ಮಂಗಳವಾರ, ಮೇ 11, 2021
26 °C
ನಾಯಕ ಸಮಾಜದ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭ

ಸುಳ್ಳುಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಳುಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಅಗತ್ಯ

ದಾವಣಗೆರೆ: ಕೆಲವರು ಸುಳ್ಳುಜಾತಿ ಪ್ರಮಾಣಪತ್ರ ಸೃಷ್ಟಿಸುವ ಮೂಲಕ ನಾಯಕ ಸಮಾಜ ಒಡೆಯುವ ಹುನ್ನಾರ ಮಾಡುತ್ತಿದ್ದು, ಸುಳ್ಳುಜಾತಿ ಪ್ರಮಾಣಪತ್ರದ ವಿರುದ್ಧ ಸಮಾಜದ ಮುಖಂಡರು ಹೋರಾಟ ನಡೆಸಬೇಕಿದೆ ಎಂದು ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಕರೆ ನೀಡಿದರು.ನಗರದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಏಕಲವ್ಯ ಪರಿಶಿಷ್ಟ ಪಂಗಡಗಳ ವಿವಿಧೋದ್ದೇಶ ಸಹಕಾರ ಸಂಘ, ಕರ್ನಾಟಕ ರಾಜ್ಯ ಎಲ್.ಜಿ. ಹಾವನೂರು ನಾಯಕರ ಹೋರಾಟ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಾಯಕ ಸಮಾಜದ ಮಂತ್ರಿಗಳಿಗೆ ಹಾಗೂ ಶಾಸಕರ ಅಭಿನಂದನಾ ಸಮಾರಂಭ ಮತ್ತು ಏಕಲವ್ಯ ಪರಿಶಿಷ್ಟ ಪಂಗಡಗಳ ವಿವಿಧೋದ್ದೇಶ ಸಹಕಾರ ಸಂಘದ ಎರಡನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ನಾಯಕ ಸಮಾಜ ಸಂಘಟನೆಯಲ್ಲಿ ತೀರಾ ಹಿಂದುಳಿದಿದೆ. ಸಮಾಜದಿಂದ ಮೀಸಲಾತಿ ಪಡೆದು ರಾಜಕೀಯ ಶಕ್ತಿ ಪಡೆದಿರುವ ಅನೇಕ ಜನಪ್ರತಿನಿಧಿಗಳಲ್ಲಿ ಒಗ್ಗಟ್ಟಿನ ಕೊರತೆ ಕಂಡುಬರುತ್ತಿದೆ. ಪರಿಣಾಮವಾಗಿ ನಾಯಕ ಸಮಾಜ ರಾಜಕೀಯವಾಗಿ ಸದೃಢತೆ ಪಡೆಯುವಲ್ಲಿ ವಿಫಲವಾಗುತ್ತಿದೆ. ಸಾಂಘಿಕ ರಾಜಕೀಯ ಶಕ್ತಿ ಇಲ್ಲದಿದ್ದರೆ ಯಾವುದೇ ಸಮಾಜ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವುದು ಕಷ್ಟಸಾಧ್ಯ ಎಂದರು.14ನೇ ವಿಧಾನಸಭೆಯಲ್ಲಿ ನಾಯಕ ಸಮಾಜದಿಂದ 18 ಮಂದಿ ಶಾಸಕರು ಪ್ರತಿನಿಧಿಗಳಾಗಿದ್ದಾರೆ. ಆದರೆ, ಸಮಾಜದಿಂದ ನಿರ್ಮಾಣವಾಗಿರುವ ಈ ವೇದಿಕೆಗೆ ಆಗಮಿಸದೇ ಅಗೌರವ ತೋರಿದ್ದಾರೆ. ಸಮಾಜದಲ್ಲಿ ಹುಟ್ಟಿದ ಮೇಲೆ ಅದರ ಋಣತೀರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿರುತ್ತದೆ. ಅದನ್ನು ಮರೆಯಬಾರದು ಎಂದರು.ರಾಜ್ಯದ ಪರಿಶಿಷ್ಟ ಜನಾಂಗದ ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಸಾಧಿಸಬೇಕು. ಮೈಸೂರು ಭಾಗದಲ್ಲಿನ ನಾಯಕ ಜನಾಂಗದ ಉಪ ಜನಾಂಗ `ಪರಿವಾರ'ರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜ್ ಮಾತನಾಡಿ, ನಾಯಕ ಸಮಾಜದ ಅನೇಕ ಬಡ ಕುಟುಂಬಗಳು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವಿಸುತ್ತಿವೆ. ಅಂತಹ ಬಡಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸದಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಕೇಂದ್ರ ನೀಡಿದಂತೆ ರಾಜ್ಯ ಸರ್ಕಾರ ಕೂಡ ನಾಯಕ ಜನಾಂಗಕ್ಕೆ ಶೇ 7ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಲಾಗುವುದು ಎಂದರು.ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ ಪ್ರಾಸ್ತಾವಿಕ ಮಾತನಾಡಿ, ನಾಯಕ ಜನಾಂಗಕ್ಕೆ ಜನಗಣತಿಗೆ ಅನುಸಾರವಾಗಿ ಮೀಸಲಾತಿ ಸಿಕ್ಕಿಲ್ಲ. 1956ರಲ್ಲಿ ಆಗಿನ ಮೈಸೂರು ಸರ್ಕಾರ ಶೇ 6ರಷ್ಟು ಮೀಸಲಾತಿ ಕಲ್ಪಿಸಿತ್ತು. 2006ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅರಣ್ಯ ಹಕ್ಕು ಕಾಯಿದೆಯನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ.

ಚಿತ್ರದುರ್ಗದಲ್ಲಿ 400 ಕುಟುಂಬಗಳು ಸೇರಿಂತೆ ದಾವಣಗೆರೆ ಜಿಲ್ಲೆಯಲ್ಲಿ 60 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಪೊಲೀಸರ ಶೋಷಣೆ ತಪ್ಪಿಲ್ಲ ಎಂದರು.ಕಾರ್ಮಿಕರ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪಾಲಿಕೆ ಸದಸ್ಯರಾದ ಬಸಣ್ಣ ಕಟ್ಟಿಗೆಡಿಪೋ, ಲಕ್ಷ್ಮೀದೇವಿ ಬಿ. ವೀರಣ್ಣ, ಟಿ.ಮುಕುಂದ, ಟಿ.ದಾಸಕರಿಯಪ್ಪ, ಬಡಗಿ ಕೃಷ್ಣಪ್ಪ, ಜಿಗಳಿ ಆನಂದಪ್ಪ, ಹದಡಿ ಹಾಲೇಶಪ್ಪ, ನಿರ್ಮಲಾ ಶ್ರೀನಿವಾಸ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.