ಸುಳ್ಳು ಆರೋಪ: ನಿರಾಣಿ

7

ಸುಳ್ಳು ಆರೋಪ: ನಿರಾಣಿ

Published:
Updated:

ಬೆಂಗಳೂರು: `ಕಾನೂನುಬಾಹಿರವಾಗಿ ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ, ನನ್ನ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡಿ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿರುವ ಉದ್ಯಮಿ ಆಲಂ ಪಾಷಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ~ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.ಸುಳ್ಳು ದಾಖಲೆಗಳನ್ನು ನೀಡಿರುವ ಪಾಷಾ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ದೇವನಹಳ್ಳಿ ಬಳಿ 25 ಎಕರೆ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ 12 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಹಣ ಪಾವತಿಸಿಲ್ಲ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ದೇವನಹಳ್ಳಿ ಬಳಿ ವಸತಿ ಬಡಾವಣೆ ನಿರ್ಮಾಣಕ್ಕಾಗಿ ಎಕರೆಗೆ ರೂ 1.80 ಕೋಟಿ ಪ್ರಕಾರ 25 ಎಕರೆ ಭೂಮಿ ಪಡೆದಿದ್ದು, ಇದರ ಮೊತ್ತ ರೂ 50 ಕೋಟಿ ಪಾವತಿಸಬೇಕು. ಭೂಮಿ ಮಂಜೂರು ಮಾಡಿಸಿಕೊಳ್ಳುವಾಗ 300 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವುದಾಗಿ ದಾಖಲೆಗಳನ್ನು ನೀಡಿದ್ದರು. ಆದರೆ ಅವು ನಕಲಿ ಎಂಬುದು ವಾರದ ಹಿಂದೆಯಷ್ಟೇ ಗೊತ್ತಾಗಿದೆ. ಈಗಲೂ ಆ ಭೂಮಿ ಅವರ ಹೆಸರಿನಲ್ಲಿಯೇ ಇದೆ. ಹಣ ಪಾವತಿಸಿ ಎಂದು ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಉತ್ತರ ನೀಡಿಲ್ಲ ಎಂದರು.ಎಲೆಕ್ಟ್ರಾನಿಕ್ ಸಿಟಿಯಲ್ಲಿ 12 ಎಕರೆ ಜಾಗ ಪಡೆದಿದ್ದು, ಅಲ್ಲಿ ಒಂದು ಎಕರೆ ಭೂಮಿ 10 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಈ ಜಾಗಕ್ಕೆ ಹಣ ಪಾವತಿಸಲು ಡಿಸೆಂಬರ್‌ವರೆಗೂ ಅವಕಾಶವಿದೆ. ಆದರೆ ದೇವನಹಳ್ಳಿಯ 25 ಎಕರೆ ಜಾಗಕ್ಕೆ ಹಣ ಪಾವತಿಸಲು ನೀಡಿದ್ದ ಗಡುವು ಮುಗಿದಿದೆ. ಪಾಷಾ ಸೇರಿದಂತೆ ಇದುವರೆಗೆ ಯಾರು ಹಣ ಪಾವತಿಸಿಲ್ಲವೊ ಅವರಿಗೆಲ್ಲ ವಾರದಲ್ಲಿ ನೋಟಿಸ್ ನೀಡಲಾಗುವುದು. ಆಗಲೂ ಹಣ ಪಾವತಿಸದಿದ್ದರೆ ಭೂಮಿ ಮಂಜೂರಾತಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.ಹೂವಿನಾಯಕನಹಳ್ಳಿಯಲ್ಲಿ 20 ಎಕರೆ ಮತ್ತು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಏಳು ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದ್ದು, ಸ್ವಂತ ಕೈಗಾರಿಕೆ ಆರಂಭಿಸಲು ಮುಂದೆ ಬಂದಿರುವ ಮೂಲ ಮಾಲೀಕರಿಗೆ ನೀಡಲಾಗಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸ್ಪಷ್ಪಪಡಿಸಿದರು.ತರಾಟೆ: ಸಚಿವ ಮುರುಗೇಶ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರಿನ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ವಿಚಾರಣೆ ಆರಂಭವಾಯಿತು.ದೂರುದಾರರ ಹೇಳಿಕೆ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಆದರೆ, ದೂರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಾಷಾ ಸಮರ್ಪಕವಾಗಿ ನ್ಯಾಯಾಲಯಕ್ಕೆ ಒದಗಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ವಕೀಲರ ಸಹಕಾರ ಪಡೆಯದೇ ಹೇಳಿಕೆ ನೀಡಿದ ಪಾಷಾ, ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ನ್ಯಾಯಾಲಯಕ್ಕೆ ವಿವರಣೆ ನೀಡಿದರು. ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರಸ್ತಾಪಿಸಿದ ಕೆಲ ದಾಖಲೆಗಳನ್ನು ದೂರಿನ ಜೊತೆ ಅಡಕಗೊಳಿಸಿರಲಿಲ್ಲ.`ದಾಖಲೆಗಳು ಕೊನೆಯಲ್ಲಿವೆ ನೋಡಿಕೊಳ್ಳಿ~ ಎಂಬ ಉತ್ತರವೂ ಬಂತು. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, `ಸರಿಯಾದ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಬನ್ನಿ. ನೀವು ಎಲ್ಲಿದ್ದೀರಿ ಎಂಬ ಪರಿಜ್ಞಾನ ಅಗತ್ಯ~ ಎಂದು ತಾಕೀತು ಮಾಡಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿದರು.ಮಧ್ಯಾಹ್ನದ ಕಲಾಪದ ವೇಳೆ ಪಾಷಾ ಆರೋಪಗಳಿಗೆ ಸಂಬಂಧಿಸಿದಂತೆ ನಿರಾಣಿ ವಿರುದ್ಧದ ಸಾಕ್ಷ್ಯಾಧಾರ ಲಭ್ಯವಿರುವ ಬಗ್ಗೆ ಹೇಳಿಕೆ ನೀಡಿದರು. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಸಂಬಂಧ ಸೋಮವಾರ ಆದೇಶ ಪ್ರಕಟಿಸುವುದಾಗಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ವಿಚಾರಣೆಯನ್ನು ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry