ಭಾನುವಾರ, ಜೂನ್ 20, 2021
29 °C

ಸುರಪುರ: ಮತ್ತೆ ಬಾಗಿಲು ಮುಚ್ಚಿದ ಖರೀದಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: `ಖುಲ್ ಜಾ ಸಿಮ್ ಸಿಮ್~ ಎಂಬ ಪ್ರಾಚೀನ ಕಥೆಯ ಸುಪ್ರಸಿದ್ಧ ನುಡಿ ಎಲ್ಲರಿಗೂ ಗೊತ್ತು. ಇಲ್ಲಿನ ತೊಗರಿ ಖರೀದಿ ಕೇಂದ್ರದ ಸ್ಥಿತಿಯೂ ಹಾಗೆ ಆಗಿದೆ. `ಖುಲ್ ಜಾ..~ ಮಂತ್ರವನ್ನು ತೊಗರಿ ಮಂಡಳಿ ರೈತರೊಡನೆ ಉಪಯೋಗಿಸಿಕೊಳ್ಳುತ್ತಿದೆ ಎಂದು ತೊಗರಿ ಬೆಳೆಗಾರರು ಆರೋಪಿಸಿದ್ದಾರೆ.ಕಳೆದ ತಿಂಗಳು ಆರಂಭವಾದ ಖರೀದಿ ಕೇಂದ್ರ ಬಾಗಿಲು ಮುಚ್ಚಿದ್ದೇ ಹೆಚ್ಚು. ಸರ್ಕಾರ ರೂ. 4 ಸಾವಿರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತೇವೆ ಎಂದು ರೈತರ ಮೂಗಿಗೆ ತುಪ್ಪ ಸವರಿಬಿಟ್ಟಿದೆ. ಇತ್ತ ನುಂಗಲೂ ಆಗದೆ ರೈತರು ಕೇವಲ ವಾಸನೆಗೆ ತೃಪ್ತಿ ಪಡುವಂತಾಗಿದೆ. ಬರ ಬರುತ್ತಾ ಆ ವಾಸನೆಯೂ ಹೊರಟು ಹೋಗಿ ರೈತ ಹತಾಶನಾಗುವಂತಾಗಿದೆ.ಖರೀದಿ ಕೇಂದ್ರ ಆರಂಭವಾಗಿ ಒಂದು ತಿಂಗಳು ಆಗುತ್ತಾ ಬಂದರೂ ತೆರೆದಿರುವುದು ಒಂದು ವಾರ ಮಾತ್ರ. ರೈತರು ತೊಗರಿ ಸ್ಯಾಂಪಲ್‌ನ್ನು ಕೇಂದ್ರಕ್ಕೆ ತರುತ್ತಾರೆ. ಕೇಂದ್ರದ ಸಿಬ್ಬಂದಿ ತೊಗರಿ ಯಾವ ದಿನದಂದು ತರಬೇಕು ಎಂದು ಚೀಟಿ ಕೊಡುತ್ತಾರೆ. ರೈತರು ನಿಗದಿತ ದಿನಾಂಕದಂದು ತೊಗರಿಯನ್ನು ತರುತ್ತಾರೆ.

ಹೀಗೆ ತಂದ ತೊಗರಿಯನ್ನು ಖರೀದಿ ಕೇಂದ್ರದವರು ಹಣವಿಲ್ಲ ಎಂದು ನೆಪ ಹೇಳಿ ಖರೀದಿ ಮಾಡುತ್ತಿಲ್ಲ. ಇಂದು ನೋಡೋಣ ನಾಳೆ ನೋಡೋಣ ಎಂದು ರೈತರಿಗೆ ಹೇಳುತ್ತಾರೆ.

 

ರೈತರು ಖರೀದಿ ಕೇಂದ್ರದ ಮುಂದೆ ತಾವು ತಂದ ತೊಗರಿ ಚೀಲಗಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದಾರೆ. ಹೀಗೆ ದಾಸ್ತಾನು ಮಾಡಿದ ತೊಗರಿ ಚೀಲಗಳ ಸಂಖ್ಯೆ ರೈತರ ಪ್ರಕಾರ 2,500 ಚೀಲಗಳಿಗೂ ಹೆಚ್ಚು. ರೈತರು ತಮ್ಮ ಚೀಲಗಳನ್ನು ಕಾಯಲು ಅನಿವಾರ್ಯವಾಗಿ ರಾತ್ರಿ ಇಲ್ಲೆ ಮಲಗುತ್ತಿದ್ದಾರೆ.

ಬುಧವಾರ ಕೆಲ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ತೊಗರಿ ಚೀಲಗಳನ್ನು ಮತ್ತೆ ವಾಪಾಸು ತೆಗೆದುಕೊಂಡು ಹೋಗಲು ಲಾರಿಗೆ ತುಂಬುತ್ತಿರುವುದು ಕಂಡು ಬಂತು. ಸಣ್ಣ ಹಿಡುವಳಿದಾರರ ಮುಖ ಬಾಡಿಹೋಗಿದೆ. ಜಳಕ, ಊಟವಿಲ್ಲದೆ ಕಂಗಾಲಾಗಿದ್ದಾರೆ.ಖರೀದಿ ಕೇಂದ್ರ ಆರಂಭವಾದ ನಂತರ ಇದುವರೆಗೂ ಕೇವಲ 1,670 ಕ್ವಿಂಟಲ್ ತೊಗರಿಯನ್ನು ಮಾತ್ರ ಖರೀದಿ ಮಾಡಿದೆ. ಇದು ತಾಲ್ಲೂಕಿನಲ್ಲಿ ಬೆಳೆದ ತೊಗರಿಗೆ ಶೇಕಡಾ ಒಂದರಷ್ಟು ಆಗುವುದಿಲ್ಲ. ಬರಗಾಲದಿಂದ ತತ್ತರಿಸಿರುವ ರೈತನಿಗೆ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಬಂದ್ ಮಾಡಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸರ್ಕಾರವೇ ತೊಗರಿ ಖರೀದಿ ಮಾಡುತ್ತದೆ ಎಂಬ ಆಸೆಯಲ್ಲಿ ರೈತನಿದ್ದ. ತೊಗರಿ ಮಾರಿ ಸಾಲ ಮುಟ್ಟಿಸಿ, ಸಂಸಾರ ನಡೆಸುವ ಉಮೇದಿನಲ್ಲಿದ್ದ. ಈಗ ಎಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.`ಸರ್ಕಾರ ಈ ರೀತಿ ರೈತರೊಡನೆ ಆಟವಾಡುತ್ತಿರುವುದು ಸರಿಯಲ್ಲ. ತಕ್ಷಣ ಸರ್ಕಾರ ಹಣ ಬಿಡುಗಡೆ ಮಾಡಿ ರೈತರು ಬೆಳೆದ ಸಂಪೂರ್ಣ ತೊಗರಿ ಖರೀದಿ ಮಾಡಬೇಕು. ಹಣ ಬಿಡುಗಡೆ ಮಾಡದಿದ್ದರೆ ಖರೀದಿ ಕೇಂದ್ರ ತೆರೆಯುವುದು ಯಾವ ಪುರುಷಾರ್ಥಕ್ಕೆ. ಈಗ ಖರೀದಿ ಕೇಂದ್ರದ ಮುಂದೆ ದಾಸ್ತಾನು ಮಾಡಿರುವ ತೊಗರಿಯನ್ನು ತಕ್ಷಣ ಖರೀದಿಸಬೇಕು.ಹಣ ಬಿಡುಗಡೆ ಮಾಡಲು ಆಗದಿದ್ದರೆ ಖರೀದಿ ಕೇಂದ್ರ ಕಾಯಂ ಆಗಿ ಮುಚ್ಚಿಬಿಡಿ. ರೈತರು ಖಾಸಗಿ ವ್ಯಾಪಾರಿಗಳ ಹತ್ತಿರ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸರ್ಕಾರದ ಈ ನೀತಿಯ ವಿರುದ್ಧ ಹೋರಾಟ ಅನಿವಾರ್ಯ~ ಎಂದು ಎಪಿಎಂಸಿ ಸದಸ್ಯ ಪರಮಣ್ಣ ಹಾಲಬಾವಿ ಎಚ್ಚರಿಸಿದ್ದಾರೆ.ಜಾತ್ಯತೀತ ಜನತಾ ದಳದ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕಟ್ಟಿಮನಿ ಇದಕ್ಕೆ ಧ್ವನಿ ಗೂಡಿಸಿದ್ದಾರೆ. ಖರೀದಿ ಕೇಂದ್ರಕ್ಕೆ ತೊಗರಿ ತಂದಿರುವ ರೈತರಾದ ವೆಂಕಟೇಶ ಸೀಬಂಡಿ, ವಿನಯರೆಡ್ಡಿ ನಗನೂರ್, ಮಂಜುನಾಥ ಕೊಡೇಕಲ್, ಬಸವರಾಜ ಕರಿಬಾವಿ, ಬಸವರಾಜ ಯಾಳಗಿ, ನಿಂಗಣ್ಣ ಕರಿಬಾವಿ, ಮಲ್ಲಣ್ಣ ಕೆಂಭಾವಿ ಮತ್ತಿತರರು ತಕ್ಷಣ ತೊಗರಿಯನ್ನು ಖರೀದಿಸುವಂತೆ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.