ಭಾನುವಾರ, ಮೇ 22, 2022
29 °C

ಸುರಿದ ಮಳೆ: ಹಿಂಗಾರು ಬಿತ್ತನೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಕೆಲ ದಿನಗಳಿಂದ ಸುರಿದ ಮಳೆಗೆ ಸಂತಸ ವ್ಯಕ್ತಪಡಿಸಿರುವ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.ಈ ಬಾರಿ ಹಿಂಗಾರು ಕ್ಷೀಣಿಸಿದ ಪರಿಣಾಮ ಬರ ಪರಿಸ್ಥಿತಿ ಎದುರಿಸುತ್ತಿದ್ದ ರೈತರು ಕೃಷಿ ಕೆಲಸ ಸ್ಥಗಿತಗೊಳಿಸಿ ಆಂತಕಕ್ಕೆ ಒಳಗಾಗಿದ್ದರು. ಇದೀಗ ತಡವಾಗಿಯಾದರೂ ಸುರಿಯುತ್ತಿರುವ ವರ್ಷಧಾರೆಗೆ ಹರ್ಷಗೊಂಡಿರುವ ರೈತರು ಬಿತ್ತನೆ ಕೆಲಸವನ್ನು ಬಿರುಸುಗೊಳಿಸಿದ್ದಾರೆ.ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಕಟಾವು ಕಾರ್ಯ ಕಳೆದ ಮೇ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಬಹುತೇಕವಾಗಿ ಮುಕ್ತಾಯಗೊಂಡಿತ್ತು. ನಂತರ ಮಳೆಯಾಶ್ರಿತ ಭಾಗದ ರೈತರು ಭೂಮಿ ಉಳುಮೆ ಮಾಡಿ ರಾಗಿ ಬಿತ್ತನೆ ಕೈಗೊಳ್ಳಲು ಮಳೆ ಕೊರತೆ ಉಂಟಾಗಿತ್ತು.ಹಲವೆಡೆ ಬಿತ್ತನೆ ಮಾಡಿದ್ದ ತೊಗರಿ, ಅವರೆ, ಹುರುಳಿ, ಅಲಸಂದೆ ಮುಂತಾದ ದ್ವಿದಳ ಧಾನ್ಯ ಬೆಳೆಗಳು ಮಳೆಯಿಲ್ಲದೇ ಬಾಡುತ್ತಿದ್ದವು. ಈಗ ಬಿದ್ದ ಮಳೆಗೆ ಒಣಗುತ್ತಿದ್ದ ಬೆಳೆಗಳು ಚೇತರಿಕೆ ಕಂಡಿವೆ. ಮಳೆಯಿಲ್ಲದೇ ಪಾಳು ಬಿದ್ದಿದ್ದ ಭೂಮಿಯನ್ನು ಉತ್ತು ಹದಗೊಳಿಸಿ ರಾಗಿ ಬಿತ್ತನೆಯಲ್ಲಿ ತೊಡಗಿದ್ದಾರೆ.ಕಾವೇರಿ ನದಿ ತೀರದ ಕಟ್ಟೇಪುರ ಹಾಗೂ ಹಾರಂಗಿಯ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಬತ್ತದ ಬೆಳೆ ಮಳೆಯಿಲ್ಲದೇ ಹಲವು ರೀತಿಯ ರೋಗ- ರುಜಿನಗಳಿಗೆ ತುತ್ತಾಗಿ   ಸೊರಗಿತ್ತು.

 

ಬಹುತೇಕ ಭಾಗದಲ್ಲಿ ಬೆಂಕಿ ರೋಗ ಕಾಣಿಸಿಕೊಂಡು ಗರಿಯ ಅಂಚುಗಳು ಒಣಗಿ ಹೋಗಿತ್ತು. ಕೀಟಗಳ ಹಾವಳಿಯಿಂದಾಗಿ ಬತ್ತದ ಗರಿಗಳನ್ನೇ ಒಂದು ಕಡೆಯಿಂದೇ ಸಂಪೂರ್ಣವಾಗಿ ತಿನ್ನುತ್ತಾ ಬೆಳೆಯೇ ನಾಶಾವಾಗುವ ಹಂತ ತಲುಪಿತ್ತು.ಅದೃಷ್ಟವಶಾತ್ ತಡವಾಗಿಯಾದರೂ ಧಾರಾಕಾರವಾಗಿ ಬಿದ್ದ ಮಳೆ ಬತ್ತದ ಬೆಳೆಗೆ ವರದಾನವಾಗಿದೆ ಎನ್ನುತ್ತಾರೆ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.