ಸುರೇಶ್‌ಬಾಬು ಬಂಧನ

7
ಅದಿರು ಕಳ್ಳಸಾಗಣೆ ಹಗರಣ: ಸಿಬಿಐ ವಶಕ್ಕೆ ಕಂಪ್ಲಿ ಶಾಸಕ

ಸುರೇಶ್‌ಬಾಬು ಬಂಧನ

Published:
Updated:

ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ನಿರ್ದೇಶನದಂತೆ ಬಳ್ಳಾರಿಯ ವಿವಿಧೆಡೆಯಿಂದ 7 ಲಕ್ಷ ಟನ್‌ ಅದಿರು ಕದ್ದು ಐಎಲ್‌ಸಿ ಇಂಡಸ್ಟ್ರೀಸ್‌ ಮಾಲೀಕ ಕೋವೂರು ಸೋಮಶೇಖರಗೆ ಪೂರೈಸಿದ ಆರೋಪದ ಮೇಲೆ ಕಂಪ್ಲಿ ಕ್ಷೇತ್ರದ ಬಿಎಸ್‌ಆರ್‌ ಕಾಂಗ್ರೆಸ್‌ ಶಾಸಕ ಟಿ.ಎಚ್‌.ಸುರೇಶ್‌ಬಾಬು ಅವರನ್ನು ಸಿಬಿಐ ಪೊಲೀಸರು ಗುರುವಾರ ಬಂಧಿಸಿದ್ದಾರೆ.ಬೇಲೆಕೇರಿ ಬಂದರಿನ ಮೂಲಕ 2006–2010ರ ಅವಧಿಯಲ್ಲಿ ನಡೆ ದಿರುವ ಅದಿರು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಐಎಲ್‌ಸಿ ಇಂಡಸ್ಟ್ರೀಸ್‌ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುರೇಶ್‌ಬಾಬು ಬಂಧನ ನಡೆದಿದೆ. ಶುಕ್ರವಾರ ಬೆಳಿಗ್ಗೆ ಅವರನ್ನು ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.ಕೋವೂರು ಸೋಮಶೇಖರನನ್ನು ಸಿಬಿಐ ಪೊಲೀಸರು ಸೆಪ್ಟೆಂಬರ್‌ 4ರಂದು ಬಂಧಿಸಿದ್ದರು. ಹಲವು ದಿನ ಗಳ ಕಾಲ ಆತನನ್ನು ವಿಚಾರಣೆ ನಡೆಸ ಲಾಗಿತ್ತು. ವಿಚಾರಣೆ ವೇಳೆ ಆತ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗಿತ್ತು. ಸೋಮ ಶೇಖರ್‌ ನಡೆಸಿದ ಅಕ್ರಮ ಅದಿರು ರಫ್ತಿನಲ್ಲಿ ಸುರೇಶ್‌­ಬಾಬು ನೇರವಾಗಿ ಭಾಗಿ­ಯಾಗಿ­ರುವುದನ್ನು ಖಚಿತಪಡಿ ಸುವ ಸಾಕ್ಷ್ಯಗಳು ಸಿಬಿಐ ಅಧಿಕಾರಿಗಳಿಗೆ ಲಭ್ಯವಾಗಿವೆ. ಬಳಿಕ ಅವರನ್ನು ಬಂಧಿಸಲಾಗಿದೆ.ವಿಚಾರಣೆಗೆ ಕರೆದು ಬಂಧಿಸಿದರು: ಐಎಲ್‌ಸಿ ಇಂಡಸ್ಟ್ರೀಸ್‌ ಮೂಲಕ ನಡೆದಿರುವ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿದಂತೆ ದಾಖಲಿಸಿರುವ ಮೊಕದ್ದಮೆ (ಆರ್‌ಸಿ 14) ಕುರಿತು ಗುರುವಾರ ಮಧ್ಯಾಹ್ನ 3 ಗಂಟೆಗೆ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡ ಸುರೇಶ್‌ ಬಾಬು ಅವರಿಗೆ ನೋಟಿಸ್‌ ನೀಡಿತ್ತು. ಅದರಂತೆ ಅವರು  ಹಾಜರಾಗಿದ್ದರು.ಅಲ್ಲಿ  ಸತತ ಎರಡು ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಯಿತು. ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಡಿಐಜಿ ಆರ್‌.ಹಿತೇಂದ್ರ ಅವರ ನಿರ್ದೇಶನದಲ್ಲಿ ಹಲವು ಪೊಲೀಸ್‌ ಅಧಿಕಾರಿಗಳು ಆರೋಪಿ ಶಾಸಕರನ್ನು ಪ್ರಶ್ನಿಸಿದರು. ಕೋವೂರು ಸೋಮಶೇಖರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದ ಸಂಗತಿಗಳನ್ನು ಸುರೇಶ್‌ಬಾಬು ಕೂಡ ಒಪ್ಪಿಕೊಂಡಿ­ದ್ದಾರೆ. ಸಂಜೆ 5 ಗಂಟೆಗೆ ಶಾಸಕರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.ಬಂಧನ ಬಳಿಕವೂ ಕೆಲಕಾಲ ಅವರನ್ನು ಪ್ರಶ್ನಿಸಲಾಯಿತು. ನಂತರ ನಗರದ ಬೌರಿಂಗ್‌ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಿದರು. ಬಳಿಕ ಸಿಬಿಐ ಕಚೇರಿಗೆ ವಾಪಸ್‌ ಕರೆದೊಯ್ಯಲಾಯಿತು.ಅದಿರು ಕಳ್ಳತನದ ಸಾರಥ್ಯ: ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ರಫ್ತಾಗಿರುವ ಲಕ್ಷಾಂತರ ಟನ್‌ ಅದಿರನ್ನು ಬಳ್ಳಾರಿಯ ವಿವಿಧೆಡೆಯಿಂದ ಕಳ್ಳತನ ಮಾಡಿದ ತಂಡದ ಸಾರಥ್ಯ ವನ್ನು ಸುರೇಶ್‌ಬಾಬು ವಹಿಸಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದೆ.ಜನಾರ್ದನ ರೆಡ್ಡಿ ಅವರ ನಿರ್ದೇಶನದಂತೆ ಈ ತಂಡ ಕೆಲಸ ಮಾಡುತ್ತಿತ್ತು ಎಂಬುದನ್ನು ಖಚಿತಪಡಿಸುವ ಸಾಕ್ಷ್ಯಗಳನ್ನೂ ತನಿಖಾ ತಂಡ ಕಲೆಹಾಕಿದೆ.

‘ಒಮ್ಮೆ ನನ್ನನ್ನು ಕರೆಸಿಕೊಂಡ ಜನಾರ್ದನ ರೆಡ್ಡಿ, ತಮ್ಮ ಬಳಿ 25 ಲಕ್ಷ ಟನ್‌ ಅದಿರು ದಾಸ್ತಾನು ಇದೆ. ತಕ್ಷಣವೇ ಅದನ್ನು ಖರೀದಿಸಿ, ರಫ್ತು ಮಾಡುವಂತೆ ತಾಕೀತು ಮಾಡಿದ್ದರು. ಅದರಲ್ಲಿ ಸ್ವಲ್ಪ ಪ್ರಮಾಣದ ಅದಿರನ್ನು ಖರೀದಿಸಿ, ರಫ್ತು ಮಾಡುವುದಾಗಿ ನಾನು ಒಪ್ಪಿಕೊಂಡಿದ್ದೆ. ರೆಡ್ಡಿ ಅವರ ಮಾತಿನಂತೆ ಶಾಸಕ ಸುರೇಶ್‌ಬಾಬು ಅವರೇ ನನಗೆ ಅದಿರು ಪೂರೈಸಿದ್ದರು’ ಎಂದು ಸೋಮಶೇಖರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ.‘ನಾನು ಅವರಿಂದ ಖರೀದಿಸಿದ ಅದಿರಿನ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಕೆಲವು ಬ್ಯಾಂಕ್‌ ಖಾತೆಗಳಿಗೆ ಸಂದಾಯ ಮಾಡುತ್ತಿದ್ದೆ. ಜನಾರ್ದನ ರೆಡ್ಡಿ ಮತ್ತು ಸುರೇಶ್‌ಬಾಬು ಆ ಹಣವನ್ನು ಹಂಚಿಕೊಳ್ಳುತ್ತಿದ್ದರು. ಖಾರದಪುಡಿ ಮಹೇಶ್‌ ಮತ್ತು ಸ್ವಸ್ತಿಕ್‌ ನಾಗರಾಜ್‌ ಕೂಡ ಈ ತಂಡದಲ್ಲಿದ್ದರು. ರೆಡ್ಡಿ ಮತ್ತು ಸುರೇಶ್‌ಬಾಬು ಅವರೇ ಅದಿರು ಸಂಗ್ರಹಿಸಿ, ನಮಗೆ ಪೂರೈಸುವವರೆಗಿನ ಎಲ್ಲಾ ಚಟುವಟಿಕೆಗಳನ್ನೂ ನೋಡಿಕೊಳ್ಳುತ್ತಿದ್ದರು’ ಎಂಬುದಾಗಿ ಆತ ತನಿಖಾ ತಂಡಕ್ಕೆ ತಿಳಿಸಿದ್ದ.2009 ಮತ್ತು 2010ರಲ್ಲಿ ಸೋಮಶೇಖರ ಬೇಲೆಕೇರಿ ಬಂದರಿನ ಮೂಲಕ ಹತ್ತು ಲಕ್ಷ ಟನ್‌ ಅದಿರು ರಫ್ತು ಮಾಡಿದ್ದ. ಅದರಲ್ಲಿ ಏಳು ಲಕ್ಷ ಟನ್‌ ಕಳ್ಳತನ ಮಾಡಿದ್ದಾಗಿತ್ತು. ಆ ಅದಿರನ್ನು ಕಳ್ಳತನ ಮಾಡಿ ಪೂರೈಸಿದವರೇ ಜನಾರ್ದನ ರೆಡ್ಡಿ ಮತ್ತು ಸುರೇಶ್‌ ಬಾಬು ಎಂದು ಸೋಮಶೇಖರ ನೀಡಿದ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ.ನಕಲಿ ಪರವಾನಗಿ ಸರದಾರ: ಬಳ್ಳಾರಿಯ ವಿವಿಧೆಡೆ ಕಳ್ಳತನ ಮಾಡಿದ್ದ ಅದಿರನ್ನು ಬಂದರುಗಳಿಗೆ ಸಾಗಿಸುವ ವೇಳೆ ಬಳಸುತ್ತಿದ್ದ ನಕಲಿ ಪರವಾನಗಿಗಳನ್ನು ಮುದ್ರಿಸುವಲ್ಲಿಯೂ ಸುರೇಶ್‌ಬಾಬು ಸಕ್ರಿಯ ಪಾತ್ರ ವಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹೀಗೆ ಅದಿರು ಸಾಗಿಸುವ ವೇಳೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಅಡ್ಡಿಪಡಿಸದಂತೆ ಒತ್ತಡ ಹೇರುತ್ತಿದ್ದರು ಎಂಬ ಮಾಹಿತಿಯನ್ನೂ ತನಿಖಾ ತಂಡ ಸಂಗ್ರಹಿಸಿದೆ.

ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಸಿಬಿಐನ ವಿಶೇಷ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣದಲ್ಲೂ ಇವರು ಬಂಧನಕ್ಕೆ ಒಳಗಾಗಿದ್ದರು.13ನೇ ವಿಧಾನಸಭೆಯ ಕಿರಿಯ ಶಾಸಕ. ಎಂಜಿನಿಯರಿಂಗ್‌ ಪದವೀಧರ

2008ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯ ಕಂಪ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ  ಗೆಲುವು ಸಾಧಿಸಿದ್ದರು. ಆಗಿನ್ನೂ ಅವಿವಾಹಿತರಾಗಿದ್ದ ಇವರು, 13ನೇ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕರಾಗಿದ್ದರು.ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಾವ ಬಿ.ಶ್ರೀರಾಮುಲು ಸ್ಥಾಪಿಸಿದ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಪುನರಾಯ್ಕೆಗೊಂಡರು.ಜನಾರ್ದನ ರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ­ಗಳಲ್ಲಿ ಶಾಮೀಲಾಗಿರುವ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೆ.ಮೆಹಫೂಜ್‌ ಅಲಿಖಾನ್‌, ಇವರ ಸಹಪಾಠಿಯೂ ಹೌದು. ರೆಡ್ಡಿ ನಡೆಸಿದ ಅಕ್ರಮ ಗಣಿಗಾರಿಕೆಯ ನೇರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಲಿಖಾನ್‌, ಸಹಪಾಠಿ (ಸುರೇಶ್‌ಬಾಬು) ಪರಿಚಯದ ಮೂಲಕವೇ ಸಂಪರ್ಕ ಸಾಧಿಸಿದ್ದ.ಇನ್ನೂ 3 ಶಾಸಕರಿಗೆ ಬಂಧನ ಭೀತಿ

ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಶಾಸಕ ಆನಂದ್‌ ಸಿಂಗ್‌, ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಮತ್ತು ಕಾರವಾರ ಶಾಸಕ ಸತೀಶ್‌ ಸೈಲ್‌ ಕೂಡ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಸುರೇಶ್‌ಬಾಬು ಬಂಧನದ ಬಳಿಕ ಈ ಮೂವರೂ ಭೀತಿಯಲ್ಲಿದ್ದಾರೆ.ಆನಂದ್‌ ಸಿಂಗ್‌ ಒಡೆತನದ ಎಸ್‌.ಬಿ.ಮಿನರಲ್ಸ್‌ ಮತ್ತು ವೈಷ್ಣವಿ ಮಿನರಲ್ಸ್‌, ಬಿ.ನಾಗೇಂದ್ರ ಮಾಲೀಕರಾಗಿದ್ದ ಈಗಲ್‌ ಟ್ರೇಡರ್ಸ್‌ ಮತ್ತು ಸತೀಶ್‌ ಸೈಲ್‌ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ಸ್‌ ಕಂಪೆನಿಗಳು ಬೇಲೆಕೇರಿ ಬಂದರಿನ ಮೂಲಕ ನಡೆದ ಅದಿರು ಕಳ್ಳಸಾಗಣೆಯಲ್ಲಿ ಭಾಗಿಯಾಗಿ­ರುವ ಆರೋಪ ಎದುರಿಸುತ್ತಿವೆ. ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಈಗಾಗಲೇ ಹಲವು ಬಾರಿ ಈ ಮೂವರು ಶಾಸಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry