ಸುಳ್ಳು ಪ್ರಮಾಣ ಪತ್ರ ಉಚಿತ ಸೀಟ್‌ಗೆ ಕುತ್ತು

ಶುಕ್ರವಾರ, ಜೂಲೈ 19, 2019
24 °C
ಆರ್‌ಟಿಇ ಕೋಟಾದಡಿ ಶೇ 25 ಮೀಸಲಾತಿ

ಸುಳ್ಳು ಪ್ರಮಾಣ ಪತ್ರ ಉಚಿತ ಸೀಟ್‌ಗೆ ಕುತ್ತು

Published:
Updated:

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ 25ರ ಮೀಸಲಾತಿ ಅಡಿ ತಮ್ಮ ಮಕ್ಕಳಿಗೆ ಉಚಿತ ಪ್ರವೇಶ ಪಡೆಯುವಾಗ ಅನೇಕ ಪೋಷಕರು ನೀಡಿದ ಸುಳ್ಳು ಆದಾಯ ಪ್ರಮಾಣ ಪತ್ರಗಳನ್ನು ಪತ್ತೆಹಚ್ಚಿ ರದ್ದುಪಡಿಸಲು ಸರ್ಕಾರ ಮುಂದಾಗಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನಲ್ಲಿ (2013-14) ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯದಲ್ಲಿನ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿ ಮತ್ತು ನರ್ಸರಿಗೆ 69,413 ಮಕ್ಕಳು ದಾಖಲಾಗಿದ್ದಾರೆ. ಪ್ರವೇಶ ಸಂದರ್ಭದಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದ ಕಾರಣ ಅವುಗಳ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದಿದ್ದು, ಪ್ರವೇಶ ಸಂದರ್ಭದಲ್ಲಿ ಪೋಷಕರು ನೀಡಿರುವ ಆದಾಯ ಪ್ರಮಾಣ ಪತ್ರಗಳ ನೈಜತೆ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಸುಳ್ಳು ಪ್ರಮಾಣ ಪತ್ರಗಳನ್ನು ರದ್ದುಪಡಿಸಲು ತಹಸೀಲ್ದಾರ್‌ಗಳಿಗೆ ಸೂಚಿಸುವಂತೆ ಕೋರಿದ್ದಾರೆ.ಆದಾಯ ಪ್ರಮಾಣ ಪತ್ರಗಳನ್ನು ನೀಡುವಾಗ ಪೋಷಕರಿಗೆ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಸರಿಯಾಗಿ ಪರಿಗಣಿಸಿ ಅರ್ಹರಿಗೆ ಅಷ್ಟೇ ಆದಾಯ ಪ್ರಮಾಣ ಪತ್ರ ನೀಡಲಾಗಿದೆಯೇ ಎಂಬುದನ್ನು ಪುನಃ ದೃಢಪಡಿಸಿಕೊಳ್ಳಬೇಕು. ಸುಳ್ಳು ಪ್ರಮಾಣ ಪತ್ರ ಪಡೆದಿರುವುದು ಖಚಿತವಾದರೆ ಅವುಗಳನ್ನು ಹಿಂಪಡೆಯಬೇಕು ಎಂದು ಸೂಚಿಸಲಾಗಿದೆ.`ಬೆಂಗಳೂರು ನಗರದಲ್ಲಿ ಶೇಕಡ 40ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಲಾಗಿದೆ.

ಇದರಿಂದಾಗಿ ನಿಜವಾದ ಅರ್ಹರು, ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಮಕ್ಕಳು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ಹೆಚ್ಚಿನ ಆದಾಯ ಹೊಂದಿರುವವರು ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಪಡೆದು ಆರ್‌ಟಿಇ ಅಡಿ ಪ್ರವೇಶ ಪಡೆಯುತ್ತಿದ್ದಾರೆ' ಎಂದು ಕರ್ನಾಟಕ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಆರೋಪಿಸಿದ್ದರು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಆರು ವಾರಗಳಲ್ಲಿ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ಪ್ರಮಾಣ ಪತ್ರಗಳ ನೈಜತೆಯನ್ನು ಪರಿಶೀಲಿಸಲಾಗುತ್ತಿದೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.3.5 ಲಕ್ಷ ಮಿತಿ: ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ, ಪೋಷಕರ ವಾರ್ಷಿಕ ಆದಾಯ 3.5 ಲಕ್ಷಕ್ಕಿಂತ ಕಡಿಮೆ ಇರುವ ಯಾವುದೇ ಜಾತಿಗೆ ಸೇರಿದ ಮಕ್ಕಳು ಶೇ 25ರ ಮೀಸಲಾತಿ ಕೋಟಾದಡಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ -1ಕ್ಕೆ ಸೇರಿದ ಪೋಷಕರಿಗೆ ಆದಾಯ ಮಿತಿ ಅನ್ವಯವಾಗುವುದಿಲ್ಲ.ಮೀಸಲಾತಿ ಕೋಟಾದಡಿ ಪ್ರವೇಶ ಪಡೆಯುವ ಸಲುವಾಗಿ ತಹಸೀಲ್ದಾರ್/ಉಪ ತಹಸೀಲ್ದಾರ್ ಅವರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದು ಪ್ರವೇಶ ಸಂದರ್ಭದಲ್ಲಿ ಪೋಷಕರು ಶಾಲೆಗಳಿಗೆ ನೀಡಿದ್ದಾರೆ. ಆದಾಯ ಪ್ರಮಾಣ ಪತ್ರಗಳನ್ನು ನೀಡುವಾಗ ಅರ್ಜಿದಾರರ ಪೂರ್ವಾಪರ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಲ್ಲ. ಹೆಚ್ಚು ಆದಾಯ ಹೊಂದಿದ್ದರೂ ಸಹ 3.5 ಲಕ್ಷದ ಒಳಗೆ ಆದಾಯ ಮಿತಿ ತೋರಿಸಿ ಏಕರೂಪವಾಗಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.ಹಿಂದಕ್ಕೆ: ಪರಿಶೀಲನೆ ಸಂದರ್ಭದಲ್ಲಿ ಆದಾಯ ಪ್ರಮಾಣ ಪತ್ರಗಳು ನೈಜವಲ್ಲ ಎಂದು ಕಂಡುಬಂದರೆ, ಅಂತಹ ಪ್ರಮಾಣ ಪತ್ರಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಅಲ್ಲದೆ ಸುಳ್ಳು ಪ್ರಮಾಣ ಪತ್ರದ ಆಧಾರದ ಮೇಲೆ ಮೀಸಲಾತಿ ಸೀಟು ಪಡೆದ ವಿದ್ಯಾರ್ಥಿಯನ್ನು ಆರ್‌ಟಿಇ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ. ಅಲ್ಲದೆ ಆ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವು ಶಾಲೆಗಳಿಗೆ ಮರು ಪಾವತಿ ಮಾಡುವುದಿಲ್ಲ.ಅಂತಹ ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಯ ಆಡಳಿತ ಮಂಡಳಿಯವರು ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ, ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸುಳ್ಳು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಪ್ರಮಾಣ ಪತ್ರಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ. ಈ ಬಗ್ಗೆ ಮೇಲ್ವಿಚಾರಣೆ ನಡೆಸಿ ತ್ವರಿತವಾಗಿ ವರದಿ ನೀಡಲು ಕ್ರಮಕೈಗೊಳ್ಳುವಂತೆ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಆದೇಶಿಸಲಾಗಿದೆ ಎಂದು ಈ ಅಧಿಕಾರಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry