ಗುರುವಾರ , ನವೆಂಬರ್ 14, 2019
19 °C

ಸುರಪುರ: ಶಿವರಾಜಗೆ ಕೆಜೆಪಿ ಟಿಕೆಟ್

Published:
Updated:

ಸುರಪುರ: ವಿಧಾನಸಭೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಕುರುಬ ಸಮಾಜದ ಶಿವರಾಜ ಮಲ್ಲೇಶ್‌ಗೆ ಯಡಿಯೂರಪ್ಪ ಕೆಜೆಪಿ ಟಿಕೆಟ್ ನೀಡಿ ಇಲ್ಲಿನ ದೊರೆಗಳಿಗೆ ಸೆಡ್ಡು ಹೊಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಕಳೆದ ಹದಿನೈದು ದಿನಗಳಿಂದ ತೀವ್ರ ಚರ್ಚೆಯಲ್ಲಿದ್ದ ಶಿವರಾಜ ಈ ಮೂಲಕ ಅಖಾಡಕ್ಕೆ ಇಳಿಯುವುದು ಸ್ಪಷ್ಟವಾಗಿದೆ. ಶಿವರಾಜ್‌ಗೆ ಕುರುಬ ಸಮಾಜದ ಯುವಕರು ಬೆಂಬಲಕ್ಕೆ ನಿಂತ್ದ್ದಿದಾರೆ.ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕುರುಬ ಸಮಾಜದ ಕೋಳೂರು ಮಲ್ಲಪ್ಪ ಶಾಸಕರಾಗಿ ಆಯ್ಕೆಯಾಗಿದ್ದು ಬಿಟ್ಟರೆ ಇದುವರೆಗೂ ವಾಲ್ಮೀಕಿ ಜನಾಂಗದವರೆ ಆರಿಸಿ ಬಂದಿದ್ದಾರೆ. ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗದವರು ಪ್ರಾಬಲ್ಯ ಹೊಂದಿರುವುದರಿಂದ ಇತರ ಜನಾಂಗದವರೂ ಶಾಸಕರಾಗಬೇಕೆನ್ನುವ ಕನಸು ಈಡೇರಿಲ್ಲ.2004ರಲ್ಲಿ ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ್ದರಿಂದ ಇತರ ಜಾತಿ ಜನಾಂಗದವರಿಗೆ ಸ್ಪರ್ಧೆಗಿಳಿಯಲು ಅವಕಾಶವೆ ತಪ್ಪಿದಂತಾಗಿತ್ತು. ಕುರುಬ ಸಮಾಜದ ಉಪ ಜಾತಿಯಾದ ಗೊಂಡ ಕುರುಬರಿಗೆ ಸಂವಿಧಾನದಲ್ಲಿ ಪರಿಶಿಷ್ಟ ಮೀಸಲಾತಿ ಒದಗಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡ ಇಲ್ಲಿನ ಕುರುಬ ಸಮಾಜದ ಯುವಕರು ಬೀದರ ಜಿಲ್ಲೆಯ ಭಾಲ್ಕಿಯ ಶಿವರಾಜ ಮಲ್ಲೇಶ್ ಅವರನ್ನು ಕಣಕ್ಕಿಳಿಸಲು ಯಶಸ್ವಿಯಾಗಿದ್ದಾರೆ.ಬೀದರ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾಗಿ ಶಿವರಾಜ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿರುವ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಶಿವರಾಜ ಸೂಕ್ತ ಅಭ್ಯರ್ಥಿಯೆಂದು ಗುರುತಿಸಿದ ತಾಲ್ಲೂಕಿನ ಕನಕ ಯುವ ಸೇನೆಯ ಕಾರ್ಯಕರ್ತರು ಅವರನ್ನು ಸಂಪರ್ಕಿಸಿ ಸ್ಪರ್ಧಿಸಲು ಒಪ್ಪಿಸಿದರು. ಇಲ್ಲಿನ ದೊರೆಗಳಿಗೆ ಕಂಟಕವಾಗುವತ್ತ ಶಿವರಾಜ ಹೆಜ್ಜೆ ಹಾಕಿದ್ದಾರೆ.ಮೊದಲು ಪಕ್ಷೇತರರಾಗಿ ಕಣಕ್ಕಿಳಿಯಲು ಯೋಚಿಸಿದ್ದ ಶಿವರಾಜ ಇಲ್ಲಿ ಕೆಜೆಪಿ ಸೇರಲು ಯಾರೂ ಉತ್ಸುಕರಿಲ್ಲದ್ದನ್ನು ಕಂಡು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಕೆಜೆಪಿ ಟಿಕೆಟ್ ಪಡೆದು ಕೊಂಡಿದ್ದಾರೆ. ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳೆ ನಿರ್ಣಾಯಕ. 60 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕುರುಬ ಸಮಾಜದ ಅಭ್ಯರ್ಥಿಯ ಸ್ಪರ್ಧೆ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಈಗಾಗಲೆ ತಾಲ್ಲೂಕಿನ ಕುರುಬ ಸಮಾಜದ ಮುಖಂಡರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಸೋಮವಾರದಿಂದ ಪ್ರಚಾರ ಆರಂಭಿಸುತ್ತೇವೆ. ಯಡಿಯೂರಪ್ಪ ಸ್ವತಃ ಆಗಮಿಸಿ ಪ್ರಚಾರ ಸಭೆ ನಡೆಸಲಿದ್ದಾರೆ. ಕುರುಬ ಸಮಾಜ ಬಾಂಧವರು ಒಕ್ಕಟ್ಟಿನಿಂದ ಮತ ಚಲಾಯಿಸಿದರೆ  ನಮ್ಮ ಅಭ್ಯರ್ಥಿಯ ಗೆಲುವು ಖಚಿತವಾಗಲಿದೆ ಎಂದು ಕನಕ ಯುವ ಸೇನೆಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ರಂಗನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರತಿಕ್ರಿಯಿಸಿ (+)