ಭಾನುವಾರ, ಜೂನ್ 13, 2021
25 °C

ಸುರ್ಯ ಶಿವನಿಗೆ ಮಣ್ಣು ಹರಕೆ

ಸವಿತಾ ಎಸ್. Updated:

ಅಕ್ಷರ ಗಾತ್ರ : | |

ಭಕ್ತರು ಯಾವುದೇ ಇಷ್ಟಾರ್ಥ ಪೂರೈಕೆಗೆ ದೇವರಿಗೆ ಚಿನ್ನ, ಬೆಳ್ಳಿ ಇಲ್ಲವೇ ಹಣದ ವಾಗ್ದಾನ ನೀಡುವುದು ಸರ್ವೇ ಸಾಮಾನ್ಯ. ಆದರೆ ಉಜಿರೆ ಸಮೀಪದ `ಸುರ್ಯ ಸದಾಶಿವ ರುದ್ರ~ ದೇವಸ್ಥಾನದ ವೈಶಿಷ್ಟ್ಯವೇ ಬೇರೆ. ಮಣ್ಣಿನ ಮೂರ್ತಿಯೇ ಇಲ್ಲಿನ ಹರಕೆ. ಭಕ್ತರ ಪ್ರಾರ್ಥನೆಗೆ ಸ್ಪಂದಿಸುವ ರುದ್ರ ಪ್ರತಿಫಲವಾಗಿ ಮಣ್ಣಿನ ಮೂರ್ತಿಯನ್ನಷ್ಟೇ ಬಯಸುತ್ತಾನೆ ಎಂಬುದು ಆರಾಧಕರ ನಂಬಿಕೆ.ಧರ್ಮಸ್ಥಳದಿಂದ ಸುಮಾರು 13ಕಿ.ಮೀ. ದೂರದಲ್ಲಿ ಗಡಾಯಿಕಲ್ಲಿನ (ಜಮಾಲಾಬಾದ್) ತಳದಲ್ಲಿ ನಿರ್ಮಿಸಿದಂತೆ ಗೋಚರಿಸುವ ಈ ದೇವಳ 2003ರಲ್ಲಿ ಜೀರ್ಣೋದ್ಧಾರಗೊಂಡಿದೆ.

 

ದೇವಸ್ಥಾನದ ಎಡಭಾಗದಲ್ಲಿರುವ ಕಲ್ಯಾಣಿ ಹಾಗೂ ಹರಕೆ ಬನ ಇಲ್ಲಿನ ಮತ್ತೊಂದು ವಿಶೇಷ. ಹರಕೆಯಾಗಿ ಇಲ್ಲಿಗೆ ಬರುವ ಮಣ್ಣಿನ ಬೊಂಬೆಗಳನ್ನು ಹರಕೆ ಬನದಲ್ಲಿ ಹಾಕುವುದು ಸಂಪ್ರದಾಯ. ಅನಾದಿ ಕಾಲದಿಂದಲೂ ಸಾಕಷ್ಟು ಮರಗಳಿದ್ದು ಕಾಡಿನ ರೂಪವನ್ನು ಹೊಂದಿದ್ದ ಈ ಬನವನ್ನು ಇಂದಿಗೂ ಅದೇ ರೀತಿಯಲ್ಲಿ ಉಳಿಸಿಕೊಳ್ಳಲಾಗಿದೆ.

 

ಹೆಂಚಿನ ಮೇಲ್ಛಾವಣಿ ಇಲ್ಲದ ಕಾರಣ ಮಳೆಗಾಲದಲ್ಲಿ ಮಣ್ಣಿನ ಮೂರ್ತಿಗಳು ಕರಗಿ ನೀರಾಗಿ ಮತ್ತೆ ಮಣ್ಣಿನೊಂದಿಗೆ ಸೇರಿಕೊಳ್ಳುತ್ತವೆ.ಇಲ್ಲಿ ಹರಕೆ ಸಲ್ಲಿಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವ ಭೀತಿಯಿಲ್ಲ. ರೂ.50ರಿಂದ ರೂ. 200ರ ಬೆಲೆಯ ವಿವಿಧ ಮೂರ್ತಿಗಳು ಇಲ್ಲಿಯೇ ಲಭ್ಯ. ದನ-ಕರು, ತಾಯಿ-ಮಗು, ಮನುಷ್ಯ, ಹೃದಯ, ಮೂತ್ರಪಿಂಡ, ಬೈಕ್, ಕಾರು, ಮನೆ, ಬೆಕ್ಕು, ನಾಯಿ, ಕಟ್ಟಡ, ಬಸ್, ವಿಮಾನ, ಕುರ್ಚಿ, ಮೇಜು, ಕಂಪ್ಯೂಟರ್, ಮೊಬೈಲ್... ಹೀಗೆ ಎಲ್ಲವೂ ಈ ಬನದಲ್ಲಿ ಹರಕೆಯ ವಸ್ತುಗಳಾಗಿ ಕಾಣಸಿಗುತ್ತದೆ. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಣ್ಣಿನ ಮೂರ್ತಿಗಳನ್ನು ಅಲ್ಲೇ ಹಣ ನೀಡಿ ಕೊಳ್ಳಲು ಅವಕಾಶವಿದೆ.ಹರಕೆ ಹೊತ್ತವರೇ ತಯಾರಿಸಿ ತಂದರೂ ಈ ಬನದಲ್ಲಿ ಹಾಕಬಹುದು. ಭಕ್ತರು ದೇವಸ್ಥಾನದಲ್ಲಿ ಅರ್ಪಿಸಿದ ಮಣ್ಣಿನ ಹರಕೆ ಗೊಂಬೆಗಳು, ಅಕ್ಕಿ, ತೆಂಗಿನಕಾಯಿಯನ್ನು ಮಧ್ಯಾಹ್ನದ ಮಹಾಪೂಜೆಯ ಮೊದಲು ದೇವಸ್ಥಾನದ ಸಮೀಪವೇ ಇರುವ ಮೂಲಕ್ಷೇತ್ರ `ಹರಕೆಬನ~ ಕ್ಕೆ ಒಯ್ಯಲಾಗುವುದು. ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಮೂರ್ತಿಗಳನ್ನು ಬನದಲ್ಲಿ ಜೋಡಿಸಿಡುತ್ತಾರೆ.ಇನ್ನು ಹರಕೆ ಹೊರಲು ಕ್ಷೇತ್ರಕ್ಕೆ ಭೇಟಿ ನೀಡಲೇಬೇಕೆಂಬ ನಿರ್ಬಂಧವಿಲ್ಲ. ಮನೆಯಲ್ಲೇ `ಸಂಕಲ್ಪ~ ಮಾಡಿ ದೇವರಿಗೆ ಹಣ ತೆಗೆದಿಟ್ಟರೂ ಸಾಕು. ಕೇಳಿಕೊಂಡ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಅಕ್ಕಿ-ತೆಂಗಿನಕಾಯಿ ಇಟ್ಟ ಹರಿವಾಣದಲ್ಲಿ ಮಣ್ಣಿನ ಗೊಂಬೆ ಇಟ್ಟು ಬನಕ್ಕೆ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆವೆಮಣ್ಣನ್ನು ಕುಲುಮೆಯಲ್ಲಿ ಬೇಯಿಸಿ ತಯಾರಿಸುವ ಬೊಂಬೆಯಲ್ಲಿ ಯಾವುದೇ ಬಿರುಕು ಇರಬಾರದು ಎಂಬುದು ಭಕ್ತರ ಬಲವಾದ ನಂಬಿಕೆ.ಸುರ್ಯದ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಬಾಂಗಾ ಅರಸರು ದೇವಳದ ಅಭಿವೃದ್ಧಿಗೆ ಕಾರಣಕರ್ತರು ಎಂದು ಹೇಳಲಾಗಿದೆ. ಈ ಬಗ್ಗೆ ದೇವಳದ ಗರ್ಭಗುಡಿಯ ಎದುರು ಇರುವ ನಂದೀಶನ ಮೂರ್ತಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ.`ಮಣ್ಣಿನ ಹರಕೆ~ ಖ್ಯಾತಿಯ ಸದಾಶಿವ ರುದ್ರ ದೇವಸ್ಥಾನವು ಸುರ್ಯ ಎಂಬ ಹಳ್ಳಿಯಲ್ಲಿರುವ ಕಾರಣ ಇದಕ್ಕೆ `ಸುರ್ಯ ದೇವಸ್ಥಾನ~ ಎಂಬ ಹೆಸರು ಬಂದಿದೆ. ಈ ಹೆಸರಿನ ಹಿಂದೆ ದಂತ ಕತೆಯೊಂದಿದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನೊಂದಿಗೆ ಕಾಡಿಗೆ ಸೊಪ್ಪು ತರಲು ಹೋಗಿದ್ದಳು.

 

ಆ ಸಂದರ್ಭ ಸೊಪ್ಪಿನೆಡೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿ ಹರಿಯಿತು. ಗಾಬರಿಗೊಂಡ ಆಕೆ ತನ್ನ ಮಗನನ್ನು `ಸುರೆಯಾ...~ ಎಂದು ಕೂಗಿದಳು, ಆ ಘಟನೆ ಬಳಿಕ ಕ್ಷೇತ್ರಕ್ಕೆ ಸುರಿಯ, ಸುರ್ಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಆ ಲಿಂಗ ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು.`ಹರಕೆ ಬನ~ದ ಮೂಲದ ಬಗ್ಗೆಯೂ ಒಂದು ಐತಿಹ್ಯವಿದ್ದು ಭೃಗು ಮಹರ್ಷಿಯ ಶಿಷ್ಯರೊಬ್ಬರು  ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ನೆಲೆಯಾದರು ಎಂಬ ಪ್ರತೀತಿ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ.

 

ಮಹರ್ಷಿಗಳ ತಪೋಭೂಮಿಯಾಗಿದ್ದ, ದೇವರೊಲಿದ ಪುಣ್ಯಕ್ಷೇತ್ರ, ಕಾಲಾಂತರದಲ್ಲಿ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ, ಗ್ರಾಮಸ್ಥರ ಗಮನಕ್ಕೆ ಬಂದು ಇದರ ಸಮೀಪ ದೇವಾಲಯ ನಿರ್ಮಾಣ ಮಾಡಿದರು ಎಂಬುದು ದೇವಳ ಮೂಲದ ಬಗ್ಗೆ ಇರುವ ಐತಿಹ್ಯ.ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಮತ್ತು ಸಂಜೆ 4ರಿಂದ 6.30. ಸಂಪರ್ಕಕ್ಕೆ: 08256-202200ಕ್ಷೇತ್ರದ ಸೇವೆಗಳು  (ರೂ .ಗಳಲ್ಲಿ)

ಮಣ್ಣಿನ ಸೇವೆ: 10

ಸರ್ವಸೇವೆ: 100

ರುದ್ರಾಭಿಷೇಕ: 40

ಹಣ್ಣುಕಾಯಿ: 15

ಕರ್ಪೂರ ಆರತಿ: 2

ನಾಗತಂಬಿಲ: 80

ಪಂಚಕಜ್ಜಾಯ ಪೂಜೆ: 10

ರಂಗಪೂಜೆ: 2700

ಏಕಾದಶರುದ್ರಾಭಿಷೇಕ: 1000

ಅಪ್ಪಪರಮಾನ್ನ ಪೂಜೆ: 175ಮಾಹಿತಿ: ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿಮೀ. ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 8 ಕಿಮೀ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.