ರಾಜು ಡೊಣ್ಣಿಗೇರಿ, ಅಬ್ದುಲ್ ರಹೀಮ್‌ಸಾಬ ಕಟಪಟ, ಹಸನ್ ಸೌದಾಗರ, ಹುಸೇನ್ ಸೌದಾಗರ, ಬಂದೇನವಾಜ್ ಚೌಧರಿ, ಸೈಫುಲ್ಲಾ ರಂಗಂಪೇಟ್, ಫಾರೂಕ್ ಅಹ್ಮದ್, ಹರ್ಷದ ದಖನಿ, ಮಹ್ಮದ್ ಶಾಹೀದ್, ಇಬ್ರಾಹಿಂ ಸೌದಾಗರ, ಮರದ್ ಘನಿ ಷಾ, ಗುಲಾಮ್ ರಸೂಲ್ ಮಕ್ತಾಪುರ, ಸೈಯ್ಯದ್ ಜಹೀರ್ ಮುಂತಾದವರು ಮನವಿ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry