ಗುರುವಾರ , ಜೂನ್ 24, 2021
23 °C

ಸುಳ್ಳು ಮಾಹಿತಿ ಆರೋಪ: 66 ಶಾಸಕರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ನಿವೇಶನ ಅಥವಾ ಮನೆ ಇಲ್ಲವೆಂದು ಸುಳ್ಳು ಪ್ರಮಾಣ ಪತ್ರ ನೀಡಿ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ನಿವೇಶನ ಪಡೆದುಕೊಂಡಿರುವ ಆರೋಪ ಹೊತ್ತ 66 ಶಾಸಕರು, ಈಗ ಈ ಕುರಿತು ಹೈಕೋರ್ಟ್‌ಗೆ ಉತ್ತರ ಹೇಳಬೇಕಿದೆ!-ಕಾರಣ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಈ ಶಾಸಕರು ನಿವೇಶನ ಪಡೆದುಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಇವರ ವಿರುದ್ಧ ವಕೀಲ ಎನ್.ವಾಸುದೇವ ಅವರು ಕೋರ್ಟ್‌ಗೆ ಮನವಿ ಸಲ್ಲಿಸಿ, ಎಲ್ಲರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿದ್ದಾರೆ.ಹಲವು ಶಾಸಕರು, ಸಚಿವರಿಗೆ ಕಾನೂನುಬಾಹಿರವಾಗಿ ನಿವೇಶನ ನೀಡಲಾಗಿದ್ದು ಈ ಕುರಿತು ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿ ವಾಸುದೇವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಈ ಅರ್ಜಿಗೆ ಈಗ ಅವರು ಮಧ್ಯಂತರ ಮನವಿ (ಐ.ಎ) ಸಲ್ಲಿಸಿದ್ದಾರೆ.ಮಾಹಿತಿ ಹಕ್ಕು ಕಾಯ್ದೆ ಅಡಿ ಅವರು ಈ 66 ಶಾಸಕರ ಮಾಹಿತಿ ಪಡೆದುಕೊಂಡಿದ್ದಾರೆ. `ಯಾರ ಹೆಸರಿನಲ್ಲಿ ಸ್ವಂತ ನಿವೇಶನ ಅಥವಾ ಮನೆ ಇರುವುದಿಲ್ಲವೋ ಅಂಥವರು ವಿವೇಚನಾ ಕೋಟಾದಡಿ ನಿವೇಶನ ಪಡೆದುಕೊಳ್ಳಲು ಅರ್ಹರು.ಆದರೆ 2008ರಿಂದ 2010ರ ಅವಧಿಯಲ್ಲಿ ಈ ಎಲ್ಲ ಆರೋಪಿಗಳು ತಮ್ಮ ಹೆಸರಿನಲ್ಲಿ ನಿವೇಶನ ಇಲ್ಲ ಎಂದು ಸುಳ್ಳು ದಾಖಲೆ ನೀಡುವ ಮೂಲಕ ವಂಚಿಸಿದ್ದಾರೆ~ ಎನ್ನುವುದು ಅರ್ಜಿದಾರರ ಆರೋಪ. ಈ ಶಾಸಕರು ವಿವೇಚನಾ ಕೋಟಾದಡಿ ನಿವೇಶನ ಪಡೆಯಲು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ಕುರಿತಾಗಿ ಅವರು ಕೋರ್ಟ್‌ಗೆ ದಾಖಲೆ ನೀಡಿದ್ದಾರೆ.ಶಾಸಕರಾದ ಹೇಮಚಂದ್ರ ಸಾಗರ, ನೆ.ಲ.ನರೇಂದ್ರಬಾಬು, ಎಸ್.ಆರ್.ವಿಶ್ವನಾಥ್, ಭಾರತಿ ಶೆಟ್ಟಿ, ಎಸ್.ಮುನಿರಾಜು, ಎಂ.ಕೃಷ್ಣಪ್ಪ ಹಾಗೂ ಇತರರ ವಿರುದ್ಧ ಈ ಆರೋಪ ಇದೆ.ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠದ ವಿಚಾರಣೆ ನಡೆಸುತ್ತಿದೆ.ಮೈಲಾರಪ್ಪ ನೇಮಕ: ನೋಟಿಸ್

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಬಿ.ಸಿ.ಮೈಲಾರಪ್ಪ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಸರ್ಕಾರ, ಬೆಂಗಳೂರು ವಿವಿಯ ಕುಲಾಧಿಪತಿ (ರಾಜ್ಯಪಾಲರು), ಮೈಲಾರಪ್ಪ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದೆ.`ಮೈಲಾರಪ್ಪ ವಿರುದ್ಧ ಹಲವಾರು ಗಂಭೀರ ಸ್ವರೂಪದ ಆಪಾದನೆಗಳಿವೆ. ಇವರ ಹಿನ್ನೆಲೆ ಗಮನಿಸದೆ ಯಾಂತ್ರಿಕವಾಗಿ ನೇಮಕ ಮಾಡಲಾಗಿದೆ~ ಎಂದು ದೂರಿ ಪಿ.ಎಂ. ಪರಮೇಶಕುಮಾರ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.