ಸುಳ್ಯ: ಅಕ್ರಮ-ಸಕ್ರಮ ರಾಜಕೀಯ

7

ಸುಳ್ಯ: ಅಕ್ರಮ-ಸಕ್ರಮ ರಾಜಕೀಯ

Published:
Updated:

ಸುಳ್ಯ:  ಚುನಾವಣೆ ಹತ್ತಿರ ಬರುತ್ತಿದ್ದಂತೆ ಎರಡು ಪ್ರಮುಖ ರಾಜಕೀಯ ಪಕ್ಷಗಳ ಕಾದಾಟ ಆರಂಭವಾಗಿದೆ. ಕಳೆದ 4 ವರ್ಷಗಳಿಂದ ನಡೆಯದೇ ಇರುವ ಅಕ್ರಮ ಸಕ್ರಮ ಸಮಿತಿ ಬೈಠಕ್‌ಗಳು ಕಳೆದ ಒಂದು ತಿಂಗಳಿಂದ ಬಿಡುವಿಲ್ಲದೆ ನಡೆಯುತ್ತಿವೆ.ಅರ್ಹ ಬಡವರಿಗೆ ಸಿಗದೇ ಅನರ್ಹರಿಗೆ, ಪ್ರಭಾವಿಗಳಿಗೆ ಮಂಜೂರು ಮಾಡಲಾಗುತ್ತಿದೆ. ಇದರಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ದೂರಿದರೆ, ಬೈಠಕ್ ನಡೆಸಲು ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ಉಬರಡ್ಕದಲ್ಲಿ ಬಿಜೆಪಿ ನಾಯಕರೊಬ್ಬರ ತಾಯಿಯ ಹೆಸರಿನಲ್ಲಿ ಭೂಮಿ ಮಂಜೂರು ಮಾಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ತನಿಖೆ ನಡೆಸುವಂತೆ ಸಹಾಯಕ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದು, ಅವ್ಯವಹಾರದ ಶಂಕೆ ಇರುವ 18 ಕಡತಗಳನ್ನು ತನಿಖೆಗಾಗಿ ಸಹಾಯಕ ಆಯುಕ್ತರು ಕಚೇರಿಗೆ ಕೊಂಡೊಯ್ದಿದ್ದಾರೆ. ಈ ಮಧ್ಯೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡ ಶಾಸಕ ಎಸ್.ಅಂಗಾರ, ಕುಮ್ಕಿ ಹಕ್ಕಿನ ವಿಚಾರವಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಮಿತಿ ಬೈಠಕ್ ನಡೆಸಲು ತಡೆ ಇತ್ತು.ಇದೀಗ ತಡೆ ತೆರವಾಗಿದ್ದು, ಸುಮಾರು 10 ಸಾವಿರ ಬಾಕಿ ಇರುವ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ವಾರಕ್ಕೊಮ್ಮೆ ಬೈಠಕ್‌ಗಳನ್ನು ನಡೆಸಲಾಗುತ್ತದೆ. ಆದರೆ ಕಾಂಗ್ರೆಸ್‌ನವರು ವಿನಃ ಕಾರಣ ದೂರು ನೀಡಿ ಅಡ್ಡಿ ಪಡಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಇದೇ 20ರಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.ಅವ್ಯವಹಾರ ನಡೆಸಿ ಪ್ರತಿಭಟನೆ ನಡೆಸಿದರೆ ಇದರ ವಿರುದ್ಧ ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿ ಬೈಠಕ್‌ನ ಅವ್ಯವಹಾರವನ್ನು ಬಯಲಿಗೆ ಎಳೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಈ ಮಧ್ಯೆ ಅಕ್ರಮ-ಸಕ್ರಮದಲ್ಲಿ ಭೂಮಿ ಮಂಜೂರಾದರೂ ಸಾಗುವಳಿ ಚೀಟಿ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕೆಲವು ಫಲಾನುಭವಿಗಳು ದೂರಿದ್ದಾರೆ.ಸುಳ್ಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಮಂಡೆಕೋಲು, ಲಲಿತಾ ರೈ ಅಜ್ಜಾವರ, ಸೀತಾ ಮೇನಾಲ, ಪುರುಷೋತ್ತಮ ಮಂಡೆಕೋಲು, ಮಹೇಶ್ ಕಾಡುಸೊರಂಜ, ಕರುಣಾಕರ ಜಾಲ್ಸೂರು ಅವರು ಅಳಲು ತೋಡಿಕೊಂಡರು.ಪತ್ರಿಕಾಗೋಷ್ಠಿಯಲ್ಲಿದ್ದ ಬಿಜೆಪಿ ನಾಯಕ ಎ.ವಿ.ತೀರ್ಥರಾಮ ಮಾತನಾಡಿ ಅಕ್ರಮ -ಸಕ್ರಮ ಫಲಾನುಭವಿಗಳಿಗೆ ಕಾಂಗ್ರೆಸ್ ಕುತಂತ್ರದ ರಾಜಕಾರಣದಿಂದ ಅಡ್ಡಿ ಮಾಡುತ್ತಿದೆ ಎಂದರು.ಬಿಜೆಪಿ ನಾಯಕರಾದ ಮಾಕಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಶಂಕರ್ ಪೆರಾಜೆ, ಜಯರಾಜ್ ಕುಕ್ಕೆಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry