ಸುರುಳಿಯಾಗಿ ಬಿಚ್ಚಿಕೊಂಡ ಸಿನಿಮಾ ನೆನಪುಗಳು

7

ಸುರುಳಿಯಾಗಿ ಬಿಚ್ಚಿಕೊಂಡ ಸಿನಿಮಾ ನೆನಪುಗಳು

Published:
Updated:
ಸುರುಳಿಯಾಗಿ ಬಿಚ್ಚಿಕೊಂಡ ಸಿನಿಮಾ ನೆನಪುಗಳು

ಬೆಂಗಳೂರು: ಭಾರತೀಯ ಸಿನಿಮಾ ಶತಮಾನೋತ್ಸವಕ್ಕೆ ಶುಕ್ರವಾರ ಚಾಲನೆ ಸಿಗುವುದೇ ತಡ ಅಲ್ಲಿದ್ದ ಹಿರಿಯ ತಾರೆಯರ ಮನದಂಗಳದಲ್ಲಿ ನೂರಾರು ನೆನಪುಗಳು ಸಿನಿಮಾ ರೀಲಿನಂತೆ ಸುರುಳಿ, ಸುರುಳಿಯಾಗಿ ಬಿಚ್ಚಿಕೊಂಡವು.



ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಾರ್ತಾ ಇಲಾಖೆ ಸಹಯೋಗದಲ್ಲಿ ಈ ಸಮಾರಂಭವನ್ನು ಆಯೋಜಿಸಿತ್ತು. ತಮ್ಮ ಮನೋಜ್ಞ ಛಾಯಾಗ್ರಹಣದ ಮೂಲಕ ಗುರುದತ್ ಅವರ ಚಿತ್ರಗಳಿಗೆ ಜೀವತುಂಬಿದ `ಮುಕ್ಕಣ್ಣ' ವಿ.ಕೆ. ಮೂರ್ತಿ, `ನೂರು ತುಂಬಿದ ಈ ಕ್ಷಣದಲ್ಲಿ ಮತ್ತೆ ಹಳೆಯದೆಲ್ಲ ನೆನ ಪಾಗುತ್ತಿದೆ' ಎಂದರು. ಆ ಮೂಲಕ ಶ್ರೋತೃಗಳನ್ನು `ಕಾಗಜ್ ಕಾ ಫೂಲ್' ಕಾಲಕ್ಕೆ ಕರೆದೊಯ್ದರು.



ಕಪ್ಪು-ಬಿಳುಪಿನ ದೃಶ್ಯಗಳಲ್ಲೂ ಮಾಧುರ್ಯ ಉಣಬಡಿಸುವ ಮೂಲಕ ದೇಶದ ತುಂಬಾ ಖ್ಯಾತವಾಗಿರುವ ಮೈಸೂರಿನ ಈ ಅಜ್ಜ, `ಆಗಿನ ದಿನಗಳನ್ನು ಎಷ್ಟು ನೆನಪಿಸಿಕೊಂಡರೂ ಕಡಿಮೆಯೇ' ಎನ್ನುತ್ತಲೇ ಮೈಕ್ ಕೆಳಗಿಟ್ಟರು.



ವೈಜಯಂತಿ ಮಾಲಾ, ಸಭಾಂಗಣದಲ್ಲಿದ್ದ ಹಳೆ ತಲೆಮಾರಿನ ಚಿತ್ರಪ್ರೇಮಿಗಳಲ್ಲಿ ತುಂಟ ನಗೆಯೊಂದು ಮಿಂಚಿ, ಮರೆಯಾಗುವಂತೆ ಮಾಡಿದರು. `ಜನರಿಂದ ಸಿಕ್ಕ ಪ್ರೀತಿಯನ್ನು ನನ್ನಿಂದ ಬಣ್ಣಿಸಲು ಸಾಧ್ಯವಿಲ್ಲ. ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆ ತುಂಬಿದ ನಮಸ್ಕಾರ' ಎಂದರು ವೈಜಯಂತಿ.



`ಇಂದಿನ ದಿನಮಾನದಲ್ಲಿ ಕೇವಲ ಕೆಟ್ಟ ಚಿತ್ರಗಳೇ ಬರುತ್ತಿವೆ. ಅಂತಹ ಸಿನಿಮಾದಲ್ಲಿ ಯಾವ ನೀತಿಯೂ ಇರುವುದಿಲ್ಲ. ಉದ್ಯಮ ಉಳಿಯಬೇಕಾದರೆ ಅಲ್ಲಿದ್ದವರು ಎಚ್ಚೆತ್ತುಕೊಳ್ಳಬೇಕು' ಎಂದು ಸಾಹುಕಾರ ಜಾನಕಿ ಚಾಟಿ ಬೀಸಿದರು.

`ಸಿನಿಮಾದ ನೂರು ವರ್ಷಗಳ ಇತಿಹಾಸದಲ್ಲಿ 64 ವರ್ಷಗಳು ನನ್ನವು ಎಂಬ ಹೆಮ್ಮೆ ನನಗಿದೆ. ಈ ಕ್ಷೇತ್ರದ ಹಲವು ಏರಿಳಿತಗಳನ್ನು ನಾನು ಕಂಡಿದ್ದೇನೆ. ಅದರ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ಆದರೆ, ಗುಣಮಟ್ಟ ಎಂದಿಗೂ ಇಷ್ಟು ಕಳಪೆ ಆಗಿರಲಿಲ್ಲ' ಎಂದು ಅವರು ವಿಷಾದದಿಂದ ಹೇಳಿದರು.



ಕಿತ್ತೂರು ಚೆನ್ನಮ್ಮನಾಗಿ ಖಡ್ಗ ಹಿಡಿದು ಅಬ್ಬರಿಸಿದ್ದ ಬಿ.ಸರೋಜಾದೇವಿ, ಮೈಕ್ ಕೈಗೆ ಸಿಗುತ್ತಲೇ ಕಣ್ಣಲ್ಲಿ ಹನಿ ತುಂಬಿಕೊಂಡರು. `ದಶಕಗಳ ಕಾಲ ನಮ್ಮಂದಿಗೆ ನಟಿಸಿದ್ದ ಎಷ್ಟೋ ಕಲಾವಿದರು ಈಗ ಇಲ್ಲವಾಗಿದ್ದಾರೆ. ಅವರೆಲ್ಲ ನಮಗೆ ದಾರಿ ತೋರಿದವರು' ಎಂದು ಜಿನುಗುತ್ತಿದ್ದ ಕಣ್ಣೀರು ಒರೆಸಿಕೊಂಡರು.



ಪುಣೆಯ ಚಲನಚಿತ್ರ ಭಂಡಾರದ ಸಂಸ್ಥಾಪಕ ನಿರ್ದೇಶಕರಾಗಿದ್ದ ಪಿ.ಕೆ. ನಾಯರ್ ಕೂಡ ಅಲ್ಲಿದ್ದರು. `ಜಗತ್ತಿನ ಯಾವ ದೇಶದಲ್ಲೂ ನಿರ್ಮಾಣ ಆಗದಷ್ಟು ಸಿನಿಮಾಗಳು ಪ್ರತಿ ವರ್ಷ ನಮ್ಮಲ್ಲಿ ತಯಾರಾಗುತ್ತವೆ. ಫ್ರಾನ್ಸ್‌ನಲ್ಲಿ ವರ್ಷಕ್ಕೆ 20 ಸಿನಿಮಾಗಳು ತಯಾರಾದರೆ, ನಮ್ಮಲ್ಲಿ ನಿರ್ಮಾಣವಾಗುವುದು 900. ಅವುಗಳನ್ನು ಸಂರಕ್ಷಿಸುವುದು ಕಷ್ಟದ ಕೆಲಸವಾಗಿದೆ' ಎಂದು ನಾಯರ್ ಹೇಳಿದರು.



`ಪ್ರಳಯದ ದಿನವೇ ಶತಮಾನೋತ್ಸವ ಆಚರಿಸುತ್ತಿದ್ದೇವೆ' ಎಂದು ಶಿವರಾಜಕುಮಾರ್ ಚಟಾಕಿ ಹಾರಿಸಿದರು. ಇವರೆಲ್ಲರ ಜೊತೆಗೆ ಹಿರಿಯ ನಿರ್ದೇಶಕರಾದ ಭಗವಾನ್, ಎಂ.ಭಕ್ತವತ್ಸಲ, ಕಲಾವಿದೆ ಭಾರತಿ, ನಟ ಶಿವರಾಜಕುಮಾರ್ ಮತ್ತು ನಿರ್ಮಾಪಕ ಮುನಿರತ್ನ ಅವರನ್ನು ಸನ್ಮಾನಿಸಲಾಯಿತು.



ಸಮಾರಂಭಕ್ಕೆ ಚಾಲನೆ ನೀಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ, `ಸಿನಿಮಾದಷ್ಟು ಪ್ರಭಾವಶಾಲಿ ಮಾಧ್ಯಮ ಬೇರಿಲ್ಲ' ಎಂದರು.



ಉಪ ಮುಖ್ಯಮಂತ್ರಿ ಆರ್. ಅಶೋಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹಾಜರಿದ್ದರು.

ಹಿರಿಯರನ್ನು ಕಾಯಿಸಿದ ಉಪ ಮುಖ್ಯಮಂತ್ರಿ

ಚಿತ್ರರಂಗದ ದಿಗ್ಗಜರಾದ ವಿ.ಕೆ. ಮೂರ್ತಿ, ಎಸ್.ಕೆ. ಭಗವಾನ್, ಎಂ.ಭಕ್ತವತ್ಸಲ, ಸಾಹುಕಾರ ಜಾನಕಿ ಮತ್ತಿತರರನ್ನು ಉಪ ಮುಖ್ಯಮಂತ್ರಿ ಆರ್.ಅಶೋಕ ಒಂದೂಮುಕ್ಕಾಲು ಗಂಟೆ ಕಾಯುತ್ತಾ ಕೂಡುವಂತೆ ಮಾಡಿದರು. ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಚಾಲನೆ ದೊರೆತಾಗ 6.45 ಆಗಿತ್ತು. 80 ವರ್ಷ ಮೇಲ್ಪಟ್ಟ ಈ ಹಿರಿಯರು ತುಂಬಾ ಹೊತ್ತು ಕುಳಿತಿದ್ದರಿಂದ ಬಳಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry