ಶುಕ್ರವಾರ, ಏಪ್ರಿಲ್ 23, 2021
22 °C

ಸುಳಿ ತಿರುಪು ಬಾಧೆಗೆ ಸರಳ ಮದ್ದು

ವೆಂಕಟೇಶ ಜಿ.ಎಚ್. Updated:

ಅಕ್ಷರ ಗಾತ್ರ : | |

ಉಡುಪಿ, ದಕ್ಷಿಣ ಕನ್ನಡ ಭಾಗದ ವಿಶ್ವವಿಖ್ಯಾತ ಮಟ್ಟುಗುಳ್ಳ ಬದನೆ, ಮುಳ್ಳು ಸೌತೆಯ ರೀತಿ ಉತ್ತರ ಕನ್ನಡದ ಸಮುದ್ರ ತಟದ ತರಕಾರಿ ಎನಿಸಿ ಜನಪ್ರಿಯವಾಗಿರುವ ಸಿಹಿ ಈರುಳ್ಳಿಗೆ (ಕುಮಟಾ ನೀರುಳ್ಳಿ) ಇತ್ತೀಚಿನ ದಿನಗಳಲ್ಲಿ ಕಾಡುತ್ತಿದ್ದ ಸುಳಿತಿರುಪು (ಹಾವು ಸುಳಿ) ರೋಗಕ್ಕೆ ಧಾರವಾಡದ ಕೃಷಿ ವಿವಿಯ ಸೂಕ್ಷ್ಮರೋಗಾಣು ಸಂಶೋಧನಾ ಕೇಂದ್ರ ಹಾಗೂ ಶಿರಸಿಯ ವಿಸ್ತರಣಾ ಕೇಂದ್ರದ ತಜ್ಞರು ಮದ್ದು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸಿಹಿಯಾಗಿರುವುದರಿಂದ ಸಲಾಡ್‌ಗೆ, ಸಿಹಿ ಖಾದ್ಯಗಳಿಗೆ ರುಚಿಗೆಂದು ಬಳಸುವ ಈ ಈರುಳ್ಳಿಗೆ ಗೋವಾ, ಮಹಾರಾಷ್ಟ ಹಾಗೂ ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಕಳೆದ 6 ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಸುಳಿ ತಿರುಪು ರೋಗದ ಹಾವಳಿಯಿಂದಾಗಿ ಕರಾವಳಿ ಭಾಗದಿಂದ ಈ ಅಪರೂಪದ ತಳಿ ಕಣ್ಮರೆಯಾಗುವ ಆತಂಕ ಮೂಡಿಸಿತ್ತು. ಸೂಕ್ಷ್ಮರೋಗಾಣು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಲಿಂಗರಾಜು ಹಾಗೂ ಶಿರಸಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಗುರುದತ್ತ ಹೆಗಡೆ ಅವರ ನೇತೃತ್ವದಲ್ಲಿ ಸಂಶೋಧನೆ ಕೈಗೊಂಡಿದ್ದರು. ಇದಕ್ಕೆ ನಬಾರ್ಡ್ ಆರ್ಥಿಕ ನೆರವು ನೀಡಿತ್ತು.ಮಳೆಗಾಲದ ಬತ್ತದ ಬೆಳೆಯ ಕಟಾವಿನ ನಂತರ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದ ಕಡಲ ತೀರದ ಮರಳು ಬಯಲಿನಲ್ಲಿ, ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಕಲಘಟಗಿ ಭಾಗದ ಭತ್ತದ ಗ್ದ್ದದೆಗಳ ಮರಳು ನೆಲದಲ್ಲಿ ಡಿಸೆಂಬರ್‌ನಿಂದ ಏಪ್ರಿಲ್ ತಿಂಗಳವರೆಗೆ ಸಿಹಿ ಈರುಳ್ಳಿಯನ್ನು ಬೇಸಿಗೆಯ ಬೆಳೆಯಾಗಿ ಬೆಳೆಯುತ್ತಾರೆ. ಬೆಳೆಗಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕಾರ್ಮಿಕರೇ ಆಗಿದ್ದು, ಮಳೆಗಾಲದಲ್ಲಿ ಭತ್ತ ಬೆಳೆಯುವ ಜಮೀನಿನ ಮಾಲೀಕರು ಬೇಸಿಗೆಯಲ್ಲಿ ಕೃಷಿ ಕಾರ್ಮಿಕರಿಗೆ ಗುತ್ತಿಗೆ ನೀಡುವುದರಿಂದ ಅದರಲ್ಲಿ ಸಿಹಿ ಈರುಳ್ಳಿ ಬೆಳೆದು ತಮ್ಮ ಆದಾಯ ಕಂಡುಕೊಳ್ಳಲು ಕಾರ್ಮಿಕರಿಗೆ ಇದು ನೆರವಾಗಿತ್ತು.ಮಳೆಗಾಲದಲ್ಲಿ ಭತ್ತ ಬೆಳೆದು ಖಾಲಿ ಇರುತ್ತಿದ್ದ ಗದ್ದೆಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಅಲ್ಲಿ ಸಮುದ್ರದ ನೀರು ತುಂಬಿಸಿ ಬಸಿಯುವಿಕೆಯಿಂದ ಉಳಿಯುತ್ತಿದ್ದ ಸಿಹಿ ನೀರಿನಿಂದಲೇ ಈರುಳ್ಳಿ ಬೆಳೆಯುವ ಪದ್ಧತಿ ಅನುಸರಿಸುತ್ತಿದ್ದ ಬೆಳೆಗಾರರು ಪ್ರತಿ ಹೆಕ್ಟೇರ್‌ಗೆ ಕನಿಷ್ಟ 20 ಕ್ವಿಂಟಲ್ ಸಿಹಿ ಈರುಳ್ಳಿ ಫಸಲು ಪಡೆಯುತ್ತಿದ್ದರು. ಆದರೆ ಸುಳಿ ತಿರುಪು ಬಾಧೆ ಕಾಣಿಸಿಕೊಂಡ ನಂತರ ಎಕರೆಗೆ ಶೇ.70ರಷ್ಟು ಇಳುವರಿ ಕಡಿಮೆ ಫಸಲು ಬರತೊಡಗಿತು. ಇದರಿಂದ ಬೇಸತ್ತ ಹಲವರು ಈರುಳ್ಳಿ ಕೃಷಿಯನ್ನೇ ಕೈ ಬಿಟ್ಟರೆ ಇನ್ನೂ ಕೆಲವರು ಬೆಳೆ ಪ್ರಮಾಣವನ್ನು ಕಡಿಮೆ ಮಾಡತೊಡಗಿದರು.

ಏನಿದು ಸುಳಿತಿರುಪು?ಮಣ್ಣಿನಲ್ಲಿ ಪೋಷಕಾಂಶ ಕಡಿಮೆಯಾದಾಗ ಸಸ್ಯಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಮಾದರಿಯ ಪರಾವಲಂಬಿ ಶಿಲೀಂದ್ರ, ಬ್ಯಾಕ್ಟೀರಿಯಾ ಹಾಗೂ ಜಂತುಹುಳುಗಳು ಸಸಿಯ ಎಲೆ ಭಾಗದಲ್ಲಿ ಆಶ್ರಯ ಪಡೆಯುವುದರಿಂದ ಈರುಳ್ಳಿ ಎಲೆ ತಿರುಚಿಕೊಂಡು ಹಾವಿನಂತೆ ಸುರುಳಿ, ಸುರುಳಿಯಾಗಿ ಮಾರ್ಪಟ್ಟು ಒಣಗತೊಡಗುತ್ತದೆ. ಇದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ತೊಂದರೆಯಾಗಿ ಈರುಳ್ಳಿ ಗಡ್ಡೆ ಬೆಳೆಯಲು ಅಡ್ಡಿಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗುವುದರಿಂದ ಈ ಹಂತದಲ್ಲಿ ಔಷಧಿ, ಗೊಬ್ಬರ ಕೊಟ್ಟರೂ ಆಗುವುದಿಲ್ಲ. ಇದರಿಂದ ರೈತರು ತೀವ್ರ ತೊಂದರೆಗೀಡಾಗಿದ್ದರು.ಮಣ್ಣಿನ ಮಾದರಿ ಪಡೆದು ಪರೀಕ್ಷೆ ನಡೆಸಿದ ತಜ್ಞರ ತಂಡ ನಂತರ ಕುಮಟಾ ತಾಲ್ಲೂಕು ಹಂದಿಗೋಣ, ಹೊನ್ನಳ್ಳಿ ಹಾಗೂ ಭಟ್ಕಳ ತಾಲ್ಲೂಕು ತೆಂಗಿನಗುಂಡಿಯ 32 ರೈತರ ತಾಕುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಕೈಗೊಂಡು ಕೊನೆಗೂ ರೋಗ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದಾರೆ.ರೋಗಕ್ಕೆ ಪರಿಹಾರೋಪಾಯ 

 ಕಳೆದ ವರ್ಷ ಅಷ್ಟಾಗಿ ಕಾಣಿಸಿಕೊಳ್ಳದ ರೋಗ ಈ ವರ್ಷ ಶೇ.5ರಿಂದ 10ರಷ್ಟು ಪ್ರದೇಶದಲ್ಲಿ ಕಾಣಿಸಿಕೊಂಡಿದೆ ಎಂದು ಡಾ.ಗುರುದತ್ತ ಹೆಗಡೆ ಹೇಳುತ್ತಾರೆ. ರೋಗ ಬಾರದಂತೆ ತಡೆಯಲು ಮಣ್ಣು ಹಾಗೂ ಬೀಜಕ್ಕೆ ಉಪಚಾರ ಕೈಗೊಳ್ಳಬೇಕು. ನಾಟಿಗೆ ಮುನ್ನ ಸಸಿಗಳನ್ನು ಸುಡೊಮೊನಾಸ್ ಪ್ಲೊರೊನ್ಸೆಸ್ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು. ನಾಟಿ ಮಾಡಿದ ನಂತರ ಜಮೀನಿಗೆ ಎಕರೆಯೊಂದಕ್ಕೆ ಒಂದು ಕ್ವಿಂಟಲ್‌ನಷ್ಟು ಬೇವಿನಹಿಂಡಿ ಹಾಗೂ ಎರೆಹುಳು ಗೊಬ್ಬರ ಹಾಕಿ ಮೇಲು ಗೊಬ್ಬರವಾಗಿ ಅಮೋನಿಯಂ ನೈಟ್ರೇಟ್ ಮತ್ತು ಸಲ್ಫೇಟ್ ಆಫ್ ಪೊಟ್ಯಾಷ್‌ನ ಮಿಶ್ರಣ ನೀಡಿ ನಂತರ ಇಕ್ಸಾಕೋನಾ ಜೋವ ಕ್ರಿಮಿನಾಶಕವನ್ನು ಒಂದು ಲೀಟರ್‌ಗೆ ಒಂದು ಮಿಲಿ ಲೀಟರ್‌ನಷ್ಟು ಸೇರಿಸಿ ಸಿಂಪರಣೆ ಮಾಡಬೇಕು.ಬೀಜೋತ್ಪಾದನೆ ವೇಳೆ ಸುಳಿತಿರುಪು ಕಾಣಿಸಿಕೊಂಡಲ್ಲಿ ತಕ್ಷಣ ರೋಗ ಪೀಡಿತ ಸಸಿಗಳನ್ನು ಕಿತ್ತು ಸುಟ್ಟುಹಾಕಿ ಬೇರೆ ಸಸಿಗಳಿಗೆ ಹರಡದಂತೆ ನೋಡಿಕೊಳ್ಳಬೇಕು. ಟ್ರೈಕೋಡ್ರಾಮಾ ದ್ರಾವಣದಿಂದ ಬೀಜೋಪಚಾರ ಮಾಡಿದರೆ ರೋಗ ನಿಯಂತ್ರಣ ಸಾಧ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.