ಸುರಪುರ: ಬುದ್ಧಿವಂತಶೆಟ್ಟಿ ಮೂರ್ತಿ ಶೀಘ್ರದಲ್ಲಿ ಅನಾವರಣ

7

ಸುರಪುರ: ಬುದ್ಧಿವಂತಶೆಟ್ಟಿ ಮೂರ್ತಿ ಶೀಘ್ರದಲ್ಲಿ ಅನಾವರಣ

Published:
Updated:

ಸುರಪುರ: ನಿಜಾಮರ ಕಬಂಧಬಾಹುವಿನಲ್ಲಿ ಕನ್ನಡ ಮಾತನಾಡುವುದೆ ಅಪರಾಧ ಎನ್ನುವಂತಿದ್ದ ಅಂದಿನ ಕಾಲದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದ ಕನ್ನಡ ಸಾಹಿತ್ಯ ಸಂಘದ ಸಂಸ್ಥಾಪಕ ದಿವಂಗತ ಬುದ್ಧಿವಂತಶೆಟ್ಟಿ ಅವರ ಜೀವಿತ ಅವಧಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರಕಿಸಲು ಬಹಳ ಪ್ರಯತ್ನ ಮಾಡಿದ್ದೆ. ಅದು ಸಫಲವಾಗದಿದ್ದಕ್ಕೆ ನಿರಾಶೆ ಇದೆ. ಶೆಟ್ಟಿ ಅವರ ಪುತ್ಥಳಿಯನ್ನು ಬರುವ ಕನ್ನಡ ರಾಜ್ಯೋತ್ಸವದಂದು ಅನಾವರಣ ಮಾಡಲಾಗುವುದೆಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಭರವಸೆ ನೀಡಿದರು.ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ ಬುಧವಾರ ಏರ್ಪಡಿಸಿದ್ದ 70ನೆ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶೆಟ್ಟಿ ಅವರ ಹೆಸರು ಅಜರಾಮರವಾಗಿಸಲು ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಲಾಗುವುದು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಇಲ್ಲಿನ ದೊರೆ ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರ ಹೆಸರಿನಲ್ಲಿ ಐತಿಹಾಸಿಕ ಪ್ರಶಸ್ತಿ ಮತ್ತು ಇಲ್ಲಿನ ಇತಿಹಾಸವನ್ನು ಅಜರಾಮರಗೊಳಿಸಿದ ಮೆಡೋಜ ಟೇಲರ್ ಅವರ ಹೆಸರಿನಲ್ಲಿ ಸ್ವಾಭಿಮಾನಿ ಪ್ರಶಸ್ತಿ ಆರಂಭಿಸಲಾಗುವುದು ಎಂದರು.ಇಲ್ಲಿನ ಸಂಘದ ರಂಗ ಮಂದಿರ ನಿರ್ಮಿಸಲು ರೂ. 10 ಲಕ್ಷ ಅನುದಾನ ಒದಗಿಸಿದ್ದೆ. ಕೆಲವೆ ದಿನಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ. ಮುಂದಿನ ನಾಡಹಬ್ಬ ನೂತನ ರಂಗಮಂದಿರದಲ್ಲಿ ಆಚರಿಸೋಣ ಎಂದರು.ರಾಜ್ಯದಲ್ಲಿ ಸಣ್ಣಕೈಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ನೀಡುವ ಆರ್ಥಿಕ ನೆರವಿನಲ್ಲಿ ಶೇ. 35 ರಷ್ಟು ರಿಯಾಯತಿ ನೀಡಲಾಗುತ್ತಿದೆ.ಯುವಕರು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಗೋನಾಳ ಭೀಮಪ್ಪ ಮಾತನಾಡಿ, ಬತ್ತದ ಕಣಜ ಎಂದು ಪ್ರಸಿದ್ಧಿ ಪಡೆದಿರುವ ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಕೊನೆ ಸ್ಥಾನದಲ್ಲಿರುವುದು ಕಳವಳಕಾರಿ.

 

ಈ ಭಾಗದ ವಿದ್ಯಾರ್ಥಿಗಳಲ್ಲಿ ಓದುವ, ಸಾಧಿಸುವ ಛಲ ಬೆಳೆಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಯುವಕರು ಕಾಲಹರಣ ಮಾಡದೆ ಓದಿನಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಎಚ್. ಸಿ. ಪಾಟೀಲ, ಉದ್ಯಮಿ ಕಿಶೋರಚಂದ ಜೈನ್ ವೇದಿಕೆಯಲ್ಲಿದ್ದರು.ಖ್ಯಾತ ವೈದ್ಯ ಡಾ. ಶಫಿ ಉಜ್ಜಮಾ, ಎಕ್ಸಿಕ್ಯೂಟಿವ್ ಎಂಜಿನಿಯರ್ ಚಂದ್ರಶೇಖರ ಕಕ್ಕೇರಿ, ದೊಡ್ಡಪ್ಪ ನಿಷ್ಠಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಅಲಬನೂರ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry