ಸೋಮವಾರ, ಏಪ್ರಿಲ್ 12, 2021
31 °C

ಸುರಪುರ: ಮಳೆಗಾಗಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಸಮೃದ್ಧ ಮಳೆ, ಬೆಳೆ, ಸುಭೀಕ್ಷೆಗಾಗಿ ಇಲ್ಲಿನ ಕಬಾಡಗೇರಾದ ಭಜನಾ ತಂಡದ ಸದಸ್ಯರು ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಕಬಾಡಗೇರಾದ ಈಶ್ವರ ದೇವಸ್ಥಾನದಿಂದ ಸಿದ್ದಾಪುರ ರಸ್ತೆಯ ಬೆಟ್ಟದಲ್ಲಿರುವ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಭಜನೆ ಮಾಡುತ್ತಾ ಪಾದಯಾತ್ರೆ ಮಾಡಿದರು.ಬೆಳಿಗ್ಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭಗವಾ ಧ್ವಜ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಟ್ಟ ಹತ್ತಿದರು. ಬೆಟ್ಟದ ಮೇಲಿರುವ ಪುರಾತನ ಗವಿಸಿದ್ದೇಶ್ವರನ ದೇವಸ್ಥಾನದಲ್ಲಿ ಸಂಜೆವರೆಗೂ ಭಜನೆ ಕೈಗೊಂಡರು. ಗವಿಸಿದ್ಧ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಯಿತು.ಗವಿಸಿದ್ಧನ ಮೇಲೆ ಏರಿಸಿದ ಪುಷ್ಪಗಳು ಸ್ವಲ್ಪ ಮಟ್ಟಿಗೆ ಕೆಳಗೆ ಬಿದ್ದರೆ ಅಲ್ಪ ಮಳೆ ಬರುತ್ತದೆಂದೂ, ಪುಷ್ಪಗಳು ಹೆಚ್ಚಿಗೆ ಕೆಳಗೆ ಬಿದ್ದರೆ ಒಳ್ಳೆಯ ಮಳೆ ಆಗುತ್ತದೆಂದು ನಂಬಿಕೆಯಿದೆ. ಬಲಗಡೆಗೆ ಹೂ ಬಿದ್ದರೆ ನಾವು ಅಂದುಕೊಂಡ ಕೆಲಸವಾಗುತ್ತದೆ ಎಡಗಡೆ ಬಿದ್ದರೆ ಕೆಲಸವಾಗುವುದಿಲ್ಲ ವೆಂದು ನಂಬಿಕೆ ಇದೆ. ಈ ಬಾರಿ ಹೂಗಳು ಹೆಚ್ಚಿನ ಪ್ರಮಾಣದಲ್ಲಿ ಕೆಳಗೆ ಬಿದ್ದ ಕಾರಣ ಮಳೆ ಚೆನ್ನಾಗಿ ಬರುತ್ತದೆ ಎಂದು ನಂಬಲಾಯಿತು.ನಂತರ ಗವಿಸಿದ್ಧನಿಗೆ ನೈವೇದ್ಯ ಸಮರ್ಪಿಸಿ ಎಲ್ಲರೂ ಪ್ರಸಾದ ಸ್ವೀಕರಿಸಿದರು. ಮಹಾ ಮಂಗಳಾರತಿ ಮಾಡಲಾಯಿತು. ಸಮೃದ್ಧ ಮಳೆ ಬರಲಿ, ಬೆಳೆ ಚೆನ್ನಾಗಿ ಬೆಳೆಯಲಿ, ನಾಡು ಸುಭೀಕ್ಷವಾಗಲಿ, ಜನರಲ್ಲಿ ಹರ್ಷ ಮೂಡಲಿ, ಶಾಂತಿ, ಸುಖ, ನೆಮ್ಮದಿ, ಸಮೃದ್ಧಿ ಮೂಡಲಿ ಎಂದು ಬೇಡಿಕೊಳ್ಳಲಾಯಿತು.ನೇತೃತ್ವ ವಹಿಸಿದ್ದ ಬಿಲ್ಲಂಕೊಂಡಿ ಮಠದ ನಾಗಭೂಷಣಸ್ವಾಮಿ ಮಾತನಾಡಿ, ಭೂತಾಯಿ ಒಡಲಿಗೆ ವರುಣನ ಕೃಪೆ ಎಷ್ಟು ಮಹತ್ವವೋ, ಸಂಕಷ್ಟದಲ್ಲಿರುವ ಜನರಿಗೆ ಸಿದ್ಧರ, ಮಹಾ ಪುರುಷರ ಶ್ರೀರಕ್ಷೆಯೂ ಮಹತ್ವದ್ದಾಗಿದೆ. ಭಜನೆ ಮತ್ತು ಪಾದಯಾತ್ರೆಯಲ್ಲಿ ಅಪಾರ ಶಕ್ತಿಯಿದೆ. ಇದನ್ನು ನಂಬಿಕೆಯಿಟ್ಟು ಮಾಡಿದಲ್ಲಿ ಶರಣರ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೇವೆ ಎಂದು ನುಡಿದರು.ಗುರುರಾಜ ಗುತ್ತೇದಾರ್, ಸುರೇಶ ಶೆಟ್ಟಿ, ವಿನೋದಕುಮಾರ ಜೇವರ್ಗಿ ಮಾತನಾಡಿದರು.ಶರಣಯ್ಯಸ್ವಾಮಿ ಮಠಪತಿ, ಸಿದ್ದಣ್ಣ ದಿಗ್ಗಾವಿ, ಮಹಾದೇವಪ್ಪ ಕಳ್ಳಿಮನಿ, ಬಸವರಾಜ ಹೂಗಾರ, ದೇವಿಂದ್ರಪ್ಪ ಕಳ್ಳಿಮನಿ, ಅರುಣಕುಮಾರ ಹೂಗಾರ, ಶ್ರೀನಿವಾಸ ಪುಜಾರಿ, ಮಲ್ಲು ನಾಯಕ್, ನಿಂಗಯ್ಯ ಏವೂರ, ವೆಂಕಟೇಶ ಕಲ್ಲೋಡಿ, ಗೋಪಾಲ ಬಾಗಲಕೋಟ, ಸಂತೋಷಕುಮಾರ ಶೀಲವಂತ, ಗೋಪಾಲ ಮೂಲಿಮನಿ, ಅಮಲಪ್ಪ ಕಟ್ಟಿಮನಿ, ಚಂದ್ರಹಾಸ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.