ಸುಳ್ಳು ಜಾತಿ ಪ್ರಮಾಣ ಪತ್ರ: ತನಿಖೆಗೆ ಆಗ್ರಹ

7

ಸುಳ್ಳು ಜಾತಿ ಪ್ರಮಾಣ ಪತ್ರ: ತನಿಖೆಗೆ ಆಗ್ರಹ

Published:
Updated:

ಕಂಪ್ಲಿ: ಕಂಪ್ಲಿ ಹೋಬಳಿ ವ್ಯಾಪ್ತಿಯ ನಂ. 10 ಮುದ್ದಾಪುರ, ಮೆಟ್ರಿ, ದೇವಲಾಪುರ ಮತ್ತು ಬಳ್ಳಾರಿ ತಾಲ್ಲೂಕು ಕುಡುತಿನಿ, ಕುರುಗೋಡು ಗ್ರಾಮದ ಕೆಲ ಜನಾಂಗದವರು ಪರಿಶಿಷ್ಟ ಜಾತಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಬಳ್ಳಾರಿ ಜಿಲ್ಲಾ ಸಮಿತಿ ಸಂಚಾಲಕ ಎಚ್. ಈರಣ್ಣ ಮೆಟ್ರಿ ಆರೋಪಿಸಿದ್ದಾರೆ.ನಂ.10 ಮುದ್ದಾಪುರ ಗ್ರಾಮದಲ್ಲಿ ಬೋವೇರು, ಬೋಯಾ, ಬೋಯಿ ಜನಾಂಗದವರು ಹಿಂದುಳಿದ ವರ್ಗ ‘ಅ’ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯಲ್ಲಿ ಬರುವ ‘ಭೋವಿ’ಜನಾಂಗದ ಜಾತಿ ಪ್ರಮಾಣ ಪತ್ರ ಪಡೆದು ಅರ್ಹರ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ.ಅದೇ ರೀತಿ ಮೆಟ್ರಿ, ಕಂಪ್ಲಿ, ದೇವಲಾಪುರ, ಬಳ್ಳಾರಿ ತಾಲ್ಲೂಕಿನ ಕುಡುತಿನಿ, ಕುರುಗೋಡು ಗ್ರಾಮಗಳ ದೊಂಬಿದಾಸರು ಮತ್ತು ದಾಸರು 1983ರಿಂದ ಪರಿಶಿಷ್ಟ ಜಾತಿಯಲ್ಲಿ ಬರುವ ಚನ್ನದಾಸರು ಎಂದು ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜನಾಂಗದ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಪತ್ರದಲ್ಲಿ ತಿಳಿಸಿದ್ದಾರೆ.ಈ ಕುರಿತು ಅನೇಕ ಬಾರಿ ಪ್ರತಿಭಟನೆ, ಧರಣಿ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮೆಟ್ರಿ ಮತ್ತು ದೇವಲಾಪುರದಲ್ಲಿ ಸಾಮೂಹಿಕ ಸಮೀಕ್ಷೆ ನೆಡೆಸಿತ್ತು. ಸಮೀಕ್ಷೆ ನಂತರ  ಈ ಗ್ರಾಮಗಳಲ್ಲಿ  ಚನ್ನದಾಸರ ಜನಾಂಗ ಇರುವುದಿಲ್ಲ ಎನ್ನುವ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸಮೀಕ್ಷಾ ವರದಿಯ ನಂತರವೂ ಚನ್ನದಾಸರು ಎಂದು ಸುಳ್ಳು ಮಾಹಿತಿ ನೀಡಿ ಮೆಟ್ರಿ ಗ್ರಾಮದ ದಾಸರ ಮಹಾದೇವ ಹೊಸಪೇಟೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಅನುಭವಿಸಿದ್ದಾರೆ. ಸದ್ಯ ಮೆಟ್ರಿ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷ ಡಿ. ಮಾರೆಣ್ಣ ದೊಂಬಿದಾಸರಾಗಿದ್ದು, ಇವರ ಮಕ್ಕಳ ವರ್ಗಾವಣೆ ಪತ್ರದಲ್ಲಿ ಚನ್ನದಾಸರು ಎಂದು ಬದಲಿಸಿ ಇದರ ಆಧಾರದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿರುವುದಾಗಿ ಅಪಾದಿಸಿದ್ದಾರೆ.-2005ರಲ್ಲಿ ದೇವಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಂಬಿದಾಸರು ಚನ್ನದಾಸರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಆಶ್ರಯ ಯೋಜನೆ, ಇಂದಿರಾ ಆವಾಜ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಗಳನ್ನು ಪಡೆದು ನಿಜವಾದ ಪರಿಶಿಷ್ಟರಿಗೆ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ.ನಂ.10 ಮುದ್ದಾಪುರ, ಮೆಟ್ರಿ, ದೇವಲಾಪುರ ಗ್ರಾಮಗಳ ನಿಜವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಕ್ಕೆ ತುಂಬಾ ಅನ್ಯಾಯವಾಗುತ್ತಿದ್ದು, ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry