ಸುರುಳಿ ಕೀಟ, ರೇಷ್ಮೆಗೆ ಕಾಟ

7

ಸುರುಳಿ ಕೀಟ, ರೇಷ್ಮೆಗೆ ಕಾಟ

Published:
Updated:

ಗಂಧದ ನಾಡು, ಚಿನ್ನದ ಬೀಡು ಆಗಿರುವ ಕರ್ನಾಟಕ, ರೇಷ್ಮೆಯ ಗೂಡೂ ಹೌದು. ರೇಷ್ಮೆ ಮುಂಚಿನಿಂದಲೂ ರೈತರು ನೆಚ್ಚಿಕೊಂಡಿರುವ ಸಾಂಪ್ರದಾಯಿಕ ವಾಣಿಜ್ಯ ಬೆಳೆ. ಮಾರ್ಚ್ 2013ರ ಅಂಕಿ-ಅಂಶದಂತೆ ರಾಜ್ಯದಲ್ಲಿ 1.30 ಲಕ್ಷ ರೈತ ಕುಟುಂಬಗಳು ರೇಷ್ಮೆ ಕೃಷಿ ಅವಲಂಬಿಸಿ ಬದುಕುತ್ತಿವೆ. ಈ ಕೃಷಿಯ ಬೆನ್ನೆಲುಬಾದ ಹಿಪ್ಪುನೇರಳೆ ಸಸಿಗಳನ್ನು ನಾಶಪಡಿಸಿ, ರೇಷ್ಮೆ ಬೆಳೆಗಾರರನ್ನು ನಷ್ಟದ ಕೂಪಕ್ಕೆ ನೂಕುವ `ಎಲೆ ಸುರುಳಿ ಕೀಟ ಬಾಧೆ' ಸಾಮಾನ್ಯ. ಈ ಬಾಧೆ ಬಂತೆಂದರೆ ರೇಷ್ಮೆ ಬೆಳೆಗಾರರ ಸ್ಥಿತಿ ಅಧೋಗತಿ.ಎಲೆ ಸುರುಳಿ ಕೀಟ ಬಾಧೆಗೆ ವೈಜ್ಞಾನಿಕ ಹೆಸರು `ಡೈಯಫೆನಿಯಾ ಪಲ್ವೆರುಲೆಂಟಾಲಿಸ್'. ಮುಂಗಾರು ಮಳೆಯ ಆರಂಭದಿಂದ ಚಳಿಗಾಲದವರೆಗೂ ಇವುಗಳ ತೊಂದರೆ ಮುಂದುವರಿಯುವುದು ಸಾಮಾನ್ಯ. ಅದರಲ್ಲೂ ಸೆಪ್ಟೆಂಬರ್ - ನವೆಂಬರ್ ತಿಂಗಳಿನಲ್ಲಿ ಇದರ ಉಪದ್ರವ ಹೆಚ್ಚು. ಸಾಮಾನ್ಯವಾಗಿ ಇದು ಕಂಡುಬರುವುದು ಸಸಿಗಳ ರೆಂಬೆಗಳ ತುದಿಯಲ್ಲಿ. ಈ ಕೀಟ ಪೀಡೆಯ ಹಾವಳಿಯಿಂದ ಹಿಪ್ಪುನೇರಳೆ ಸೊಪ್ಪಿನ ಇಳುವರಿಯಲ್ಲಿ ಹೆಕ್ಟೇರ್‌ಗೆ ವರ್ಷವೊಂದಕ್ಕೆ ಏನಿಲ್ಲವೆಂದರೂ ಸುಮಾರು 5 ಸಾವಿರ ಕೆ.ಜಿ.ಯಷ್ಟು ನಷ್ಟ ಕಟ್ಟಿಟ್ಟ ಬುತ್ತಿ. ಇದರ ಅರ್ಥ ಹೆಚ್ಚು ಕಡಿಮೆ 600 ರೇಷ್ಮೆ ಮೊಟ್ಟೆಗಳಿಗೆ ಮೇಯಿಸುವಷ್ಟು ಸೊಪ್ಪು ನಾಶ. ಇದರಿಂದ ಪ್ರತಿ ಹೆಕ್ಟೇರ್‌ಗೆ ರೈತರಿಗೆ ಉಂಟಾಗುವ ನಷ್ಟ ಎಷ್ಟು ಗೊತ್ತೆ? ಸುಮಾರು ಒಂದು ಲಕ್ಷ ರೂಪಾಯಿ!ಬಾಧೆಗೊಳಗಾದ ಕುಡಿಭಾಗದ ಎಲೆಗಳು ಸುರುಳಿಯಾದರೆ ನಿಮ್ಮ ಬೆಳೆ ಈ ಕೀಟ ಬಾಧೆಗೆ ತುತ್ತಾಗಿದೆ ಎಂದೇ ಅರ್ಥ. ಈ ಕೀಟವು ಕುಡಿಭಾಗದ ಎಲೆಗಳನ್ನು ತಿನ್ನುವುದರಿಂದ ಆ ಸಸಿಯ ಬೆಳವಣಿಗೆ ಕುಂಠಿತವಾಗಿರುತ್ತದೆ. ಹಾವಳಿಗೆ ಒಳಗಾಗಿರುವ ಸಸಿಯ ಕೆಳ ಭಾಗದ ಎಲೆಗಳ ಮೇಲೆ ಕೀಟದ ಹಿಕ್ಕೆಗಳನ್ನು ಕಾಣಬಹುದು.ಹತೋಟಿ ಹೀಗಿದೆ

ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರ ಅನುಸಾರ ಈ ಕೀಟದ ಹತೋಟಿಗೆ ಮೂರು ವಿಧಾನಗಳಿವೆ.

ಭೌತಿಕ ವಿಧಾನ: ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಎಲೆ ಸುರುಳಿ ಕೀಟದ ಬಾಧೆ ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ತಾತ್ಸಾರ ಸಲ್ಲ. ಬಾಧೆ ತಗುಲಿದ ಭಾಗಗಳನ್ನು ಕತ್ತರಿಸಿ, ಪಾಲಿಥೀನ್ ಚೀಲಗಳಲ್ಲಿ ಅಥವಾ ಬಕೆಟ್‌ನಲ್ಲಿ ಸಂಗ್ರಹಿಸಿ ಸುಡುವುದು. ಈ ಕ್ರಮ ಪಾಲಿಸುವುದರಿಂದ ಕೀಟ ಬಾಧೆಯನ್ನು ಅಧಿಕ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಆಳವಾಗಿ ಉಳುಮೆ ಮಾಡುವುದರಿಂದ ಹಾಗೂ ನೀರು ಹಾಯಿಸುವುದರಿಂದ ಮಣ್ಣಿನಲ್ಲಿ ಹುದುಗಿರುವ ಎಲೆ ಸುರುಳಿ ಕೀಟದ ಕೋಶಗಳನ್ನು ನಾಶಪಡಿಸಬಹುದು. ಬೆಳಕಿನ ಜಾಲವನ್ನು (ಇನ್ಸೆಕ್ಟ್ ಟ್ರ್ಯಾಪ್ ಲೈಟ್) ಉಪಯೋಗಿಸಿ ಪ್ರೌಢ ಎಲೆ ಸುರುಳಿ ಕೀಟಗಳನ್ನು ಆಕರ್ಷಿಸಿ ಕೊಲ್ಲಬಹುದು.ರಾಸಾಯನಿಕ ವಿಧಾನ: ಶೇ 0.076 ಡಿಡಿವಿಪಿ (10 ಲೀ ನೀರಿಗೆ 10 ಎಂ.ಎಲ್‌ನಂತೆ) ಕೀಟನಾಶಕವನ್ನು ಕಡ್ಡಿ ಕಟಾವಾದ 10 ದಿನಗಳ ನಂತರ ಹಾಗೂ ಅವಶ್ಯಕತೆ ಇದ್ದಲ್ಲಿ ಎರಡನೆ ಸಿಂಪಡಣೆಯಾಗಿ ಡಿಡಿವಿಪಿ ಅಥವಾ ಬೇವಿನ ಕೀಟನಾಶಕವನ್ನು (10 ಲೀ ನೀರಿಗೆ 5 ಎಂ.ಲ್‌ನಂತೆ) ಮೊದಲ ಸಿಂಪಡಣೆಯ 10 ದಿನಗಳ ನಂತರ ಅನುಸರಿಸುವುದು. ಡಿಡಿವಿಪಿ ಅಥವಾ ಬೇವಿನ ಕೀಟನಾಶಕದ ಸಿಂಪಡಣೆಯ ನಂತರ ಕ್ರಮವಾಗಿ 7 ಮತ್ತು 10 ದಿನಗಳ ಸುರಕ್ಷತಾ ಅವಧಿಯನ್ನು ಪಾಲಿಸಬೇಕು. ನಂತರ ರೇಷ್ಮೆ ಹುಳುಗಳಿಗೆ ಸೊಪ್ಪನ್ನು ಕೊಡಬಹುದು.ಜೈವಿಕ ವಿಧಾನ: ಎಲೆ ಸುರುಳಿ ಕೀಟದ ಮೊಟ್ಟೆಗಳನ್ನು ನಾಶಪಡಿಸಲು ಟ್ರೈಕೋಗ್ರಾಮ ಕಿಲೋನಿಸ್ ಜೈವಿಕ ಮೊಟ್ಟೆ ಪರತಂತ್ರ ಜೀವಿಗಳನ್ನು (ಟ್ರೈಕೋ ಕಾರ್ಡ್‌ಗಳು) ಬಿಡುಗಡೆಗೊಳಿಸಿ, ಒಂದು ಎಕರೆಗೆ ಒಂದು ವಾರಕ್ಕೆ ಒಂದು ಟ್ರೈಕೋ ಕಾರ್ಡ್‌ನಂತೆ ಸತತ ನಾಲ್ಕು ವಾರಗಳ ಕಾಲ ಉಪಯೋಗಿಸಬೇಕು. ಒಂದು ಟ್ರೈಕೋ ಕಾರ್ಡ್ ಅನ್ನು 12ರಿಂದ 16 ತುಂಡುಗಳನ್ನಾಗಿ ಮಾಡಿ ಹಿಪ್ಪು ನೇರಳೆ ತೋಟದೊಳಗೆ ಅಲ್ಲಲ್ಲಿ ಎಲೆಗಳ ಕೆಳಭಾಗದಲ್ಲಿ ಕಟ್ಟಬೇಕು.`ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳು ಹಿಪ್ಪುನೇರಳೆ ಎಲೆ ಸುರುಳಿ ಕೀಟ ಬಾಧೆಯ ಆರಂಭಿಕ ಹಂತವಾಗಿರುತ್ತದೆ. ಈ ಹಂತದಲ್ಲಿಯೇ ರೇಷ್ಮೆ ಬೆಳೆಗಾರರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸೆಪ್ಟೆಂಬರ್, ನವೆಂಬರ್ ತಿಂಗಳಲ್ಲಿ ಪ್ರತಿಶತ ನೂರರಷ್ಟು ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ' ಎನ್ನುತ್ತಾರೆ ವಿಜ್ಞಾನಿ ಜೆ.ಬಿ. ನರೇಂದ್ರ ಕುಮಾರ್. ರೇಷ್ಮೆ ತರಬೇತಿ ಸಂಸ್ಥೆಯ ಸಂಪರ್ಕಕ್ಕೆ- 0821-2903285.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry